







- ಮಕ್ಕಳು ಮಾದಕ ವ್ಯಸನಕ್ಕೆ ಬಲಿಯಾಗದಂತೆ ಜಾಗೃತೆ ವಹಿಸಿ: ಎಸ್.ಐ ಗುಣಪಾಲ್
- ಮುಗ್ದತೆಯನ್ನು ಮೈಗೂಡಿಸಿಕೊಂಡವರೇ ಮೊಗೇರರು : ಸತೀಶ್ ಒಳಗುಡ್ಡೆ
- ಈ ಮಣ್ಣಿನ ಮೂಲನಿವಾಸಿಗಳೇ ಮೊಗೇರ ಜನಾಂಗದವರು : ಬಾಬು ಮಾಸ್ತರ್
ಪುತ್ತೂರು: ಬಲ್ನಾಡು ಗ್ರಾಮದ ಮೊಗೇರ ಗೇಟ್ವೇ ಬೆಳಿಯೂರುಕಟ್ಟೆ ಇದರ ವತಿಯಿಂದ ಆಟಿದ ಗೌಜಿ ಗಮ್ಮತ್ತ್, ಆರೋಗ್ಯ ಕಾರ್ಡ್ ಹಾಗೂ ಮಾದಕ ದ್ರವ್ಯ ದುಷ್ಪರಿಣಾಮ ಮತ್ತು ತಡೆಗಟ್ಟುವಿಕೆ ಮಾಹಿತಿ ಕಾರ್ಯಾಗಾರ ಹಾಗೂ ಮೊಗೇರ ಸಮುದಾಯದ ಹಿರಿಯ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆ.09ರಂದು ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ನಡೆಯಿತು.



ಮಾದಕ ದ್ರವ್ಯದ ದುಷ್ಪರಿಣಾಮಗಳು ಹಾಗೂ ಇದನ್ನು ತಡೆಗಟ್ಟುವಿಕೆ ಬಗ್ಗೆ ಮಾಹಿತಿ ನೀಡಿದ ಪುತ್ತೂರು ಗ್ರಾಮಾಂತರ ಠಾಣಾ ಸಬ್ಇನ್ಸ್ಪೆಕ್ಟರ್ ಗುಣಪಾಲ್ರವರು, ಇತ್ತೀಚಿನ ದಿನಗಳಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಡ್ರಗ್ಸ್,ಗಾಂಜಾದಂತಹ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವುದು ಕಂಡು ಬರುತ್ತಿದ್ದು ಈ ಬಗ್ಗೆ ಪೋಷಕರು ಎಚ್ಚರದಿಂದಿರಬೇಕಾದ ಅಗತ್ಯತೆ ಇದೆ. ತಮ್ಮ ಮಕ್ಕಳು ಶಾಲೆ, ಕಾಲೇಜುಗಳಿಗೆ ಹೋಗುತ್ತಿದ್ದರೆ ಅವರ ನಡವಳಿಕೆಗಳನ್ನು, ಬ್ಯಾಗ್ಗಳನ್ನು ಪರಿಶೀಲನೆ ಮಾಡಬೇಕಾದ ಅಗತ್ಯತೆ ಇದೆ.ಕಾಲೇಜು ಹೋಗುವ ಮಕ್ಕಳು ಹಣಕ್ಕಾಗಿ ಮನೆಯಲ್ಲಿ ಪೀಡಿಸುತ್ತಿದ್ದರೆ ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕಾದ ಅವಶ್ಯತೆ ಇದೆ. ಮಕ್ಕಳು ಡ್ರಗ್ಸ್,ಎಂಡಿಎಂನಂತಹ ಮಾದಕ ದ್ರವ್ಯಗಳ ವ್ಯಸನಕ್ಕೆ ಬಲಿಯಾಗದಂತೆ ನೋಡಿಕೊಳ್ಳಬೇಕಾದ ಜವಬ್ದಾರಿ ನಮ್ಮಲ್ಲೆರ ಮೇಲಿದೆ ಎಂದು ಹೇಳಿದರು.




ಆರಂಭದಲ್ಲಿ ಭಾರತಾಂಭೆಗೆ ಪುಷ್ಪಾರ್ಚನೆ ಮಾಡಲಾಯಿತು ಬಳಿಕ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಹಿರೇಬಂಡಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಗುರು ಬಾಬು ಮಾಸ್ತರ್ ಕುಂಬ್ರರವರು ಮಾತನಾಡಿ, ಮೊಗೇರ ಜನಾಂಗಕ್ಕೆ ಬಹಳ ಪುರಾತನ ಇತಿಹಾಸವಿದ್ದು ಈ ಮಣ್ಣಿನ ಮೂಲನಿವಾಸಿಗಳಾಗಿ ಹಿಂದಿನ ಕಾಲದಿಂದಲೇ ಶ್ರಮ ಜೀವಿಗಳಾಗಿ ಈ ಮಣ್ಣಿನಲ್ಲಿ ಬೆಳೆದು ಬಂದಿದ್ದಾರೆ. ಮೊಗೇರರನ್ನು ಕಾಪಾಡರು ಎಂದು ಕರೆಯುತ್ತಾರೆ ಏಕೆಂದರೆ ಅವರನ್ನು ಎಲ್ಲರನ್ನು ಕಾಪಾಡುವವರು ಆಗಿದ್ದರು ಎಂದ ಅವರು ಮೊಗೇರ ಜನಾಂಗದ ಬಗ್ಗೆ ಬಹಳ ವಿವರವಾಗಿ ತಿಳಿಸಿದರು. ಇದಲ್ಲದೆ ಸಂಪ್ಯ ಮೆಡ್ಲ್ಯಾಂಡ್ ಆಸ್ಪತ್ರೆಯ ಆರೋಗ್ಯ ಕಾರ್ಡ್ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಯಾಗಿದ್ದ ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ಒಳಗುಡ್ಡೆಯವರು ಮಾತನಾಡುತ್ತಾ, ಮೊಗೇರರು ಎಂದರೆ ಮುಗ್ದತೆಯನ್ನು ಮೈಗೂಡಿಸಿಕೊಂಡವರು ಏಕೆಂದರೆ ಇಡೀ ಮೊಗೇರ ಸಮುದಾಯವನ್ನು ನೋಡಿದರೆ ಅಲ್ಲಿರುವ ಎಲ್ಲರಲ್ಲಿ ಮುಗ್ದತೆಯನ್ನು ಕಾಣಬಹುದಾಗಿದೆ. ಮೊಗೇರರು ಶ್ರಮ ಜೀವಿಗಳು ಹಾಗೇ ಮುಗ್ದರು ಆಗಿದ್ದಾರೆ ಎಂದು ಹೇಳಿದರು.ಮೊಗೇರು ಗ್ರಾಮ ಸಮಿತಿ ಗೋಳಿಪದವು ಇರ್ದೆ ಇದರ ಮಾಜಿ ಅಧ್ಯಕ್ಷ ಸುಂದರ ಗೋಳಿಪದವುರವರು ಆಟಿ ತಿಂಗಳ ಬಗ್ಗೆ ಮಾಹಿತಿ ನೀಡುತ್ತಾ, ಆಟಿ ತುಳುವರಿಗೆ ಬಹಳ ವಿಶೇಷವಾದ ತಿಂಗಳಾಗಿದ್ದು ಆಟಿ ತಿಂಗಳಲ್ಲಿ ಬರುವ ಆಟಿ ಆಮಾವಾಸ್ಯೆ, ಆಟಿ ಕಳೆಂಜ ಹಾಗೇ ಆಟಿಯ ತಿನಿಸುಗಳ ಬಗ್ಗೆ, ಆಟಿ ಅಂದು ಮತ್ತು ಇಂದು ಈ ಬಗ್ಗೆ ಬಹಳ ಸವಿವರವಾಗಿ ಸಭೆಗೆ ತಿಳಿಸಿದರು. ಪುರುಷಕಟ್ಟೆಯ ಅಂಚೆ ಪಾಲಕಿ ರೂಪ ಸರೋಳಿಕಾನರವರು ಮಾತನಾಡಿ, ಆಟಿ ತಿಂಗಳು ಬಹಳಷ್ಟು ವಿಶೇಷತೆಗಳನ್ನು ಹೊಂದಿದ್ದು ಎಲ್ಲರಿಗೂ ಬಹಳ ಇಷ್ಟದ ತಿಂಗಳು ಆಗಿದೆ ಎಂದು ಹೇಳಿದರು. ಸಭಾಧ್ಯಕ್ಷತೆ ವಹಿಸಿದ್ದ ಪತ್ರಕರ್ತ ಸಿಶೇ ಕಜೆಮಾರ್ರವರು ಆಟಿ ತಿಂಗಳು ಅಂದು, ಇಂದು ಈ ಬಗ್ಗೆ ಹಾಗೇ ಆಟಿ ತಿಂಗಳೆಂದರೆ ಕಷ್ಟ ಮತ್ತು ಇಷ್ಟದ ತಿಂಗಳು ಬಗ್ಗೆ ಮಾತನಾಡಿದರು. ಮೊಗೇರ ಗೇಟ್ ವೇ ಏರ್ಪಡಿಸಿದ್ದ ಈ ಕಾರ್ಯಕ್ರಮದ ಇಡೀ ತಾಲೂಕಿಗೆ ಮಾದರಿ ಕಾರ್ಯಕ್ರಮವಾಗಿ ಎಂದು ಹೇಳಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಕುರುಡುಕಟ್ಟೆ ಅಂಗನವಾಡಿ ಶಿಕ್ಷಕಿ ಅಶ್ವಿನಿ ಉಪಸ್ಥಿತರಿದ್ದರು. ಮೊಗೇರ ಗೇಟ್ವೇ ಇದರ ಉಮೇಶ್ ಭಂಡಾರಿಕೆರೆ ಸ್ವಾಗತದೊಂದಿಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ಯಶ್ವಿನಿ, ಕೃತಿಕ, ದನ್ವಿ, ಪ್ರಣನ್ಯ, ವರ್ಷಾ ಯು, ರಜನಿ ಪ್ರಾರ್ಥಿಸಿದರು. ಮೊಗೇರ ಗೇಟ್ ವೇ ಇದರ ಸುಂದರಿ ಸಾರ್ಯ ವಂದಿಸಿದರು. ಪುರುಷೋತ್ತಮ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು. ಇಂದಿರಾ ಮತ್ತು ಮಕ್ಕಳು ಊಟದ ವ್ಯವಸ್ಥೆ, ಭವಾನಿ ಚನಿಯಪ್ಪ ಪದಾರ್ಥ, ಸುಂದರ ಸಾರ್ಯ ಮತ್ತು ದೇವಕಿ ಸುಡುಕಿರಿಮೂಲೆ ಪಾಯಸದ ವ್ಯವಸ್ಥೆ ಮಾಡಿದ್ದರು. ಚಂದ್ರಶೇಖರ ಮತ್ತು ಮಹೇಶ್ ದೊಡ್ಡಡ್ಕ ಬಹುಮಾನದ ಪ್ರಾಯೋಜಕತ್ವ ವಹಿಸಿದ್ದರು. ಚಂದ್ರಾವತಿ ಭಂಡಾರಿಕೆರೆ ಮತ್ತು ಸುಂದರಿ ಸಾರ್ಯ ಬೆಳಗ್ಗಿನ ಉಪಹಾರದ ವ್ಯವಸ್ಥೆ ಮಾಡಿದ್ದರು. ಮೊಗೇರ ಗೇಟ್ವೇನ ಅಶೋಕ್ ಪನೆತ್ತಡ್ಕ, ಚಂದ್ರಶೇಖರ, ಸುಂದರ ಸಾರ್ಯ, ಆಶಾಕಿರಣ, ಅಶೋಕ ಭಂಡಾರಿಕೆರೆ, ಜಗದೀಶ್ ಕೋಡಿಯಡ್ಕ, ಸುದೇಶ್ ಪನೆತ್ತಡ್ಕ, ಸುಶೀಲ ಕೋಡಿಯಡ್ಕ, ವಿಜಯ ಭಂಡಾರಿಕೆರೆ, ಪ್ರೀತಮ್, ಅಕ್ಷತ್, ದೀಕ್ಷಿತ್, ಸೀತಾ ಪನೆತ್ತಡ್ಕ, ಸುಂದರಿ ಪನೆತ್ತಡ್ಕ ಸಂಪೂರ್ಣ ಸಹಕಾರ ನೀಡಿದ್ದರು. ಸಭೆಯಲ್ಲಿ ತಾಲೂಕು ಮೊಗೇರ ಸಂಘದ ಮುಖೇಶ್ ಕೆಮ್ಮಿಂಜೆ, ವಿಜಯಲಕ್ಷ್ಮೀ, ಲೋಕೇಶ್ ಹಿರೆಬಂಡಾಡಿ, ಚಂದ್ರ ಬೀರಿಗ ಮತ್ತಿತರರು ಭಾಗವಹಿಸಿದ್ದರು.
ಹಿರಿಯ ಸಾಧಕರಿಗೆ ಸನ್ಮಾನ
ಪಾಡ್ದನದಲ್ಲಿ ಸಾಧನೆ ಮಾಡಿದ ಮಾಯಿಲು ಕೋಡಿಯಡ್ಕ, ಬಾಣಂತಿ ಸುಶ್ರೂಷಕಿ ಸುಂದರಿ ಪನೆತ್ತಡ್ಕ, ಹಿರಿಯ ಕೃಷಿಕರಾದ ಪಕೀರ ಮತ್ತು ಸೋನೆ ದಂಪತಿ, ಸಾಹಿತಿ ಸುಂದರ ಸಾರ್ಯ, ದೈವದ ಚಾಕರಿ ಮಾಡುವ ಕುಟ್ಟಿ ಮೇರ ರವರನ್ನು ಶಾಲು, ಸ್ಮರಣಿಕೆ ನೀಡಿ ಗೌರವಿಸಿ ಸನ್ಮಾನಿಸಲಾಯಿತು.
ದುಡಿ ಕುಣಿತ/ಆಟಿಯ ವಿಶೇಷ ತಿನಿಸುಗಳು
ಕಾರ್ಯಕ್ರಮದ ಆರಂಭದಲ್ಲಿ ಹಾಗೂ ಕೊನೆಯಲ್ಲಿ ಮೊಗೇರ ಜನಾಂಗದ ವಿಶೇಷವಾದ ದುಡಿ ಕುಣಿತ ನಡೆಯಿತು. ಗುರುವ ರೆಂಜ ಮತ್ತು ತಂಡದವರು ದುಡಿ ಕುಣಿತ ನಡೆಸಿಕೊಟ್ಟರು. ಆಟಿದ ಗೌಜಿ ಗಮ್ಮತ್ತ್ನಲ್ಲಿ ಆಟಿ ತಿಂಗಳ ಸುಮಾರು 25 ಬಗೆಯ ವಿಶೇಷ ತಿಂಡಿ ತಿನಿಸುಗಳನ್ನು ಸವಿಯಲಾಯಿತು.
ತಾಲೂಕಿಗೆ ಮಾದರಿ ಕಾರ್ಯಕ್ರಮ
ಮೊಗೇರ ಗೇಟ್ ವೇ ಬೆಳಿಯೂರುಕಟ್ಟೆ ಯಶಸ್ವಿ 5ನೇ ವರ್ಷಕ್ಕೆ ಕಾಲಿಡುತ್ತಿದ್ದು ಪ್ರತಿ ವರ್ಷವೂ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಾ ಬರಲಾಗುತ್ತಿದೆ. ಸಂಘಟನೆಯನ್ನು ಪ್ರಥಮ ಬಾರಿಗೆ ಆಟಿದ ಗೌಜಿ ಗಮ್ಮತ್ತ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು 100ಕ್ಕೂ ಅಧಿಕ ಮಂದಿ ಭಾಗವಹಿಸುವ ಮೂಲಕ ಮೊಗೇರ ಸಂಘಟನೆಯ ವತಿಯಿಂದ ನಡೆದ ಕಾರ್ಯಕ್ರಮಗಳಲ್ಲಿ ತಾಲೂಕಿಗೆ ಒಂದು ಮಾದರಿ ಕಾರ್ಯಕ್ರಮವಾಗಿ ಹೊರಹೊಮ್ಮಿರುವ ಬಗ್ಗೆ ಅತಿಥಿಗಳು ಶ್ಲಾಘನೆ ವ್ಯಕ್ತಪಡಿಸಿದರು.










