ಪುತ್ತೂರು: ಅನಾಥ ಮಗುವಿಗೆ ಶಾಸಕ ಅಶೋಕ್ ರೈ ಅವರು ನೆರವಿನ ಹಸ್ತ ಚಾಚಿದ್ದಾರೆ.
ಅರಿಯಡ್ಕ ಗ್ರಾಮದ ದೇರ್ಲದ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದ ಮಹಿಳೆಯೋರ್ವರನ್ನು ಎರಡು ವರ್ಷದ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ವರ್ಷದ ಬಳಿಕ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗುವಿಗೆ ಜನ್ಮ ನೀಡಿದ ಬಳಿಕ ಒಂದೇ ತಿಂಗಳಲ್ಲಿ ಮಹಿಳೆ ಕೊನೆಯುಸಿರೆಳೆದಿದ್ದಾರೆ. ಮಹಿಳೆ ಜೊತೆ ಒಂದಷ್ಟು ತಿಂಗಳು ಮಾತ್ರ ಜೊತೆಗಿದ್ದ ಪತಿ ಆ ಬಳಿಕ ಊರು ಬಿಟ್ಟು ಹೋದವರು ಮತ್ತೆ ಬರಲಿಲ್ಲ, ಅಶ್ವಿನಿ ಮಗುವಿಗೆ ಜನ್ಮ ನೀಡಿದಾಗಲೂ ನೋಡಲು ಬಂದಿಲ್ಲ, ಮರಣಹೊಂದಿದಾಗಲೂ ಬರಲಿಲ್ಲ. ಒಂದು ತಿಂಗಳ ಹಸುಗೂಸನ್ನು ಸಾಕುವ ಹೊಣೆ ಮಹಿಳೆಯ ತಾಯಿಗೆ ಬಂತು. ನಾಲ್ಕು ತಿಂಗಳಿಂದ ತಾಯಿ ಇಲ್ಲದ ಈ ಮಗುವನ್ನು ಸಾಕುತ್ತಿದ್ದಾರೆ. ಇವರಿಗೆ ವಾಸ್ತವ್ಯ ಮಾಡಲು ಸ್ವಂತ ಮನೆಯಿಲ್ಲ, ಒಂದಿಂಚೂ ಸ್ವಂತ ಜಾಗವಿಲ್ಲ. ಈ ಸಮಸ್ಯೆಗಳ ಸರಮಾಲೆಯನ್ನೇ ಹೊತ್ತು ಮಹಿಳೆ ಪುತ್ತೂರು ಶಾಸಕ ಅಶೋಕ್ ರೈ ಅವರ ಬಳಿಗೆ ಬಂದಿದ್ದಾರೆ. ತನ್ನ ನೋವು ಸಂಕಷ್ಟಗಳನ್ನು ಶಾಸಕರ ಮುಂದೆ ಹೇಳಿಕೊಂಡಿದ್ದಾರೆ. ಇವರ ನೋವು ಮತ್ತು ಮಗುವಿನ ಸಂಕಷ್ಟಕ್ಕೆ ಮರುಗಿದ ಶಾಸಕ ಅಶೋಕ್ ರೈ ಈ ಕುಟುಂಬಕ್ಕೆ ಆಸರೆಯಾಗುವ ಭರವಸೆಯನ್ನು ನೀಡಿದ್ದಾರೆ. ಶೀಘ್ರವೇ ಮನೆಯನ್ನು ನಿರ್ಮಿಸಿ ಕೊಡುವ ಭರವಸೆಯನ್ನು ನೀಡಿದ್ದಾರೆ.
