ಪುತ್ತೂರು ನಗರ ವಲಯ ಕಾಂಗ್ರೆಸ್ ಅಧ್ಯಕ್ಷರು, ಕಾರ್ಯಕರ್ತರ ಸಭೆ

0

ಕಾಂಗ್ರೆಸ್ ಪರ ಅಲೆಯಿದೆ-ನಗರ ಸಭೆಯಲ್ಲಿ 30 ಸ್ಥಾನ ಗೆಲ್ಲುವ ಗುರಿಯಿರಲಿ-ಅಶೋಕ್ ರೈ


ಪುತ್ತೂರು:ಕರ್ನಾಟಕದ ಕಾಂಗ್ರೆಸ್ ಸರಕಾರ ಜನಪರ ಹಾಗೂ ಅಭಿವೃದ್ದಿಪರ ಸರಕಾರವಾಗಿದ್ದು,ಸರಕಾರದ ಪಂಚ ಗ್ಯಾರಂಟಿ ಹಾಗೂ ಪುತ್ತೂರಿನಲ್ಲಿ ನಡೆದಿರುವ ಅಭಿವೃದ್ದಿ ಕಾರ್ಯಗಳಿಂದ ಪುತ್ತೂರು ವಿಧಾನಸಭಾ ಕ್ಷೇತ್ರದಾದ್ಯಂತ ಕಾಂಗ್ರೆಸ್ ಪರ ಅಲೆ ಇದ್ದು ಈ ಬಾರಿಯ ನಗರಸಭಾ ಚುನಾವಣೆಯಲ್ಲಿ 30 ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಪ್ರತಿಯೊಬ್ಬ ನಾಯಕ, ಕಾರ್ಯಕರ್ತರು ಒಟ್ಟು ಸೇರಿ ಕೆಲಸ ಮಾಡಿದಾಗ ಇಲ್ಲಿ ಕಾಂಗ್ರೆಸ್ಸನ್ನು ಅಲುಗಾಡಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ಪುತ್ತೂರಿನ ವಿದ್ಯಾಮಾತಾ ಸಭಾಂಗಣದಲ್ಲಿ ನಡೆದ ಪುತ್ತೂರು ನಗರ ವಲಯ ಕಾಂಗ್ರೆಸ್ ಅಧ್ಯಕ್ಷರು,ಕಾರ್ಯಕರ್ತರ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.ರಾಜ್ಯವನ್ನಾಳಿದ ಯಾವುದೇ ಸರಕಾರಗಳು ಮಾಡದ ಕೆಲಸವನ್ನು ಈ ಬಾರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಮಾಡಿದೆ.ಪಂಚ ಗ್ಯಾರಂಟಿ ಯೋಜನೆಗಳು ಶೇ.98.88 ಕುಟುಂಬಗಳನ್ನು ತಲುಪಿದೆ,ಕಾಂಗ್ರೆಸ್-ಬಿಜೆಪಿ ಎನ್ನದೆ ಪ್ರತಿಯೊಬ್ಬರಿಗೂ ಕಾಂಗ್ರೆಸ್ ಸರಕಾರದ ಯೋಜನೆಯ ಲಾಭಗಳು ದೊರಕಿದೆ.ಪ್ರತೀ ಮನೆಯ ಪ್ರತೀ ಮಹಿಳೆಯ ಖಾತೆಯಲ್ಲೂ ಇಂದು ಹಣ ಇರುವಂತೆ ಸರಕಾರ ವ್ಯವಸ್ಥೆ ಮಾಡಿದೆ.ಪಂಚ ಗ್ಯಾರಂಟಿ ಯೋಜನೆಗಳೇ ನಮಗೆ ಚುನಾವಣೆಗೆ ಮತ ಕೇಳಲು ದೊಡ್ಡ ಆಯುಧವಾಗಿದೆ ಎಂದು ಹೇಳಿದ ಶಾಸಕರು, ಪುತ್ತೂರು ಕ್ಷೇತ್ರದಲ್ಲಿನ ಅಭಿವೃದ್ಧಿ ಕೆಲಸಗಳಿಗಾಗಿ 2006 ಕೋಟಿ ರೂ.ಅನುದಾನವನ್ನು ತಂದಿದ್ದೇನೆ.ನಗರಸಭಾ ವ್ಯಾಪ್ತಿಯಲ್ಲಿರುವ ಕುಡಿಯುವ ನೀರು, ರಸ್ತೆ ಸಮಸ್ಯೆಗೆ ಸ್ಪಂದನೆ ನೀಡಲಾಗಿದೆ.ವಲಯ, ಬೂತ್ ಅಧ್ಯಕ್ಷರುಗಳಿಗೆ ಗೌರವ ನೀಡುವ ಕೆಲಸ ಆಗಿದೆ.ಪುತ್ತೂರಿಗೆ ಮೆಡಿಕಲ್ ಕಾಲೇಜು ಮಂಜೂರಾಗಿದೆ, ನಗರದಲ್ಲಿ ಚರಂಡಿ ವ್ಯವಸ್ಥೆ ಶೀಘ್ರದಲ್ಲೇ ಆರಂಭವಾಗಲಿದೆ.ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಬಿರುಮಲೆ ಬೆಟ್ಟದ ಅಭಿವೃದ್ದಿ ಕಾರ್ಯಗಳು ನಡೆಯುತ್ತಿದೆ.ಇದೆಲ್ಲವೂ ನಮಗೆ ಚುನಾವಣೆಗೆ ಅಸಗಳಾಗಿವೆ ಎಂದು ಹೇಳಿದರು.


