ಉಪ್ಪಿನಂಗಡಿ: ದ.ಕ. ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಉಬಾರ್ ಸ್ಪೋರ್ಟಿಂಗ್ ಕ್ಲಬ್ (ರಿ) ನ ವತಿಯಿಂದ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಅಂಡರ್ಆರ್ಮ್ ಕ್ರಿಕೆಟ್ ಪಂದ್ಯಾಟ ‘ಉಬಾರ್ ಕಪ್’ ಡಿ.13 ಮತ್ತು 14ರಂದು ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕ್ಲಬ್ನ ಅಧ್ಯಕ್ಷ ಶಬೀರ್ ಕೆಂಪಿ ತಿಳಿಸಿದರು.
ಉಪ್ಪಿನಂಗಡಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ಸಂಸ್ಥೆಯು ವರ್ಷಂಪ್ರತಿ ಕಬಡ್ಡಿ, ಕ್ರಿಕೆಟ್, ಪುಟ್ಭಾಲ್ ಮತ್ತಿತರ ಕ್ರೀಡಾ ಸ್ಪರ್ಧೆಯನ್ನು ಆಯೋಜಿಸಿಕೊಂಡು ಬರುತ್ತಿದೆ. ಆದರೆ 12 ವರ್ಷಗಳ ಬಳಿಕ ಈ ಬಾರಿ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿದೆ. ಇದರಲ್ಲಿ ಪ್ರತಿಷ್ಠಿತ 18 ತಂಡಗಳು ಭಾಗವಹಿಸಲಿದ್ದು, 13ರಂದು ಬೆಳಗ್ಗೆ 9ಕ್ಕೆ ಪಂದ್ಯಾಟ ಆರಂಭವಾಗಲಿದೆ. ಮೊದಲ ದಿನ ಸ್ಥಳೀಯ ತಂಡಗಳ ಪಂದ್ಯಾಟ ನಡೆದರೆ, ಡಿ.14ರಂದು ಜಿಲ್ಲಾ ತಂಡಗಳ ಪಂದ್ಯಾಟ ನಡೆಯಲಿದೆ. ಬಳಿಕ ವಿಜೇತ ತಂಡಗಳ ಮಧ್ಯೆ ಫೈನಲ್ ಪಂದ್ಯಾಟ ನಡೆಯಲಿದೆ. ವಿಜೇತ ತಂಡಗಳಿಗೆ ಮೊದಲ ಬಹುಮಾನವಾಗಿ 1 ಲಕ್ಷ ರೂ. ನಗದು ಹಾಗೂ ಟ್ರೋಫಿಯನ್ನು, ಎರಡನೇ ಬಹುಮಾನವಾಗಿ 50 ಸಾವಿರ ರೂ. ನಗದು ಹಾಗೂ ಟ್ರೋಫಿಯನ್ನು ನೀಡಲಾಗುತ್ತದೆ. ಡಿ.13ರಂದು ಸಂಜೆ 6ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಮಾಜಿ ಶಾಸಕ ಸಂಜೀವ ಮಠಂದೂರು ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಸಭಾ ಅಧ್ಯಕ್ಷ ಯು.ಟಿ. ಖಾದರ್, ಸಂಸದ ಕ್ಯಾ. ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಐವನ್ ಡಿಸೋಜ, ಪ್ರಮುಖರಾದ ಹರೀಶ್ ಕುಮಾರ್, ಇನಾಯತ್ ಅಲಿ, ಮಿಥುನ್ ರೈ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಕೂಡಾ ಭಾಗವಹಿಸುವ ನಿರೀಕ್ಷೆಯಿದ್ದು, ಆದರೆ ಬೆಳಗಾವಿಯಲ್ಲಿ ಅಧಿವೇಶನವಿರುವ ಕಾರಣ ಅವರ ಭಾಗವಹಿಸುವಿಕೆ ಅಧಿಕೃತಗೊಂಡಿಲ್ಲ. ಪಂದ್ಯಾಟದ ಟ್ರೋಫಿಯನ್ನು ಕೆಲವು ದಿನಗಳ ಹಿಂದೆ ಅದ್ದೂರು ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರಮುಖರಾದ ವಿನ್ಸೆಂಟ್ ಫೆರ್ನಾಂಡೀಸ್, ಧನ್ಯಕುಮಾರ್ ರೈ ಅವರು ಲೋಕಾರ್ಪಣೆಗೊಳಿಸಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನವೂ ನಡೆಯಲಿದೆ ಎಂದರು.
