ಕಡಬ ತಾ. 5ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ

0

ರಾಮಕುಂಜ: ಆ.29ರಂದು ರಾಮಕುಂಜ ವಿಶ್ವೇಶತೀರ್ಥ ಸೌಧ ಸಭಾಂಗಣದಲ್ಲಿ ನಡೆಯಲಿರುವ ಕಡಬ ತಾ.5ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ಆ.22ರಂದು ರಾಮಕುಂಜೇಶ್ವರ ವಸತಿ ಶಾಲೆಯ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕಡಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೆ.ಸೇಸಪ್ಪ ರೈ ಮಾತನಾಡಿ, ಇಂಗ್ಲಿಷ್‌ನಲ್ಲಿ ಕನ್ನಡವೂ ಸೇರಿಕೊಳ್ಳಬೇಕು. ಈ ರೀತಿಯಾದಲ್ಲಿ ಕನ್ನಡವೂ ಪ್ರಪಂಚದ ಎಲ್ಲೆಡೆ ಪಸರಿಸಲಿದೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕೆಲಸ ಮಾಡುತ್ತಿದೆ. ಕಡಬ ತಾಲೂಕಿನಲ್ಲಿ ಸಾಹಿತಿಗಳ ಸಂಖ್ಯೆ ಕಡಿಮೆ ಇದೆ. ತಾಲೂಕಿನಲ್ಲಿ ಈ ಹಿಂದೆ ನಡೆದ ನಾಲ್ಕು ಸಮ್ಮೇಳನಗಳು ಯಶಸ್ವಿಯಾಗಿ ನಡೆದಿದೆ. ರಾಮಕುಂಜದಲ್ಲಿ ನಡೆಯುತ್ತಿರುವ ಕಡಬ ತಾಲೂಕಿನ ಎರಡನೇ ಸಮ್ಮೇಳನ ಇದಾಗಿದೆ. ಸಮಿತಿಯ ಸದಸ್ಯರು ತಮಗೆ ವಹಿಸಿರುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿಕೊಂಡಲ್ಲಿ ಸಮ್ಮೇಳನ ಯಶಸ್ವಿಯಾಗಲಿದೆ ಎಂದರು.

ಸ್ವಾಗತ ಸಮಿತಿ ಅಧ್ಯಕ್ಷರಾದ ಕೇಶವ ಅಮೈ ಕಲಾಯಿಗುತ್ತು ಮಾತನಾಡಿ, ಸಮ್ಮೇಳನದ ಯಶಸ್ವಿ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮಗೆ ನೀಡಿರುವ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುವಂತೆ ಹೇಳಿದರು.

ಕಡಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ನಿಕಟಪೂರ್ವಾಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಆರ್ಥಿಕ ಸಮಿತಿ ಸಂಚಾಲಕ ಜಯಸೂರ್ಯ ರೈ ಮಾದೋಡಿ ಸಂದರ್ಭೋಚಿತವಾಗಿ ಮಾತನಾಡಿದರು. ಮೆರವಣಿಗೆ ಸಮಿತಿ ಸಂಯೋಜಕಿ ಪ್ರೇಮ ಬಿ. ಅವರು ಮೆರವಣಿಗೆ ಕುರಿತು ಮಾಹಿತಿ ನೀಡಿದರು.

ಉಪನ್ಯಾಸಕ ಚೇತನ್ ಆನೆಗುಂಡಿ ಅವರು ಸಮ್ಮೇಳನದ ರೂಪುರೇಷೆಗಳ ಕುರಿತು ತಿಳಿಸಿದರು. ಸಭೆಯಲ್ಲಿ ವಿವಿಧ ಸ್ವಾಗತ ಸಮಿತಿ ಪದಾಧಿಕಾರಿಗಳು, ಸದಸ್ಯರು, ವಿವಿಧ ಉಪಸಮಿತಿಗಳ ಸಂಚಾಲಕರು, ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here