







ಉದ್ದಿಮೆಯ ಜ್ಞಾನದೊಂದಿಗೆ ಪ್ರತಿಭೆಯೂ ಅಗತ್ಯ – ಪ್ರೊ. ಶ್ರೀಕೃಷ್ಣ ಗಣರಾಜ ಭಟ್


ಪುತ್ತೂರು: ವಿದ್ಯಾರ್ಥಿಗಳು ಸದಭಿರುಚಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಕಾರ್ಯವನ್ನು ಅಧ್ಯಾಪಕರು ಖುಷಿಯಿಂದ ಮಾಡಬೇಕು. ಅಧ್ಯಯನ ಕ್ಷೇತ್ರ ಯಾವುದಿದ್ದರೂ ನಮ್ಮ ಆಸಕ್ತಿಗಳಿಗೂ ಗಮನ ಕೊಟ್ಟು ಅದರಲ್ಲೂ ತೊಡಗಿಕೊಳ್ಳಬೇಕು. ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಾಗ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಉದ್ಯೋಗ ಗಳಿಸುವ ಸಂದರ್ಭದಲ್ಲಿ ನಮ್ಮ ಪ್ರತಿಭೆಗೆ ಕೂಡಾ ಮನ್ನಣೆ ಇದೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ಹೇಳಿದರು.



ಅವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ(ಸ್ವಾಯತ್ತ) ಇಲ್ಲಿ ಜಾಗೃತಿ ವಾರ್ಷಿಕ ಸಂಚಿಕೆ ಹಾಗೂ ಜಾಗೃತಿ ಭಿತ್ತಿ ಪತ್ರಿಕೆ ಸಮಿತಿ, ಆಂಗ್ಲ ಭಾಷಾ ವಿಭಾಗ ಹಾಗೂ, ಐಕ್ಯೂಎಸಿಯ ಸಹಯೋಗದಲ್ಲಿ ನಡೆದ ಸರ್ಜನಾತ್ಮಕ ಬರೆವಣಿಗೆ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕಾಲೇಜಿನ ಕಲಾ ವಿಭಾಗದ ಡೀನ್ ಹಾಗೂ ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥ ಬಾಲಕೃಷ್ಣ ಎಚ್ ಮಾತನಾಡಿ, ನಮ್ಮ ಆಸಕ್ತಿಯ ಚಟುವಟಿಕೆಗಳಲ್ಲಿ ಮುಂದುವರಿದಾಗ ಹಾಗೂ ಹೊಸ ವಿಚಾರಗಳನ್ನು ಗಳಿಸಿಕೊಂಡಾಗ ಅನೇಕ ಸಂಗತಿಗಳನ್ನು ನಾವು ಕಲಿತುಕೊಳ್ಳುತ್ತೇವೆ. ಸರ್ಜನಶೀಲತೆ ಹಾಗೂ ಕಲಿಯುವ ಮನಸ್ಸು ನಮ್ಮ ಜೀವನದಲ್ಲಿ ಆವಶ್ಯಕವಾದುದು. ಸಾಹಿತ್ಯದ ಆಸಕ್ತಿ ಮತ್ತು ಬರೆವಣಿಗೆಯನ್ನು ಹಂತ ಹಂತವಾಗಿ ಬೆಳೆಸಬೇಕು. ನಾವು ಬರೆವಣಿಗೆಗೆ ಆಯ್ದುಕೊಂಡ ವಿಷಯವನ್ನು ಅದಕ್ಕೆ ಸಂಬಂಧಿಸಿ ಒಂದು ಕಥೆಯನ್ನು ಹೆಣೆದು, ಸೂಕ್ತವಾದ ಉಕ್ತಿಗಳನ್ನು ಉಲ್ಲೇಖಿಸಿ ಪರಿಣಾಮಕಾರಿಯಾಗಿ ಮಾಡಬೇಕು. ಬರೆಯುತ್ತಾ ಹೋದಂತೆ ನಮಗೆ ಒಂದು ಒಳನೋಟವೂ ಲಭಿಸುತ್ತದೆ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗಾಗಿ ಸಾಹಿತ್ಯ ರಚನೆಗೆ ಪೂರಕವಾದ ಚಟುವಟಿಕೆಗಳನ್ನು ನಡೆಸಲಾಯಿತು. ವಿವಿಧ ವಿಭಾಗದ ಹಲವು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ವಿದ್ಯಾ ಎಸ್. ಪ್ರಾಸ್ತಾವಿಕ ಮಾತುಗಳನ್ನಾಡಿದರು. ತೃತೀಯ ಕಲಾ ವಿಭಾಗದ ವಿದ್ಯಾರ್ಥಿನಿ ಪ್ರತೀಕ್ಷಾ ಬಿ.ಎಲ್. ಸ್ವಾಗತಿಸಿದರು. ಶೌರಿ ಕೃಷ್ಣ ವಂದಿಸಿದರು. ಕಾರ್ಯಕ್ರಮವನ್ನು ಅನನ್ಯ ಎಚ್. ಸುಬ್ರಹ್ಮಣ್ಯ ನಿರೂಪಿಸಿದರು.










