






12 ವರ್ಷಗಳಿಂದ ಹೋರಾಟ ಮಾಡಿದರೂ ಪರಿಹಾರವಾಗದ ಸಮಸ್ಯೆ-ಸ್ಥಳೀಯರ ಆರೋಪ


ಪುತ್ತೂರು:ನರಿಮೊಗರು ಗ್ರಾಮದ ಪುರುಷರಕಟ್ಟೆಯಲ್ಲಿರುವ ಫ್ಯಾಕ್ಟರಿಯೊಂದರಿಂದ ಹೊರಬರುವ ರಾಸಾಯನಿಕಯುಕ್ತ ಕೊಳಚೆ ನೀರು ಚರಂಡಿ ಮೂಲಕ ಹರಿದು ನದಿ ಸೇರುತ್ತಿದೆ.ಇದರಿಂದ ಜಲ ಮೂಲ ಕಲುಷಿತಗೊಳ್ಳುತ್ತಿರುವುದಲ್ಲದೆ ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.



ಫ್ಯಾಕ್ಟರಿಯ ಕಲುಷಿತ ನೀರನ್ನು ಶೇಖರಿಸಿಟ್ಟು ಮಳೆಗಾಲದಲ್ಲಿ ಮಳೆ ನೀರು ಹರಿಯುವ ತೋಡಿಗೆ ಬಿಡಲಾಗುತ್ತಿದೆ.ಇದು ಮಳೆಯ ನೀರಿನೊಂದಿಗೆ ನದಿ ಸೇರುತ್ತಿದೆ.ಈ ವರ್ಷವೂ ಮಳೆಯ ಪ್ರಾರಂಭದಲ್ಲೇ ತ್ಯಾಜ್ಯ ನೀರನ್ನು ಚರಂಡಿಗೆ ಹರಿಯಲು ಬಿಟ್ಟಿದ್ದಾರೆ.ಆದರೆ ಮಳೆ ಪ್ರಮಾಣ ಕಡಿಮೆಯಾದುದರಿಂದ ಕಲುಷಿತ ರಾಸಾಯನಿಕಯುಕ್ತ ನೀರು ಚರಂಡಿಯುದ್ದಕ್ಕೂ ಶೇಖರಣೆಗೊಂಡು ಪರಿಸರದಲ್ಲಿ ದುರ್ನಾತ ಬೀರುತ್ತಿದೆ.ಕಲುಷಿತ ನೀರು ಸಂಗ್ರಹಣೆಯಾಗಿ ಸೊಳ್ಳೆಗಳು ಉತ್ಪತ್ತಿಗೊಂಡು ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯೂ ಇದೆ ಎಂದು ಸ್ಥಳೀಯರು ಹೇಳುತ್ತಾರೆ.

