







ಬೆಟ್ಟಂಪಾಡಿ: ಮೈಸೂರು ಪೇಟ, ಬೃಹತ್ ಹಾರ, ಬೃಹತ್ ಸನ್ಮಾನ ಪತ್ರ, ವಿಷ್ಣುಮೂರ್ತಿ ದೇವರ ಬೆಳ್ಳಿಯ ಪ್ರತಿಮೆ, ಬುಟ್ಟಿ ಹಣ್ಣುಹಂಪಲು.. ಕುತ್ತಿಗೆ ತುಂಬಾ ಮಲ್ಲಿಗೆ ಹಾರಗಳು.. ತೆರೆದ ಜೀಪಿನಲ್ಲಿ ಚೆಂಡೆ, ಬ್ಯಾಂಡ್ ವಾದ್ಯ, ಗೊಂಬೆ ಕುಣಿತ, ಕಲಶ ಕನ್ಯೆಯರ ಸಾಲು.. ಸಹಕಾರಿಗಳು, ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಸಾವಿರಕ್ಕೂ ಮಿಕ್ಕಿದ ಜನತೆಯ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಆಡಳಿತ ಮಂಡಳಿಗೆ ನೂತನ ನಿರ್ದೇಶಕರಾಗಿ ಆಯ್ಕೆಯಾದ ಶಶಿಕುಮಾರ್ ರೈ ಬಾಲ್ಯೊಟ್ಟುರವರಿಗೆ ಹುಟ್ಟೂರ ಅಭಿನಂದನೆ ನಡೆದದ್ದು ಹೀಗೆ…


ಶಶಿಕುಮಾರ್ ರೈ ಬಾಲ್ಯೊಟ್ಟು ಹುಟ್ಟೂರ ಅಭಿನಂದನಾ ಸಮಿತಿ ವತಿಯಿಂದ ಸೆ. 20 ರಂದು ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ಈ ಅಭಿನಂದನಾ ಸಮಾರಂಭ ಅದ್ದೂರಿಯಾಗಿ ಜರಗಿತು.



ಜಿಲ್ಲೆಯ ಸಹಕಾರಿ ಕ್ಷೇತ್ರಕ್ಕೆ ಹೊಸ ರೂಪ ಬರಲಿದೆ – ಕ್ಯಾ| ಬ್ರಿಜೇಶ್ ಚೌಟ:
ಈ ಅಭಿನಂದನಾ ಸಮಾರಂಭದಲ್ಲಿ ದೀಪ ಪ್ರಜ್ವಲನೆ ಮಾಡಿದ ದ.ಕ. ಲೋಕಸಭಾ ಕ್ಷೇತ್ರದ ಸಂಸದ ಕ್ಯಾ| ಬ್ರಿಜೇಶ್ ಚೌಟ ರವರು ಮಾತನಾಡಿ ಸಹಕಾರ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದ ಜಿಲ್ಲೆ ನಮ್ಮದು. ಮೂಲ ಉದ್ದೇಶಗಳನ್ನು ಇಟ್ಟುಕೊಂಡು ಮುನ್ನಡೆಯುತ್ತಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸ್ಪಂದಿಸುವ ಸಂಸ್ಥೆ ಸಹಕಾರ ರಂಗ. ಕೇಂದ್ರ ಸರಕಾರ ಸಹಕಾರ ಕ್ಷೇತ್ರಕ್ಕೆ ಮಹತ್ವ ಕೊಟ್ಟಿರುವುದರಿಂದ ವಿಶೇಷವಾಗಿ ಸಹಕಾರ ಇಲಾಖೆಯನ್ನೇ ಮಾಡಿ ಯೋಗ್ಯ ವ್ಯಕ್ತಿಯನ್ನು ಮಂತ್ರಿಯನ್ನಾಗಿ ಮಾಡಿದೆ. ಸಹಕಾರಿ ವಿಶ್ವವಿದ್ಯಾನಿಲಯ ಎಲ್ಲಾ ರಾಜ್ಯಗಳಲ್ಲೂ ಕಾಲೇಜುಗಳನ್ನು ಸ್ಥಾಪಿಸಿದಾಗ ಸಹಕಾರಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಹಾಗೂ ಮುಂದಕ್ಕೆ ನೇಮಕಾತಿ ನಡೆಯುವಾಗ ಅರ್ಹ ಮತ್ತು ಕೌಶಲ್ಯಭರಿತ ಉದ್ಯೋಗಿಗಳನ್ನು ಸೃಷ್ಟಿಸಲು ಸಾಧ್ಯ. ಇದಕ್ಕಾಗಿ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರಾಗಿ ಶಶಿಕುಮಾರ್ ರೈಯವರು ಹೊಸ ಚಿಂತನೆ ನಡೆಸಿ ಸಹಕಾರ ಕ್ಷೇತ್ರಕ್ಕೆ ಹಾಗೂ ಜಿಲ್ಲೆಯ ಎಲ್ಲಾ ಸಹಕಾರಿ ಸಂಘಗಳಿಗೆ ಹೊಸ ರೂಪ ಕೊಡುತ್ತಾರೆ ಎಂಬ ಭರವಸೆ ನನಗಿದೆ ಎಂದರು.

ಶಶಿಯಣ್ಣ ಸಹಕಾರಿ ರಂಗದ ಕೃಷ್ಣ – ನಳಿನ್ ಕುಮಾರ್ ಕಟೀಲ್:
ಅಭಿನಂದನಾ ಭಾಷಣ ಮಾಡಿದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ರವರು, ಆಡು ಮುಟ್ಟದ ಸೊಪ್ಪಿಲ್ಲ. ಶಶಿಕುಮಾರ್ ಕೈಯಾಡಿಸದ ಕ್ಷೇತ್ರವಿಲ್ಲ. ಸಾಮಾನ್ಯ ಕುಟುಂಬದ ಶಶಿ ಇಂದು ರಾಜ್ಯದ ಮಹಾನ್ ನಾಯಕರ ಸಾಲಿಗೆ ಸೇರ್ಪಡೆಯಾಗಿದ್ದಾರೆ. ಹತ್ತಾರು ನೂರಾರು ಸನ್ಮಾನ ಪ್ರಶಸ್ತಿಗಳೂ ಬಂದರೂ ಇಂದು ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಎಂಬ ರಾಮನ ಸಂದೇಶದಂತೆ ಹುಟ್ಟೂರಿನಲ್ಲಿ ನಡೆದಿರುವ ಅಭಿನಂದನೆ ಬಹಳ ಶ್ರೇಷ್ಠವಾದ ಅಭಿನಂದನೆಯಾಗಿದೆ. ಜಿಲ್ಲೆಯಲ್ಲಿ ಅವರು ಪಕ್ಷಾತೀತವಾಗಿ ನಾಯಕರೊಂದಿಗೆ ಬೆರೆಯುವ ಸ್ವಭಾವ ಅವರನ್ನು ಅಜಾತ ಶತ್ರು ಎಂದು ಬಿಂಬಿಸಿದೆ. ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಜಿಲ್ಲೆಯಾದ್ಯಂತ ಸುತ್ತಾಡಿ ಸಹಕಾರಿ ಕ್ಷೇತ್ರದಲ್ಲಿ ಉಂಟಾಗುವ ಸಮಸ್ಯೆಗಳನ್ನು ಅಲ್ಲಲ್ಲಿಯೇ ಪರಿಹರಿಸಿಕೊಂಡು ಮುನ್ನಡೆಸಬಲ್ಲ ಮುತ್ಸದ್ದಿತನ ಅವರಲ್ಲಿ ಇರುವುದರಿಂದ ಶಶಿಕುಮಾರ್ ರೈ ಇಂದು ಸಹಕಾರಿ ರಂಗದ ಕೃಷ್ಣ ಎಂದು ಕರೆಯಲ್ಪಟ್ಟಿದ್ದಾರೆ. ಎಸ್ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಕಾಂಗ್ರೆಸ್ ವಿಚಾರಧಾರೆಯಿಂದ ಬಂದವರು. ಶಶಿಕುಮಾರ್ ರೈ ಬಿಜೆಪಿ ವಿಚಾರಧಾರೆಯಿಂದ ಬಂದವರು. ಆದರೆ ರಾಜೇಂದ್ರ ಕುಮಾರ್ ರವರು ಇಂದು ಯಾವುದೇ ಸಮಸ್ಯೆ ಬಂದಾಗ ಮೊದಲು ಹೇಳುವುದು ಶಶಿಕುಮಾರ್ ರೈಯವರಲ್ಲಿ. ಅಂತಹ ವಿಶೇಷ ನಾಯಕತ್ವ ಗುಣವನ್ನು ಅವರು ಬೆಳೆಸಿಕೊಂಡಿದ್ದಾರೆ. ಇರ್ದೆ ಬೆಟ್ಟಂಪಾಡಿಯ ಮಣ್ಣಿನ ಗುಣ ಅವರನ್ನು ನಾಯಕತ್ವ ಸ್ಥಾನಕ್ಕೆ ಏರಿಸಿದೆ. ಮುಂದಿನ ದಿನಗಳಲ್ಲಿ ಶಶಿಕುಮಾರ್ ರೈಯವರಿಗೂ ರಾಜಕೀಯ ಅವಕಾಶಗಳು ಸಿಗುವಂತಾಗಲಿ ಎಂದು ಹೇಳಿ ಸಹಕಾರಿ ರಂಗದಲ್ಲಿ ನಿರಂತರ ಬೆಳಗುವ ಶಶಿಯಾಗಿ ಮೂಡಿ ಬರಲಿ ಎಂದು ಶುಭಾಶಿಸಿದರು. ಕಾರು ಚಾಲಕರಾಗಿದ್ದವರು ಇಂದು ರಾಷ್ಟ್ರದ ರಥ ಚಲಾಯಿಸುವ ಸಾರಥಿಯಾಗಿದ್ದಾರೆ. ಕಷ್ಟದಲ್ಲಿರುವವರಿಗೆ ಸಹೋದರನಾಗಿ ಬೆನ್ನು ಸವರುವ ಕಾರ್ಯ ಅವರಿಂದಾಗಿದೆ. ದೇಶದ ಸಹಕಾರಿ ಕಾಶಿ ನಮ್ಮ ಜಿಲ್ಲೆಯ, ನಮ್ಮ ಗ್ರಾಮದ ಒಬ್ಬ ವ್ಯಕ್ತಿ ಇಂದು ರಾಜೇಂದ್ರ ಕುಮಾರ್ ರವರನ್ನೂ ಮೀರಿ ನಾಯಕನಾಗಿ ಬೆಳೆಯುತ್ತಿರುವುದು ನಮಗೆ ಹೆಮ್ಮೆ ಮತ್ತು ಗೌರವ. ಸಹಕಾರ ಮಹಾಮಂಡಳ ನಿರ್ದೇಶಕ ಅದು ಕನಸು. ಕನಸನ್ನು ನನಸಾಗಿಸಿದ ಶಶಿಗೆ ಅಭಿನಂದನೆ ಸಲ್ಲುತ್ತಿದೆ. ಸಹಕಾರಿ ರಂಗ ಕಪಿಮುಷ್ಟಿಯಿಂದ ಹೊರಬಂದು ಸರ್ವ ಜನರ ಸಹಕಾರಿಯಾಗಿ ಬೆಳೆಯಲಿ. ಈ ದಿಶೆಯಲ್ಲಿ ಶಶಿಕುಮಾರ್ ರೈ ಮುಂದಿನ ದಿನಗಳಲ್ಲಿ ಮಹಾಮಂಡಳದ ಅಧ್ಯಕ್ಷರಾಗಿಯೂ ಆಯ್ಕೆಯಾಗಲಿ ಎಂಬುದು ನಮ್ಮೆಲ್ಲರ ಹಾರೈಕೆಯಾಗಿರಲಿ ಎಂದು ನಳಿನ್ ಹೇಳಿದರು.
