ಪುತ್ತೂರು:ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿ ತಿಂಗಳ ಆರ್ಧ್ರಾ ನಕ್ಷತ್ರದಂದು ನಡೆಯುವ ಮೃತ್ಯುಂಜಯ ಹೋಮ ಡಿ.6ಕ್ಕೆ ನಡೆಯಲಿದೆ.ಈ ಬಾರಿ ಮೃತ್ಯುಂಜಯ ಹೋಮ ಸೇವೆಯ ಸಂದರ್ಭ ಶ್ರೀ ದೇವರಿಗೆ ಎಳ್ಳೆಣ್ಣೆ ಅಭಿಷೇಕವು ನಡೆಯಲಿದೆ.
ಮೃತ್ಯುಂಜಯ ಹೋಮ ಸೇವೆ ಮಾಡಿಸುವ ಭಕ್ತರು ದೇವಳದ ಕೌಂಟರ್ನಲ್ಲಿ ಸೇವಾ ರಶೀದಿ ಪಡೆಯಬಹುದು. ಅದೇ ರೀತಿ ಮಹಾಲಿಂಗೇಶ್ವರ ದೇವರ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಂತೆ, ಶ್ರೀ ದೇವರಿಗೆ ಎಳ್ಳೆಣ್ಣೆ ಅಭಿಷೇಕವನ್ನು ಮಾಡುವ ನಿರ್ಣಯವನ್ನು ಈಶ್ವರ ಭಟ್ ಪಂಜಿಗುಡ್ಡೆ ನೇತೃತ್ವದ ದೇವಳದ ವ್ಯವಸ್ಥಾಪನಾ ಸಮಿತಿ ಕೈಗೊಂಡಂತೆ ಅ.18ಕ್ಕೆ ಪ್ರಥಮ ಬಾರಿಗೆ ದೇವರಿಗೆ ಎಳ್ಳೆಣ್ಣೆ ಅಭಿಷೇಕ ಮಾಡಲಾಯಿತು.ಅಭಿಷೇಕದ ಎಣ್ಣೆಯನ್ನು ಭಕ್ತರಿಗೆ ಪ್ರಸಾದ ರೂಪದಲ್ಲೂ ನೀಡಲಾಯಿತು.ಇದೇ ಸಂದರ್ಭ ಮುಂದೆ ಪ್ರತಿ ತಿಂಗಳು ಎಳ್ಳೆಣ್ಣೆ ಅಭಿಷೇಕ ಮಾಡುವ ನಿರ್ಣಯ ಕೈಗೊಂಡು ನ.10ರಂದು ಎಳ್ಳೆಣ್ಣೆ ಸಮರ್ಪಣೆಗೆ ಶಾಸಕ ಅಶೋಕ್ ಕುಮಾರ್ ರೈ ಅವರು ಚಾಲನೆ ನೀಡಿದ್ದರು.ಇದೀಗ ಪ್ರತಿ ತಿಂಗಳು ಆರ್ಧ್ರಾ ನಕ್ಷತ್ರದಂದು ನಡೆಯುವ ಮೃತ್ಯುಂಜಯ ಹೋಮದ ಜೊತೆಗೆ ದೇವರಿಗೆ ಎಳ್ಳೆಣ್ಣೆ ಅಭಿಷೇಕ ಮಾಡುವುದೆಂದು ತೀರ್ಮಾನಿಸಿದಂತೆ ಡಿ.6ಕ್ಕೆ ಮೃತ್ಯುಂಜಯ ಹೋಮ ಮತ್ತು ದೇವರಿಗೆ ಎಳ್ಳೆಣ್ಣೆ ಅಭಿಷೇಕ ನಡೆಯಲಿದೆ.
ಭಕ್ತರ ಇಷ್ಟಾರ್ಥ ನೆರೆವೇರುತ್ತಿದೆ
ಪ್ರತಿ ತಿಂಗಳ ಆರ್ಧ್ರಾ ನಕ್ಷತ್ರದಂದು ಮೃತ್ಯುಂಜಯ ಹೋಮ ಸೇವೆ ಭಕ್ತರು ಭಾಗವಹಿಸುತ್ತಾರೆ.ಇದರ ಜೊತೆಗೆ ಪ್ರಪ್ರಥಮವಾಗಿ ದೇವರಿಗೆ ಶುದ್ಧ ಎಳ್ಳೆಣ್ಣೆ ಅಭಿಷೇಕದ ಬಳಿಕ ಅಭಿಷೇಕದ ಎಣ್ಣೆ ಪಡೆದ ಬಹಳಷ್ಟು ಭಕ್ತರಿಗೆ ಉತ್ತಮ ಪರಿಣಾಮ ಬೀರಿದೆ.ಹಾಗಾಗಿ ಪ್ರತಿ ತಿಂಗಳು ಎಳ್ಳೆಣ್ಣೆ ಅಭಿಷೇಕ ಮಾಡುವಂತೆ ಭಕ್ತರ ಬೇಡಿಕೆ ಇತ್ತು. ಅದಕ್ಕೆ ಪೂರಕವಾಗಿ ಪ್ರತಿ ತಿಂಗಳ ಆರ್ಧ್ರಾ ನಕ್ಷತ್ರದಂದು ಮೃತ್ಯುಂಜಯ ಹೋಮದ ಜೊತೆಗೆ ಎಳ್ಳೆಣ್ಣೆ ಅಭಿಷೇಕವನ್ನು ನೆರವೇರಿಸುತ್ತಿದ್ದೇವೆ.ಅಭಿಷೇಕದ ಎಣ್ಣೆಯನ್ನು ದೇವಳದ ಕೌಂಟರ್ನಲ್ಲೇ ವಿತರಿಸಲಾಗುವುದು. ಭಕ್ತರು ಸೇವಾ ರಶೀದಿ ಪಡೆದು ಎಳ್ಳೆಣ್ಣೆ ಪಡೆದು ದೇವರಿಗೆ ಸಮರ್ಪಣೆ ಮಾಡಬಹುದು.ಮುಂದೆ ಅಭಿಷೇಕದ ದಿನ ಸೇವಾ ರಶೀದಿ ಮಾಡಿದ ಭಕ್ತರಿಗೆ ಅಭಿಷೇಕದ ಎಣ್ಣೆಯನ್ನು ವಿತರಿಸಲಾಗುವುದು-
ಈಶ್ವರ ಭಟ್ ಪಂಜಿಗುಡ್ಡೆ, ಅಧ್ಯಕ್ಷರು
ವ್ಯವಸ್ಥಾಪನಾ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು
