




ಉಪ್ಪಿನಂಗಡಿ: ಕಳೆದ ನವೆಂಬರ್ ತಿಂಗಳ ಮೊದಲ ವಾರದಲ್ಲಿ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿ ಬಳಿಕ ನ.12 ರಂದು ಸಾವನ್ನಪ್ಪಿದ್ದ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಪಾರಡ್ಕ ನಿವಾಸಿ ಶ್ರೀಧರ ಕುಂಬಾರ ಎಂಬವರ ಪುತ್ರಿ ಹರ್ಷಿತಾ (15) ಎಂಬಾಕೆಯ ಆತ್ಮಹತ್ಯೆಯ ಹಿಂದೆ ಲೈಂಗಿಕ ಕಿರುಕುಳ ಕಾರಣವೆಂಬುವುದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.



ಮೃತ ಬಾಲಕಿಯು ಉಪ್ಪಿನಂಗಡಿಯ ಪ್ರೌಢಶಾಲೆಯಲ್ಲಿ 10 ತರಗತಿ ಕಲಿಯುತ್ತಿದ್ದು, ಈಕೆ ನ.4ರಂದು ತಲೆನೋವು ಎಂದು ಹೇಳಿ ಶಾಲೆಗೆ ಹೋಗದೇ ಪಾರಡ್ಕದ ತನ್ನ ಮನೆಯಲ್ಲಿದ್ದಳು. ಮನೆಯಲ್ಲಿ ತಂದಿಟ್ಟಿದ್ದ ಹುಲ್ಲಿಗೆ ಸಿಂಪಡಿಸುವ ಕೀಟನಾಶಕವನ್ನು ಸೇವಿಸಿ ಅಸ್ವಸ್ಥಗೊಂಡವಳನ್ನು ಕೂಲಿ ಕೆಲಸಕ್ಕೆ ಹೋಗಿದ್ದ ಈಕೆಯ ತಾಯಿ ವಿಷಯ ತಿಳಿದು ಆಟೋ ರಿಕ್ಷಾವೊಂದರಲ್ಲಿ ಚಿಕಿತ್ಸೆಗೆಂದು ಪುತ್ತೂರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಹರ್ಷಿತಾ ನ.12ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಳು . ಈ ಬಗ್ಗೆ ಕಡಬ ಪರಿಸರದ ರಾಜೇಶ್ ಎಂಬಾತನು ಪೋನ್ ಮಾಡಿ ಕಿರುಕುಳ ನೀಡುತ್ತಿದ್ದ ಎಂದು ಮೃತಳ ತಾಯಿ ಪೊಲೀಸರಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು, ಆಕೆಯ ಆತ್ಮಹತ್ಯೆಯ ಹಿಂದೆ ಲೈಂಗಿಕ ಕಿರುಕುಳ ಕಾರಣವಾಗಿರುವುದನ್ನು ಪತ್ತೆ ಹಚ್ಚಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಪ್ರಧಾನ ಆರೋಪಿಯು ಅಪ್ರಾಪ್ತ ವಯಸ್ಕನಾಗಿದ್ದು, ಆತನೊಂದಿಗೆ ಕಿರುಕುಳಕ್ಕೆ ಸಹಕರಿಸಿದ ಪ್ರಶಾಂತ (21) ಎಂಬಾತನ ವಿರುದ್ದವೂ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆದಿದೆ.











