







ಸವಣೂರು: “ಅವಿವಾಹಿತರಾಗಿರುವ ಸಂಸದ ಬ್ರಿಜೇಶ್ ಚೌಟರಿಗೆ ನಾವೆಲ್ಲ ಸೇರಿ ಒಂದೆರಡು ವರ್ಷದೊಳಗೆ ಮದುವೆ ಮಾಡಿಸೋಣ” ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಮೇ.23ರಂದು ಸವಣೂರಿನಲ್ಲಿ ನಡೆದ ಸೀತಾರಾಮ ರೈ – ಕಸ್ತೂರಿ ದಂಪತಿಯ ‘ಕಲ್ಯಾಣ – 50’ರ ಸಂಭ್ರಮದಲ್ಲಿ ಈ ಘಟನೆ ನಡೆಯಿತು.


ದಂಪತಿಯನ್ನು ಅಭಿನಂದಿಸಿ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ, “ದಾಂಪತ್ಯ ಜೀವನ ನಡೆಸಲು ಧೈರ್ಯವಿಲ್ಲದೆ ಇದ್ದುದರಿಂದ ದಾಂಪತ್ಯದ ಅನುಭವ ಪಡೆಯಲಾಗಿಲ್ಲ” ಎಂದು ಹೇಳಿದರು. ನಂತರ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, “ದಾಂಪತ್ಯ ಜೀವನದ ಆರಂಭದ 10-15 ವರ್ಷ ಪರಸ್ಪರ ಹೊಂದಾಣಿಕೆಯಿಂದ ಇರಲು ಅಭ್ಯಾಸ ಮಾಡಿಕೊಂಡರೆ ನಂತರ ಅದರಷ್ಟಕ್ಕೆ ಸರಾಗವಾಗಿ ಹೋಗುತ್ತದೆ. ಚೌಟರು ಭಯ ಪಡಬೇಕಾಗಿಲ್ಲ. ಅವರಿಗೆ ನಾವೆಲ್ಲ ಸೇರಿ ಒಂದೆರಡು ವರ್ಷದೊಳಗೆ ಹುಡುಗಿ ನೋಡಿ ಮದುವೆ ಮಾಡಿಸೋಣ” ಎಂದರು. ಈ ವೇಳೆ ವೇದಿಕೆಯಲ್ಲಿದ್ದ ಮೋಹನ ಆಳ್ವರು “ಹುಡುಗಿಯಲ್ಲ, ಹೆಂಗಸು” ಎಂದರು. ಅದಕ್ಕೆ ಉತ್ತರಿಸಿದ ಅಶೋಕ್ ರೈ, “ಇಲ್ಲ. ಅವರಿಗೆ ಹುಡುಗಿಯೇ ಆಗಬೇಕು. ಅವರು ಮದುವೆ ಆಗುತ್ತಾರೆ ಎಂದರೆ ಎಷ್ಟು ಹುಡುಗಿಯರು ಮುಂದೆ ಬರುತ್ತಾರೆ ನೋಡಿ” ಎಂದು ಹೇಳಿದರು.













