ಕಕ್ಕೂರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಮಹಾಸಭೆ

0

1.18,883.47 ನಿವ್ವಳ ಲಾಭ | ಶೇ.10 ಡಿವಿಡೆಂಡ್ | ಪ್ರತೀ ಲೀ.ಗೆ 78 ಪೈಸೆ ಬೋನಸ್

ಪುತ್ತೂರು: ಬೆಟ್ಟಂಪಾಡಿ ಗ್ರಾಮದ ಕಕ್ಕೂರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಕಕ್ಕೂರು ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ ವಠಾರದಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಶ್ರೀದೇವಿ ಮಾತನಾಡಿ ಸಂಘವು ವರದಿ ವರ್ಷಾಂತ್ಯಕ್ಕೆ 105 ಸದಸ್ಯರನ್ನು ಹೊಂದಿದ್ದು ರೂ.52500 ಪಾಲುಬಂಡವಾಳ ಹೊಂದಿದೆ. ವರದಿ ವರ್ಷದಲ್ಲಿ 71,893.80 ಲೀ. ಹಾಲು ಖರೀದಿಸಿ 1859.80 ಲೀ. ಹಾಲು ಸ್ಥಳೀಯವಾಗಿ ಮಾರಾಟ ಮಾಡಲಾಗಿದೆ. ಹಾಲು ವ್ಯವಹಾರದಿಂದ ರೂ.2,75,393.44 ಹಾಗೂ ಪಶುಆಹಾರ, ಲವಣ ಮಿಶ್ರಣ, ಸಮೃದ್ಧಿ, ಸೈಲೇಜ್ ಮಾರಾಟದಿಂದ 50,117.03 ಆದಾಯ ಬಂದಿದ್ದು ಸಂಘವು ಒಟ್ಟು 1.18,883.47 ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.10 ಡಿವಿಡೆಂಡ್ ಹಾಗೂ ಹಾಲು ಉತ್ಪಾದಕರಿಗೆ ಪ್ರತೀ ಲೀ.ಗೆ 78 ಪೈಸೆ ಬೋನಸ್ ನೀಡಲಾಗುವುದು ಎಂದು ಹೇಳಿ ಸಂಘದ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡುವಂತೆ ವಿನಂತಿಸಿದರು.

ದ.ಕ.ಹಾಲು ಉತ್ಪಾದಕರ ಒಕ್ಕೂಟದ ವಿಸ್ತರಣಾಧಿಕಾರಿ ವಿದ್ಯಾ ಮಾತನಾಡಿ ವಾರ್ಷಿಕ ಲೆಕ್ಕಪತ್ರ ಹಾಗೂ ಅನುಪಾಲನಾ ವರದಿ ಮಂಡಿಸಿ ಮಾತನಾಡಿ ಸದಸ್ಯರು ಉತ್ತಮ ಗುಣಮಟ್ಟದ ಹಾಲು ಪೂರೈಕೆ ಮಾಡಿ. ಇದರಿಂದ ಫ್ಯಾಟ್ ಹೆಚ್ಚಾಗಿ ನಿಮಗೂ ಸಂಘಕ್ಕೂ ಲಾಭ ದೊರೆಯುತ್ತದೆ. ಜಾನುವಾರುಗಳಿಗೆ ನಂದಿನಿ ಪಶು ಆಹಾರವನ್ನೇ ನೀಡಿ. ಇದರಿಂದ ಹಾಲಿನ ಇಳುವರಿ ಹೆಚ್ಚಾಗುತ್ತದೆ. ಇದರಿಂದ ನಿಮ್ಮ ಸಂಘಕ್ಕೂ ಲಾಭ ದೊರೆಯುತ್ತದೆ. ಅಲ್ಲದೆ ಸೈಲೇಜ್, ಲವಣಮಿಶ್ರಣಗಳನ್ನು ಕೂಡ ಬಳಕೆ ಮಾಡಿ ಎಂದ ಅವರು ಒಕ್ಕೂಟದಿಂದ ಹೈನುಗಾರರಿಗೆ ಲಭ್ಯವಿರುವ ಮಿನಿಡೈರಿ ಯೋಜನೆ, ಹಟ್ಟಿ ತೊಳೆಯುವ ಯಂತ್ರ, ಹಾಲು ಕರೆಯುವ ಯಂತ್ರ, ರಬ್ಬರ್ ಮ್ಯಾಟ್‌ಗಳಿಗೆ ಸಿಗುವ ಸಹಾಯಧನಗಳ ಮಾಹಿತಿ ನೀಡಿ ಪ್ರಯೋಜನ ಪಡೆಯುವಂತೆ ಹೇಳಿದರು.

