ಪುತ್ತೂರು ಪಿಎಲ್‌ಡಿ ಬ್ಯಾಂಕ್‌ನ 88ನೇ ವಾರ್ಷಿಕ ಮಹಾಸಭೆ

0

69.74 ಕೋಟಿ ರೂ. ವ್ಯವಹಾರ, ರೂ. 18.93 ಕೋಟಿ ಸಾಲ ವಿತರಣೆ
ಶೇ 83.35 ಸಾಲ ವಸೂಲಾತಿ-ಭಾಸ್ಕರ ಎಸ್.ಗೌಡ ಇಚ್ಲಂಪಾಡಿ

ಪುತ್ತೂರು: ಪುತ್ತೂರು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಎಲ್‌ಡಿ) ಬ್ಯಾಂಕ್ 2025-26ನೇ ಸಾಲಿನಲ್ಲಿ 69.74 ಕೋಟಿ ರೂ.ಗಳ ವ್ಯವಹಾರವನ್ನು ನಡೆಸಿದೆ. ರೂ. 18.93 ಕೋಟಿ ಸಾಲ ವಿತರಣೆ ಮಾಡಿ ಶೇ 83.35 ಸಾಲ ವಸೂಲಾತಿಯಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಭಾಸ್ಕರ ಎಸ್.ಗೌಡ ಇಚ್ಲಂಪಾಡಿ ಹೇಳಿದರು.


ಸೆ. 19 ರಂದು ಪುತ್ತೂರು ಸಹಕಾರಿ ಟೌನ್ ಬ್ಯಾಂಕಿನ ಸಭಾಂಗಣದಲ್ಲಿ ಜರಗಿದ ಬ್ಯಾಂಕ್‌ನ 88 ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಲ ವಸೂಲಾತಿಯಲ್ಲಿ ದ.ಕ.ಜಿಲ್ಲೆಯ ಪ್ರಾಥಮಿಕ ಬ್ಯಾಂಕ್‌ಗಳ ಪೈಕಿ ಅತೀ ಹೆಚ್ಚು ಸಾಲ ವಿತರಣೆ ಮಾಡುವ ಬ್ಯಾಂಕ್ ಎಂದು ಗುರುತಿಸಿಕೊಂಡಿರುವುದು ನಮ್ಮ ಸಂಸ್ಥೆಗೆ ಗೌರವವನ್ನು ತಂದಿದೆ. ಜೊತೆಗೆ ಸಾಲ ವಸೂಲಾತಿಯಲ್ಲಿ ದ.ಕ. ಜಿಲ್ಲೆಯಲ್ಲಿ ನಮ್ಮ ಬ್ಯಾಂಕ್ ಮೂರನೇ ಸ್ಥಾನ ಪಡೆದಿದೆ. ಬ್ಯಾಂಕಿನಲ್ಲಿ 9978 ಮಂದಿ ಸದಸ್ಯರು ಇದ್ದಾರೆ ಎಂದು ಅಧ್ಯಕ್ಷರು ಹೇಳಿದರು.
ಬ್ಯಾಂಕಿನ ಸದಸ್ಯರುಗಳಾದ ಮುರುಳೀಕೃಷ್ಣ ಹಸಂತಡ್ಕ, ನಾರಾಯಣ ಪೂಜಾರಿ ಕುರಿಕ್ಕಾರ, ಯಶೋಧರ್ ಜೈನ್, ಮೋಹನ್ ಪಕ್ಕಳ ಕುಂಡಾಪು, ಅಬ್ದುಲ್ ಖಾದರ್ ಕರ್ನೂರು, ವಾಸುದೇವ ಮಯ್ಯ, ವಿಜಯಕುಮಾರ್ ರೈ ಕೋರಂಗ, ಜಿನ್ನಪ್ಪ ಗೌಡ, ಯಶೋಧರ ಶೆಟ್ಟಿ, ರಾಮಮೂರ್ತಿರವರುಗಳು ವಿವಿಧ ಸಲಹೆ ಸೂಚನೆ ನೀಡಿದರು.