ಶಶಿಕುಮಾರ್ ರೈ ಬೆಳೆದರೆ ನಮಗೂ ಪ್ರಯೋಜನ – ಅಶೋಕ್ ಕುಮಾರ್ ರೈ:
ಸಭಾಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈಯವರು ಅಶೋಕ್ ರೈಯವರನ್ನು ಈ ಭಾಗದಲ್ಲಿ ಅಶೋಕಣ್ಣೆ ಮಾಡಿದ್ದು ಶಶಿಕುಮಾರ್ ರೈಯವರು. ಬೆಟ್ಟಂಪಾಡಿ, ಪಾಣಾಜೆ, ನಿಡ್ಪಳ್ಳಿ ಭಾಗದಲ್ಲಿ ದೇವಸ್ಥಾನ ದೈವಸ್ಥಾನ ಜೀರ್ಣೋದ್ಧಾರ ಮಾಡುವಾಗ ಶಶಿಕುಮಾರ್ ರೈಯವರೊಂದಿಗೆ ಇದ್ದೆ. ಹಾಗಾಗಿ ನನ್ನ ಮೇಲೆ ಈ ಭಾಗದ ಜನರ ವಿಶೇಷ ಪ್ರೀತಿ ಅಭಿಮಾನಕ್ಕೆ ಅವರು ಕಾರಣೀಕರ್ತರಾಗಿದ್ದಾರೆ. ಕಲ್ಲಡ್ಕ ಪ್ರಭಾಕರ ಭಟ್ ನಮ್ಮೊಂದಿಗೆ ಗಟ್ಟಿಯಾಗಿ ನಿಂತು ಶಶಿಕುಮಾರ್ ರೈಯವರು ಎಸ್ಸಿಡಿಸಿಸಿ ನಿರ್ದೇಶಕರಾಗಲು ಕಾರಣವಾದುದನ್ನು ನಾನು ಉಲ್ಲೇಖಿಸುತ್ತೇನೆ. ಎರಡನೇ ಬಾರಿಗೆ ನಿರ್ದೇಶಕರಾಗುವ ವೇಳೆ ಬಿಜೆಪಿಯವರು ಅಡ್ಡಕಾಲಿಟ್ಟಿದ್ದರು. ಆದರೆ ನಾವು ಬಿಡದೆ ಅವರನ್ನೇ ನಿರ್ದೇಶಕರಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಇಂದು ರಾಜ್ಯದೆತ್ತರಕ್ಕೆ ಹೋಗಿದ್ದಾರೆ. ಸಹಕಾರಿ ಸಂಘದಲ್ಲಿ ಜನರ ಯಾವುದೇ ಕೆಲಸ ಕಾರ್ಯಗಳಿಗೆ ನಾನು ಕರೆ ಮಾಡುವುದು ಶಶಿಕುಮಾರ್ ರೈ ಮತ್ತು ಎಸ್.ಬಿ. ಜಯರಾಮ ರೈಯವರಿಗೆ. ಅವರ ಜನಪರ ರೈತರ ಕೆಲಸ ಕಾರ್ಯಗಳು ನಿರಂತರವಾಗಿ ಮುಂದುವರಿಯಲಿ ಎಂದು ಶುಭಾಶಿಸಿದರು. ಶಶಿಕುಮಾರ್ ರೈ ಉತ್ತಮವಾಗಿ ಬೆಳೆದರೆ ನಮಗೂ ಅದರಿಂದ ಪ್ರಯೋಜನವಿದೆ. ನಮ್ಮ ಮಕ್ಕಳ ವಿದ್ಯೆ ಜೀವನಕ್ಕೆ ಅವರಿಂದಲೂ ಸಹಾಯ ಪಡೆದುಕೊಳ್ಳೋಣ ಎಂದು ಶಾಸಕರು ಹೇಳಿದರು.
ಉತ್ತಮ ಡಿಸಿಸಿ ಬ್ಯಾಂಕ್:
ಇಡಿ ಅಧಿಕಾರಿಗಳು ಎಸ್ಸಿಡಿಸಿಸಿ ಬ್ಯಾಂಕ್ಗೆ ದಾಳಿ ಮಾಡಿ ಪರಿಶೀಲಿಸಿದಾಗ ದೇಶದಲ್ಲಿಯೇ ಇಷ್ಟೊಂದು ಉತ್ತಮ ಸಹಕಾರಿ ಬ್ಯಾಂಕ್ನ್ನು ನೋಡಿಲ್ಲ ಎಂದು ಹೇಳಿರುವುದು ರಾಜೇಂದ್ರ ಕುಮಾರ್ ರವರ ದಕ್ಷ ಆಡಳಿತದಿಂದ ಎಸ್ಸಿಡಿಸಿಸಿ ಬ್ಯಾಂಕ್ ಬೆಳೆದಿರುವುದು ನಮಗೆ ಹೆಮ್ಮೆಯಾಗಿದೆ ಎಂದು ಶಾಸಕ ರೈ ಹೇಳಿದರು.
5 ಲಕ್ಷ ರೂ. ಕೊಡುವುದಿಲ್ಲ ಎಂಬ ಕಂಪ್ಲೇಂಟ್ ಇದೆ:
ರೈತರಿಗೆ 5 ಲಕ್ಷ ರೂ. ಕೊಡುವುದಿಲ್ಲ ಎಂದು ರೈತರ ದೂರು ಇದೆ. ನಮ್ಮಲ್ಲಿ ಅನೇಕರು ಬರ್ತಾರೆ. ಮಂಡ್ಯದಲ್ಲಿ ಕೊಡುತ್ತಿದ್ದಾರೆ. ಇಲ್ಲಿಯೂ ಕೊಡುವ ಕಾರ್ಯ ಆಗಲಿ. ಈ ಬಗ್ಗೆ ರೈತರಿಗೆ ನಾನು ಸಮಾಧಾನಿಸುವ ಕೆಲಸವೂ ಮಾಡಿದ್ದೇನೆ ಎಂದು ರೈ ಹೇಳಿದರು.

ಬುಸ್ ಬುಸ್ ಬುಸ್…. ಠುಸ್…:
ರಾಜಕೀಯ ದವ್ರು ಮೈಕ್ ಸಿಕ್ಕಿದ್ರೆ ಉದ್ದುದ್ದ ಬಿಡೋದು ಬುಸ್ ಬುಸ್ ಬುಸ್ ಅಂತ.. ಕೆಳಗೆ ಇಳಿದು ಹೋದ್ಮೇಲೆ ಮಾಡಿದ್ದೇನೊ ಇಲ್ಲ..ಠುಸ್… ಇಷ್ಟು ವರ್ಷ ಇದ್ದವ್ರು ಏನೂ ಮಾಡಿಲ್ಲ.. ತುಳುವಿನ ಬಗ್ಗೆ ಎಲ್ಲರೂ ಮಾತನಾಡಿದ್ದಾರೆ. ಆದರೆ ಮಾಡಿದ್ದೇನೂ ಇಲ್ಲ. ಅಶೋಕ್ ರೈ ಮಾಡಿದ ಮೇಲೆ ನಾನೂ ಮಾಡಿದ್ದೇನೆ ನಾನೂ ಮಾಡಿದ್ದೇನೆ ಎಂದು ಹೇಳಿ ಕ್ಲೈಮ್ ತಗೊಳ್ತಿದ್ದಾರೆ ಎಂದು ಶಾಸಕರು ಹೇಳಿದರು.
ಬಂಗಾರದ ಚಕ್ಕುಲಿ ತಂದಿದ್ದೇನೆ:
ನಾನೊಬ್ಬ ಬಡ ಶಾಸಕ. ಮೆಡಿಕಲ್ ಕಾಲೇಜು ತರುವಾಗ ತಮಾಷೆ ಮಾಡಿದ್ದಾರೆ. ಇವನೆಂತ ಚಕ್ಕುಲಿ ತರುವುದಾ ಎಂದು ಕೇಳಿದವರಿದ್ದಾರೆ. ಆದರೆ ಈಗ ಅಶೋಕ್ ರೈ ಬಂಗಾರದ ಚಕ್ಕುಲಿ ತಂದಿದ್ದಾರೆ ಎಂದು ಅವರಿಗೆ ಗೊತ್ತಾಗಿದೆ ಎಂದು ಶಾಸಕ ರೈ ಇದೇ ವೇಳೆ ಹೇಳಿದರು.
ಬೆಟ್ಟಂಪಾಡಿಯಲ್ಲಿ ಓಟು ಕಡಿಮೆ:
ಬೆಟ್ಟಂಪಾಡಿ ಪಾಣಾಜೆ ನಿಡ್ಪಳ್ಳಿ ಭಾಗದಿಂದ ಯಾವುದೇ ಕಾರ್ಯಕ್ರಮವಿದ್ದರೂ ನನಗೆ ಆಹ್ವಾನ ಬರುತ್ತದೆ. ಆದರೆ ಬೆಟ್ಟಂಪಾಡಿಯಲ್ಲಿ ನನಗೆ ಓಟು ಬಿದ್ದಿರುವುದು ಕಡಿಮೆ ಎಂದು ಹೇಳಿದರು. ಮುಂದಿನ ಬಾರಿ ಹೆಚ್ಚು ಓಟು ಬೀಳಲಿದೆ ಎಂದು ಭರವಸೆಯನ್ನೂ ಅವರೇ ವ್ಯಕ್ತಪಡಿಸಿದರು. ನನ್ನ ಹೃದಯಲ್ಲಿ ಪ್ರೀತಿ ಹೋಗಿಲ್ಲ. ಹಾಗಾಗಿ ಈ ಭಾಗಕ್ಕೆ ಅನುದಾನ ಕಡಿಮೆ ಮಾಡಿಲ್ಲ. ಬಿಜೆಪಿ ಕಾಂಗ್ರೆಸ್ ಎಂದು ನೋಡದೆ ಎಲ್ಲರೂ ನನ್ನ ಬಳಿ ಬನ್ನಿ ಎಂದರು.
ತುಳು ಶಾಲು ಆರಂಭವಾಗಿದೆ:
ಈಗ ಎಲ್ಲಾ ಕಡೆ ತುಳು ಶಾಲು ಆರಂಭವಾಗಿದೆ. ತುಳು ಅಪ್ಪೆನ ಶಾಲು ಹಾಕುವುದು ಒಳ್ಳೆಯ ಗೌರವ ಕೊಡುತ್ತದೆ. ಭಾಷಣ ಮಾಡುವಾಗಲೂ ಕನ್ನಡದಲ್ಲೇ ಮಾಡಬೇಕೆಂದಿಲ್ಲ. ತುಳುವಿನಲ್ಲೂ ಮಾತನಾಡುವ ಹಕ್ಕನ್ನು ಸರಕಾರ ಕೊಟ್ಟಿದೆ ಎಂದು ಉಲ್ಲೇಖಿಸಿದ ಶಾಸಕ ರೈಯವರು ತುಳುವಿನಲ್ಲೇ ಭಾಷಣ ಮಾಡಿ ಗಮನಸೆಳೆದರು.
ಸಹಕಾರಿ ಧ್ವಜ ಬೆಟ್ಟಂಪಾಡಿಯಿಂದ ರಾಜ್ಯ ರಾಜಧಾನಿಗೆ ತಲುಪಿದೆ – ಸಂಜೀವ ಮಠಂದೂರು:
ವಿಶೇಷ ಅಭ್ಯಾಗತರಾಗಿದ್ದ ಮಾಜಿ ಶಾಸಕ ಸಂಜೀವ ಮಠಂದೂರು ರವರು ಮಾತನಾಡಿ ಇರ್ದೆಯ ಶಶಿ ಬಾನೆತ್ತರಕ್ಕೆ ಹಾರಿ ಶಶಿಯಾಗಿ ಮೂಡಿಬಂದಿದ್ದಾನೆ. ಊರಿನ ಹುಡುಗನಿಗೆ ಊರಿನ ಜನತೆ ಆಶೀರ್ವದಿಸಿ ಮಾಡುವ ಅಭಿನಂದನೆ ಎಲ್ಲಾ ಸಹಕಾರಿಗಳಿಗೆ ಮಾದರಿಯಾಗಿದೆ. ಸಹಕಾರಿಯ ಏಳು ಬಣ್ಣದ ಧ್ವಜವನ್ನು ಬೆಟ್ಟಂಪಾಡಿಯಿಂದ ರಾಜ್ಯದ ರಾಜಧಾನಿಯವರೆಗೆ ಏರಿಸಿರುವುದಕ್ಕೆ ನಾನು ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ. ರಾಜಕೀಯ ರಹಿತವಾಗಿ, ಜಾತಿ, ಮತ, ವರ್ಗ ಬೇಧವಿಲ್ಲದೇ ಸಮಾಜಕ್ಕೆ ನಾನು ಸಂಬಂಧಪಟ್ಟವ ಎಂಬುದನ್ನು ಸಹಕಾರಿ ಕ್ಷೇತ್ರದಲ್ಲಿ ತೋರಿಸಿಕೊಟ್ಟ ಗೌರವ ಅವರಿಗಿದೆ. ಎತ್ತರದ ವ್ಯಕ್ತಿತ್ವಕ್ಕೆ ಇನ್ನೊಂದು ಹಿರಿಮೆ ಗರಿಮೆ ಬಂದಿದೆ. ಸಹಕಾರಿ ಕ್ಷೇತ್ರ ಹರಿಯುವ ನದಿ. ಅದರಲ್ಲಿ ಅಪರಿಮಿತವಾದ ಅವಕಾಶಗಳಿವೆ. ಅದರಲ್ಲಿ ಸಮರ್ಪಕವಾಗಿ ತೊಡಗಿಸಿಕೊಂಡಾಗ ಎಷ್ಟು ಎತ್ತರಕ್ಕೂ ಬೆಳೆಯಬಲ್ಲ ಎಂಬುದನ್ನು ಶಶಿಕುಮಾರ್ ರೈ ರವರು ತೋರಿಸಿಕೊಟ್ಟಿದ್ದಾರೆ. ಸಹಕಾರಿ ಮಹಾಮಂಡಳ ಬಯಲು ಸೀಮೆಗೆ ಸೀಮಿತವಾಗಿತ್ತು. ಆದರೆ ಅಂತಹ ಅಪರೂಪದ ಸ್ಥಾನಮಾನವನ್ನು ದ.ಕ. ಜಿಲ್ಲೆಯ ಓರ್ವ ಸಾಮಾನ್ಯ ಸಹಕಾರಿ, ರೈತನೂ ಪಡೆಯಬಹುದು ಎಂಬುದನ್ನು ರೈಯವರು ತೋರಿಸಿಕೊಟ್ಟು ಇನ್ನೊಬ್ಬ ಸಹಕಾರಿಯೂ ಆ ಸ್ಥಾನಮಾನ ಪಡೆಯಲು ಪ್ರಯತ್ನ ಪಡಬಹುದು ಎಂಬುದನ್ನು ನಿದರ್ಶಿಸಿದ್ದಾರೆ ಎಂದು ಹೇಳಿ ಶುಭ ಹಾರೈಸಿ ಈ ಅಭಿನಂದನಾ ಸಮಾರಂಭ ಆಯೊಜಿಸಿದ ತಂಡಕ್ಕೆ ವಿಶೇಷ ಅಭಿನಂದನೆ ಸಲ್ಲಿಸಿದರು.

ಸಹಕಾರಿ ದಿಗ್ಗಜರ ಸಾಲಿಗೆ ಶಶಿಕುಮಾರ್ ರೈ – ಎಸ್.ಬಿ. ಜಯರಾಮ ರೈ:
ಇನ್ನೋರ್ವ ವಿಶೇಷ ಅಭ್ಯಾಗತ ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಬಿ. ಜಯರಾಮ ರೈ ರವರು ಮಾತನಾಡಿ ತಾನೂ ಬೆಳೆದಂತೆ ತನ್ನವರೂ ಬೆಳೆಯಬೇಕೆಂಬ ಇರಾದೆ ಹೊಂದಿರುವ ಡಾ. ಎಂ.ಎನ್. ರಾಜೇಂದ್ರ ಕುಮಾರ್ ರವರ ಮಾರ್ಗದರ್ಶನ ಸಹಕಾರದಿಂದ ಶಶಿಕುಮಾರ್ ರೈ ಇಂದು ಮೊಳಹಳ್ಳಿ ಶಿವರಾಯರಂತಹ ಸಹಕಾರಿ ದಿಗ್ಗಜರ ಸಾಲಿಗೆ ಸೇರ್ಪಡೆಗೊಂಡಿರುವುದು ನಮ್ಮೆಲ್ಲರ ಭಾಗ್ಯ ಎಂದು ತಿಳಿದಿದ್ದೇನೆ. ಅಲ್ಲದೇ ಕಳೆದ ಬಾರಿ ತಾನು ಅನಾರೋಗ್ಯದಲ್ಲಿದ್ದಾಗಲೂ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದರೂ, ಮತ್ತೊಮ್ಮೆ ಎಸ್ಸಿಡಿಸಿಸಿ ನಿರ್ದೇಶಕನಾಗಬೇಕಾದರೆ ಅದಕ್ಕೆ ಶಶಿಕುಮಾರ್ ರೈ ಕಾರಣಕರ್ತರು. ಇವರ ಸಾಧನೆಯ ಹಿಂದೆ ಇರುವ ಧರ್ಮಪತ್ನಿ ಮತ್ತು ಮನೆಯವರಿಗೂ ನಾನು ವಿಶೇಷವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಶಶಿಕುಮಾರ್ ರೈ ಓರ್ವ ಸ್ನೇಹಜೀವಿ – ನನ್ಯ ಅಚ್ಚುತ ಮೂಡೆತ್ತಾಯ:
ಇನ್ನೋರ್ವ ವಿಶೇಷ ಅಭ್ಯಾಗತ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರು ಮಾತನಾಡಿ ಶಶಿಕುಮಾರ್ ರೈಯವರ ಬಗ್ಗೆ ವಿವರಿಸಿ ಹೇಳಬೇಕಾದ ಅವಶ್ಯಕತೆಯಿಲ್ಲ. ಅವರೊಬ್ಬ ಸ್ನೇಹಜೀವಿ, ನಗುಮುಖದ ವ್ಯಕ್ತಿತ್ವ. ಎಲ್ಲರೊಡನೆ ಬರೆಯುವ ಮನಸ್ಸು ಅವರದ್ದು. ಅವರ ಅಂತಹ ವಿಶೇಷ ವ್ಯಕ್ತಿತ್ವದಿಂದ ಅವರು ಉನ್ನತ ಸ್ಥಾನಕ್ಕೆ ಏರಿದ್ದಾರೆ. ಮಾಸ್ಗೆ ನಾಮಪತ್ರ ಸಲ್ಲಿಸುವ ವೇಳೆ ಶಶಿಕುಮಾರ್ ರೈಯವರ ಸಹಕಾರದಿಂದಾಗಿ ನಾನು ನಿರ್ದೇಶಕನಾಗಲು ಸಾಧ್ಯವಾಯಿತು ಎಂದು ಹೇಳಿ ಸಹಕಾರಿ ಸಂಘಗಳಲ್ಲಿ ಯಾವುದೇ ಸಮಸ್ಯೆಗಳು ಬಂದಾಗ ಅಲ್ಲಿ ಸಮಸ್ಯೆ ಪರಿಹರಿಸಿ ಉತ್ತಮ ಸೇವೆ ಮುಂದುವರಿಸುವ ನಿಟ್ಟಿನಲ್ಲಿ ಶಶಿಕುಮಾರ್ ರೈಯವರ ಕಾರ್ಯಸಾಧನೆ ವಿಶೇಷವಾದುದು. ಸಹಕಾರಿ ಕ್ಷೇತ್ರದಲ್ಲಿ ಅವರು ಕೆಲಸ ಮಾಡುವ ಶೈಲಿ ಇನ್ನೊಬ್ಬರಿಲ್ಲ. ಅವರ ಎಲ್ಲಾ ಸಾಧನೆಗಳ ಹಂತಕ್ಕೆ ಬೆಟ್ಟಂಪಾಡಿ ಪರಿಸರ ಮತ್ತು ಸೊಸೈಟಿ ಒಂದು ಫೌಂಡೇಶನ್ ಆಗಿ ಕಾರ್ಯನಿರ್ವಹಿಸಿದೆ. ರಾಜಕೀಯವಾಗಿಯೂ ಓರ್ವ ಸಾಮಾನ್ಯ ಕಾರ್ಯಕರ್ತನ ರೀತಿ ಕೆಲಸ ಮಾಡಿದ ವ್ಯಕ್ತಿತ್ವ ಅವರದ್ದು ಎಂದು ಹೇಳಿ ಶುಭ ಹಾರೈಸಿದರು.
