ಮರ ಕಡಿಯಲು ಪರ್ಮಿಟ್ ವಿಚಾರದಲ್ಲಿ ಲಂಚ ಸ್ವೀಕರಿಸಿದ ಪ್ರಕರಣ : ಆರೋಪಿ ಅರಣ್ಯ ರಕ್ಷಕ ಡಿಸ್ಚಾರ್ಜ್ ಕೋರಿದ್ದ ಅರ್ಜಿ ವಜಾ

0

ಮಂಗಳೂರು: ಮರ ಕಡಿಯಲು ಪರ್ಮಿಟ್ ವಿಚಾರದಲ್ಲಿ ಮರದ ವ್ಯಾಪಾರಿಯೋರ್ವರಿಂದ ಲಂಚ ಪಡೆದ ಆರೋಪ ಎದುರಿಸುತ್ತಿರುವ ಉಪ್ಪಿನಂಗಡಿಯ ಅರಣ್ಯ ರಕ್ಷಕನೋರ್ವ ಪ್ರಕರಣದಲ್ಲಿ ಡಿಸ್ಚಾರ್ಜ್ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.


ಮಂಗಳೂರುನ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು 2020ರ ಜನವರಿ 07ರಂದು ಮರದ ವ್ಯಾಪಾರಿ ಸಿದ್ದಿಕ್ ಅಕ್ಟರ್ ಉರುವಾಲು ಎಂಬವರು ಸುಧಾ ಗೋಪಾಲ್ ಎಂಬವರ ಮಾಗುವಣಿ ಮರಗಳನ್ನು ತನ್ನ ಸ್ವಂತ ಉಪಯೋಗಕ್ಕೆಂದು ಖರೀದಿಸಿದ್ದು,ಇದನ್ನು ಕಡಿಯುವ ಬಗ್ಗೆ ಉಪ್ಪಿನಂಗಡಿ ವಲಯದ ಅರಣ್ಯ ರಕ್ಷಕ ಸುಧಿರ್ ಎನ್.ಎಂಬವರನ್ನು ವಿಚಾರಿಸಿದಾಗ, ಮರಗಳನ್ನು ಕಡಿಯಲು ಪರ್ಮಿಟ್ ಮಾಡಬೇಕಾದರೆ 2ರಿಂದ 3 ತಿಂಗಳ ಸಮಯ ಬೇಕಾಗುತ್ತದೆ. ಆದ್ದರಿಂದ ನಾನೇ ಸಂಪೂರ್ಣ ಜವಾಬ್ದಾರಿ ವಹಿಸಿ ಮಿಲ್‌ಗೆ ತೆಗೆದುಕೊಂಡು ಹೋಗಲು ಅನುವು ಮಾಡಿಕೊಡುತ್ತೇನೆ.ಇದಕ್ಕೆ ಸಂಬಂಧಿಸಿ ನನಗೆ ರೂ.15,೦೦೦ವನ್ನು ಲಂಚದ ರೂಪದಲ್ಲಿ ಕೊಡಬೇಕು.ಇಲ್ಲದೇ ಹೋದಲ್ಲಿ ನಿಮಗೆ ಜಾಸ್ತಿ ಖರ್ಚು ಆಗುತ್ತದೆ ಎಂದು ಹೇಳಿ ಸಿದ್ದೀಕ್ ಅಕ್ಬರ್ ಅವರಿಂದ ರೂ.10 ಸಾವಿರ ಲಂಚದ ಹಣವನ್ನು ಕೇಳಿ ಪಡೆದುಕೊಂಡು ಬಾಕಿ ಉಳಿದ ಹಣ ರೂ.5 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 08.01.2020ರಂದು ತನ್ನ ವಾಸದ ಮನೆಗೇ ಸಿದ್ದಿಕ್ ಅಕ್ಬರ್ ಅವರನ್ನು ಬರಮಾಡಿಕೊಂಡು ಲಂಚದ ಹಣವನ್ನು ಸ್ವೀಕರಿಸುವ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ದಾಳಿ ನಡೆಸಿ ಟ್ರ್ಯಾಪ್ ಮಾಡಿದ್ದರು.ಈ ಪ್ರಕರಣದ ತನಿಖಾಧಿಕಾರಿ ಶ್ಯಾಮಸುಂದರ್‌ರವರು ತನಿಖೆಯನ್ನು ಪೂರ್ಣಗೊಳಿಸಿ ಆರೋಪಿ ಅರಣ್ಯ ರಕ್ಷಕ ಸುದೀರ್ ವಿರುದ್ಧ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ವಿಶೇಷ ಲೋಕಾಯುಕ್ತ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದಾರೆ.


ಆರೋಪಿಯಿಂದ ಡಿಸ್ಜಾರ್ಚ್ ಅರ್ಜಿ:
ಈ ಪ್ರಕರಣದಲ್ಲಿ ಆರೋಪಿಯು ನ್ಯಾಯಾಲಯಕ್ಕೆ ಹಾಜರಾಗಿ ತನ್ನ ವಕೀಲರ ಮೂಲಕ ಪ್ರಕರಣದ ತನಿಖಾ ಸಮಯದಲ್ಲಿ 227 ಸಿ.ಆರ್.ಪಿ.ಸಿ.ಯಡಿಯಲ್ಲಿ ಅರ್ಜಿ ಸಲ್ಲಿಸಿ, ಪ್ರಕರಣದಲ್ಲಿ ತನ್ನನ್ನು ಡಿಸ್ಟಾರ್ಜ್ ಮಾಡುವಂತೆ ಕೇಳಿಕೊಂಡಿದ್ದರು.ಸದ್ರಿ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಲಯವು ಆರೋಪಿ ಸಲ್ಲಿಸಿರುವ ಅರ್ಜಿಯನ್ನು ವಜಾ ಮಾಡಿದೆ.ಈ ಪ್ರಕರಣದಲ್ಲಿ ಪೂರ್ಣ ಮಟ್ಟದ ಆದೇಶವನ್ನು ನ್ಯಾಯಾಧಿಶರಾದ ಸುನೀತಾ ಎಸ್.ಜಿ.ರವರು ನೀಡಿದ್ದು, ಲೋಕಾಯುಕ್ತ ಸಂಸ್ಥೆಯ ಪರವಾಗಿ ವಿಶೇಷ ಸರಕಾರಿ ಅಭಿಯೋಜಕರಾದ ರವೀಂದ್ರ ಮುನ್ನಿಪಾಡಿ ವಾದ ಮಂಡಿಸಿದರು.

LEAVE A REPLY

Please enter your comment!
Please enter your name here