







ವಿವಿಧ ಸಂಘಟನೆ ಮುಖಂಡರಿಂದ ನುಡಿನಮನ


ನೆಲ್ಯಾಡಿ: ಆ.15ರಂದು ನಿಧನರಾದ ನೆಲ್ಯಾಡಿ ಗ್ರಾಮದ ಕೆಳಗಿನಪರಾರಿ ನಿವಾಸಿ, ವಿವಿಧ ಸಂಘಟನೆಗಳಲ್ಲಿ ತೊಡಗಿಕೊಂಡಿದ್ದ ಸಮಾಜಸೇವಕ ಪಿ.ಜಯಾನಂದ ಬಂಟ್ರಿಯಾಲ್ ಅವರಿಗೆ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಸಾರ್ವಜನಿಕ ನುಡಿ ನಮನ ಕಾರ್ಯಕ್ರಮ ಸೆ.10ರಂದು ಸಂಜೆ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ನಡೆಯಿತು.



ಕೊಟ್ಟ ಜವಾಬ್ದಾರಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ;
ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್ರವರು ಮಾತನಾಡಿ, ಜಯಾನಂದ ಬಂಟ್ರಿಯಾಲ್ ಅವರಿಗೆ ದೈಹಿಕ ನ್ಯೂನ್ಯತೆಯಿದ್ದರೂ ಅದನ್ನು ತೋರಿಸದೆ ತನಗೆ ಕೊಟ್ಟ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಗಾಂಧಿಮೈದಾನದಲ್ಲಿ ವೇದಿಕೆ ನಿರ್ಮಾಣ, ಗಾಂಧಿ ಪ್ರತಿಮೆ ಸ್ಥಾಪನೆ ಹಿಂದೆ ಜಯಾನಂದ ಬಂಟ್ರಿಯಾಲ್ ಅವರ ಶ್ರಮವಿದೆ. 84 ವರ್ಷದಲ್ಲಿ ಮಾಡಬೇಕಾದ ಕೆಲಸವನ್ನೆಲ್ಲಾ ೫೪ ವರ್ಷದಲ್ಲಿ ಮಾಡಿ ಮುಗಿಸಿ ಸಣ್ಣ ವಯಸ್ಸಿನಲ್ಲೇ ಅಗಲಿದ್ದಾರೆ. ಅವರ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಪರಮಾತ್ಮನು ಕರುಣಿಸಲಿ ಎಂದರು.
ಪುಣ್ಯಾತ್ಮರು ಎನಿಸಿಕೊಂಡಿದ್ದಾರೆ;
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡಬ ತಾಲೂಕು ಯೋಜನಾಧಿಕಾರಿ ಪ್ರಕಾಶ್ಕುಮಾರ್ ಮಾತನಾಡಿ, ಶ್ರೀ ಕ್ಷೇತ್ರದ ಮೇಲೆ ಅಪಾರ ಭಕ್ತಿ ಹೊಂದಿದ್ದರು. ಗ್ರಾಮಾಭಿವೃದ್ಧಿ ಯೋಜನೆಯ ಯಾವುದೇ ಕಾರ್ಯಕ್ರಮವಿದ್ದರೂ ತನ್ನ ಮನೆಯ ಕಾರ್ಯಕ್ರಮದಂತೆ ನಿರ್ವಹಿಸುತ್ತಿದ್ದರು. ಅವರು ಬದುಕಿದ ರೀತಿಯಿಂದ ಪುಣ್ಯಾತ್ಮರು ಎನಿಸಿಕೊಂಡಿದ್ದಾರೆ. ಅನಾರೋಗ್ಯ ಲೆಕ್ಕಿಸದೆ ನೆಲ್ಯಾಡಿಯಲ್ಲಿ ನಡೆದ ಮದ್ಯವರ್ಜನ ಶಿಬಿರದಲ್ಲಿ ಸಕ್ರೀಯವಾಗಿ ತೊಡಗಿಕೊಂಡಿದ್ದರು ಎಂದು ನೆನಪಿಸಿಕೊಂಡರು.
ಜೀವನವನ್ನು ಸಮಾಜಕ್ಕೆ ಮುಡಿಪಾಗಿಟ್ಟಿದ್ದರು;
ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆ ಸಂಚಾಲಕ ಡಾ.ವರ್ಗೀಸ್ ಕೈಪನಡ್ಕ ಮಾತನಾಡಿ, ಜಯಾನಂದ ಬಂಟ್ರಿಯಾಲ್ ಅವರು ಅತ್ಯಂತ ಆತ್ಮೀಯ ಸ್ನೇಹಿತರಲ್ಲಿ ಒಬ್ಬರಾಗಿದ್ದರು. ಸರಳ ವ್ಯಕ್ತಿತ್ವ, ಸಮರ್ಪಣಾ ಭಾವ, ನಿಷ್ಠಾವಂತ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದರು. ತನ್ನ ಜೀವನವನ್ನೇ ಸಮಾಜಕ್ಕೆ ಮುಡಿಪಾಗಿಟ್ಟಿದ್ದರು. ಬೆಥನಿ ವಿದ್ಯಾಸಂಸ್ಥೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು ಎಂದು ನೆನಪಿಸಿಕೊಂಡರು.
ಸಮಾಜಕ್ಕೆ ನಷ್ಟ;
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ತಾಲೂಕು ಸ್ಥಾಪಕಾಧ್ಯಕ್ಷ ಮಹೇಶ್ ಸವಣೂರು ಮಾತನಾಡಿ, ಜಯಾನಂದ ಬಂಟ್ರಿಯಾಲ್ ಜೊತೆ 12ವರ್ಷಗಳ ಒಡನಾಟವಿದೆ. ಉತ್ತಮ ಸ್ನೇಹಿತರೊಬ್ಬರನ್ನು ಕಳೆದುಕೊಂಡಿದ್ದೇನೆ. ಜನಜಾಗೃತಿ ವೇದಿಕೆ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ತೊಡಗಿಕೊಂಡಿದ್ದರು. 55 ವರ್ಷದಲ್ಲೇ 100 ವರ್ಷದ ಸಾಧನೆ ಮಾಡಿ ಆದರ್ಶವಾಗಿ ಬದುಕಿದ್ದಾರೆ. ಅವರ ಅಗಲುವಿಕೆ ಸಮಾಜಕ್ಕೆ ನಷ್ಟವಾಗಿದೆ ಎಂದರು.
ಕಟ್ಟಕಡೆಯ ವ್ಯಕ್ತಿಯ ನೋವಿಗೂ ಸ್ಪಂದನೆ;
ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು ಅವರು ಮಾತನಾಡಿ, ಜಯಾನಂದ ಬಂಟ್ರಿಯಾಲ್ ಅವರು ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವಿಗೆ ಸ್ಪಂದಿಸುತ್ತಿದ್ದರು. ನೆಲ್ಯಾಡಿಯಲ್ಲಿ ನಡೆದ ಮದ್ಯವರ್ಜನ ಶಿಬಿರಕ್ಕೆ ರಾಜ್ಯದಲ್ಲೇ ಮೊದಲ ಬಾರಿಗೆ ಹೊರೆಕಾಣಿಕೆ ಸಮರ್ಪಣೆ ಆಯೋಜಿಸಿ ಯಶಸ್ವಿಯಾಗಿದ್ದರು. ಅವರು ಇನ್ನೊಮ್ಮೆ ಜನ್ಮ ತಾಳಿ ಬರಲಿ ಎಂದರು.
ಮೆರವಣಿಗೆಗಳ ಯಶಸ್ವಿ ನಿರ್ವಹಣೆ;
ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆ ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ಟಿ.ಮಾತನಾಡಿ, ನೆಲ್ಯಾಡಿಯಲ್ಲಿ ನಡೆಯುವ ಯಾವುದೇ ಕಾರ್ಯಕ್ರಮವಿದ್ದರೂ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಮೆರವಣಿಗೆಯ ಜವಾಬ್ದಾರಿ ವಹಿಸಿಕೊಂಡು ಯಶಸ್ವಿಯಾಗಿ ನಿರ್ವಹಣೆ ಮಾಡಿ ಮೆರವಣಿಗೆ ರಾಜ ಎಂದೆನಿಸಿಕೊಂಡಿದ್ದರು. ಜೇಸಿ ಸಂಘಟನೆ ಮೂಲಕ ಹಲವು ನಾಯಕರನ್ನು ನಿರ್ಮಾಣ ಮಾಡಿದ್ದಾರೆ. ಅವರನ್ನು ದೇವರು ತನ್ನ ಸೇವೆಗೆ ಕರೆಸಿಕೊಂಡಿದ್ದಾರೆ ಎಂದರು.
ವರ್ತಕರ ಸಮಸ್ಯೆಗೆ ಸದಾ ಸ್ಪಂದನೆ;
ನೆಲ್ಯಾಡಿ ವರ್ತಕ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್.ಮಾತನಾಡಿ, ಜಯಾನಂದ ಬಂಟ್ರಿಯಾಲ್ ಅವರು ಗ್ರಾ.ಪಂ.ಅಧ್ಯಕ್ಷನಾಗಿದ್ದ ವೇಳೆ ವರ್ತಕರ ಸಮಸ್ಯೆಗೆ ಸದಾ ಸ್ಪಂದನೆ ನೀಡಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಅವರು ಸೇವೆ ಮಾಡಿದ್ದಾರೆ. ಅವರು ನೇತೃತ್ವ ವಹಿಸಿಕೊಂಡು ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಮಹಾದ್ವಾರ ಹಾಗೂ ಗಾಂಧಿಮೈದಾನದಲ್ಲಿ ಗಾಂಧಿಪ್ರತಿಮೆ ನಿರ್ಮಾಣ ಮಾಡಿರುವುದು ಸದಾ ನೆನಪಿನಲ್ಲಿ ಉಳಿಯುವಂತದ್ದು ಎಂದರು.
ಬಡವರ ನೋವಿಗೆ ಸದಾ ಸ್ಪಂದನೆ;
ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಉಷಾ ಅಂಚನ್ ಅವರು ಮಾತನಾಡಿ, ಜಯಾನಂದ ಬಂಟ್ರಿಯಾಲ್ ಅವರು ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷರಾಗಿದ್ದ ವೇಳೆ ನಾನು ತಾ.ಪಂ.ಸದಸ್ಯೆಯಾಗಿದೆ. ಯಾವುದೇ ಕೆಲಸ ಮಾಡಬೇಕಾದರೂ ವಿಮರ್ಶೆ ಮಾಡಿಕೊಳ್ಳುತ್ತಿದ್ದೆವು. ಬಡವರ ನೋವಿಗೆ ಸದಾ ಸ್ಪಂದಿಸುವ ಗುಣ ಜಯಾನಂದ ಬಂಟ್ರಿಯಾಲ್ ಅವರಲ್ಲಿತ್ತು ಎಂದರು.
ತನ್ನ ಆರೋಗ್ಯದ ಬಗ್ಗೆ ಕಾಳಜಿ ಇರಲಿಲ್ಲ;
ನೆಲ್ಯಾಡಿ ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇಸ್ಮಾಯಿಲ್ ನೆಲ್ಯಾಡಿ ಮಾತನಾಡಿ, ಜಯಾನಂದ ಬಂಟ್ರಿಯಾಲ್ ಅವರು ವಿವಿಧ ಸಂಘಟನೆಗಳಲ್ಲಿ ತೊಡಗಿಕೊಂಡು ಸಮಾಜಕ್ಕಾಗಿ ಸದಾ ದುಡಿಯುತ್ತಿದ್ದರು. ಆದರೆ ತನ್ನ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿರಲಿಲ್ಲ. ಈಗ ಅವರು ನಮ್ಮ ನಡುವೆ ಇಲ್ಲದಿದ್ದರೂ ಅವರ ಆದರ್ಶಗಳು ಜೀವಂತವಾಗಿವೆ ಎಂದರು.