ರಾಷ್ಟ್ರೀಯ ಸಹಕಾರಿ ಯೂನಿಯನ್ಲ್ಲೂ ಸ್ಥಾನಮಾನ ಸಿಗಲಿ – ಬಿ.ಕೆ. ಸಲೀಂ:
ಬೆಂಗಳೂರು ಚುನಾವಣಾ ಪ್ರಾಧಿಕಾರದ ಜಂಟಿ ನಿಬಂಧಕ ಬಿ.ಕೆ. ಸಲೀಂ ರವರು ಮಾತನಾಡಿ ಶಶಿಕುಮಾರ್ ರೈಯವರದ್ದು ದೊಡ್ಡ ದೇಹವಾದರೂ ಮನಸ್ಸು ಮಗುವಿನ ಮನಸ್ಸು. ಅದಕ್ಕಾಗಿ ಅವರು ಎಲ್ಲರಿಗೂ ಆತ್ಮಿಯರಾಗಿದ್ದಾರೆ. ರಾಜ್ಯಮಟ್ಟಕ್ಕೆ ಇರ್ದೆ ಬೆಟ್ಟಂಪಾಡಿ ಹೆಸರನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ. ಸಹಕಾರ ಮಹಾಮಂಡಳವು ರಾಜ್ಯದ 41 ಸಾವಿರ ಸಹಕಾರ ಸಂಘಗಳಿಗೆ ತರಬೇತಿಯನ್ನು ಕೊಡುವ ಸಂಸ್ಥೆಯಾಗಿದೆ. 8 ತರಬೇತಿ ಕೇಂದ್ರಗಳನ್ನು ಹೊಂದಿದ್ದು, ಸಹಕಾರಿ ಸಂಘಗಳಿಗೆ ಮಾತೃಸಂಸ್ಥೆಯಾಗಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಸಹಕಾರಿ ಯೂನಿಯನ್ ಲ್ಲೂ ಅವರಿಗೆ ಸ್ಥಾನಮಾನಗಳು ಸಿಗುವಂತಾಗಲಿ ಎಂದು ಆಶಿಸಿದರು.

ಕ್ಯಾಂಪ್ಕೋ ಸಹಕಾರಿಗಳ ಪರವಾಗಿ ಅಭಿನಂದನೆ – ಎಸ್.ಆರ್. ಸತೀಶ್ಚಂದ್ರ:
ಮತ್ತೋರ್ವ ವಿಶೇಷ ಅಭ್ಯಾಗತ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ರವರು ಮಾತನಾಡಿ ಎಲ್ಲರ ಅಭಿವೃದ್ಧಿ, ಹಿತದೃಷ್ಟಿ ಕಾಣುವ ಸಂಸ್ಥೆಯೆಂದರೆ ಅದು ಸಹಕಾರಿ ಸಂಸ್ಥೆಗಳು. ಸಾಮಾನ್ಯ ಜನರ ಆದಾಯಮಟ್ಟವನ್ನು ಏರಿಸುವಲ್ಲಿ ಸಹಕಾರಿಯಾದದ್ದು ಸಹಕಾರಿ ಸಂಘಗಳು. ಇಡೀ ರಾಜ್ಯದ ಗುರಿ ಸವಾಲುಗಳು, ಮಾಹಿತಿಯನ್ನು ಕೊಡುವ ಸಂಸ್ಥೆ ಸಹಕಾರ ಮಹಾಮಂಡಳ. ಸಹಕಾರಿ ಕ್ಷೇತ್ರದಲ್ಲಿ ಹಲವು ಬದಲಾವಣೆಗಳು ಆಗಬೇಕಿವೆ. ಹಿಂದೆ ಸಹಕಾರ ಸಚಿವರಾಗಿದ್ದ ಡಿಕೆ ಶಿವಕುಮಾರ್ರವರು ಈಗ ಅಗ್ರೆಸ್ಸಿವ್ ಮುಖ್ಯಮಂತ್ರಿಗಳು. ಅವರ ಮುಂದೆ ಶಶಿಕುಮಾರ್ ರೈಯವರು ವಿಶೇಷ ಮನವಿ ಮಾಡಿ ಸಹಕಾರಿ ಕ್ಷೇತ್ರದಲ್ಲಿ ರೂಲ್ 17 ನ್ನು ತೆಗೆದು ನೇಮಕಾತಿ, ಪ್ರಮೋಷನ್ ಸೇರಿದಂತೆ ಆಡಳಿತಾತ್ಮಕ ಜವಾಬ್ದಾರಿಗಳನ್ನು ಆಡಳಿತ ಮಂಡಳಿಗೆ ನೀಡುವಂತಾಗಬೇಕು. ಭಾರತ ಇಂದು ಜಗತ್ತಿನಲ್ಲಿ 4ನೇ ದೊಡ್ಡ ಇಕೊನಮಿ ಯಾಗಬೇಕಾದರೆ ಇಂದು ಸಹಕಾರಿ ಕ್ಷೇತ್ರ ಪ್ರಮುಖ ಕಾರಣವಾಗಿದೆ. ಈ ಬಗ್ಗೆ ಸರಕಾರ ಗಮನಹರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ 1.5 ಲಕ್ಷ ಕ್ಯಾಂಪ್ಕೋ ಸಹಕಾರಿಗಳ ಪರವಾಗಿ ಶಶಿಕುಮಾರ್ ರೈಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸಹಕಾರಿಗಳ ಆಶಯ, ಬೇಡಿಕೆಗಳು ನಿಮ್ಮ ಮೂಲಕ ಈಡೇರುವಂತಾಗಲಿ ಎಂದು ಆಶಿಸಿದ ಅವರು ಈ ಜಿಲ್ಲೆಯ ಅನೇಕ ಸಹಕಾರಿ ಸಂಘಗಳು ಸಮುದ್ರದಾಳಕ್ಕೆ ಹೋದಾಗ ಅಲ್ಲಿಂದ ಮೇಲಕ್ಕೆತ್ತಿದವರು ಶಶಿಕುಮಾರ್ ರೈಯವರು ಅಂದರು.
