ಸೊರಕೆ ಪರಿಸರದಲ್ಲಿ ಬೀದಿನಾಯಿ ಅಟ್ಟಹಾಸ..!- ನಾಲ್ಕು ಮಂದಿಯ ಮೇಲೆ ದಾಳಿ, ಅಂಗನವಾಡಿ ಶಿಕ್ಷಕಿಗೆ ಗಂಭೀರ ಗಾಯ-ನಡೆದಾಡಲೂ ಭಯಪಡುವ ಸ್ಥಿತಿ, ಶಾಲೆಗೆ ಹೋಗಲು ಮಕ್ಕಳ ಹಿಂದೇಟು

0

ಪುತ್ತೂರು: ಸರ್ವೆ ಗ್ರಾಮದ ಸೊರಕೆ ಕರ್ಮಿನಡ್ಕ ಎಂಬಲ್ಲಿ ಬೀದಿ ನಾಯಿಯೊಂದರ ಅಟ್ಟಹಾಸಕ್ಕೆ ನಾಲ್ವರು ಗಾಯಗೊಂಡ ಘಟನೆ ಡಿ.5ರಂದು ನಡೆದಿದೆ. ಬೀದಿ ನಾಯಿ ದಾಳಿಯಿಂದ ಸ್ಥಳೀಯರಲ್ಲಿ ಭಯ ಆವರಿಸಿದ್ದು, ವಿದ್ಯಾರ್ಥಿಗಳು ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ ಎಂದು ವರದಿಯಾಗಿದೆ. ನಾಯಿ ದಾಳಿಯಿಂದ ಗಾಯಗೊಂಡವರನ್ನು ಸೊರಕೆ ಅಂಗನವಾಡಿ ಕೇಂದ್ರದ ಶಿಕ್ಷಕಿ ವಸಂತಿ, ಕೂಲಿ ಕಾರ್ಮಿಕೆ ಜಾನಕಿ ಪರನೀರು, ಸರೋಜ ನಾಯ್ಕ ಕರ್ಮಿನಡ್ಕ ಹಾಗೂ ಇನ್ನೊಬ್ಬರನ್ನು ಉತ್ತರ ಕರ್ನಾಟಕದ ಮೂಲಕ ಕಾರ್ಮಿಕ ಎಂದು ತಿಳಿದು ಬಂದಿದೆ.


ಸೊರಕೆ ಅಂಗನವಾಡಿ ಕೇಂದ್ರದ ಶಿಕ್ಷಕಿ ವಸಂತಿ ಗಡಿಪ್ಪಿಲ ಅವರು ಅಂಗನವಾಡಿ ಕೇಂದ್ರಕ್ಕೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಕರ್ಮಿನಡ್ಕದಲ್ಲಿ ಹಿಂದಿನಿಂದ ಬಂದ ನಾಯಿಯೊಂದು ಅವರ ಬಲಕಾಲಿನ ಹಿಂಭಾಗಕ್ಕೆ ಕಚ್ಚಿದ್ದು ಗಂಭೀರ ಗಾಯಗೊಂಡ ಅವರನ್ನು ಕೂಡಲೇ ಭಕ್ತಕೋಡಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಗಾಯಾಳು ವಸಂತಿ ಗಡಿಪ್ಪಿಲ ಅವರನ್ನು ‘ಸುದ್ದಿ’ ಸಂಪರ್ಕಿಸಿದಾಗ ನಾನು ಡಿ.5ರಂದು ಬೆಳಿಗ್ಗೆ ಸೊರಕೆ ಅಂಗನವಾಡಿಗೆ ಹೋಗುತ್ತಿದ್ದ ವೇಳೆ ಕರ್ಮಿನಡ್ಕ ಬಳಿ ರಸ್ತೆ ಬದಿಯಲ್ಲಿ ನಾಯಿಯೊಂದು ಮಲಗಿಕೊಂಡಿತ್ತು, ನಾನು ನನ್ನಷ್ಟಕ್ಕೆ ಮುಂದೆ ಹೋಗಿದ್ದು ಈ ವೇಳೆ ಏಕಾಏಕಿ ಹಿಂದಿನಿಂದ ದಾಳಿ ಮಾಡಿದ ನಾಯಿ ನನ್ನ ಕಾಲಿಗೆ ಕಚ್ಚಿ ಓಡಿಹೋಗಿದೆ, ತೀವ್ರ ಗಾಯಗೊಂಡಿರುವ ನಾನು ಚಿಕಿತ್ಸೆ ಪಡೆದು ಇದೀಗ ಮನೆಯಲ್ಲಿದ್ದೇನೆ ಎಂದು ತಿಳಿಸಿದ್ದಾರೆ.