ತನ್ನ ಜೀವನವನ್ನು ಊರಿಗಾಗಿ ಮುಡಿಪಾಗಿಟ್ಟಿದ್ದರು;
ನೆಲ್ಯಾಡಿ ಎಲೈಟ್ ರಬ್ಬರ್ ಇಂಡಸ್ಟ್ರೀಸ್ ಮಾಲಕ ಶಾಜಿ ಯು.ವರ್ಗೀಸ್ ಮಾತನಾಡಿ, ಹುಟ್ಟು-ಸಾವಿನ ನಡುವೆ ನಾವು ಊರಿಗೆ ಏನೂ ಮಾಡಿದ್ದೇವೆ ಎಂಬುದು ಮುಖ್ಯವಾಗಿದೆ. ಜಯಾನಂದ ಬಂಟ್ರಿಯಾಲ್ ಅವರು ನನ್ನ ತಂದೆಗೆ ಆತ್ಮೀಯರಾಗಿದ್ದರು. ವಿದ್ಯಾರ್ಥಿಯಾಗಿದ್ದಾಗಲೇ ಅವರಲ್ಲಿ ಒಳ್ಳೆಯ ಪ್ರತಿಭೆ ಇತ್ತು. ತನ್ನ ಜೀವನವನ್ನೇ ಊರಿಗಾಗಿ ಮುಡಿಪಾಗಿಟ್ಟಿದ್ದರು. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಎಲ್ಲಾ ಕೆಲಸ ಮಾಡುತ್ತಿದ್ದರು. ಅವರ ಹೆಸರು ಶಾಶ್ವತವಾಗುವ ನಿಟ್ಟಿನಲ್ಲಿ ಯೋಜನೆ ಹಾಕಿಕೊಳ್ಳಬೇಕು ಎಂದರು.
ಅಪ್ಪೆಜಕ್ಕೆಲ್ ಕುಟುಂಬದ ಹಿರಿಯಣ್ಣನಂತೆ ಇದ್ದರು;
ಕಡಬ ಉಪತಹಶೀಲ್ದಾರ್ ಗೊಪಾಲ ಅವರು ಮಾತನಾಡಿ, ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಸಹಿತ ಎಲ್ಲಾ ರಂಗದಲ್ಲೂ ಜಯಾನಂದ ಬಂಟ್ರಿಯಾಲ್ ತೊಡಗಿಕೊಂಡಿದ್ದರು. ತನ್ನ ಸಾಧನೆಯ ಮೂಲಕ ಆದರ್ಶರಾಗಿದ್ದಾರೆ. ಅವರ ಹಾದಿಯಲ್ಲಿ ನಾವು ಸಾಗುವ. ನಮ್ಮ ಅಪ್ಪಜಕ್ಕೆಲ್ ಕುಟುಂಬದ ಹಿರಿಯಣ್ಣನಂತೆ ಇದ್ದರು. ಅವರ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ಕರುಣಿಸಲಿ ಎಂದರು.
