ಶಾಸಕರಿಂದ ಬಿಜೆಪಿ ಆಡಳಿತದ ಕಾಮಗಾರಿಯಲ್ಲಿ ಮೂಗು ತೂರಿಸುವ ಕೆಲಸ
ನಗರಸಭೆ ನಿಕಟಪೂರ್ವ ಅಧ್ಯಕ್ಷೆ, ಸ್ಥಾಯಿ ಸಮಿತಿ ಅಧ್ಯಕ್ಷರ ಆರೋಪ
ಪುತ್ತೂರು:ಕಾಮಗಾರಿಗೆ ಟೆಂಡರ್ ಕರೆದ ಬಳಿಕ ಅದನ್ನು ತೆರೆಯುವ ಮೊದಲೇ ಕಾಮಗಾರಿ ಪ್ರಾರಂಭಿಸುವುದು ದೊಡ್ಡ ಅಪರಾಧ ಎಂದು ನಗರಸಭೆ ನಿಕಟಪೂರ್ವ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಮತ್ತು ನಿಕಟಪೂರ್ವ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಅವರು ಪತ್ರಿಕಾಗೋಷ್ಟಿಯಲ್ಲಿ ಆರೋಪಿಸಿದ್ದಾರೆ.
ಪುತ್ತೂರು ನಗರಸಭೆ ಮುಖ್ಯ ರಸ್ತೆಯಲ್ಲಿ ಹೊಂಡಗುಂಡಿ ಬಿದ್ದು ವಾಹನ ಸಂಚಾರಕ್ಕೆ ತೊಂದರೆ ಆಗಿದ್ದ ಸಂದರ್ಭ ಗುಂಡಿಗಳನ್ನು ಮುಚ್ಚಲು ಡಾಮಾರು ಪ್ಯಾಚ್ ವರ್ಕ್ ಕಾಮಗಾರಿ ಮಾಡಲು ನಗರಸಭೆ ಬಿಜೆಪಿ ಆಡಳಿತ ಆರಂಭದಲ್ಲಿ ಒಳರಸ್ತೆಗಳ ಗುಂಡಿ ಮುಚ್ಚಲು ರೂ.26.16 ಲಕ್ಷದ ಕಾಮಗಾರಿಗೆ ಟೆಂಡರ್ ಕರೆದು ಕಾಮಗಾರಿ ಆರಂಭಿಸಿತ್ತು.ಆದರೆ ಆ ಸಂದರ್ಭದಲ್ಲಿ ಮಳೆ ಬಂದ ಕಾರಣ ಗುತ್ತಿಗೆದಾರರು ಕಾಮಗಾರಿ ನಿಲ್ಲಿಸಿ, ಮಳೆ ಬಿಟ್ಟ ಬಳಿಕ ಅದನ್ನು ಆರಂಭಿಸಲಾಗಿದೆ.ರಸ್ತೆ ತೀರಾ ಹದಗೆಟ್ಟ ಪರಿಸ್ಥಿತಿಯಲ್ಲಿದ್ದುದರಿಂದ ಡಾಮರು ಕಾಮಗಾರಿ ನಡೆಸಲು ಅಸಾಧ್ಯವಾದಾಗ ಮಳೆಯ ನಡುವೆಯೇ ದರ್ಬೆ ಮತ್ತು ಧನ್ವಂತರಿ ಬಳಿ ಇಂಟರ್ಲಾಕ್ ಅಳವಡಿಸಲಾಗಿತ್ತು.ಇದೀಗ ಮಳೆ ಬಿಟ್ಟ ಬಳಿಕ ಡಾಮರೀಕರಣ ಆರಂಭಿಸಲಾಗಿದೆ.ಇದರ ಜೊತೆಗೆ ಮುಖ್ಯರಸ್ತೆಯ ಡಾಮರೀಕರಣಕ್ಕೆ ದೊಡ್ಡ ಮೊತ್ತ ರೂ.41.3 ಲಕ್ಷಕ್ಕೆ ಇ-ಟೆಂಡರ್ ಕರೆಯಲಾಗಿದ್ದು, ಟೆಂಡರ್ ಅಂತಿಮ ಹಂತದಲ್ಲಿದೆ.