ಹಿಂದುತ್ವದ ಆಧಾರದಲ್ಲಿ ಹೇಗೆ ಮತ ಕೇಳುತ್ತಾರೆ?:
ವಿರೋಧ ಪಕ್ಷದವರು ಪ್ರತೀ ಬಾರಿ ಚುನಾವಣೆ ಬಂದಾಗ ಹಿಂದುತ್ವದ ಆಧಾರದಲ್ಲಿ ವೋಟು ಕೇಳುತ್ತಾರೆ.ಅಭಿವೃದ್ದಿ ಅವರಿಗೆ ಬೇಕಾಗಿಲ್ಲ.ಬಿಜೆಪಿಯವರು ಗೆದ್ದ ಬಳಿಕ ಕ್ಷೇತ್ರವನ್ನೇ ಮರೆತುಬಿಡುತ್ತಾರೆ.ಜನರ ಸಮಸ್ಯೆಗೂ ಸ್ಪಂದನೆ ನೀಡುತ್ತಿಲ್ಲ ಎಂಬ ವ್ಯಾಪಕ ದೂರುಗಳು ಬರುತ್ತಿದೆ.ಜನರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಅವರ ಮನ ಗೆಲ್ಲುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು.ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾಗ ಒಳಗೆ ಹಾಕಿದವರೂ ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ.ಇವರೆಲ್ಲ ಯಾವ ಆಧಾರದಲ್ಲಿ ಹಿಂದುತ್ವದ ಹೆಸರಲ್ಲಿ ಮತ ಕೇಳುತ್ತಾರೆ ಎಂದು ಜನರು ಪ್ರಶ್ನೆ ಮಾಡಬೇಕು ಎಂದು ಶಾಸಕರು ಹೇಳಿದರು.ಕಾರ್ಯಕರ್ತರು ಶಿಸ್ತನ್ನು ಅಳವಡಿಸುವ ಮೂಲಕ ತಳಮಟ್ಟದ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸವನ್ನು ಮಾಡಿ, ಅವರ ಸೇವೆಯನ್ನು ಮಾಡುವ ಮೂಲಕ ಪಕ್ಷ ಕಟ್ಟುವ ಕೆಲಸ ಮಾಡಬೇಕು ಎಂದು ಶಾಸಕರು ಹೇಳಿದರು.


