ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

0

ಪುತ್ತೂರು: “ಶಿಕ್ಷಕರು ಕೇವಲ ಪಾಠ ಹೇಳುವವರಲ್ಲ; ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿ, ಭವಿಷ್ಯ ರೂಪಿಸುವ ಶಿಲ್ಪಿಗಳು” ಎಂಬ ಸಂದೇಶವನ್ನು ಸಾರುವಂತೆ ಶ್ರೀ ರಾಮಕೃಷ್ಣ ಪ್ರೌಢಶಾಲೆ, ಪುತ್ತೂರಿನಲ್ಲಿ ಶಿಕ್ಷಕರ ದಿನಾಚರಣೆಯನ್ನು ಅತ್ಯಂತ ಸಡಗರ, ಸಂಭ್ರಮ ಹಾಗೂ ಗೌರವದಿಂದ ಆಚರಿಸಲಾಯಿತು.

ಲಿಯೋ ಶ್ರೀ ರಾಮಕೃಷ್ಣ ಹಾಗೂ ಇಂಟರಾಕ್ಟ್ ಕ್ಲಬ್ ಶ್ರೀ ರಾಮಕೃಷ್ಣ ಇವರ ಸಹಯೋಗದಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮವು ಶಿಕ್ಷಕರಿಗೆ ವಿದ್ಯಾರ್ಥಿಗಳು ಸಲ್ಲಿಸಿದ ಪ್ರೀತಿ, ಗೌರವ ಮತ್ತು ಕೃತಜ್ಞತೆಯ ಸುಂದರ ಅಭಿವ್ಯಕ್ತಿಯಾಗಿತ್ತು.

ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿಗಳು ಶುಭಾಶಯ ಪತ್ರಗಳನ್ನು ನೀಡಿ ಶಿಕ್ಷಕರನ್ನು ಆತ್ಮೀಯವಾಗಿ ಸ್ವಾಗತಿಸಿದರು. ನಂತರ ಶಿಕ್ಷಕರಿಗಾಗಿ ವಿವಿಧ ವಿನೂತನ ಹಾಗೂ ಮನರಂಜನಾತ್ಮಕ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಲೆಮನ್ ಇನ್ ದ ಸ್ಪೂನ್, ಸಂಗೀತ ಕುರ್ಚಿ, ಮೆಮೊರಿ ಟೆಸ್ಟ್, ಬಾಟಲಿಗೆ ನೀರು ತುಂಬಿಸುವ ಸ್ಪರ್ಧೆ ಸೇರಿದಂತೆ ಹಲವು ಆಟಗಳು ಶಿಕ್ಷಕರಲ್ಲಿ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿಸಿ, ನಗು-ಸಂತಸದ ವಾತಾವರಣವನ್ನು ಸೃಷ್ಟಿಸಿದವು.

ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕ ಹೇಮನಾಥ ಶೆಟ್ಟಿ ಕಾವು, ಶಾಲಾ ಮುಖ್ಯಗುರು ಗಾಯತ್ರಿ ಹಾಗೂ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ನಳಿನಾಕ್ಷಿ ಕೆ. ನಾಯಕ್ ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಿಕ್ಷಕರಿಗೆ ಗಣ್ಯರ ಸಮ್ಮುಖದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳು ಪ್ರೀತಿಯಿಂದ ಸಿದ್ಧಪಡಿಸಿದ ಸ್ಮರಣಿಕೆ ನೀಡಿ ಗೌರವಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು ಎಲ್ಲಾ ಶಿಕ್ಷಕರಿಗೆ ವಿಶೇಷ ಉಡುಗೊರೆ ನೀಡಿ ಗೌರವಿಸಿದ್ದು ಕಾರ್ಯಕ್ರಮದ ಮತ್ತೊಂದು ವಿಶೇಷ ಕ್ಷಣವಾಗಿತ್ತು.

ಈ ಸಂದರ್ಭದಲ್ಲಿ ಶಾಲಾ ಸಂಚಾಲಕ ಹೇಮನಾಥ ಶೆಟ್ಟಿ ಕಾವು ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಶಿಕ್ಷಕರ ಮಹತ್ವ ಹಾಗೂ ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರವನ್ನು ಸ್ಮರಿಸಿದರು.

LEAVE A REPLY

Please enter your comment!
Please enter your name here