ಸಂಘದ ಸಲಹೆಗಾರರಾದ ಜಯಪ್ರಕಾಶ್ ರೈ ಚೆಲ್ಯಡ್ಕ ಮಾತನಾಡಿ ಸಂಘಕ್ಕೆ ಮೀಸಲಿಟ್ಟ ನಿವೇಶನ ಹಾಗೂ ಕಟ್ಟಡ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದರು. ಉಪಾಧ್ಯಕ್ಷೆ ರಜಿತಾ ಎಲ್., ನಿರ್ದೇಶಕರಾದ ಕುಸುಮಾವತಿ, ಲಲಿತಾ, ಸವಿತಾ, ಎಂ. ಗಿರಿಜಾ, ನವೀನ ಡಿ. ರೈ, ನಳಿನಿ ಟಿ., ಪ್ರೀತಿತಾ ರೈ, ಅನ್ನಪೂರ್ಣ, ರವಿಕಲಾ, ರಾಜೇಶ್ವರಿ, ಪ್ರೇಮಲತಾ ಜೆ. ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘದ ಕಾರ್ಯದರ್ಶಿ ಶಾರದಾ ಕೆ. ವಾರ್ಷಿಕ ವರದಿ ವಾಚಿಸಿ ಆಯವ್ಯಯ ಮಂಡಿಸಿದರು. ಕಟ್ಟಡ ನಿರ್ಮಾಣ ಸಮಿತಿ ಸಂಚಾಲಕ ಅಚ್ಯುತ ಭಟ್ ಕಕ್ಕೂರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
ನಿರ್ದೇಶಕಿ ರವಿಕಲಾ ಪ್ರಾರ್ಥಿಸಿ ಗಿರಿಜಾ ಎಂ. ಸ್ವಾಗತಿಸಿದರು. ನಳಿನಿ ವಂದಿಸಿದರು.ಸಹಾಯಕಿ ಸುಮಿತ್ರಾ ಕೆ. ಕಾರ್ಯಕ್ರಮ ನಿರೂಪಿಸಿದರು. ಸದಸ್ಯರಿಗೆ ಆಟೋಟ ಸ್ಪರ್ಧೆ ಏರ್ಪಡಿಸಲಾಗಿತ್ತು.

ಬಹುಮಾನ ವಿತರಣೆ

ವರದಿ ವರ್ಷದಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಕೆ ಮಾಡಿದ ರಮ್ಯಾ ಲಕ್ಷ್ಮಣ ನಾಯ್ಕ ಕೋಡಿರವರಿಗೆ ಪ್ರಥಮ, ಶ್ರೀದೇವಿ ಜಯಪ್ರಕಾಶ್ ರೈ ತೋಟದಮೂಲೆರವರಿಗೆ ದ್ವಿತೀಯ ಹಾಗೂ ಗಿರಿಜಾ ಐತ್ತಪ್ಪ ನಾಯ್ಕ ಕೋಡಿರವರಿಗೆ ತೃತೀಯ ಬಹುಮಾನ ನೀಡಲಾಯಿತು. ಹಾಲು ಪೂರೈಸಿದ ಎಲ್ಲಾ ಸದಸ್ಯರಿಗೂ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.

ಸಂಘವು ಪ್ರಾರಂಭವಾಗಿ ಎರಡು ವರ್ಷವಾಗಿದ್ದು ಸಂಘದ ಅಭಿವೃದ್ಧಿಯಾಗಬೇಕಿದೆ. ಸಂಘದಲ್ಲಿ ಕ್ಷೀರ ಸಂಜೀವಿನಿ ಯೋಜನೆ ಅನುಷ್ಠಾನಗೊಂಡಿದ್ದು ರೂ.46 ಸಾವಿರ ಬಡ್ಡಿರಹಿತ ಸಾಲ ಪಡೆದು ದನ ಖರೀದಿ ಮಾಡಬೇಕು. ಸಂಘದಲ್ಲಿ 16 ಸದಸ್ಯರು ಈಗಾಗಲೇ ದನ ಖರೀದಿ ಮಾಡಿ ಸಂಘಕ್ಕೆ ಹಾಲು ಪೂರೈಸುತ್ತಿದ್ದಾರೆ. ಒಕ್ಕೂಟ ಹಾಗೂ ಸರಕಾರದಿಂದ ಸಿಗುವ ಸವಲತ್ತುಗಳನ್ನು ಸದುಪಯೋಗಪಡಿಸಿ. ಗುಣಮಟ್ಟದ ಹಾಲನ್ನೇ ಪೂರೈಕೆ ಮಾಡುವ ಮೂಲಕ ಸಂಘದ ಬೆಳವಣಿಗೆಯಾಗಲಿ. ಶ್ರೀದೇವಿ ಜಯಪ್ರಕಾಶ್ ರೈ
ಅಧ್ಯಕ್ಷರು

LEAVE A REPLY

Please enter your comment!
Please enter your name here