ಕೂಲಿ ಕಾರ್ಮಿಕೆ ಜಾನಕಿ ಪರನೀರು ಎಂಬವರು ಸರ್ವೆಗೆ ಕೆಲಸಕ್ಕೆ ಹೋಗಿ ಸಂಜೆ ವೇಳೆಗೆ ವಾಪಸ್ ಮನೆಗೆ ಬರುತ್ತಿದ್ದ ಸಮಯದಲ್ಲಿ ಹಿಂದಿನಿಂದ ನಾಯಿ ದಾಳಿ ಮಾಡಿದ್ದು ಅವರ ಕಾಲಿನ ಹಿಂಭಾಗಕ್ಕೆ ಗಾಯವಾಗಿದೆ. ಅವರು ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಚಿಕಿತ್ಸೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.
ಕರ್ಮಿನಡ್ಕದ ಸರೋಜ ನಾಯ್ಕ ಅವರ ಕಾಲಿಗೆ ಇದೇ ಬೀದಿ ನಾಯಿ ಕಚ್ಚಿ ಗಾಯಗೊಳಿಸಿರುವುದಾಗಿ ತಿಳಿದು ಬಂದಿದೆ. ಉತ್ತರ ಕರ್ನಾಟಕ ಮೂಲಕ ಕಾರ್ಮಿಕರೋರ್ವರ ಮೇಲೂ ಇದೇ ಬೀದಿ ನಾಯಿ ದಾಳಿ ನಡೆಸಿ ಕಚ್ಚಿದೆ ಎಂದು ವರದಿಯಾಗಿದೆ. ಇನ್ನೂ ಕೆಲವರ ಮೇಲೆ ಈ ನಾಯಿ ದಾಳಿ ನಡೆಸಿದೆ ಎಂದು ಸ್ಥಳೀಯವಾಗಿ ಸುದ್ದಿ ಹಬ್ಬಿದ್ದು ಅದರ ಸತ್ಯಾಸತ್ಯತೆ ಇನ್ನಷ್ಟೇ ತಿಳಿದು ಬರಬೇಕಾಗಿದೆ. ನಾಯಿ ದಾಳಿಯಿಂದ ಆತಂಕಗೊಂಡಿರುವ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದು ವಾಹನ ಇದ್ದವರು ಮಕ್ಕಳನ್ನು ವಾಹನದಲ್ಲಿ ಶಾಲೆಗೆ ಬಿಟ್ಟು ಬಂದಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೂ ಕೆಲವು ಮಕ್ಕಳು ಶಾಲಾ ಕಾಲೇಜುಗಳಿಗೆ ರಜೆ ಹಾಕಿದ್ದಾರೆ ಎನ್ನಲಾಗಿದ್ದು ಕೂಲಿ ಕಾರ್ಮಿಕರು ಕೂಡಾ ಹೆದರಿ ಕೈಯಲ್ಲಿ ಕೋಲು ಹಿಡಿದುಕೊಂಡು ನಡೆದಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.


ಸಾಮಾನ್ಯವಾಗಿ ಇದೇ ಪರಿಸರಲ್ಲಿ ಹಲವು ಸಮಯಗಳಿಂದ ಸುತ್ತಾಡಿಕೊಂಡಿರುತ್ತಿದ್ದ ಬೀದಿ ನಾಯಿ ಇದೀಗ ಏಕಾಏಕಿ ಜನರ ಮೇಲೆ ದಾಳಿ ನಡೆಸಿ ಕಚ್ಚಲು ಆರಂಭ ಮಾಡಿರುವುದು ಸ್ಥಳೀಯವಾಗಿ ಆತಂಕಕ್ಕೆ ಕಾರಣವಾಗಿದೆ. ನಾಲ್ಕು ಮಂದಿಗೆ ಕಚ್ಚಿ ಗಾಯಗೊಳಿಸಿರುವ ಬೀದಿ ನಾಯಿ ಇದೀಗ ಸ್ಥಳದಿಂದ ಕಣ್ಮರೆಯಾಗಿದ್ದು ಯಾವ ಪ್ರದೇಶಕ್ಕೆ ತೆರಳಿ ಇನ್ಯಾರಿಗೆ ಕಚ್ಚುತ್ತೋ ಎನ್ನುವ ಆತಂಕ ಉಂಟಾಗಿದೆ.


ನಾಲ್ಕು ಮಂದಿಗೆ ಬೀದಿ ನಾಯಿ ಕಚ್ಚಿದ್ದು ಆ ಪೈಕಿ ಸೊರಕೆ ಅಂಗನವಾಡಿ ಶಿಕ್ಷಕಿಗೆ ಗಂಭೀರ ಸ್ವರೂಪದ ಗಾಯವಾಗಿದೆ. ಗಾಯಾಳುಗಳಿಗೆ ಪರಿಹಾರ ಮೊತ್ತ ಕೂಡಾ ಸಂಬಂಧಪಟ್ಟವರು ನೀಡಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಬೀದಿ ನಾಯಿ ದಾಳಿಗೊಳಗಾದವರನ್ನು ಸಂಬಂಧಪಟ್ಟ ಇಲಾಖೆಯವರು ಭೇಟಿಯಾಗಿಲ್ಲ ಮತ್ತು ಘಟನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದ್ದು, ಬೀದಿನಾಯಿಗಳ ನಿಯಂತ್ರಣಕ್ಕೆ ಇನ್ನಾದರೂ ಕಟ್ಟುನಿಟ್ಟಿನ ಕ್ರಮ ಜಾರಿಗೆ ತರುವ ಅವಶ್ಯಕತೆಯಿದೆ ಎನ್ನುವ ಆಗ್ರಹ ವ್ಯಕ್ತವಾಗಿದೆ.

