ಸುದಾನ ಪಿಯು ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ–ಅದ್ಧೂರಿ ಚಾಲನೆ

0

ರಾಜ್ಯಮಟ್ಟದಲ್ಲಿದೆ ಸುದಾನ ಸಂಸ್ಥೆಯ ಹಿರಿಮೆ-ಸಂತೋಷ್ ಭಂಡಾರಿ

ಪುತ್ತೂರು: ಸುದಾನ ಸಮೂಹ ಶಿಕ್ಷಣ ಸಂಸ್ಥೆಗಳ ಸುದಾನ ಪದವಿ ಪೂರ್ವ ಕಾಲೇಜಿನ 2025–26ನೇ ಸಾಲಿನ ವಾರ್ಷಿಕ ಕ್ರೀಡಾಕೂಟವು   ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯಿತು.

ಸಮಾರಂಭದ ಮುಖ್ಯ ಅತಿಥಿಗಳಾಗಿ ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಸಂತೋಷ್ ಭಂಡಾರಿ ಚಿಲ್ಮೆತ್ತಾರುರವರು ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕ್ರೀಡೆಗಳು ವಿದ್ಯಾರ್ಥಿಗಳ ಶಾರೀರಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಅವಿಭಾಜ್ಯ ಅಂಗವಾಗಿದ್ದು, ಶಿಸ್ತು, ಸಹಕಾರ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುತ್ತವೆ ಹಾಗೆಯೇ ಸಂಸ್ಥೆಯ ಏಳಿಗೆಯಲ್ಲಿ ವಿದ್ಯಾರ್ಥಿಗಳು ಕೇವಲ ಶೈಕ್ಷಣಿಕವಾಗಿ ಮಾತ್ರವಲ್ಲ ಆಟೋಟಗಳಲ್ಲಿಯೂ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡು ಸಂಸ್ಥೆಯ ಹಿರಿಮೆಯನ್ನು ರಾಜ್ಯಮಟ್ಟದಲ್ಲಿಯೂ ಕೂಡ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಈ ಸಂಸ್ಥೆಗೆ ಹೆಮ್ಮೆ ತರುವಂತಹ ವಿಚಾರ ಎಂದ ಅವರು ಸಂಸ್ಥೆಯಲ್ಲಿರುವ ಶೇ.90 ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದವರಾಗಿದ್ದು, ಮುಂದಿನ ಸಮಯಗಳಲ್ಲಿ ಈ ಸಂಸ್ಥೆಯ ಹಿರಿಮೆಯನ್ನು ಎತ್ತಿ ಹಿಡಿಯುವಲ್ಲಿ ಶ್ರಮ ವಹಿಸಲಿದ್ದಾರೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸುಪ್ರೀತ್ ಕೆ.ಸಿ ಮಾತನಾಡಿ, ಪಠ್ಯಾಭ್ಯಾಸದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗುತ್ತದೆ ಎಂದರು.

ಈ ಸಮಾರಂಭದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾದ ನವೀನ್, ಪುಷ್ಪರಾಜ್, ಲೀಲಾವತಿ ಹಾಗೂ ಜೀವಿತಾರವರು ಉಪಸ್ಥಿತರಿದ್ದು, ಕ್ರೀಡಾಕೂಟದ ಯಶಸ್ವಿ ಆಯೋಜನೆಗೆ ಮಾರ್ಗದರ್ಶನ ನೀಡಿದರು. ಪ್ರಥಮ ವಿಜ್ಞಾನ ಪಿಸಿಎಂಬಿ ವಿಭಾಗದ ವಿದ್ಯಾರ್ಥಿನಿ ಖದೀಜತ್ ಆಫ್ನ ಕಾರ್ಯಕ್ರಮವನ್ನು ನಿರೂಪಿಸಿ, ಅನಿಖಾ ಯು ವಂದಿಸಿದರು. 

ಸಮಾರೋಪ:
ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸುಪ್ರೀತ್ ಕೆ ಸಿ ಅವರ ಜೊತೆ ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕರಾದ ನವೀನ್ ಪುಷ್ಪರಾಜ್, ಜೀವಿತ ಮತ್ತು ಲೀಲಾವತಿಯವರು ಉಪಸ್ಥಿತರಿದ್ದು, ವಿಜೇತ ವಿದ್ಯಾರ್ಥಿಗಳಿಗೆ ಮತ್ತು ತಂಡಗಳಿಗೆ ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು.  

ಕಾಲೇಜಿನ ಆಂಗ್ಲ ಮಾಧ್ಯಮ ವಿಭಾಗದ ಉಪನ್ಯಾಸಕಿ ಕು. ಮೆಲಿಷಾ ಪ್ರಿಯಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾಲೇಜಿನ ಭೌತಶಾಸ್ತ್ರ ವಿಭಾಗದ ಉಪನ್ಯಾಸಕರಾದ ಯತೀಶ್ ಕುಮಾರ್ ಕ್ರೀಡಾಸ್ಪರ್ಧಿಗಳನ್ನು ಆಯೋಜಿಸಿ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.  

LEAVE A REPLY

Please enter your comment!
Please enter your name here