ಮೈಂದಡ್ಕದಲ್ಲಿ 20 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ಅಂಗನವಾಡಿ ಕಟ್ಟಡಕ್ಕೆ ಶಿಲಾನ್ಯಾಸ

0

ರಾಜಕೀಯ ಬೆರೆತಾಗ ಅಭಿವೃದ್ಧಿ ಸಾಧ್ಯವಿಲ್ಲ: ಅಶೋಕ್ ಕುಮಾರ್ ರೈ

ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾ.ಪಂ.ನ ಆಡಳಿತದಲ್ಲಿ ಇರುವಷ್ಟು ರಾಜಕೀಯ ಇಡೀ ರಾಜ್ಯದಲ್ಲಿ ನಾನು ಕಂಡಿಲ್ಲ. ಚುನಾವಣೆಯ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡಬೇಕೇ ಹೊರತು ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಮಾಡಬಾರದು. ಆಡಳಿತ ವ್ಯವಸ್ಥೆಯೊಳಗೆ ರಾಜಕೀಯ ಬೆರೆತಾಗ ಗ್ರಾಮದ ಉದ್ಧಾರ ಸಾಧ್ಯವಿಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.


ಇಲ್ಲಿನ ಮೈಂದಡ್ಕದಲ್ಲಿ 20 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ಅಂಗನವಾಡಿ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಮತದಾರರು ನಮ್ಮನ್ನು ಆಯ್ಕೆ ಮಾಡಿ ಕಳುಹಿಸುವುದು ಉತ್ತಮ ಅಭಿವೃದ್ಧಿ ಕೆಲಸ ಮಾಡಲೆಂದು. ಅಧಿಕಾರ ಸಿಕ್ಕಿದ ಮೇಲೆಯೂ ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಮಾಡಿ ಎಂದಲ್ಲ. ಅವಕಾಶ ಸಿಕ್ಕಾಗ ಜನಪ್ರತಿನಿಧಿಗಳು ಅಭಿವೃದ್ಧಿಯ ಚಿಂತನೆ ಮಾಡಬೇಕು. ಜನರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು. ಆದರೆ ನೆಕ್ಕಿಲಾಡಿ ಗ್ರಾ.ಪಂ. ಆಡಳಿತ ಅದನ್ನು ಮಾಡುತ್ತಿಲ್ಲ. 20 ಲಕ್ಷ ರೂ. ಅನುದಾನದಲ್ಲಿ ನೆಕ್ಕಿಲಾಡಿ- ಬೊಳುವಾರು ಹೆದ್ದಾರಿಯ ಡಿವೈಡರ್ ಮೇಲೆ ಹೂವಿನ ಗಿಡಗಳನ್ನು ನೆಡುವ ಯೋಜನೆಯನ್ನು ಹಾಕಿಕೊಂಡಿದ್ದೆ. ಇದಕ್ಕೆ ನೆಕ್ಕಿಲಾಡಿ ಗ್ರಾ.ಪಂ.ಗೆ ಉಪಯೋಗವಿಲ್ಲದ ಕೊಳವೆಬಾವಿಯಿಂದ ನೀರು ಕೇಳಿದಾಗ ಅದಕ್ಕೂ ಗ್ರಾ.ಪಂ. ಆಡಳಿತ ಆಕ್ಷೇಪ ಮಾಡಿತ್ತು. ಹೀಗೆ ಪ್ರತಿಯೊಂದು ಅಭಿವೃದ್ಧಿ ವಿಚಾರದಲ್ಲೂ ರಾಜಕೀಯ ಮಾಡುತ್ತಾ ಅಭಿವೃದ್ಧಿ ಕೆಲಸಗಳಿಗೆ ತಡೆಯಾದರೆ ಗ್ರಾಮದ ಅಭಿವೃದ್ಧಿ ಹೇಗೆ ಸಾಧ್ಯವಾಗುತ್ತದೆ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬಿಟ್ಟು ಪರಸ್ಪರ ಸಹಕಾರ ನೀಡಬೇಕು ಎಂದರು.