ಶಶಿಕುಮಾರ್ ರೈ ಬಾಲ್ಯೊಟ್ಟು ಅವರಿಗೆ ಸನ್ಮಾನ: ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಲದ ನಿರ್ದೇಶಕರಾಗಿ ಆಯ್ಕೆಯಾದ ಶಶಿಕುಮಾರ್ ರೈ ಬಾಲ್ಯೊಟ್ಟು ಅವರನ್ನು ಪುತ್ತೂರು ಪಿಎಲ್‌ಡಿ ಬ್ಯಾಂಕ್ ವತಿಯಿಂದ ಅಧ್ಯಕ್ಷ ಭಾಸ್ಕರ್ ಎಸ್ ಗೌಡ ಮತ್ತು ಆಡಳಿತ ಮಂಡಳಿಯವರು ಸನ್ಮಾನಿಸಿ, ಗೌರವಿಸಿದರು. ಸನ್ಮಾನ ಸ್ವೀಕರಿಸಿದ ಶಶಿಕುಮಾರ್ ರೈ ಅವರು ಮಾತನಾಡಿ ನಾನು 1999 ರಲ್ಲಿ ಪಿಎಲ್‌ಡಿ ಬ್ಯಾಂಕ್‌ನಲ್ಲಿ ನಿರ್ದೇಶಕನಾಗಿ ಆಯ್ಕೆಯಾಗುವ ಮೂಲಕ ಸಹಕಾರ ಕ್ಷೇತ್ರಕ್ಕೆ ಬರಲು ಕಾರಣವಾಯಿತು. ಅದೇ ವರ್ಷ ಬ್ಯಾಂಕಿನ ಉಪಾಧ್ಯಕ್ಷ ಹುದ್ದೆ ನನಗೆ ಲಭಿಸಿತು. ಆದುದರಿಂದ ನನಗೆ ಪಿಎಲ್‌ಡಿ ಬ್ಯಾಂಕ್ ಮೇಲೆ ತುಂಬಾ ಪ್ರೀತಿ ಇದೆ. ಸಹಕಾರ ಕ್ಷೇತ್ರದಲ್ಲಿ ಪಿಎಲ್‌ಡಿ ಬ್ಯಾಂಕ್ ಉತ್ತಮ ರೀತಿಯಲ್ಲಿ ಕೃಷಿಕರಿಗೆ ಸೇವೆಯನ್ನು ನೀಡುತ್ತಾ ಬಂದಿದೆ. ಇದು ತುಂಬಾ ಸಂತೋಷದ ವಿಚಾರವಾಗಿದೆ ಎಂದು ಹೇಳಿ, ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು.


ಶಶಿಕುಮಾರ್ ರೈ ಅವರ ಸಾಧನೆ ತುಂಬಾ ಸಂತೋಷ ತಂದಿದೆ- ಭಾಸ್ಕರ್ ಎಸ್ ಗೌಡ: ಶಶಿಕುಮಾರ್ ರೈ ಅವರನ್ನು ಸನ್ಮಾನಿಸಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ಭಾಸ್ಕರ್ ಎಸ್ ಗೌಡ ಇಚ್ಲಂಪಾಡಿ ಅವರು, ಶಶಿಕುಮಾರ್ ರೈ ಅವರು ಪಿಎಲ್‌ಡಿ ಬ್ಯಾಂಕ್ ಮುಖಾಂತರ ಸಹಕಾರ ಕ್ಷೇತ್ರಕ್ಕೆ ಕಾಲಿಟ್ಟರು, ಆ ಬಳಿಕ ಅವರು ಸಹಕಾರ ಕ್ಷೇತ್ರದಲ್ಲಿ ಬಹಳ ಸಾಧನೆಯನ್ನು ಮಾಡಿದ್ದಾರೆ, 62 ವರ್ಷಗಳ ನಂತರ ದ.ಕ. ಜಿಲ್ಲೆಗೆ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಲದ ನಿರ್ದೇಶಕರಾಗಿ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಆಯ್ಕೆಯಾಗಿರುವುದು ಅತ್ಯಂತ ಖುಷಿಯ ವಿಚಾರವಾಗಿದ್ದು, ಶಶಿಕುಮಾರ್ ರೈ ಅವರ ಸಾಧನೆ ತುಂಬಾ ಸಂತೋಷ ತಂದಿದೆ. ಪಿಎಲ್‌ಡಿ ಬ್ಯಾಂಕಿನ ಆಡಳಿತ ಮಂಡಳಿಯ ಒಮ್ಮತದ ತೀರ್ಮಾನದಂತೆ ಇವರಿಗೆ ಸನ್ಮಾನವನ್ನು ಮಾಡಿದ್ದೇವೆ. ಅವರಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಅವಕಾಶಗಳು ಕೂಡಿಬರಲಿ ಎಂದು ಶುಭಹಾರೈಸಿದರು.


