ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ

0

82.72 ಲಕ್ಷ ರೂ. ಲಾಭ: ಶೇ.18 ಡಿವಿಡೆಂಟ್ ಘೋಷಣೆ
ಉಪ್ಪಿನಂಗಡಿ: ಮೂರ್ತೆದಾರರ ಸೇವಾ ಸಹಕಾರ ಸಂಘ ನಿಯಮಿತ ಉಪ್ಪಿನಂಗಡಿ 2025-26ನೇ ವರದಿ ಸಾಲಿನಲ್ಲಿ 277.67 ಕೋ.ರೂ. ವಾರ್ಷಿಕ ವ್ಯವಹಾರ ನಡೆಸಿದ್ದು, 82.72 ಲಕ್ಷ ಲಾಭದೊಂದಿಗೆ ಜಿಲ್ಲೆಯ ಪ್ರತಿಷ್ಠಿತ ಸಂಘವಾಗಿ ಬೆಳೆದು ನಿಂತಿದೆ. ಬಂದ ಲಾಭಾಂಶದಲ್ಲಿ ಸದಸ್ಯರಿಗೆ ಶೇ.18 ಡಿವಿಡೆಂಟ್ ನೀಡಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಅಜಿತ್ ಪಾಲೇರಿ ಘೋಷಿಸಿದರು.ಇಲ್ಲಿನ ಎಚ್.ಎಂ. ಅಡಿಟೋರಿಯಂನಲ್ಲಿ ನಡೆದ ಸಂಘದ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 1990-91 ನೇ ಹಣಕಾಸು ವರ್ಷದಲ್ಲಿ ಆರಂಭವಾದ ನಮ್ಮ ಸಂಸ್ಥೆಯು 35 ವರ್ಷಗಳಲ್ಲಿ ಸಾರ್ಥಕ ಸೇವೆಯನ್ನು ಸಲ್ಲಿಸಿ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. 2025-26ನೇ ಸಾಲಿನ ಅಂತ್ಯಕ್ಕೆ 7155 ಮಂದಿ ಗ್ರಾಹಕರನ್ನು ಹೊಂದಿದ್ದು, 25.80 ಲಕ್ಷ ಪಾಲು ಬಂಡವಾಳ, 36.85 ಕೋ.ರೂ. ಠೇವಣಿಯನ್ನು ಹೊಂದಿದೆ. 40.44 ಕೋ.ರೂ. ಹೊರಬಾಕಿ ಸಾಲ ಇದೆ. 43.23 ಕೋ.ರೂ. ದುಡಿಯುವ ಬಂಡವಾಳವನ್ನು ಹೊಂದಿದೆ ಎಂದು ತಿಳಿಸಿದರು.

ಸಂಘವು ಪುತ್ತೂರು ತಾಲೂಕಿನ ಉಪ್ಪಿನಂಗಡಿ, ಬಜತ್ತೂರು, ಹಿರೇಬಂಡಾಡಿ, ಕಡಬ ತಾಲೂಕಿನ ಗೋಳಿತೊಟ್ಟು, ಆಲಂತಾಯ, ನೆಲ್ಯಾಡಿ, ಕೌಕ್ರಾಡಿ, ಇಚ್ಲಂಪಾಡಿ, ಶಿರಾಡಿ, ಸಿರಿಬಾಗಿಲು, ಕೊಣಾಜೆ ಮತ್ತು ಕೊಂಬಾರು ಇತ್ಯಾದಿ 12 ಕಂದಾಯ ಗ್ರಾಮಗಳನ್ನು ಒಳಗೊಂಡಿದೆ. ಉಪ್ಪಿನಂಗಡಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಸಂಘವು ನೆಲ್ಯಾಡಿ, ಹಿರೇಬಂಡಾಡಿ, ಉದನೆ, ಕೊಕ್ಕಡದಲ್ಲಿ ಶಾಖೆಗಳನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಸದಸ್ಯರಿಗೆ ಅಗತ್ಯವಿರುವ ಹೊಸ ಸೇವೆಗಳನ್ನು ಆರಂಭಿಸುವುದು. ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು, ಸಂಘದ ವ್ಯವಹಾರವನ್ನು ವಿಸ್ತರಿಸುವುದು ಮತ್ತು ಸದಸ್ಯರ ಆರ್ಥಿಕ ಪ್ರಗತಿಗೆ ಪೂರಕವಾದ ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.