ನಾನು ಶಾಸಕನಾದ ಎರಡು ವರ್ಷದಲ್ಲಿ 34 ನೆಕ್ಕಿಲಾಡಿ ಗ್ರಾ.ಪಂ. 1.95 ಕೋ. ರೂ. ಅನುದಾನ ನೀಡಿದ್ದೇನೆ. ಈ ಬಾರಿ ಮತ್ತೆ 75 ಲಕ್ಷ ರೂ. ಅನುದಾನವನ್ನು ನೆಕ್ಕಿಲಾಡಿ ಗ್ರಾಮಕ್ಕೆ ಮೀಸಲಿಟ್ಟಿದ್ದೇನೆ. ಇದನ್ನು ಕಂಡು ಖುಷಿ ಪಡಬೇಕಾದ ನೆಕ್ಕಿಲಾಡಿ ಗ್ರಾ.ಪಂ. ಆಡಳಿತ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ. ನೆಕ್ಕಿಲಾಡಿ ಪಂಚಾಯತ್‌ನೊಳಗೆ ಸಾಕಷ್ಟು ಅವ್ಯವಹಾರ ನಡೆದಿದೆ ಎಂಬ ಬಗ್ಗೆ ನನಗೆ ಸಾಕಷ್ಟು ದೂರುಗಳು ಬಂದಿವೆ. ಅದನ್ನು ನಾನು ಕೆದಕಲು ಹೋಗುವುದಿಲ್ಲ. ನಾನು ಶಾಸಕನಾದ ಬಳಿಕ 13 ಗ್ರಾ.ಪಂ.ಗಳಲ್ಲಿ 300 ಎಕರೆ ಜಾಗವನ್ನು ನಿವೇಶನಕ್ಕಾಗಿ ಕಾದಿರಿಸಿದ್ದೇನೆ. ಸರಕಾರಿ ಮೆಡಿಕಲ್ ಕಾಲೇಜು, ಕೆಎಂಎಫ್‌ಗೆ ಜಾಗ ಮಂಜೂರು, ಕೊಯಿಲ ಪಶು ವೈದ್ಯಕೀಯ ಕಾಲೇಜಿಗೆ ಅನುದಾನ ನೀಡಿದ್ದೇನೆ. ಇವೆಲ್ಲಾ ಆರಂಭವಾದಲ್ಲಿ ಸಾಕಷ್ಟು ಉದ್ಯೋಗ ಸೃಷ್ಟಿಯಾಗಲಿದೆ. ಅಭಿವೃದ್ಧಿಯ ವಿಚಾರದಲ್ಲಿ ನಾನು ಯಾವತ್ತೂ ರಾಜಕೀಯ ಮಾಡಲ್ಲ. ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸ ಮಾಡಿಸುತ್ತಿದ್ದೇನೆ ಎಂದರು.


ವೇದಿಕೆಯಲ್ಲಿ ನೆಕ್ಕಿಲಾಡಿ ಗ್ರಾ.ಪಂ. ಸದಸ್ಯ ವಿಜಯಕುಮಾರ್, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೌಸೀಫ್ ಯು.ಟಿ., 34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಚಂದ್ರಾವತಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹರೀಶ್, ನೆಕ್ಕಿಲಾಡಿ ಗ್ರಾ.ಪಂ.ನ ಲೆಕ್ಕಾಧಿಕಾರಿ ದೇವಪ್ಪ ನಾಯ್ಕ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ವಿಕ್ರಂ ಶೆಟ್ಟಿ ಅಂತರ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ರೂಪೇಶ್ ರೈ ಅಲಿಮಾರ್, ನಮ್ಮೂರು ಮೈಂದಡ್ಕದ ಅಧ್ಯಕ್ಷ ಕೃಷ್ಣ ನಾಯ್ಕ, ಪ್ರಮುಖರಾದ ಶಿವಪ್ರಸಾದ್ ರೈ ಕೋಡಿಂಬಾಡಿ, ಲ್ಯಾನ್ಸಿ ಮಸ್ಕರ‍್ಹೇನಸ್, ಬಾಬು ನಾಯ್ಕ, ಅಶೋಕ, ಗಣೇಶ, ಶಬೀರ್ ಅಹಮ್ಮದ್, ಮುಹಮ್ಮದ್ ರಫೀಕ್ ನೆಕ್ಕಿಲಾಡಿ, ಇಸಾಕ್, ಶಿವರಾಮ ಶೆಟ್ಟಿ ಗೋಳ್ತಮಜಲು, ಬಬಿತಾ ಮಿನೇಜಸ್, ಅಬ್ದುಲ್ ಖಾದರ್, ಹಮೀದ್ ಪಿ.ಟಿ., ಪ್ರಹ್ಲಾದ್ ಬೆಳ್ಳಿಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.
ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವೀಚಾರಕಿ ಉಮಾವತಿ ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆ ದೇವಕಿ ವಂದಿಸಿದರು.

34 ನೆಕ್ಕಿಲಾಡಿ ನನ್ನ ನೆರೆಯ ಗ್ರಾಮ. ಆದ್ದರಿಂದ ಈ ಗ್ರಾಮದ ಮೇಲೆ ಪ್ರೀತಿ ಜಾಸ್ತಿ. ಮೈಂದಡ್ಕದ ಈ ಅಂಗನವಾಡಿಯಲ್ಲಿ ಈಗ ಇರುವುದು ಮೂರೇ ಮಕ್ಕಳು. ಬೇರೆ ಕಡೆಗಳಲ್ಲಿ ಅಂಗನವಾಡಿಗಳಿಗೆ ಬೇಡಿಕೆ ಇದ್ದರೂ ಇಲ್ಲಿಗೆ ಅನುದಾನ ಮಂಜೂರುಗೊಳಿಸಿದ್ದೇನೆ. ಮುಂದಕ್ಕೆ ಇನ್ನಿತರ ಕಡೆಗಳಲ್ಲಿಯೂ ಅಂಗನವಾಡಿಗಳಿಗೆ ಅನುದಾನ ನೀಡಲಿದ್ದೇನೆ.
ಅಶೋಕ್ ಕುಮಾರ್ ರೈ, ಶಾಸಕರು

LEAVE A REPLY

Please enter your comment!
Please enter your name here