ಫ್ಯಾಕ್ಟರಿಯಿಂದ ಹೊರ ಬರುವ ಕಲುಷಿತ ನೀರು ಓಂಕಾರ್ ಲೇಔಟ್ ಮೂಲಕ ಚರಂಡಿಯಲ್ಲಿ ಹರಿದು ಬೆದ್ರಾಳ ನದಿ ಸೇರಿ ಅಲ್ಲಿಂದ ನೇತ್ರಾವತಿ ನದಿ ಸೇರುತ್ತದೆ. ಕಲುಷಿತ ನೀರು ಹರಿದು ಹೋಗುವ ಚರಂಡಿ, ತೋಡಿನ ಪರಿಸರದಲ್ಲಿ 400ಕ್ಕೂ ಅಧಿಕ ವಿದ್ಯಾರ್ಥಿಗಳಿರುವ ಶಾಲೆ, ನೂರಾರು ಮನೆಗಳಿದ್ದು ನಿವಾಸಿಗಳು ಭೀತಿಯಲ್ಲಿಯೇ ಬದುಕುವಂತಾಗಿದೆ.
12 ವರ್ಷಗಳಿಂದ ಹೋರಾಟ:
ಫ್ಯಾಕ್ಟರಿಯಿಂದ ಹೊರಬರುವ ಕಲುಷಿತ ನೀರಿನಿಂದ ಪರಿಸರಕ್ಕೆ ಹಾನಿಯುಂಟಾಗುತ್ತಿರುವುದು 2014ರಿಂದ ಪ್ರಾರಂಭಗೊಂಡಿದೆ.ಇದರ ಬಗ್ಗೆ ಕಳೆದ 12 ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡಲಾಗುತ್ತಿದೆ.ಗ್ರಾಮ ಪಂಚಾಯತ್‌ನಿಂದ ಪ್ರಾರಂಭಿಸಿ, ತಹಶೀಲ್ದಾರ್, ಸಹಾಯಕ ಆಯುಕ್ತರು, ಜಿಲ್ಲಾಧಿಕಾರಿಗಳು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ತನಕ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.ನಾವು ಸಮಸ್ಯೆ ಅನುಭವಿಸುತ್ತಲೇ ಇದ್ದೇವೆ ಎಂಬ ಸ್ಥಳೀಯರು ನೋವನ್ನು ವ್ಯಕ್ತಪಡಿಸಿದ್ದಾರೆ.
ಉಗ್ರ ಹೋರಾಟದ ಎಚ್ಚರಿಕೆ:
ಫ್ಯಾಕ್ಟರಿಯಿಂದ ಹೊರಬರುವ ಕಲುಷಿತ ನೀರಿನಿಂದ ಪರಿಸರಕ್ಕೆ ಹಾನಿಯುಂಟಾಗುತ್ತಿರುವುದಲ್ಲದೆ,ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವ ಬಗ್ಗೆ 2014ರಿಂದ ಮನವಿ ಮಾಡುತ್ತಾ ಬಂದಿದ್ದೇವೆ.ಒಂದು ಬಾರಿ ಫ್ಯಾಕ್ಟರಿ ಮುಖ್ಯಸ್ಥರ ಜೊತೆ ಪಂಚಾಯತ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ಮುಂದೆ ಇಂತಹ ಸಮಸ್ಯೆ ಬಾರದಂತೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು. ಆದರೆ ಸಮಸ್ಯೆ ಹಾಗೆಯೇ ಇದೆ.ಇದೀಗ ಪಿಡಿಓ ಭೇಟಿ ನೀಡಿದ್ದಾರೆ.ಮುಂದೆಯೂ ಸಮಸ್ಯೆ ಪರಿಹಾರ ಆಗದಿದ್ದರೆ ರಸ್ತೆ ತಡೆ, ಪಂಚಾಯತ್ ಮುತ್ತಿಗೆ ಹಾಕುವ ಮೂಲಕ ಉಗ್ರ ಹೋರಾಟ ಮಾಡಲಾಗುವುದು ಎಂದು ನರಿಮೊಗರು ಹಿತರಕ್ಷಣಾ ಸಮಿತಿಯವರು ಎಚ್ಚರಿಸಿದ್ದಾರೆ.
ಪಿಡಿಓ ಪರಿಶೀಲನೆ:
ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಜೂ.23ರಂದು ನರಿಮೊಗರು ಗ್ರಾ.ಪಂ. ಪಿಡಿಓ ಆಶಾ ಇ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಫ್ಯಾಕ್ಟರಿಯಯಲ್ಲಿ ಉತ್ಪತ್ತಿಯಾಗುವ ಕಲುಷಿತ ನೀರನ್ನು ಸಾರ್ವಜನಿಕವಾಗಿ ಚರಂಡಿಯಲ್ಲಿ ಹರಿಬಿಡುವುದು ಸರಿಯಲ್ಲ.ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಗಿದ್ದು ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು
-ಆಶಾ ಇ. ಪಿಡಿಓ ನರಿಮೊಗರು.