ಮಾಹಿತಿ ಕಾರ್ಯಕ್ರಮ; ಓರಿಯಂಟಲ್ ಇನ್ಸೂರೆನ್ಸ್ ಕಂಪೆನಿಯ ರವಿಶಂಕರ್ ಮತ್ತು ದಿ.ಪಾಲಿಸಿ ಗ್ರೇಸ್ ಇನ್ಸೂರೆನ್ಸ್ ಬ್ರೋಕಿಂಗ್ ಕಂಪೆನಿಯ ರಾಮ್ ಮೋಹನ್ ರೈ ಇನ್ಸೂರೆನ್ಸ್ ಮಾಹಿತಿಯನ್ನು ಮತ್ತು ಟಾಟಾ ಪವರ್ ಸೋಲಾರ್ ಬಗ್ಗೆ ಕಾರ್ತಿಕ್ ರೈ ಅವರು ಸಭೆಗೆ ಮಾಹಿತಿಯನ್ನು ನೀಡಿದರು.


ಪ್ರತಿಭಾ ಪುರಸ್ಕಾರ :
2025-26ನೇ ವರ್ಷದಲ್ಲಿ ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಗೌರವಿಸಲಾಯಿತು. ರಾಜ್ಯ ಭೂ ಅಭಿವೃದ್ಧಿ ಬ್ಯಾಂಕ್ನ್ ಮಂಗಳೂರು ಶಾಖಾ ಅಽಕಾರಿ ವಿಕಾಸ್, ಜಿ.ಪಂ, ಮಾಜಿ ಸದಸ್ಯ ಸಾಜ ರಾಧಾಕೃಷ್ಣ ಆಳ್ವ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಸ್,ಬಿ.ಜಯರಾಮ ರೈ ಬಳಜ್ಜ, ಮಾಜಿ ನಿರ್ದೇಶಕರಾದ ನಾರಾಯಣ ಕನ್ಯಾನ, ಪುತ್ತೂರು ನಗರ ಸಭಾ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಸಂತೋಷ್ ಭಂಡಾರಿ ಚಿಲ್ಮೆತ್ತಾರು ಸಹಿತ ಬ್ಯಾಂಕಿನ ಸದಸ್ಯರುಗಳು ಉಪಸ್ಥಿತರಿದ್ದರು.


ಮೊಳಹಳ್ಳಿ ಶಿವರಾಯ ಪ್ರತಿಮೆಗೆ ಹಾರಾರ್ಪಣೆ: ಮಹಾಸಭೆಗೆ ಮೊದಲು ಸಹಕಾರ ರಂಗದ ಪಿತಾಮಹ ಮೊಳಹಳ್ಳಿ ಶಿವರಾಯರ ಪ್ರತಿಮೆಗೆ ಬ್ಯಾಂಕ್‌ನ ಅಧ್ಯಕ್ಷ ಭಾಸ್ಕರ್ ಎಸ್. ಗೌಡ ಇಚ್ಲಂಪಾಡಿರವರು ಹಾರಾರ್ಪಣೆಗೈದು, ಗೌರವ ಸೂಚಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.


ವೇದಿಕೆಯಲ್ಲಿ ಬ್ಯಾಂಕ್‌ನ ಉಪಾಧ್ಯಕ್ಷ ಪ್ರವೀಣ್ ರೈ ಪಂಜೊಟ್ಟು, ಕೋಶಾಧಿಕಾರಿ ಯುವರಾಜ ಕೆ.ಪೆರಿಯತ್ತೋಡಿ, ನಿರ್ದೇಶಕರುಗಳಾದ ಸುಜಾತ ರಂಜನ್ ರೈ, ಯತೀಂದ್ರ ಕೊಚ್ಚಿ, ಸುಂದರ ಪೂಜಾರಿ ಬಡಾವು, ವಿಕ್ರಮ ರೈ ಸಾಂತ್ಯ, ನಾರಾಯಣ ನಾಯ್ಕ, ಚಂದ್ರಾವತಿ ಅಭಿಕಾರ್, ಸ್ವಾತಿ ರೈ, ಕುಶಾಲಪ್ಪ ಗೌಡ ಅನಿಲ, ಬಾಬು ಮುಗೇರ, ಚೆನ್ನಕೇಶವ ಕೆ ಹಾಗೂ ರಾಜುಮೋನ್ ಪಿ.ಆರ್ ಉಪಸ್ಥಿತರಿದ್ದರು.