ಟೆಂಡರ್ ತೆರೆಯುವ ಮೊದಲೇ ಶಾಸಕರು ತಮ್ಮ ಆಪ್ತ ಗುತ್ತಿಗೆದಾರರಿಗೆ ಕೊಡಬೇಕೆಂದು ನಗರಸಭೆ ಪೌರಾಯುಕ್ತರಿಗೆ ಸತತ ಒತ್ತಡ ಹಾಕಿದ್ದಾರೆ ಎಂದು ಅವರು ಆರೋಪಿಸಿದರಲ್ಲದೆ,ಕಾನೂನು ಪ್ರಕಾರ ಇಂತಹ ಕಾಮಗಾರಿಯನ್ನು ಟೆಂಡರ್ ಕರೆದು ಕೊಡಬೇಕಾಗುತ್ತದೆ ಹೊರತು ಬೇಕಾದವರಿಗೆ ಕೊಡಲು ಅವಕಾಶವಿಲ್ಲ.ಆದರೆ ಶಾಸಕರು ಬಿಜೆಪಿ ಆಡಳಿತ ಮಾಡಿದ ಕಾಮಗಾರಿಯ ಬಗ್ಗೆ ಮೂಗು ತೂರಿಸುವ ಕೆಲಸ ಮಾಡುತ್ತಿದ್ದಾರೆ.ಅವರಿಗೆ ಕಾಳಜಿ ಇದ್ದರೆ ರಾಜ್ಯ ಸರಕಾರದಿಂದ ರೂ.2 ಸಾವಿರ ಕೋಟಿ ಅನುದಾನ ತಂದಿದ್ದೇನೆಂದು ಹೇಳಿದ್ದಾರಲ್ಲ. ಆ ದುಡ್ಡಿನಲ್ಲಿ ರಸ್ತೆ ದುರಸ್ತಿ ಮಾಡಬೇಕಿತ್ತು ಎಂದರು.
ಶಾಸಕರು ಈ ಹಿಂದಿನ ಪ್ರಾಮಾಣಿಕ ಕಮಿಷನರ್ ಮಧು ಮನೋಹರ್ ಅವರನ್ನು ವರ್ಗಾಯಿಸಿ ಈಗಿನ ಕಮಿಷನರ್ ಅವರನ್ನು ತಂದಿದ್ದಾರೆ.ಮತ್ತೆ ಅವರಿಗೆ ಬೈದಿರುವುದು ಸರಿಯಲ್ಲ.ಪೌರಾಯುಕ್ತರಿಗೆ ಬೈದು, ಟೆಂಡರ್ ಓಪನ್ ಆಗದ ಕಾಮಗಾರಿಯನ್ನು ಮಾಡಿಸಿದ್ದಾರೆ.ಟೆಂಡರ್ ಆಗುವ ಮೊದಲೇ ಕಾಮಗಾರಿ ಪ್ರಾರಂಭಿಸಿರುವುದು ಅಪರಾಧ.ಒಂದು ವೇಳೆ ಟೆಂಡರ್ ಬೇರೆಯವರಿಗೆ ಆದರೆ ಏನು ಮಾಡುತ್ತಾರೆ?.ನಗರಸಭೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಯವರು ಇದರ ಬಿಲ್ ನೀಡುತ್ತಾರೆಯೋ ಎಂಬುದನ್ನು ನೋಡಬೇಕಾಗಿದೆ ಎಂದು ಲೀಲಾವತಿ ಅಣ್ಣು ನಾಯ್ಕ ಮತ್ತು ಸುಂದರ ಪೂಜಾರಿ ಬಡಾವು ಹೇಳಿದರು.ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಪಿ.ಬಿ, ಪ್ರಧಾನ ಕಾರ್ಯದರ್ಶಿಗಳಾದ ಶಶಿಧರ್ ನಾಯಕ್, ಯುವರಾಜ್ ಪೆರಿಯತ್ತೋಡಿ ಉಪಸ್ಥಿತರಿದ್ದರು.