ಉಪ್ಪಿನಂಗಡಿ ಗ್ರಾ.ಪಂ. ಸದಸ್ಯ, ಕ್ಲಬ್ನ ಗೌರವ ಸಲಹೆಗಾರ ಯು.ಟಿ. ತೌಸೀಫ್ ಮಾತನಾಡಿ, ಉಬಾರ್ ಸ್ಪೋರ್ಟಿಂಗ್ ಕ್ಲಬ್ (ರಿ)ನಡಿಯಲ್ಲಿ ಕ್ರೀಡೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಕಾರ್ಯ ನಡೆಸುತ್ತಿದ್ದರೆ. ಇದರ ಅಂಗ ಸಂಸ್ಥೆಯಾದ ಉಬಾರ್ ಡೋನಾರ್ಸ್ನಡಿ ಹಲವು ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಾ ಬರುತ್ತಿದ್ದೇವೆ. ಇದಕ್ಕಾಗಿ ಈ ಬಾರಿ ನಮ್ಮ ಸಂಸ್ಥೆಗೆ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು, ಇದೀಗ ನಮಗೆ ಇನ್ನಷ್ಟು ಜವಾಬ್ದಾರಿ ಹೆಚ್ಚಿದಂತಾಗಿದೆ. ನಮ್ಮ ಸಂಸ್ಥೆಯ ಸಮಾಜಮುಖಿ ಕಾರ್ಯಗಳಲ್ಲಿ ಬಡ ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆಯೂ ಒಂದು. ಆದರೆ ಕಿಟ್ ವಿತರಿಸಿದರೆ ಅವರಿಗೆ ಒಂದು ತಿಂಗಳಿಗೆ ಪ್ರಯೋಜನವಾಗಬಹುದು. ಇದನ್ನು ಯೋಚಿಸಿದ ನಾವು ಅವರಿಗೆ ಉದ್ಯೋಗ ಸೃಷ್ಟಿ ಮಾಡುವ ಬಗ್ಗೆ ಯೋಚಿಸಿದ್ದು, ಆರಂಭಿಕ ಹಂತವಾಗಿ ಅರ್ಹ 100 ಬಡ ಕುಟುಂಬಗಳಿಗೆ ಉಚಿತವಾಗಿ ಟೈಲರಿಂಗ್ ಮೆಷಿನ್ ನೀಡುವ ಯೋಜನೆಯನ್ನು ಹಾಕಿಕೊಂಡಿದ್ದೇವೆ. ಇದರೊಂದಿಗೆ ಟೈಲರಿಂಗ್ ತರಬೇತಿ ಪಡೆಯದವರಿಗೆ ಉಚಿತ ತರಬೇತಿಯನ್ನು ನೀಡಲು ತೀರ್ಮಾನಿಸಿದ್ದೇವೆ. ಅವರು ಹೊಲಿದ ಬಟ್ಟೆಗಳನ್ನು ಕಂಪೆನಿಗೆ ನೀಡುವ ಹಾಗೆ ಸಿದ್ಧ ಉಡುಪುಗಳ ಕಂಪೆನಿಯೊಂದಿಗೆ ನಾವು ಈ ಬಗ್ಗೆ ಮಾತನಾಡಿದ್ದು, ಆ ಕಂಪೆನಿಯೇ ಅವರಿಗೆ ಹೊಲಿಯಲು ಬೇಕಾದ ವಸ್ತುಗಳು ಹಾಗೂ ಹೊಲಿದು ಕೊಟ್ಟಿದ್ದಕ್ಕೆ ತಕ್ಕ ಕೂಲಿಯನ್ನು ಕೊಡಲಿದೆ. ಆಗ ಅವರಿಗೆ ಹಣ ಸಂಪಾದನೆಗೊಂದು ದಾರಿಯಾಗಲಿದೆ. ಈ ಯೋಜನೆಗೆ ಉಬಾರ್ ಕಪ್ನ ದಿನ ಸಾಂಕೇತಿಕ ಚಾಲನೆ ನೀಡಲಿದ್ದೇವೆ. ನಮ್ಮ ಎಲ್ಲಾ ಸಮಾಜಮುಖಿ ಕಾರ್ಯಗಳು ಕೇವಲ ಒಂದು ಧರ್ಮದವರಿಗೆ ಸೀಮಿತವಲ್ಲ. ಎಲ್ಲಾ ಜಾತಿ-ಧರ್ಮದ ಅರ್ಹರಿಗೆ ಅದನ್ನು ತಲುಪಿಸುತ್ತೇವೆ. ಅದಲ್ಲದೆ, ಎಸೆಸ್ಸೆಲ್ಸಿಯಲ್ಲಿ ಶೇ.90ರಷ್ಟು ಅಂಕ ಪಡೆದ ಬಡ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಅವರ ಮುಂದಿನ ಶೈಕ್ಷಣಿಕ ಜವಾಬ್ದಾರಿಯನ್ನು ಹೊರುವ ಯೋಜನೆಯೂ ನಮ್ಮ ಮುಂದಿದೆ. ಉಪ್ಪಿನಂಗಡಿಗೊಂಡು ಡಯಾಲಿಸಿಸ್ ಮೆಷಿನ್ ಅನ್ನು ಕೊಡುಗೆ ನೀಡಬೇಕೆಂಬ ನಮ್ಮ ಕನಸಿದ್ದು, ಅದಕ್ಕೆ ಬೇಕಾದ ನಗದು ಈಗಾಗಲೇ ಸಿದ್ಧಪಡಿಸಿಕೊಳ್ಳಲಾಗಿದೆ. ಆದರೆ ಉಪ್ಪಿನಂಗಡಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ಬಗ್ಗೆ ಮಾತನಾಡುವಾಗ ಕೆಲವೊಂದು ತಾಂತ್ರಿಕ ಅಡಚಣೆಗಳಿಂದಾಗ ಅದು ಸಾಧ್ಯವಾಗಲಿಲ್ಲ. ಖಾಸಗಿ ಆಸ್ಪತ್ರೆಯವರು ಒಪ್ಪಿದರೆ ಅದಕ್ಕೆ ನೀಡಲು ಸಿದ್ಧ. ಬೇಕಾದರೆ ತಿಂಗಳಿಗೆ ಅವರಿಗೆ ಖರ್ಚಾಗುವ ಮೊತ್ತದಲ್ಲಿ ಸ್ವಲ್ಪ ಮೊತ್ತವನ್ನು ಭರಿಸಲು ನಮ್ಮ ಕ್ಲಬ್ ಸಿದ್ಧವಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಉಬಾರ್ ಸ್ಪೋರ್ಟಿಂಗ್ ಕ್ಲಬ್ನ ಪ್ರಧಾನ ಕಾರ್ಯದರ್ಶಿ ನವಾಝ್ ಎಲೈಟ್, ಉಪಾಧ್ಯಕ್ಷರಾದ ಮುಹಮ್ಮದ್ ಇಬ್ರಾಹೀಂ, ಮನ್ಸೂರ್, ಕೋಶಾಧಿಕಾರಿ ಸಿದ್ದೀಕ್ ಹ್ಯಾಪಿ ಟೈಂಮ್ಸ್, ಕ್ರೀಡಾಕಾರ್ಯದರ್ಶಿ ಮುಹಮ್ಮದ್ ಅನೀಸ್ ಉಪಸ್ಥಿತರಿದ್ದರು.
