ಪುತ್ತೂರು: ನ್ಯಾಯಾಲಯದ ಸಿಬ್ಬಂದಿಯೋರ್ವರು ಹುಕುಂ ನೋಟಿಸ್ ಜಾರಿಗೆ ಹೋಗಿದ್ದ ವೇಳೆ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿ,ಬೆದರಿಕೆಯೊಡ್ಡಿದ ಪ್ರಕರಣವೊಂದರ ಆರೋಪಿಗೆ ನ್ಯಾಯಾಲಯ ಜೈಲು ಶಿಕ್ಷೆ, ದಂಡ ವಿಧಿಸಿ ತೀರ್ಪು ನೀಡಿದೆ.
ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಪ್ರೊಸೆಸ್ ಸರ್ವರ್ ಈರಣ್ಣ ಮಲದಾರ ಎಂಬವರು ಪುತ್ತೂರು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ದಾಖಲಾಗಿರುವ ಮೊಕದ್ದಮೆಯೊಂದಕ್ಕೆ ಸಂಬಂಧಿಸಿದ ಹುಕುಂನ್ನು ಪ್ರತಿವಾದಿಗಳಾದ ಜಾನಕಿ, ತಿಮ್ಮಕ್ಕ, ಜಯಂತಿ ಎಂಬವರಿಗೆ ನೋಟಿಸ್ ಜಾರಿಗಾಗಿ 2021ರ ಮಾ.25ರಂದು ಬೆಳಿಗ್ಗೆ ಹಿರೇಬಂಡಾಡಿ ಗ್ರಾಮದ ಮಡಮ್ಮಾರು ಎಂಬಲ್ಲಿ ಹೋದಾಗ ಆ ಮನೆಯಲ್ಲಿ ಹಾಜರಿದ್ದ ಹರೀಶ್ ಗೌಡ ಎಂಬಾತ ವಿಚಿತ್ರವಾಗಿ ವರ್ತಿಸಿ,ನನ್ನ ಮೇಲೆ ದೇವರು ಬಂದಿದ್ದಾನೆ ಎಂದು ನರ್ತಿಸುತ್ತಾ ಹುಕುಂ ಜಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆಯೊಡ್ಡಿದ್ದಾಗಿ ಆರೋಪಿಸಲಾಗಿತ್ತು.
ಘಟನೆ ಕುರಿತು ಈರಣ್ಣ ಮಲದಾರ ಅವರು ನೀಡಿದ್ದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸರು ಕಲಂ 353,506 ಐಪಿಸಿಯಡಿ ಪ್ರಕರಣ ದಾಖಲಿಸಿಕೊಂಡಿದ್ದರು.ಆಗಿನ ಉಪನಿರೀಕ್ಷಕ ಕುಮಾರ್ ಕಾಂಬ್ಳೆ ಅವರು ತನಿಖೆ ನಡೆಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರು ನ್ಯಾಯಾಲಯದ ನ್ಯಾಯಾಧೀಶರಾದ ಯೋಗೇಂದ್ರ ಶೆಟ್ಟಿಯವರು ಆರೋಪಿಗೆ 1 ವರ್ಷ ಸಾದಾ ಶಿಕ್ಷೆ ಮತ್ತು 500ರೂ.ದಂಡ ವಿಧಿಸಿ ತೀರ್ಪು ನೀಡಿದ್ದಾರೆ.ದಂಡ ಪಾವತಿಸಲು ತಪ್ಪಿದಲ್ಲಿ ಒಂದು ತಿಂಗಳ ಕಾಲ ಹೆಚ್ಚುವರಿ ಶಿಕ್ಷೆ ಅನುಭವಿಸುವಂತೆ ನ್ಯಾಯಾಲಯವು ಆದೇಶಿಸಿದೆ.ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಕವಿತಾ ಪಿ.ಅವರು ವಾದಿಸಿದ್ದರು.