ಇಂದ್ರಪ್ರಸ್ಥ ವಿದ್ಯಾವರ್ಧಕ ಸಂಘದ ವಾರ್ಷಿಕೋತ್ಸವ

0

ದೇಶದ ಅಂತಃಸತ್ವ ಸದಾ ನಮ್ಮಲಿರಲಿ: ಡಾ. ಕಲ್ಲಡ್ಕ ಪ್ರಭಾಕರ ಭಟ್


ಉಪ್ಪಿನಂಗಡಿ: ಶ್ರದ್ಧೆ ಇದ್ದಾಗ ಮಾತ್ರ ಸಾಧನೆ ಸಾಧ್ಯ. ಸೋಲಿಗೆ ಯಾವತ್ತೂ ಹತಾಶರಾಗಬಾರದು. ಗೆದ್ದಾಗ ಅಹಂಕಾರ ತೋರದೇ ವಿನೀತ ಭಾವ ನಮ್ಮದಾಗಬೇಕು. ಎಲ್ಲಿ ಹೋದರೂ ದೇಶದ ಅಂತಃಸತ್ವ ನಮ್ಮಲ್ಲಿರಬೇಕು ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಡಾ. ಕಲ್ಲಡ್ಕ ಪ್ರಭಾಕರ ಭಟ್ ತಿಳಿಸಿದರು.


ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾವರ್ಧಕ ಸಂಘದ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಭಾರತೀಯರನ್ನು ಇಡೀ ಜಗತ್ತೇ ಅಪ್ಪಿಕೊಳ್ತಾ ಇದೆ. ಅವರ ಪ್ರಾಮಾಣಿಕತೆ, ಕೆಲಸದ ಮೇಲಿನ ಶ್ರದ್ಧೆ ಇದಕ್ಕೆ ಕಾರಣ. ಧರ್ಮ, ಸಂಸ್ಕೃತಿಯನ್ನೊಳಗೊಂಡ ಮೌಲ್ಯಯುತ ಬದುಕನ್ನು ನಾವು ಕಟ್ಟಿಕೊಳ್ಳಬೇಕು. ದೇಶದಲ್ಲಿ ಮತಾಂತರ, ಭಯೋತ್ಪಾದನೆ, ಧರ್ಮ ವಿರೋಧಿ ಕಾರ್ಯಗಳು ನಡೆಯುತ್ತಿದ್ದು, ಅವುಗಳನ್ನೆಲ್ಲಾ ಮೆಟ್ಟಿ ನಿಲ್ಲುವವರು ನಾವಾಗಬೇಕು ಎಂದರು.


