ಶಾರದಾ ಭಜನಾ ಮಂದಿರ, ಪುತ್ತೂರು, ಮೊ: 9448548426

ಸುಮಾರು ೭೫-೮೦ ವರ್ಷದ ಹಿಂದೆ ಪುತ್ತೂರಿಗೆ ಒಂದು ವಿಚಿತ್ರ ರೀತಿಯ ಸಂಕಟವೊಂದು ಬಂದಿತು. ಆ ಕಾಲಕ್ಕೆ ಅಮ್ಮ ಮಹಾಮಾರಿ ದೊಡ್ಡ ಕಾಯಿಲೆ ಎಂಬ ಅಂಟುರೋಗ ಪುತ್ತೂರಿನ ಜನತೆಗೆ ಸಂಕಟ ಒದಗಿತ್ತು. ಜನರು ಕಂಗಾಲಾಗಿ ದಿಕ್ಕು ಕಾಣದ ಸ್ಥಿತಿ ಬಂದಿತು. ಊರ ಒಡೆಯ ಮಹಾಲಿಂಗೇಶ್ವರನ ಮೊರೆ ಹೊಕ್ಕರು. ಅಷ್ಟರಲ್ಲಿ ಆ ರೋಗವು ಮನೆ ಮನೆಗಳಿಗೆ ಹರಡಿತ್ತು. ರೋಗಳನ್ನೆಲ್ಲ ಒಂದೇ ಕಡೆ ಸ್ಥಳಾಂತರಿಸಿ ಸುಶ್ರೂಷೆ ನೀಡಲಾಯಿತು. ಮನೆ ಮನೆಯ ಸಂಪರ್ಕ ಕಡಿದು ಹೋಯಿತು. ಆ ಸಂದರ್ಭದಲ್ಲಿ ಈ ಕಾಯಿಲೆ ಅಮ್ಮನಿಗೆ ಸಂಬಂಧಿಸಿದ ಕಾಯಿಲೆ ಯಾದುದರಿಂದ ಬಲ್ನಾಡು ಉಳ್ಳಾಲ್ತಿ ಅಮ್ಮನಲ್ಲಿಗೆ ಹೋಗೋಣ ಎಂದು ಭಕ್ತಾಭಿಮಾನಿಗಳ ತಂಡವೊಂದು ಸುಬ್ರಾಯ ಕಲ್ಲೂರಾಯ, ಮಂಜುನಾಥ ಆಚಾರ್ಯರ ನೇತೃತ್ವದಲ್ಲಿ ಬಲ್ನಾಡಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಸಂದರ್ಭ (ಮಕರ ಸಂಕ್ರಾತಿಯ ದಿನ) ಬಲ್ನಾಡಿನಲ್ಲಿ ಅಭಯವಾಯಿತಂತೆ. ದೇವಿ ಭಜನೆಯೊಂದೇ ನೆಮ್ಮದಿಯ ಹಾದಿ ಎಂದು, ಆ ಕಾರಣ, ಪುತ್ತೂರಲ್ಲಿ ಶೃಂಗೇರಿ ಶಾರದೆಯ ಫೋಟೋದೊಂದಿಗೆ ಮಹಾಲಿಂಗೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಮನೆ, ಮನೆಗೆ ನಗರ ಭಜನೆಯ ಮೂಲಕ ತೆರಳಿ ರೋಗಗ್ರಸ್ಥರಿಗೆ ಸಾಂತ್ವನ ಹೇಳಿ, ಜನರನ್ನು ಒಟ್ಟುಗೂಡಿಸುವ ಕೈಂಕರ್ಯಗಳು ಉತ್ತಮ ರೀತಿಯಲ್ಲಿ ಪರಿಣಾಮಬೀರಿತು. ಇದೇ ಭಕ್ತಾಭಿಮಾನಿಗಳ ತಂಡ ಎ. ಸುಬ್ರಾಯ ಕಲ್ಲೂರಾಯರ ನೇತೃತ್ವದಲ್ಲೇ ಶಾರದಾ ಭಜನಾ ಮಂದಿರ ಎಂದು ಈಗಿನ (ದೇವಸ್ಥಾನದ ವಠಾರ ಶಾಲೆಯಲ್ಲಿ) ಸ್ಥಾಪನೆಯಾಯಿತು.

ವಾರಕ್ಕೊಂದು ಶನಿವಾರ ಭಜನೆ, ನಗರ ಭಜನೆ, ಮಕರ ಸಂಕ್ರಾಂತಿ ದಿನ ಬಲ್ನಾಡಿಗೆ ಭಜನೆಯಲ್ಲಿ ಹೋಗಿ ಬರುವುದು, ಏಕಾಹ ಭಜನೆ, ನವರಾತ್ರಿ ಶಾರದೋತ್ಸವಗಳು ನಿರಂತರ ನಡೆಯುತ್ತಾ ಬಂದವು. ಸುಬ್ರಾಯ ಮಯ್ಯ ಅರ್ಚಕರಾಗಿ ದೀರ್ಘಕಾಲ ಸೇವೆ ಸಲ್ಲಿಸಿದರು.
ಆಗಸ್ಟ್ ೩೧, ೧೯೮೪ರಂದು ವೇದಮೂರ್ತಿ ಕೆಮ್ಮಿಂಜೆ ಶ್ರೀ ಕೇಶವ ತಂತ್ರಿಗಳು ಸಕಲ ಪೂಜಾ ವಿಧಿವಿಧಾನದೊಂದಿಗೆ ಶ್ರೀ ಶಾರದಾ ಮಾತೆಯ ನವ ಕಟ್ಟಡದ ಪ್ರವೇಶ ಉತ್ಸವ ನೆರವೇರಿಸಿದರು. ೧೯೮೪ರಿಂದ ೧೯೮೫ರ ವರೆಗೆ ಮುಳಿಯ ಶ್ಯಾಮ ಭಟ್ ಅಧ್ಯಕ್ಷರಾಗಿಯೂ ಶೇಷಪ್ಪ ಕಿನ್ನಿಮಜಲು ಕಾರ್ಯದರ್ಶಿಗಳಾಗಿಯೂ ಸೇವೆ ಸಲ್ಲಿಸಿದ್ದರು.
ಪ್ರಸ್ತುತ ೨೦೧೦ರಿಂದ ಗೌರವಾಧ್ಯಕ್ಷ-ಬಿ.ಜೆ. ಸುವರ್ಣ, ಅಧ್ಯಕ್ಷ-ಕೆ. ಸಾಯಿರಾಮ ರಾವ್, ಕಾರ್ಯದರ್ಶಿ-ಕೆ. ಜಯಂತ ಉರ್ಲಾಂಡಿ, ಕೋಶಾಧಿಕಾರಿ-ಕೆ. ರಮಾನಂದ ರಾವ್.