ವ್ಯಕ್ತಿಗಿಂತ ಪಕ್ಷವೇ ದೊಡ್ಡದು-ಕಾವು ಹೇಮನಾಥ ಶೆಟ್ಟಿ:
ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ವ್ಯಕ್ತಿಗಿಂತ ಪಕ್ಷವೇ ದೊಡ್ಡದು. ಅಶೋಕ್ ರೈ ಶಾಸಕರಾದ ಬಳಿಕ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ,ಮುಂದೆ ಇರುವುದೂ ಇಲ್ಲ.ಎಲ್ಲರೂ ಒಗ್ಗಟ್ಟಾಗಿ ಪಕ್ಷದ ಏಳಿಗೆಗೆ ಶ್ರಮಿಸಬೇಕು. ನಾನು ಮೇಲೆ ಅವನು ಕಳಗೆ ಎಂಬ ಮಾತೇ ಇಲ್ಲ.ಇಲ್ಲಿ ಎಲ್ಲರೂ ಒಟ್ಟಾಗಿ ಕಾರ್ಯಕರ್ತರ ತರಹ ಕೆಲಸ ಮಾಡಬೇಕು ಆ ರೀತಿ ಮಾಡಿದಲ್ಲಿ ಇಲ್ಲಿ ಕಾಂಗ್ರೆಸ್ಸನ್ನು ಸೋಲಿಸಲು ಯಾವ ಶಕ್ತಿಗೂ ಸಾಧ್ಯವಿಲ್ಲ ಎಂದರು.ಪುತ್ತೂರಿಗೆ ಮೆಡಿಕಲ್ ಕಾಲೇಜು ಮಂಜೂರಾಗಿರುವುದು ನಮ್ಮ ಭಾಗ್ಯವಾಗಿದೆ.ಇಷ್ಟರವರೆಗೆ ಇಲ್ಲಿ ಶಾಸಕರಾದವರಿಗೆ ಮೆಡಿಕಲ್ ಕಾಲೇಜು ತರಲು ಸಾಧ್ಯವಾಗಿಲ್ಲ. ಅಭಿವೃದ್ದಿಯ ಇಚ್ಚಾಶಕ್ತಿ ಇದ್ದಲ್ಲಿ ಏನೂ ಸಾಧಿಸಬಹುದು ಎಂಬುದಕ್ಕೆ ನಮ್ಮ ಶಾಸಕರೇ ಉದಾಹರಣೆಯಾಗಿದ್ದಾರೆ ಎಂದು ಹೇಳಿದ ಹೇಮನಾಥ ಶೆಟ್ಟಿ,ಪುತ್ತೂರು ಅಭಿವೃದ್ಧಿಯಾಗುತ್ತಿದೆ., ಮುಂದೆ ಉದ್ಯಮಗಳೂ ಬರಲಿದೆ.ಆಗ ನಮ್ಮ ಮಕ್ಕಳಿಗೆ ಉದ್ಯೋಗ ದೊರೆಯಲಿದೆ.ಕಾಂಗ್ರೆಸ್ ಮಾತ್ರ ಬಡವರ ಪರ, ಅಭಿವೃದ್ಧಿ ಪರ ಎಂಬುದು ಜನರಿಗೆ ಗೊತ್ತಾಗಿದೆ. ಮುಂದಿನ ಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುವ ಮೂಲಕ ಕಾಂಗ್ರೆಸ್ಸಿನ ಶಕ್ತಿಯನ್ನು ತೋರಿಸಬೇಕು ಎಂದು ಹೇಮನಾಥ ಶೆಟ್ಟಿ ಹೇಳಿದರು.


