







ಕಾಣಿಯೂರು: ಕರ್ನಾಟಕದ ಸುಂದರ ಗಿರಿಧಾಮಗಳಲ್ಲಿ ಒಂದಾಗಿರುವ ಹಚ್ಚ ಹಸಿರಿನ ಅರಣ್ಯ ಪ್ರದೇಶವಾಗಿರುವ ಕುದುರೆಮುಖಕ್ಕೆ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಯನ ಪ್ರವಾಸವು ಜು.28ರಂದು ನಡೆಯಿತು.



ಅರಣ್ಯ ಇಲಾಖೆ ನೇತೃತ್ವದಲ್ಲಿ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಪತ್ರಕರ್ತರ ಒಂದು ದಿನದ ಕುದುರೆಮುಖ ಅಧ್ಯಯನ ಪ್ರವಾಸದಲ್ಲಿ ಕಡಬ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ಪತ್ರಕರ್ತರು ಪಾಲ್ಗೊಂಡರು. ಪ್ರಮುಖವಾಗಿ ಜೀವವೈವಿಧ್ಯ, ನದಿಗಳ ಉಗಮ ಮತ್ತು ಪಶ್ಚಿಮ ಘಟ್ಟಗಳ ನೈಸರ್ಗಿಕ ಸೌಂದರ್ಯ, ಜಲಪಾತ, ದಟ್ಟವಾದ ಕಾಡುಗಳು, ವನ್ಯಜೀವಿ ಅಭಯಾರಣ್ಯಗಳಂತಹ ಆಕರ್ಷಣೆಗಳನ್ನು ವೀಕ್ಷಿಸುತ್ತಾ ಕಾಣ್ತುಂಬಿಕೊಂಡರು. ದಟ್ಟಾರಣ್ಯದ ನಡುವೆ ಬಿಟ್ಟು ಬಿಟ್ಟು ಸುರಿದ ಮಳೆಯ ಜೊತೆಯಲ್ಲೇ ಕುದುರೆಮುಖದ ತುಂಗಭದ್ರಾ ಜಲಮೂಲ (ಗಂಗಾಮೂಲವೆಂದೇ ಕರೆಯಲಾಗುತ್ತದೆ), ಹನುಮಾನ್ ಗುಂಡಿ (ಸೂತನಬ್ಬಿ ಜಲಪಾತ), ಕುರಿಂಜಾಲ್, ಸಿಂಗಾರ್ ಶೋಲಾ ಸಫಾರಿ, ಕಡಂಬಿ ಜಲಪಾತ, ಲಕ್ಯಾ ಡ್ಯಾಂ, ಕುದುರೆಮುಖ ಟೌನ್ಶಿಪ್ ಗಳಿಗೆ ಜಿಲ್ಲಾ ಪತ್ರಕರ್ತರಿಗಾಗಿ ಆಯೋಜಿಸಿದ್ದ ಅಧ್ಯಯನ ಪ್ರವಾಸದಲ್ಲಿ ದಟ್ಟಾರಣ್ಯದ ನಡುವೆ ಕಾರ್ಯ ನಿರ್ವಹಿಸುವ ಅರಣ್ಯ ಸಿಬ್ಬಂದಿಯ ಸಾಹಸಮಯ ಜೀವನದ ಜೊತೆಗೆ ಅವರ ಯಾತನೆಗಳನ್ನು ಅರಿಯುವಂತಾಯಿತು.



ಮೂಡಬಿದಿರೆ ವಲಯ ಎ.ಸಿ.ಎಫ್ ಶ್ರೀಧರ್, ಕುದುರೆಮುಖ ಆರ್ಎಫ್ಒ ಪ್ರಭಾಕರ್ ಕುಲಾಲ್ ಹಾಗೂ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್, ರಾಜ್ಯ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು ಪತ್ರಿಕಾಭವನ ಟ್ರಸ್ಟ್ನ ಅಧ್ಯಕ್ಷ ಅಣ್ಣು ಮಂಗಳೂರು, ಮಂಗಳೂರು ವಾರ್ತಾ ಇಲಾಖಾ ಅಧಿಕಾರಿ ಖಾದರ್ ಷಾ ಸೇರಿದಂತೆ ವಿವಿಧ ತಾಲೂಕಿನ ಪತ್ರಕರ್ತರು ಅಧ್ಯಯನ ಪ್ರವಾಸದಲ್ಲಿ ಪಾಲ್ಗೊಂಡಿದ್ದರು.
ಸನ್ಮಾನ:
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಪತ್ರಕರ್ತರ ಕುದುರೆಮುಖ ಅಧ್ಯಯನ ಪ್ರವಾಸಕ್ಕೆ ಸಹಕರಿಸಿದ ಮೂಡಬಿದಿರೆ ವಲಯ ಎ.ಸಿ.ಎಫ್ ಶ್ರೀಧರ್, ಮಂಗಳೂರು ವಾರ್ತಾ ಇಲಾಖಾ ಅಧಿಕಾರಿ ಖಾದರ್ ಷಾ ಅವರನ್ನು ಭಗವತಿ ಕ್ಯಾಂಪ್ನಲ್ಲಿ ಸನ್ಮಾನಿಸಲಾಯಿತು.