ಬ್ಯಾಂಕ್‌ನ ಅಧ್ಯಕ್ಷ ಭಾಸ್ಕರ್ ಎಸ್ ಗೌಡ ಇಚ್ಲಂಪಾಡಿ ಸ್ವಾಗತಿಸಿ, ಕೋಶಾಧಿಕಾರಿ ಯುವರಾಜ ಕೆ.ಪೆರಿಯತ್ತೋಡಿ ವಂದಿಸಿದರು, ಬ್ಯಾಂಕ್‌ನ ವ್ಯವಸ್ಥಾಪಕಿ ಸುಮನ ಎಂ ವರದಿ ವಾಚಿಸಿ, ಗುಮಸ್ತ ಮನೋಜ್ ಎ ಪ್ರಾರ್ಥನೆಗೈದರು. ಲೆಕ್ಕಾಽಕಾರಿ ವಿನಯಕುಮಾರ್ ಕೆ, ಕಾರ್ಯಕ್ರಮ ನಿರೂಪಿಸಿದರು. ಕಡಬ ಶಾಖೆಯ ವ್ಯವಸ್ಥಾಪಕ ಎನ್ ವೇಣು ಭಟ್, ಸಿಬ್ಬಂದಿಗಳಾದ ಆರತಿ ಟಿ.ಕೆ, ಸುರೇಶ್ ಪಿ, ಭರತ್ ಟಿ, ಹರೀಶ್ ಗೌಡ, ವಿಜಯ ಭಟ್ ಎಚ್, ವಿನಯ ಕುಮಾರ್ ಗೌಡ ಬಿ.ಎಸ್, ಶಿವಪ್ರಸಾದ್ ಯು, ಮನೋಜ್ ಕುಮಾರ್ ಸಹಕರಿಸಿದರು.

ಮೂರು ದಿನದೊಳಗೆ ಸಾಲದ ಪ್ರಥಮ ಕಂತು ಬಿಡುಗಡೆ
ರೈತ ಸದಸ್ಯರಿಗೆ ನಮ್ಮ ಬ್ಯಾಂಕಿನಲ್ಲಿ ಹೊಸ ಸಾಲವನ್ನು ಕ್ಲಪ್ತ ಸಮಯದಲ್ಲಿ ನೀಡುತ್ತೇವೆ. ಸಾಲದ ಪ್ರಥಮ ಕಂತನ್ನು ಮೂರು ದಿನದೊಳಗೆ ಬಿಡುಗಡೆಗೊಳಿಸುತ್ತೇವೆ. ನಮ್ಮಲ್ಲಿ ಯಾವುದೇ ಸಾಲಕ್ಕೆ ರೈತನ ಅಸ್ತಿಯೇ ಜಾಮೀನು ಆಗಿದ್ದು, ಇತರ ಬ್ಯಾಂಕ್‌ಗಳಲ್ಲಿ ಇರುವಂತೆ ನಮ್ಮಲ್ಲಿ ಸಾಲ ಪಡೆಯಲು ಜಾಮೀನುದಾರರ ಅವಶ್ಯಕತೆ ಇರುವುದಿಲ್ಲ. ರೈತರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ನೀಡುವುದೇ ನಮ್ಮ ಬ್ಯಾಂಕಿನ ಉದ್ದೇಶವಾಗಿದೆ. ಅರ್ಹ ರೈತ ಸದಸ್ಯರಿಗೆ ಕೇಂದ್ರ ಸರಕಾರದ ಯೋಜನೆಯಾದ ಸೂರ್ಯ ಘರ್ ಯೋಜನೆಯಡಿಯಲ್ಲಿ ಸೋಲಾರ್ ಅಳವಡಿಕೆಗೆ ಬೇಕಾದ ಸಾಲ ಸೌಲಭ್ಯಗಳನ್ನು ನೀಡುತ್ತೇವೆ. ಚಿನ್ನಾಭರಣ ಸಾಲಕ್ಕೆ ಆ ದಿನದ ಧಾರಣೆಯ ಶೇ 80 ರಷ್ಟು ಹಣವನ್ನು ನೀಡುತ್ತೇವೆ.
ಭಾಸ್ಕರ್ ಎಸ್ ಗೌಡ ಇಚ್ಲಂಪಾಡಿ
ಅಧ್ಯಕ್ಷರು. ಪಿಎಲ್‌ಡಿ ಬ್ಯಾಂಕ್ ಪುತ್ತೂರು

LEAVE A REPLY

Please enter your comment!
Please enter your name here