ಸಂಕಷ್ಟದ ಪರಿಸ್ಥಿತಿಯಲ್ಲೂ ಕಾಂಗ್ರೆಸ್ ಗೆದ್ದಿದೆ-ಮಹಮ್ಮದಾಲಿ:
ಕಾಂಗ್ರೆಸ್‌ಗೆ ಪುತ್ತೂರಿನಲ್ಲಿ ಸಂಕಷ್ಟದ ಸ್ಥಿತಿ ಇದ್ದ ಕಾಲದಲ್ಲಿ ಕಾವು ಹೇಮನಾಥ ಶೆಟ್ಟಿ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ.ನಮ್ಮ ಪಕ್ಷದ ಶಾಸಕರೇ ಇಲ್ಲದ ಕಾಲದಲ್ಲಿ ನಾವು ಚುನಾವಣೆ ಗೆದ್ದಿದ್ದೇವೆ.ಈಗ ನಮ್ಮದೇ ಸರಕಾರ ಇದೆ, ಶಾಸಕರಿದ್ದಾರೆ.ಚುನಾವಣೆ ವೇಳೆ ನಾವು ಒಗ್ಗಟ್ಟಾಗಿ ಕೆಲಸ ಮಾಡಿದರೆ ಕಾಂಗ್ರೆಸ್ 25 ರಿಂದ 30 ಸೀಟು ಗೆದ್ದೇ ಗೆಲ್ಲುತ್ತದೆ ಎಂದು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಮಹಮ್ಮದ್ ಆಲಿ ಹೇಳಿದರು.ಈ ಹಿಂದಿನ ನಗರಸಭಾ ಆಡಳಿತದ ಬಗ್ಗೆ ಜನತೆ ರೋಸಿ ಹೋಗಿದ್ದಾರೆ.ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ, ಜನ ಕಲ್ಲೆಸೆದು ಓಡಿಸಲು ಮಾತ್ರ ಬಾಕಿ ಇತ್ತು ಎಂದು ಹೇಳಿದ ಮಹಮ್ಮದ್ ಆಲಿ, ಇಲ್ಲಿ ಅಶೋಕ್ ರೈ ಶಾಸಕರಾದ ಬಳಿಕ ನಗರದಲ್ಲಿ ಅಭಿವೃದ್ಧಿ ಕೆಲಸ, ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿದೆ ಎಂಬುದು ಇಲ್ಲಿನ ನಾಗರಿಕರಿಗೆ ಚೆನ್ನಾಗಿ ಗೊತ್ತಿದೆ ಎಂದು ಹೇಳಿದರು.ನಗರಸಭಾ ವ್ಯಾಪ್ತಿಯಲ್ಲಿ ನಡೆಯುವ ಪಕ್ಷದ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುತ್ತಿರುವುದು ಕಾಂಗ್ರೆಸ್ ಪರ ಅಲೆಯೇ ಇದಕ್ಕೆ ಕಾರಣವಾಗಿದೆ.ಬಿಜೆಪಿ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿ ಮತದಾರರ ಪಟ್ಟಿಯಿಂದ ಕಾಂಗ್ರೆಸ್ ಪರ ಮತದಾರರ ಹೆಸರನ್ನು ಅಳಿಸುವ ಕೆಲಸಕ್ಕೆ ಮುಂದಾಗಿದ್ದು ಕಾರ್ಯಕರ್ತರು ಎಚ್ಚರದಿಂದ ಇರಬೇಕು ಎಂದು ಆಲಿ ಹೇಳಿದರು.


