ಪುತ್ತೂರು: ಇದೇ ಡಿಸೆಂಬರ್ 20ರಂದು ಮಂಗಳೂರಿನ ದೇರ್ಲಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಗ್ರೀನ್ ಗ್ರೌಂಡ್ ನಲ್ಲಿ ನಡೆಯುವ ಒಂದು ದಿನದ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಾಡಿನ ಖ್ಯಾತ ಲೇಖಕ ಅಂಕಣಕಾರ ಕೃಷಿಕ ನಿವೃತ್ತ ಕನ್ನಡ ಪ್ರಾಧ್ಯಾಪಕ, ಪ್ರಸ್ತುತ ಮಂಗಳೂರಿನ ಶ್ರೀನಿವಾಸ್ ವಿಶ್ವವಿದ್ಯಾನಿಲಯದ ಸಂಶೋಧನಾ ಮಾರ್ಗದರ್ಶಕ ಪ್ರಾಧ್ಯಾಪಕರು ಆಗಿರುವ ಡಾ ನರೇಂದ್ರ ರೈ ದೇರ್ಲ ಅವರು ಆಯ್ಕೆಯಾಗಿದ್ದಾರೆ.
ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆ ಕಳೆದ ಅನೇಕ ವರ್ಷಗಳಿಂದ ಈ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನವನ್ನು ಆಯೋಜಿಸುತ್ತಿದೆ. ಅಮೃತ ಸೋಮೇಶ್ವರ, ಡಾ. ಚಿನ್ನಪ್ಪ ಗೌಡ, ವಾಮನ ನಂದಾವರ, ಪಾದೆಕಲ್ಲು ವಿಷ್ಣು ಭಟ್ ಮೊದಲಾದವರು ಈ ಮುಂಚೆ ಸಮ್ಮೇಳನಗಳ ಅಧ್ಯಕ್ಷರಾಗಿದ್ದರು.ಈ ವರ್ಷ ಸಂಸ್ಥೆ ವಿಶೇಷವಾಗಿ ಬೆಳ್ಳಿ ಹಬ್ಬವನ್ನು ಆಚರಿಸುತ್ತಿದೆ.
ಬೆಳಿಗ್ಗೆ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆಯೊಂದಿಗೆ ಸಮಾರಂಭವನ್ನು ಸಂಸದರಾದ ಕ್ಯಾಪ್ಟನ್ ಬ್ರಿಜಿಷ್ ಚೌಟ ಅವರು ಉದ್ಘಾಟಿಸಲಿದ್ದಾರೆ.ಉದ್ಘಾಟನಾ ಕಾರ್ಯಕ್ರಮದಲ್ಲಿ ಹರಿಕೃಷ್ಣ ಪುನರೂರು, ಡಾ. ಚಿನ್ನಪ್ಪ ಗೌಡ, ಎಂ ಪಿ ಶ್ರೀನಿನಾಥ್, ಧನಂಜಯ ಕುಂಬಳೆ ಮೊದಲಾದವರು ಭಾಗವಹಿಸಲಿದ್ದಾರೆ.ಆನಂತರ ವಿಚಾರಗೋಷ್ಠಿ ಕವಿಗೋಷ್ಠಿಗಳು ಆಯೋಜನೆಗೊಂಡಿದೆ. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸ್ಪೀಕರ್ ಯು.ಟಿ ಖಾದರ್ ಭಾಗವಹಿಸುತ್ತಿದ್ದು, ಯಕ್ಷದ್ರುವದ ಪಟ್ಲ ಸತೀಶ್ ಶೆಟ್ಟಿ ಅವರಿಗೆ ‘ವಿದ್ಯಾರತ್ನ ಪ್ರಶಸ್ತಿ’ಯನ್ನು ನೀಡಲಾಗುತ್ತಿದೆ.ಇಡೀ ದಿವಸ ನಡೆಯುವ ಕಾರ್ಯಕ್ರಮದಲ್ಲಿ ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ವೈಭವವನ್ನು ಪ್ರದರ್ಶಿಸಲಿದ್ದಾರೆ ಎಂದು ವಿದ್ಯಾರತ್ನ ಎಜುಕೇಶನಲ್ ಟ್ರಸ್ಟಿನ ಸಂಚಾಲಕರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಅವರು ತಿಳಿಸಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪರಿಸರ ಮಾಧ್ಯಮ ಪ್ರಶಸ್ತಿ,, ಡಾ. ಹಾ.ಮಾ. ನಾಯಕ ಅಂಕಣ ಪ್ರಶಸ್ತಿ, ಕುವೆಂಪು ಭಾಷಾ ಭಾರತಿ ಅನುವಾದ ಪ್ರಶಸ್ತಿ, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಅತ್ಯುತ್ತಮ ಪುಸ್ತಕ ಪ್ರಶಸ್ತಿ ಇತ್ಯಾದಿ ಪುರಸ್ಕಾರಗಳನ್ನು ಪಡೆದಿರುವ, 40ಕ್ಕಿಂತ ಹೆಚ್ಚು ಪುಸ್ತಕಗಳನ್ನು ಬರೆದಿರುವ ನರೇಂದ್ರ ರೈ ಅವರ 20ಕ್ಕಿಂತಲೂ ಹೆಚ್ಚು ಪರಿಸರ ಲೇಖನಗಳು ಕರ್ನಾಟಕ- ಕೇರಳದ ಶಾಲಾ ಕಾಲೇಜು ವಿಶ್ವವಿದ್ಯಾನಿಲಯಗಳ ಪಠ್ಯಗಳಿಗೆ ಪಾಠಗಳಾಗಿವೆ . ತರಂಗ ವಾರಪತ್ರಿಕೆಯಲ್ಲಿ ಏಳು ವರ್ಷಗಳ ಕಾಲ ಸಹಸಂಪಾದಕರಾಗಿದ್ದ ನರೇಂದ್ರ ರೈ ದೇರ್ಲ ಅವರು ಪುತ್ತೂರಿನ ದೇರ್ಲದ ನಿವಾಸಿ.
