ಸಿರಿಕಡಮಜಲು ಕೃಷಿ ಕ್ಷೇತ್ರದಲ್ಲಿ ಕೃಷಿ-ಸಂಸ್ಕೃತಿ-ಪಲ್ಲಟ ಸಂವಾದ

0

ಕೃಷ್ಣ ಶೆಟ್ಟಿ ಕಡಬ ರವರಿಗೆ ಕಿಲ್ಲೆ ದೇಶಭಕ್ತಿ ಸಂಸ್ಮರಣಾ ಸನ್ಮಾನ

ಪುತ್ತೂರು: ‘ಕೃಷಿ – ಸಂಸ್ಕೃತಿ – ಪಲ್ಲಟ ಸಂವಾದ ಕಾರ್ಯಕ್ರಮ ಹಾಗೂ ಕಿಲ್ಲೆ ದೇಶಭಕ್ತಿ ಸಂಸ್ಮರಣಾ ಸನ್ಮಾನ ಸಮಾರಂಭವು ಸೆ. 16 ರಂದು ಸಿರಿಕಡಮಜಲು ಕೃಷಿ ಕ್ಷೇತ್ರದಲ್ಲಿ ಜರಗಿತು.

ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ವೈಜ್ಞಾನಿಕ ಕೃಷಿಕ, ತುಳುನಾಡ ಸಿರಿ ಕಡಮಜಲು ಸುಭಾಸ್ ರೈಯವರು  ‘ಕೃಷಿಯೂ ನಮ್ಮ ದೇಶದ ಒಂದು ಸಂಸ್ಕೃತಿ. ಆದರೆ ಕೃಷಿ ವ್ಯವಸ್ಥೆಗಳು ಪಲ್ಲಟವಾಗಿದೆ. ಕೃಷಿ ವಿಧಾನಗಳು ಪಲ್ಲಟವಾಗಿವೆ. ಸಂಸ್ಕೃತಿ ಪಲ್ಲಟವಾದಂತೆ ಕೃಷಿಯೂ ಪಲ್ಲಟವಾಗಿದೆ.  ತಂತ್ರಜ್ಞಾನವನ್ನು ಅಗತ್ಯಕ್ಕೆ ತಕ್ಕಂತೆ ಬಳಸಿ ಬೇಕಾದಲ್ಲಿ ಸಮರ್ಪಕವಾಗಿ ಬಳಸಿಕೊಳ್ಳುವುದೇ ನಮ್ಮ ಕೌಶಲ್ಯತೆಯಾಗಬೇಕು ಕೃಷಿ ಕೂಡಾ ಒಂದು ಉದ್ದಿಮೆ.  ಕೃಷಿಯಿಂದಲೂ ಉತ್ತಮ ಜೀವನ ಮಾಡಬಹುದಾಗಿದೆ’ ಎಂದರು.

ಕೃಷಿ ಸಂಸ್ಕೃತಿ ನಾಶವಾದರೆ ದೇಶ ಸಂಸ್ಕೃತಿಯೂ ವಿನಾಶದತ್ತ ಸಾಗುತ್ತದೆ. ಕೃಷಿಯಲ್ಲೂ ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಬೇಕು ಎಂದು ಮಕ್ಕಳಿಗೆ ಕರೆ ನೀಡಿದರು.ವಿದ್ಯಾರ್ಥಿಗಳಾದ ಕೃತಿಕಾ, ಶ್ರೀಜಾ, ಕಾರ್ತಿಕ್, ಯತನ್ ಕೃಷಿ ಸಂಸ್ಕೃತಿಯ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಸಾವಯವ ಕೃಷಿಯಿಂದಲೇ ತರಕಾರಿ ಕೃಷಿ ಬೆಳೆ ಬೆಳೆಯುವುದರಿಂದ ನಮ್ಮ ಆರೋಗ್ಯವನ್ನು ಚೆನ್ನಾಗಿ ಉಳಿಸಿಕೊಳ್ಳಬಹುದಾಗಿದೆ. ಹೈನುಗಾರಿಕೆ, ಮಲ್ಲಿಗೆ ಕೃಷಿ, ಜೇನು ಕೃಷಿಯಿಂದ ಹೇಗೆ ಕೃಷಿ ಲಾಭದಾಯಕವಾಗಿ ಮಾಡಬಹುದು ಎಂಬುದರ ಬಗ್ಗೆ  ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು‌. ಬಳಿಕ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ಜರಗಿತು.

ಕಿಲ್ಲೆ ದೇಶಭಕ್ತಿ ಸಂಸ್ಮರಣಾ ಸನ್ಮಾನ
ಸ್ವಾತಂತ್ರ್ಯ ಹೋರಾಟಗಾರ, ದೇಶಭಕ್ತ ಎನ್.ಎಸ್. ಕಿಲ್ಲೆ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ‘ಕಿಲ್ಲೆ ದೇಶಭಕ್ತಿ ಸಂಸ್ಮರಣಾ ಸನ್ಮಾನವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೃಷ್ಣ ಶೆಟ್ಟಿ ಕಡಬರವರಿಗೆ  ನೀಡಿ ಗೌರವಿಸಲಾಯಿತು.  ಸನ್ಮಾನ ಸ್ವೀಕರಿಸಿ ಮಾತನಾಡಿದ ಕೃಷ್ಣ ಶೆಟ್ಟಿ ಕಡಬ ರವರು ‘ಕೃಷಿಯಲ್ಲಿ ಪ್ರಾಮಾಣಿಕತೆ ಮತ್ತು ಶ್ರದ್ಧೆಯಿಂದ ಮಾಡಿದ್ದೇನೆ. ಕೃಷಿಯಿಂದಲೇ ಬದುಕಿನ ಸವಾಲುಗಳಿಗೆ ಉತ್ತರ ಕೊಡುವಲ್ಲಿ ನಾನು ಯಶಸ್ವಿಯಾಗಿದ್ಸೇನೆ. ದೇಶದ ಸಂಸ್ಕೃತಿ, ಸಂಸ್ಕಾರ ನಿಂತಿರುವುದು ಕೃಷಿಯಿಂದ. ಕೃಷಿ ಸಂಸ್ಕಾರವನ್ನೂ ಕೊಡುತ್ತದೆ. ಯಾವುದೇ ಹಂತಕ್ಕೆ ಏರಿದರೂ ಕೃಷಿ ಚಟುವಟಿಕೆ ಬಿಡಬಾರದು ಎಂದು ಮಕ್ಕಳಿಗೆ ಕರೆನೀಡಿದರು.

ಕಡಮಜಲು ದಂಪತಿಗೆ ಸನ್ಮಾನ
ನವೋದಯ ಪ್ರೌಢಶಾಲಾ ವತಿಯಿಂದ ಅದೇ ಶಾಲೆಯ ಹಿರಿಯ ವಿದ್ಯಾರ್ಥಿಯಾಗಿದ್ದು ‘ತುಳುನಾಡ ಸಿರಿ’ ಪ್ರಶಸ್ತಿಗೆ ಭಾಜನರಾದ ಕಡಮಜಲು ಸುಭಾಸ್ ರೈ ದಂಪತಿಗೆ ಗೌರವ ಸನ್ಮಾನ ನಡೆಸಲಾಯಿತು.ನವೋದಯ ಎಜ್ಯುಕೇಶನಲ್ ಸೊಸೈಟಿಯ ಅಧ್ಯಕ್ಷ  ಬಾಲಕೃಷ್ಣ ಭಟ್ ಘಾಟೆಯವರು ಮಾತನಾಡಿ ತಾನು ಮಂಡಲ ಪಂಚಾಯತ್ ಇರುವಾಗ ಮಾಡಿರುವ ಸಾಮಾಜಿಕ ಕಾರ್ಯಗಳ ಬಗ್ಗೆ   ಮೆಲುಕು ಹಾಕಿದರು.  ತಾನೂ ಕೃಷಿ ಕುಟುಂಬದಲ್ಲಿ ಬೆಳೆದು, ಸಾಮಾಜಿಕವಾಗಿ ಬೆಳೆದು, ನವೋದಯದಲ್ಲಿ ತೊಡಗಿಸಿಕೊಂಡ ಬಗೆ ಹೇಳಿದರು.

ಮುಖ್ಯ ಅತಿಥಿಯಾಗಿದ್ದ ದ.ಕ. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ ರವರು ಮಾತನಾಡಿ  ‘ಕೃಷಿಯಿಂದ ವಿಮುಖರಾಗುತ್ತಿರುವ ಸಂದರ್ಭದಲ್ಲಿ ಮಕ್ಕಳಿಗೆ ಕೃಷಿಯಲ್ಲಿ ಒಲವು ತೋರಿಸುವ ಕಾರ್ಯ ಮಾಡಿರುವ ಶಾಲೆಗೆ ಹಾಗೂ ಕಡಮಜಲು ಸುಭಾಸ್ ರೈಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ’ ಎಂದರು.

ನವೋದಯ ವಿದ್ಯಾಸಮಿತಿಯ ಕಾರ್ಯದರ್ಶಿ ಚಂದ್ರಹಾಸ ಮುರೂರು ರವರು ಮಾತನಾಡಿ ‘ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜೊತೆ ಜೀವನ ಕಲೆ ರೂಪಿತವಾಗಬೇಕು ಎಂಬ ಉದ್ದೇಶದಿಂದ ನವೋದಯ ಪ್ರೌಢಶಾಲೆಯಲ್ಲಿ ನಡೆಯುತ್ತಿರುವ ಕಾರ್ಯಚಟುವಟಿಕೆಗಳು ನಿದರ್ಶನವಾಗಿವೆ. ನಮ್ಮಲ್ಲಿ ಮಕ್ಕಳೇ ತರಕಾರಿ ಬೆಳೆದು ಅಕ್ಷರದಾಸೋಹ ಪದಾರ್ಥಕ್ಕೆ ತರಕಾರಿ ಬೆಳೆಯುತ್ತಿರುವುದು ಇತರ ಶಾಲೆಗಳಿಗೆ ಮಾದರಿಯಂತಿದೆ’ ಎಂದರು. 

ನವೋದಯ ಪ್ರೌಢಶಾಲೆಯ ಸಂಚಾಲಕ ಪುಷ್ಪರಾಜ್ ಶೆಟ್ಟಿ ಬೈರಮಜಲು, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಗಣೇಶ್ ರೈ, ಎನ್.ಎಸ್.  ಕಿಲ್ಲೆ ಪ್ರತಿಷ್ಟಾನದ ಕೋಶಾಧಿಕಾರಿ ಚಂದ್ರಹಾಸ ಬಲ್ಲಾಳ್, ನವೋದಯ ಪ್ರೌಢಶಾಲೆಯ ಶಿಕ್ಷಕಿ ಸುಮಂಗಲಾ, ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ, ಕರುಣಾಕರ ರೈ ಕೋರಂಗ ರವರು ಉಪಸ್ಥಿತರಿದ್ದರು.ನವೋದಯ ಪ್ರೌಢಶಾಲೆಯ ಮುಖ್ಯಗುರು ಪುಷ್ಪಾವತಿ ಎಸ್. ಸನ್ಮಾನಿತರ ಪತ್ರ ವಾಚಿಸಿದರು.  ಶಿಕ್ಷಕ ರಾಧಾಕೃಷ್ಣ ಕೋಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here