ಶೀಘ್ರ ಚುನಾವಣೆ ನಡೆಯಲಿ-ಬಡಗನ್ನೂರು:
ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಮಾತನಾಡಿ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಸರಕಾರ ಶೀಘ್ರ ನಡೆಸಬೇಕು.ಈ ವಿಚಾರದ ಬಗ್ಗೆ ಶಾಸಕರು ಅಧಿವೇಶನದಲ್ಲಿ ಸರಕಾರದ ಗಮನ ಸೆಳೆಯಬೇಕು.ಬಿಜೆಪಿ ಸರಕಾರ ಅಧಿಕಾರದಲ್ಲಿದ್ದ ವೇಳೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಮೇಲೆ ಆಸಕ್ತಿ ತೋರಿಸದ ಕಾರಣ ಕೆಲವೊಂದು ಚುನಾವಣೆಗಳು ವಿಳಂಬವಾಗಿದೆ.ಸ್ಥಳೀಯವಾಗಿ ನಾಯಕರು ಬೆಳೆಯುವುದು ಬಿಜೆಪಿಗೆ ಬೇಕಾಗಿಲ್ಲ ಎಂದು ಹೇಳಿದರು.ಮುಂದಿನ ಚುನಾವಣೆಯಲ್ಲಿ, ಶಾಸಕ ಅಶೋಕ್ ರೈ ಮಾಡಿರುವ ಅಭಿವೃದ್ಧಿ ಕಾರ್ಯ ಹಾಗೂ ರಾಜ್ಯ ಸರಕಾರದ ಬಡವರ ಕಲ್ಯಾಣ ಕಾರ್ಯಕ್ರಮಗಳನ್ನು ಮುಂದಿಟ್ಟು ಮತ ಯಾಚನೆ ಮಾಡಬೇಕು.ಕಾರ್ಯಕರ್ತರು ಪ್ರತೀ ಮನೆ ಮನೆಗೆ ತೆರಳಿ ಸರಕಾರದ ಅಭಿವೃದ್ದಿ ಕಾರ್ಯಗಳನ್ನು ತಿಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.


ಅಶೋಕ್ ರೈ ಪುತ್ತೂರಿನ ಭಾಗ್ಯವಿಧಾತ-ಕೆ.ಪಿ ಆಳ್ವ:
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಸ್ವಾಗತಿಸಿ ಮಾತನಾಡಿ, ಪುತ್ತೂರು ಕಾಂಗ್ರೆಸ್‌ನಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ, ಅಶೋಕ್ ರೈ ಶಾಸಕರಾದ ಬಳಿಕ ಎಲ್ಲರನ್ನೂ ಸಮಾನವಾಗಿ ಕಾಣುತ್ತಿರುವ ಕಾರಣ ಗುಂಪುಗಾರಿಕೆ ಇಲ್ಲವಾಗಿದೆ,ಮುಂದೆಯೂ ಯಾವುದೇ ಗುಂಪುಗಾರಿಕೆಗೆ ಅವಕಾಶ ಇಲ್ಲ.ಪಕ್ಷದ ವಿಚಾರ ಏನಿದ್ದರೂ ಅದನ್ನು ಸಾರ್ವಜನಿಕವಾಗಿ, ಸಾಮಾಜಿಕ ತಾಣದಲ್ಲಿ ಚರ್ಚಿಸುವ ಕೆಲಸವನ್ನು ಯಾವ ಕಾರ್ಯಕರ್ತರೂ ಮಾಡಬಾರದು.ಯಾವುದೇ ಸಮಸ್ಯೆ, ತೊಂದರೆಗಳಿದ್ದರೆ ಅದನ್ನು ಸಂಬಂಧಿಸಿದವರ ಗಮನಕ್ಕೆ ತರಬೇಕು. ಶಾಸಕ ಅಶೋಕ್ ರೈ ಅವರ ಸಲಹೆ ಸೂಚನೆಯಂತೆ ಇಲ್ಲಿ ಪ್ರತಿಯೊಂದು ಕಾರ್ಯಚಟುವಟಿಕೆಗಳು ನಡೆಯಲಿದೆ. ಶಾಸಕರ ಅಭಿವೃದ್ದಿ ಕೆಲಸಗಳು ಪುತ್ತೂರಿನಲ್ಲಿ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಿದೆ.ಪಕ್ಷ ಭೇದವಿಲ್ಲದೆ, ಜಾತಿ, ಧರ್ಮ ಭೇದವಿಲ್ಲದೆ ಎಲ್ಲರಿಗೂ ನೆರವು ನೀಡುವ ಮೂಲಕ ಶಾಸಕರು ಪುತ್ತೂರಿನ ಜನತೆಯ ಪಾಲಿನ ಭಾಗ್ಯವಿಧಾತರಾಗಿದ್ದಾರೆ ಎಂದು ಹೇಳಿದರು.