ವನ್ ನೇಷನ್ ವನ್ ಮಾರ್ಕೆಟ್, ವನ್ ನೇಷನ್ ವನ್ ಟ್ಯಾಕ್ಸ್:
ವನ್ ನೇಷನ್ ವನ್ ಮಾರ್ಕೆಟ್, ವನ್ ನೇಷನ್ ವನ್ ಟ್ಯಾಕ್ಸ್ ಆಗಬೇಕು. ಒಬ್ಬ ರೈತ ತನ್ನ ಉತ್ಪನ್ನಗಳನ್ನು ದೇಶದ ಯಾವುದೇ ಮೂಲೆಯಲ್ಲಾದರೂ ಮಾರುಕಟ್ಟೆ ಮಾಡುವ ಅವಕಾಶ, ಇಡೀ ದೇಶದಲ್ಲಿ ಒಂದೇ ಕಡೆ ಟ್ಯಾಕ್ಸ್ ಕಟ್ಟುವ ವ್ಯವಸ್ಥೆಯಾಗಬೇಕು. ,ಇದಕ್ಕಾಗಿ ಕೇಂದ್ರ ಸರಕಾರ ಪಾಲಿಸಿ ತರಬೇಕು. ರಾಜ್ಯ ಸರಕಾರ ಇದಕ್ಕೆ ಸಹಕಾರ ಮಾಡಬೇಕು. ಇದರಿಂದ ಸಹಕಾರಿ ಕ್ಷೇತ್ರದ ಮೂಲಕ ರೈತ ಬೆಳೆಯಲು ಸಾಧ್ಯವಾಗುತ್ತದೆ. ನಮ್ಮ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯ ಅವಕಾಶ ಸಿಗುತ್ತದೆ ಎಂದು ಸತೀಶ್ಚಂದ್ರರವರು ಹೇಳಿ ಈ ನಿಯಮ ಜಾರಿಗಾಗಿ ಸರಕಾರವನ್ನು ಒತ್ತಡ ಮಾಡುತ್ತೇವೆ ಎಂದರು.
ಮಂಜುನಾಥ ಸ್ವಾಮಿ ಅವರನ್ನು ಕೈ ಬಿಟ್ಟಿಲ್ಲ – ಶಶಿಧರ್:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶಶಿಧರ್ ರವರು ಮಾತನಾಡಿ ನಮ್ಮ ಯೋಜನೆಯ ಸದಸ್ಯರು ಇಂದು ದೊಡ್ಡ ಸ್ಥಾನಕ್ಕೆ ಹೋಗಿದ್ದಾರೆಂದು ಹೇಳಲು ಹೆಮ್ಮೆ ಪಡುತ್ತೇನೆ. ಯೋಜನೆ ಪುತ್ತೂರಿಗೆ ಪಾದಾರ್ಪಣೆ ಮಾಡುವ ಸಂದರ್ಭದಲ್ಲಿ ಖಾವಂದರ ಕಾರ್ಯಕ್ರಮ ಪುತ್ತೂರಿಗೆ ಬಂದಾಗ ಯೋಜನೆಯ ಜೊತೆ ನಿರಂತರವಾಗಿ ಇದ್ದವರು ಶಶಿಕುಮಾರ್ ರೈಯವರು. ಜನಜಾಗೃತಿ ವೇದಿಕೆ ಪುತ್ತೂರು ತಾಲೂಕಿನಲ್ಲಿ ಹೆಸರು ಬರಲು ಶಶಿಕುಮಾರ್ ರೈ ಬಾಲ್ಯೊಟ್ಟು ಅದಕ್ಕೆ ಪ್ರಮುಖ ಕಾರಣ. ಅವರ ಅವಽಯಲ್ಲಿ ನಡೆದಿರುವ ಕಾರ್ಯಕ್ರಮಗಳು ಇಂದಿಗೂ ಮಾದರಿಯಾಗಿವೆ. ಶಶಿಯಣ್ಣನನ್ನು ಜನರು ಕೈ ಬಿಡಲಿಲ್ಲ. ಧರ್ಮಸ್ಥಳ ಮಂಜುನಾಥ ಸ್ವಾಮಿಯೂ ಕೈ ಬಿಟ್ಟಿಲ್ಲ. ಬಹಳ ಎತ್ತರದ ಸ್ಥಾನದಲ್ಲಿ ಕೂರಿಸಿದ್ದಾನೆ ಎಂದು ಹೇಳಿ ಅಭಿನಂದನೆ ಸಲ್ಲಿಸಿದರು.

ಸನ್ಮಾನಕ್ಕೆ ಚಿರಋಣಿ:
ಸನ್ಮಾನ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಹುಟ್ಟೂರ ಸನ್ಮಾನಕ್ಕಾಗಿ ನಾನು ಮುಜುಗರ ವ್ಯಕ್ತಪಡಿಸಿದ್ದೆ. ಆದರೆ ಮನಮೋಹನ್ ರೈ, ರಾಮಯ್ಯ ರೈ ಮತ್ತು ಅವರ ತಂಡ ನನ್ನ ಮಾತನ್ನು ಕೇಳದೆ ಅಭಿನಂದನಾ ಸಮಾರಂಭ ಆಯೋಜಿಸಿದ್ದಾರೆ. ಮೊದಲಾಗಿ ನಿಮ್ಮೆಲ್ಲರ ಅಭಿಮಾನದ ಸನ್ಮಾನಕ್ಕಾಗಿ ನಾನು ಚಿರಋಣಿಯಾಗಿದ್ದೇನೆ ಎಂದರು.