ಸಂಘದ ಈ ಅಭಿವೃದ್ಧಿಗೆ ಸದಸ್ಯರು, ಠೇವಣಿದಾರರು, ಗ್ರಾಹಕರು, ಹಾಗೂ ಆಡಳಿತ ಮಂಡಳಿಯವರ ಸಹಕಾರ, ಸಿಬ್ಬಂದಿ ವರ್ಗದವರ ಸೇವೆಯು ಕಾರಣವಾಗಿದ್ದು, ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರಲ್ಲದೆ, ನಮ್ಮೆಲ್ಲರ ಒಗ್ಗಟ್ಟಿನಿಂದ, ಪರಸ್ಪರ ವಿಶ್ವಾಸದಿಂದ ಮತ್ತು ಸಹಕಾರ ಮನೋಭಾವದಿಂದ ನಮ್ಮ ಸಂಘವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯೋಣ ಎಂದರು.



ಎಸೆಸ್ಸೆಲ್ಸಿಯಿಂದ ಸ್ನಾತಕೋತ್ತರ ಪದವಿವರೆಗಿನ ಸಂಘದ ಸದಸ್ಯರ ಪ್ರತಿಭಾನ್ವಿತ 15 ಮಕ್ಕಳಿಗೆ ಈ ಸಂದರ್ಭ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾಪಟು ಕಾರ್ತಿಕ್ ಅಂಬರ್ಜೆಯವರನ್ನು ಸನ್ಮಾನಿಸಲಾಯಿತು. ಹಿರಿಯ ಮೂರ್ತೆದಾರರಾದ ಸೂರಪ್ಪ ಪೂಜಾರಿ ನಾಗನಕೋಡಿ, ವಾಸು ಕೆ. ಆರಮಪಾದೆ, ಪ್ರಕಾಶನ್ ಕೆ.ಕೆ. ಸಂಪ್ಯಾಡಿಯವರನ್ನು ಸನ್ಮಾನಿಸಲಾಯಿತು.55 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಸಂಘದ ನೂತನ ಯೋಜನೆಯಾದ ಸ್ವರ್ಣಾಭರಣ ಖರೀದಿ ಸಾಲ' ಮತ್ತು ವಿಶೇಷ ಉಳಿತಾಯ ಯೋಜನೆಯಾದ ಕಲ್ಪವೃಕ್ಷ ಖಾತೆ’ಯನ್ನು ಸಂಘದ ಮಾಜಿ ಅಧ್ಯಕ್ಷರಾದ ವರದರಾಜ್ ಎಂ., ಶೇಖರ ಪೂಜಾರಿ ಶಿಬಾರ್ಲ, ದೇವಪ್ಪ ಪೂಜಾರಿಯವರಿಂದ ಬಿಡುಗಡೆಗೊಳಿಸಲಾಯಿತು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಶೀನಪ್ಪ ಪೂಜಾರಿ ಹೂವಿನಮಜಲು, ನಿರ್ದೇಶಕರಾದ ಡಾ. ರಾಜಾರಾಮ ಕೆ.ಬಿ., ಮಾಧವ ಪೂಜಾರಿ, ಶಶಿಧರ ಪಠೇರಿ, ಚೆನ್ನಪ್ಪ ಪೂಜಾರಿ ಕೊಚ್ಚಿಲ, ಚಂದ್ರಶೇಖರ ಬಾಣಜಾಲು, ಚಂದ್ರಕಲಾ ಸದಾನಂದ ಡಿ.ಎಸ್., ಸುನೀತಾ ಸೋಮಸುಂದರ ಕೊಡಿಪಾನ ಉಪಸ್ಥಿತರಿದ್ದರು.ಸಂಘದ ಅಧ್ಯಕ್ಷ ಅಜಿತ್ ಪಾಲೇರಿ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೀಕಯ್ಯ ಜಿ. ವರದಿ ವಾಚಿಸಿದರು. ಶಾಖಾಧಿಕಾರಿ ಎಲ್ಯಣ್ಣ ಎಸ್. ವಂದಿಸಿದರು.

LEAVE A REPLY

Please enter your comment!
Please enter your name here