ವೇದಿಕೆಯಲ್ಲಿ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಆಝಾದ್, ಕೆಪಿಸಿಸಿ ಸದಸ್ಯ ಪ್ರಸಾದ್ ಕೌಶಲ್ ಶೆಟ್ಟಿ,ಬ್ಲಾಕ್ ಕಾಂಗ್ರೆಸ್ ಕೋಶಾಧಿಕಾರಿ ವಲೇರಿಯನ್ ಡಯಾಸ್, ನಗರ ವಲಯ ಅಧ್ಯಕ್ಷರುಗಳಾದ ಲೋಕೇಶ್ ಗೌಡ ಪಡ್ಡಾಯೂರು, ರೋಶನ್ ರೈ ಬನ್ನೂರು, ಹರೀಶ್ ಆಚಾರ್ಯ, ಅಬ್ದುಲ್ಲ ಕೆ.ಎಂ.,ಮೋನು ಬಪ್ಪಳಿಗೆ, ಮುಖೇಶ್ ಕೆಮ್ಮಿಂಜೆ, ದಾಮೋದರ್ ಭಂಡಾರ್ಕರ್, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಚಂದ್ರಪ್ರಭಾ ಗೌಡ ನೀರ್ಪಾಡಿ ಉಪಸ್ಥಿತರಿದ್ದರು.ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.ಪುತ್ತೂರು ನಗರ ಕಾಂಗ್ರೆಸ್‌ಗೆ ಬದಲಾಗಿ ಪುತ್ತೂರು ನಗರಕ್ಕೆ ಸಂಬಂಧಿಸಿ ಏಳು ವಲಯಗಳ ಸ್ಥಾಪನೆಯಾಗಿ ಅಧ್ಯಕ್ಷರ ನೇಮಕವಾದ ಬಳಿಕ ನಡೆದ ಪ್ರಥಮ ಸಭೆಯಲ್ಲಿ ಏಳು ವಲಯಗಳ ಅಧ್ಯಕ್ಷರು ,ಕಾರ್ಯಕರ್ತರು,ಮುಖಂಡರು ಹಾಜರಿದ್ದರು.

ಅವ ನನ್ನವ..ಇವ ನನ್ನವನಿಲ್ಲ ಪಕ್ಷ ಸೂಚಿಸಿದವರೇ ಅಭ್ಯರ್ಥಿ
ಚುನಾವಣೆಯಲ್ಲಿ ಅವರು ನನ್ನ ಅಭ್ಯರ್ಥಿ, ಇವರು ನನ್ನ ಅಭ್ಯರ್ಥಿ ಎಂದು ಯಾರೂ ಹೇಳಬಾರದು.ಪಕ್ಷ ಯಾರನ್ನು ಸೂಚನೆ ಮಾಡುತ್ತದೋ ಅವರೇ ಅಭ್ಯರ್ಥಿ,ಯಾರೇ ಅಭ್ಯರ್ಥಿಯಾದರೂ ಅವರನ್ನು ಗೆಲ್ಲಿಸುವಲ್ಲಿ ಪ್ರತಿಯೊಬ್ಬರೂ ಮುತುವರ್ಜಿ ವಹಿಸಬೇಕು.ನಾವು ಮಾಡಿದ ಅಭಿವೃದ್ದಿ ಕೆಲಸಗಳೇ ನಮಗೆ ವರದಾನವಾಗಲಿದೆ.ಇದರಲ್ಲಿ ಯಾವುದೇ ಸಂಶಯಬೇಡ
-ಅಶೋಕ್ ಕುಮಾರ್ ರೈ, ಶಾಸಕರು,ಪುತ್ತೂರು

LEAVE A REPLY

Please enter your comment!
Please enter your name here