ಸೊರಕೆಯಲ್ಲಿ ಬೀದಿನಾಯಿ ಹಲವರ ಮೇಲೆ ದಾಳಿ ನಡೆಸಿದ ವಿಚಾರ ಆಘಾತಕಾರಿಯಾಗಿದೆ. ಜನರಿಗೆ ಕಚ್ಚುವ ಅಪಾಯಕಾರಿ ಬೀದಿ ನಾಯಿಗಳನ್ನು ಕೊಂದರೆ ಪ್ರಾಣಿ ದಯಾ ಸಂಘದವರು ಎಚ್ಚೆತ್ತುಕೊಳ್ಳುತ್ತಾರೆ, ಕೊಲ್ಲದಿದ್ದರೆ ಜನರಿಗೆ ಕಚ್ಚುತ್ತದೆ, ಇಂತಹ ಸಂದರ್ಭದಲ್ಲಿ ಜನರ ಮೇಲೆ ದಾಳಿ ಮಾಡುವ ಬೀದಿನಾಯಿಗಳನ್ನು ಕೊಲ್ಲಲು ಸರಕಾರ ಅನುಮತಿ ನೀಡಬೇಕು, ಘಟನೆ ಬಗ್ಗೆ ಗ್ರಾ.ಪಂನಲ್ಲಿ ಚರ್ಚಿಸಿ ಸರಕಾರಕ್ಕೂ ಬರೆಯಲಾಗುವುದು ಎಂದು ಮುಂಡೂರು ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ಎನ್‌ಎಸ್‌ಡಿ ತಿಳಿಸಿದ್ದಾರೆ.


ಬೀದಿ ನಾಯಿಯಿಂದ ಗಂಭೀರ ಗಾಯಗೊಂಡಿರುವ ಅಂಗನವಾಡಿ ಶಿಕ್ಷಕಿ ವಸಂತಿ ಅವರ ಜೊತೆ ನಾನು ಮಾತನಾಡಿದ್ದು ಬೀದಿನಾಯಿಯಿಂದ ದಾಳಿಗೊಳಗಾದವರಿಗೆ ಪರಿಹಾರ ಸಿಗಬೇಕಿದೆ, ಬೀದಿ ನಾಯಿ ಹಾವಳಿ ಹೆಚ್ಚಾಗಿರುವುದು ಮತ್ತು ಆಗಾಗ ಜನರ ಮೇಲೆ ದಾಳಿ ಮಾಡುತ್ತಿರುವುದು ಗಂಭೀರ ವಿಚಾರವಾಗಿದ್ದು, ಇದಕ್ಕೆ ಗ್ರಾಮ ಪಂಚಾಯತ್ ಮಾತ್ರವಲ್ಲದೇ ಇತರ ಸಂಬಂಧಪಟ್ಟ ಇಲಾಖೆಗಳೂ ಗಂಭೀರವಾಗಿ ಪರಿಗಣಿಸಿ ಪರಿಹಾರ ಮಾರ್ಗ ಕಂಡುಕೊಳ್ಳಬೇಕಿದೆ, ಇದು ವಿಧಾನಸಭೆಯಲ್ಲೂ ಚರ್ಚೆಯಾಗಬೇಕಿದೆ ಎಂದು ಮುಂಡೂರು ಗ್ರಾ.ಪಂ ಸದಸ್ಯ ಕಮಲೇಶ್ ಎಸ್.ವಿ ತಿಳಿಸಿದ್ದಾರೆ.

ಬೀದಿ ನಾಯಿ ದಾಳಿಯಿಂದ ಗಂಭೀರ ಗಾಯಗೊಂಡಿರುವ ಸೊರಕೆ ಅಂಗನವಾಡಿ ಶಿಕ್ಷಕಿ ವಸಂತಿ ಹಾಗೂ ಜಾನಕಿ ಪರನೀರು ಅವರ ಮನೆಗೆ ನಾನು ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದು ಅಂನವಾಡಿ ಶಿಕ್ಷಕಿ ವಸಂತಿ ಅವರ ಕಾಲಿಗೆ ತೀವ್ರ ಸ್ವರೂಪದ ಗಾಯವಾಗಿದೆ, ನಾಯಿ ದಾಳಿ ಮಾಡಿರುವ ಇಂತಹ ಸಂದರ್ಭದಲ್ಲಿ ಸಂಬಂಧಪಟ್ಟವರು ತುರ್ತಾಗಿ ಸ್ಪಂಧಿಸುವ ಕೆಲಸ ಮಾಡಬೇಕು ಮತ್ತು ಅವರಿಗೆ ಪರಿಹಾರ ಮೊತ್ತ ಕೊಡುವ ಕಾರ್ಯವನ್ನೂ ತುರ್ತಾಗಿ ಮಾಡಬೇಕು ಎಂದು ಮುಂಡೂರು ಗ್ರಾ.ಪಂ ಮಾಜಿ ಸದಸ್ಯ ರಾಮಚಂದ್ರ ಸೊರಕೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here