ಕಡಬ ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಶಿವಪ್ರಸಾದ್ ಮೈಲೇರಿ, ರೆ.ಫಾ.ಜಿಜನ್, ನೆಲ್ಯಾಡಿ ಗೆಳೆಯರ ಬಳಗದ ಅಧ್ಯಕ್ಷ ರತ್ನಾಕರ ಶೆಟ್ಟಿ ಕೊಲ್ಯೊಟ್ಟು, ನೆಲ್ಯಾಡಿ ವಲಯ ಬಂಟರ ಸಂಘದ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಶ್ರೀಮಾತಾ, ನೆಲ್ಯಾಡಿ ಆಟೋ ರಿಕ್ಷಾ ಚಾಲಕ-ಮಾಲಕರ ಸಂಘದ ಮಾಜಿ ಅಧ್ಯಕ್ಷ ರವಿಪ್ರಸಾದ್ ಗುತ್ತಿನಮನೆ, ನೆಲ್ಯಾಡಿ ಜೆಸಿಐ ಅಧ್ಯಕ್ಷೆ ಪ್ರವೀಣಿ ಶೆಟ್ಟಿ, ಸೀನಿಯರ್ ಚೇಂಬರ್ ನೆಲ್ಯಾಡಿ ಲೀಜನ್ ಅಧ್ಯಕ್ಷ ಉಲಹನ್ನನ್, ನಿವೃತ್ತ ಶಿಕ್ಷಕ ವೆಂಕಟ್ರಮಣ ಆರ್., ಶೌರ್ಯ ವಿಪತ್ತು ನಿರ್ವಹಣಾ ಘಟಕದ ರಮೇಶ ಬಾಣಜಾಲು ಅವರು ಜಯಾನಂದ ಬಂಟ್ರಿಯಾಲ್ ಅವರ ಗುಣಗಾನ ಮಾಡಿ ನುಡಿನಮನ ಸಲ್ಲಿಸಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ತಾಲೂಕು ಅಧ್ಯಕ್ಷ ಇಂದುಶೇಖರ ಶೆಟ್ಟಿ, ಪ್ರಮುಖರಾದ ತುಕ್ರಪ್ಪ ಶೆಟ್ಟಿ ನೂಜೆ, ಕರುಣಾಕರ ಗೋಗಟೆ, ನಾರಾಯಣ ಎನ್.ಬಲ್ಯ, ಎಲಿಯಾಸ್ ಎಂ.ಕೆ., ಸೆಬಾಸ್ಟಿಯನ್ ಪಿ.ಜೆ., ಸಹಿತ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆರಂಭದಲ್ಲಿ 1 ನಿಮಿಷ ಮೌನಾಚರಣೆ ಮಾಡಿ ಪಿ.ಜಯಾನಂದ ಬಂಟ್ರಿಯಾಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಉಪನ್ಯಾಸಕ ವಿಶ್ವನಾಥ ಶೆಟ್ಟಿ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಸಾರ್ವಜನಿಕ ನುಡಿನಮನ ಕಾರ್ಯಕ್ರಮದ ಸಲುವಾಗಿ ಪಿ.ಜಯಾನಂದ ಬಂಟ್ರಿಯಾಲ್ ಅವರ ಭಾವಚಿತ್ರ ಹಾಗೂ ಸೇವೆಯನ್ನು ನೆನಪಿಸುವ ನುಡಿನಮನ ಪತ್ರವನ್ನು ಈ ಸಂದರ್ಭದಲ್ಲಿ ಜಯಾನಂದ ಬಂಟ್ರಿಯಾಲ್ ಅವರ ಪತ್ನಿ ಸುಚಿತ್ರಾ ಬಂಟ್ರಿಯಾಲ್ ಹಾಗೂ ಪುತ್ರ ವಿನ್ಯಾಸ್ ಬಂಟ್ರಿಯಾಲ್ ಅವರಿಗೆ ಹಸ್ತಾಂತರ ಮಾಡಲಾಯಿತು. ನೆಲ್ಯಾಡಿ ವರ್ತಕ ಸಂಘದ ಕಾರ್ಯದರ್ಶಿ ಪ್ರಶಾಂತ್ ಅವರು ನುಡಿನಮನ ಪತ್ರ ವಾಚಿಸಿದರು.










