







4.22 ಲಕ್ಷ ರೂ. ಲಾಭ: ಶೇ. 15 ಡಿವಿಡೆಂಡ್


ಉಪ್ಪಿನಂಗಡಿ: ಗೋಳಿತ್ತಡಿ ಹಾಲು ಉತ್ಪಾದಕರ ಸಹಕಾರ ಸಂಘವು 2025-26ನೇ ಸಾಲಿನಲ್ಲಿ 4, 22, 635.64 ರೂ. ನಿವ್ವಳ ಲಾಭ ಗಳಿಸಿದ್ದು, ಬಂದ ಲಾಭಾಂಶದಲ್ಲಿ ಸದಸ್ಯರಿಗೆ ಶೇ.15 ಡಿವಿಡೆಂಟ್ ನೀಡಲು ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಪೂವಪ್ಪ ಗೌಡ ಸಂಪ್ಯಾಡಿ ತಿಳಿಸಿದರು.




ಸಂಘದ ಆವರಣದಲ್ಲಿ ನಡೆದ ಸಂಘದ 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘವು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದು, ಸದಸ್ಯರು, ಒಕ್ಕೂಟದವರು, ಗ್ರಾಹಕರು, ಆಡಳಿತ ಮಂಡಳಿ ನಿರ್ದೇಶಕರ ಸಹಕಾರ ಹಾಗೂ ಸಿಬ್ಬಂದಿ ವರ್ಗದವರ ಸೇವಾ ಮನೋಭಾವದ ದುಡಿಮೆಯೇ ಕಾರಣವಾಗಿದೆ. ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ ಅವರು, ಸದಸ್ಯರು ಸಂಘಕ್ಕೆ ಗುಣಮಟ್ಟದ ಹಾಲನ್ನು ಪೂರೈಕೆ ಮಾಡುವ ಮೂಲಕ ಇನ್ನಷ್ಟು ಸಂಘದ ಅಭಿವೃದ್ಧಿಗೆ ಕಾರಣಕರ್ತರಾಗುವಂತೆ ತಿಳಿಸಿದರು.
ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಮಾತನಾಡಿ, ಒಕ್ಕೂಟದ ಯೋಜನೆಯ ಬಗ್ಗೆ ಮತ್ತು ರಾಸುಗಳಿಗೆ ವಿಮೆ ಯೋಜನೆ ಮಾಡಿಸುವ ಬಗ್ಗೆ, ಹೆಣ್ಣು ಕರುಗಳ ಇಂಜೆಕ್ಷನ್ ನೀಡುವ ಬಗ್ಗೆ, ಲವಣ ಮಿಶ್ರಣ, ಜಂತು ಹುಳ, ಸೈಲೇಜ್ ಪಶು ಆಹಾರ , ನಂದಿನಿ ಪಶು ಆಹಾರ, ಚರ್ಮ ಗಂಟು ರೋಗದ ನಿವಾರಣೆ ಬಗ್ಗೆ ಮಾಹಿತಿ ನೀಡಿದರು.

ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಕೆ ಮಾಡಿದ ರಾಘವೇಂದ್ರ ಬಾಂತೊಟ್ಟು (ಪ್ರಥಮ), ಬೆಳಿಯಪ್ಪ ಗೌಡ ಬುಡಳೂರು (ದ್ವಿತೀಯ), ಜೋಗಪ್ಪ ಗೌಡ ಬಾಂತೊಟ್ಟು (ತೃತೀಯ) ಇವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ಶ್ಯಾಮ್ ಭಟ್ ಬಿ., ಬೆಳಿಯಪ್ಪ ಗೌಡ, ಕೊರಗಪ್ಪ ಕೆ., ಅಬೂಬಕ್ಕರ್, ಪೂವಪ್ಪ ಕೆ., ಲೋಕಯ್ಯ ಗೌಡ ಸಂಪ್ಯಾಡಿ, ಪದ್ಮಯ್ಯ ಪೂಜಾರಿ, ಶ್ರೀಮತಿ ಪ್ರಭಾವತಿ ಕೆ., ಶ್ರೀಮತಿ ಶೀಲಾವತಿ ಕೆ., ಶ್ರೀಮತಿ ಕಮಲ ಜಿ. ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಸೋಮಶೇಖರ ಸ್ವಾಗತಿಸಿ, ವಂದಿಸಿದರು. ನಿರ್ದೇಶಕಿ ಶ್ರೀಮತಿ ಶೀಲಾವತಿ ಕೆ. ಪ್ರಾರ್ಥಿಸಿದರು. ಸಂಘದ ಕಾರ್ಯದರ್ಶಿ ಕೇಶವ ಬಿ. ವರದಿ ವಾಚಿಸಿದರು. ಹಾಲು ಪರಿವೀಕ್ಷಕ ಉಮೇಶ್ ಬಿ. ಸಹಕರಿಸಿದರು.