ಮುಖ್ಯ ಅತಿಥಿಯಾಗಿದ್ದ ಇಂದ್ರಪ್ರಸ್ಥ ವಿದ್ಯಾಲಯದ ಹಿರಿಯ ವಿದ್ಯಾರ್ಥಿನಿ, ಗೋವಾದ ವೇದಾಂತ ಸೇಸ ಕಂಪೆನಿಯ ಅಸೋಸಿಯೇಟ್ ಮೆನೇಜರ್ ಶೃದ್ಧಾ ವಿ. ಶೆಟ್ಟಿ ಮಾತನಾಡಿ, ವಿದ್ಯೆ ಅನ್ನೋದು ಬಹು ದೊಡ್ಡ ಆಸ್ತಿ. ಆ ಆಸ್ತಿಯನ್ನು ನಮ್ಮದಾಗಿಸಿಕೊಳ್ಳಬೇಕು. ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿದ್ದ ನಾನು ಬಳಿಕ ಈ ಸಂಸ್ಥೆಗೆ ಬಂದೆ. ಇಲ್ಲಿ ನನಗೆ ಉತ್ತಮ ಅಡಿಪಾಯ ಸಿಕ್ಕಿದೆ. ಮನುಷ್ಯನ ಜೀವನ ನದಿ ತರ ಹರಿಯುತ್ತಿರಬೇಕು. ಛಲ ಇದ್ದರೆ ಖಂಡಿತಾ ಸಾಧನೆ ನಮ್ಮದಾಗುತ್ತದೆ. ಯಾವತ್ತೂ ಪೋಷಕರು ತಮ್ಮ ಮಕ್ಕಳಿಗೆ ಇನ್ನೊಬ್ಬರ ಜೊತೆ ಹೋಲಿಕೆ ಮಾಡಬಾರದು. ವಿದ್ಯಾರ್ಥಿಗಳು ಕೀಳರಿಮೆಯನ್ನು ಬಿಡಬೇಕು. ಸಮಾಜದ ಕೊಂಕು ಮಾತುಗಳಿಗೆ ಕುಗ್ಗಬಾರದು. ಛಲ, ಹಠದ ಬದುಕು ನಮ್ಮದಾದ್ದಲ್ಲಿ ಯಶಸ್ಸು ಖಂಡಿತಾ ನಮ್ಮ ಪಾಲಾಗುತ್ತದೆ ಎನ್ನುವುದಕ್ಕೆ ನಾನೇ ಸಾಕ್ಷಿ. ಬಡತನದ ಕುಟುಂಬದಿಂದ ಬಂದ ನಾನು ಪ್ರಥಮ ಪ್ರಯತ್ನದಲ್ಲೇ ಸಿಎ ಪರೀಕ್ಷೆಯನ್ನು ತೇರ್ಗಡೆಯಾದೆ. ಸಿಎ ತೇರ್ಗಡೆಯಾಗುವ ಮೊದಲು ಕಲಿಕಾ ಹಂತದಲ್ಲಿ ನಾನು ಉದ್ಯೋಗದಲ್ಲಿದ್ದು, ಆಗ ನನಗೆ ಬರುತ್ತಿದ್ದದ್ದು ತಿಂಗಳ ಸಂಬಳ ೮,೫೦೦ ರೂ. ಆದರೆ ಇಂದು ನಾನು ಆರು ಅಂಕಿ ಮೊತ್ತದ ಇನ್‌ಕಮ್ ಟ್ಯಾಕ್ಸ್ ಕಟ್ಟುತ್ತಿದ್ದೇನೆ. ನನ್ನ ಶ್ರಮವೇ ನನ್ನನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದೆ ಎಂದರು.


ಕಳೆದ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 5ನೇ ರ್‍ಯಾಂಕ್ ಪಡೆದ ನಿಹಾಲ್ ಎಚ್. ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರದ ಸಾಧಕ ವಿದ್ಯಾರ್ಥಿಗಳಾದ ವಿನ್ಯಾ ಪಿ.ಸಿ., ಶಿಶಿರ್ ಜೆ. ಸಾಲ್ಯಾನ್, ಸಾನ್ವಿ ಸಿ.ಎಸ್., ಶಮಿಕಾ ಎಂ.ಕೆ. ಸೇರಿದಂತೆ ಹಲವರನ್ನು ಗೌರವಿಸಲಾಯಿತು.


ವೇದಿಕೆಯಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೃಷ್ಣ ಭಟ್, ಇಂದ್ರಪ್ರಸ್ಥ ವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಕರುಣಾಕರ ಸುವರ್ಣ, ಸಂಚಾಲಕ ಸುಬ್ರಹ್ಮಣ್ಯ ಭಟ್, ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್.ಕೆ. ಪ್ರಕಾಶ್ ಉಪಸ್ಥಿತರಿದ್ದರು. ಒಂದನೇ ತರಗತಿಯ ಪುಟಾಣಿಗಳಾದ ಮನ್ವಿಕ್, ವಿಹಾನ ಸ್ವಾಗತಿಸಿದರು. ಇಂದ್ರಪ್ರಸ್ಥ ವಿದ್ಯಾಲಯದ ಮುಖ್ಯಗುರು ವೀಣಾ ಆರ್. ಪ್ರಸಾದ್ ವರದಿ ವಾಚಿಸಿದರು. ಶಾಲಾ ನಾಯಕಿ ಸಿಂಚನಾ ಭಟ್ ವಂದಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

LEAVE A REPLY

Please enter your comment!
Please enter your name here