ಮಾತೃಸಂಘವೇ ನನ್ನ ಎತ್ತರಕ್ಕೆ ಕಾರಣ – ಶಶಿಕುಮಾರ್ ರೈ:
ಸಹಕಾರಿ ಕ್ಷೇತ್ರಕ್ಕೆ ಬರುವ ಮೊದಲು ಇರ್ದೆ ಬೆಟ್ಟಂಪಾಡಿ ಸಹಕಾರಿ ಸಂಘದಲ್ಲಿ ನಿರ್ದೇಶಕನಾಗುವ ಕನಸು ಕಂಡಿದ್ದೆ. ಕನಸು ನನಸಾದ ಮೇಲೆ ಇಂದು ಇಷ್ಟು ಎತ್ತರದ ಸ್ಥಾನಕ್ಕೆ ಹೋಗಲು ಇದೇ ಸಂಘ ಮೂಲ ಕಾರಣವಾಗಿದೆ. ಸಹಕಾರಿ ಕ್ಷೇತ್ರಕ್ಕೆ ಬಂದ ಮೇಲೆ ಡಾ. ಎಂ.ಎನ್. ರಾಜೇಂದ್ರ ಕುಮಾರ್ರವರು ವಿಶ್ವಾಸಕ್ಕೆ ಪಾತ್ರನಾಗಿ ಎಸ್ಸಿಡಿಸಿಸಿ ಬ್ಯಾಂಕ್ ನಲ್ಲಿ ಕೆಲಸ ಕಾರ್ಯ ಮಾಡಲು ಸಾಧ್ಯವಾಯಿತು. ಅಲ್ಲಿಯೂ ಅನೇಕ ಕಠಿಣ ಸವಾಲುಗಳು, ಸಮಸ್ಯೆಗಳು ಬಂದಾಗ ಅವೆಲ್ಲವನ್ನೂ ನಿವಾರಿಸಿಕೊಂಡು ಹೋಗುವ ಕೆಲಸ ಕಾರ್ಯಗಳಾದವು. ಮುಂದೆ ಸಹಕಾರಿ ಯೂನಿಯನ್ ಗೆ ಡೆಲಿಗೇಷನ್ ನಡೆಯುವಾಗಲೂ ನನ್ನ ಮಾತೃ ಸಂಘದ ಡೆಲಿಗೇಷನ್ ಇರುವುದರಿಂದ ಸಾಧ್ಯವಾಯಿತು. ಸಹಕಾರ ಮಹಾಮಂಡಳದ ಚುನಾವಣೆ ಸಂದರ್ಭದಲ್ಲಿ 28 ಮಂದಿಯಲ್ಲಿ 13 ಮಂದಿಯನ್ನು ಅವಿರೋಧ ಆಯ್ಕೆ ಮಾಡುವಾಗ ಮುಖ್ಯಮಂತ್ರಿಯವರು ನನ್ನ ಹೆಸರನ್ನು ಮೊದಲಾಗಿ ಘೋಷಿಸಿದರು. 5 ವರ್ಷಗಳ ಹಿಂದೆ ಡಿಕೆ ಶಿವಕುಮಾರ್ ರವರು ಪುತ್ತೂರಿಗೆ ಬಂದಾಗ ನನ್ನ ಪುತ್ತೂರಿನ ಮನೆಯಲ್ಲಿ ವಾಸ್ತವ್ಯ ಹೊಂದಿದ್ದರು. ಆ ಕಾರಣಕ್ಕೆ ಅವರ ಬಳಿ ಹೋದಾಗ ಬಾ ರೈ ಎಂದು ಹೇಳಿ ಕರೆಸಿಕೊಂಡು ಪ್ರತಿಯೊಂದು ಹಂತದಲ್ಲೂ ನನ್ನ ಬೆನ್ನುತಟ್ಟಿದ್ದಾರೆ. ಎಂಪಿ, ಎಂಎಲ್ಎ ಕುಟುಂಬದವರೇ ಇರುವ ಮಹಾಮಂಡಳದಲ್ಲಿ ಓರ್ವ ಸಾಮಾನ್ಯ ರೈತನ ಮಗನನ್ನು ಮುಖ್ಯಮಂತ್ರಿಯವರು ಗುರುತಿಸಿದ್ದಾರೆ. ಚುನಾವಣೆ ನಡೆದಾಗಲೂ 18 ಮತಗಳಲ್ಲಿ 18 ಮತಗಳನ್ನು ಪಡೆದ ಏಕೈಕ ವ್ಯಕ್ತಿಯಾಗಬೇಕಾದರೆ ಅದಕ್ಕೆ ಡಾ. ಎಂ.ಎನ್. ರಾಜೇಂದ್ರ ಕುಮಾರ್ ರವರ ಮಾರ್ಗದರ್ಶನ ಸಹಕಾರವೇ ಕಾರಣವಾಗಿದೆ. ಅವರ ಅಗಾಧ ಪ್ರಭಾವ ನನ್ನನ್ನು ಎಲ್ಲಿಯೂ ಸೋಲಲು ಬಿಟ್ಟಿಲ್ಲ. ಬೇರೆ ಯಾವ ಸಹಕಾರಿ ಸಂಘಕ್ಕೆ ದೊರೆಯದ ಅವಕಾಶ ನಮ್ಮ ಸಂಘದ ಸಿಇಒ ರವರ ಕರ್ತವ್ಯ ವಿಸ್ತರಣೆಗೆ ಮುಖ್ಯಮಂತ್ರಿಯವರ ಸಹಿ ಸಂದರ್ಭದಲ್ಲೂ ವಿಶೇಷವಾಗಿ ಸ್ಪಂದಿಸಿರುವುದು ನೋಡಿದರೆ ನಿಮ್ಮೆಲ್ಲರ ಆಶಿರ್ವಾದ, ಅಭಿಮಾನ ಮತ್ತು ಸಹಕಾರದಿಂದ ಸಹಕಾರಿ ಕ್ಷೇತ್ರದಲ್ಲಿ ನಾನು ಮಾಡಿರುವ ಕೆಲಸ ಕಾರ್ಯ ಒಂದು ದೊಡ್ಡ ಪರಿಣಾಮವನ್ನು ಬೀರಿದೆ ಎಂದರೆ ತಪ್ಪಾಗಲಾರದು ಎಂದರು. ನನ್ನ ಕಷ್ಟ ಕಾಲದಲ್ಲಿಯೂ ನನಗೆ ಸಹಕಾರ ನೀಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಖಾವಂದರಿಗೆ ಅವರ ಸಂಕಷ್ಟದ ಕಾಲದಲ್ಲಿಯೂ ಅವರ ಜೊತೆ ನಿಂತು ಕೆಲಸ ಮಾಡುವ ಭಾಗ್ಯ ನನಗೆ ದೊರೆತಿದೆ. ನಿಮ್ಮೆಲ್ಲರ ಆಶೀರ್ವಾದ ಹೀಗೆಯೇ ಮುಂದುವರಿಯಲಿ. ಸಹಕಾರಿ ಕ್ಷೇತ್ರದಲ್ಲಿ ಯಾವ ಕೆಲಸವಾಗಬೇಕಿದ್ದರೂ ನನ್ನಲ್ಲಿ ಕೇಳಿ. ನನ್ನ ಜೊತೆ ನಿರಂತರವಾಗಿ ಇರುವ ಈ ಜಿಲ್ಲೆಯ ಎಲ್ಲಾ ಸಹಕಾರಿಗಳ ಜೊತೆ ನಾನೂ ಇದ್ದು ಸಹಕಾರ ಮಾಡಲಿದ್ದೇನೆ ಎಂದು ಶಶಿಕುಮಾರ್ ರೈ ಹೇಳಿದರು. ಸಹಕಾರಿ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳು ಆಗುವಲ್ಲಿ ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಲ್ಲಿ ಮನವಿ ಮಾಡಿ ಪರಿಣಾಮತ್ಮಕವಾದ ಬದಲಾವಣೆಗಳು ನಡೆದಿವೆ. ಅವರ ಅಗಾಧ ಸೇವೆ ಮತ್ತು ಕಾರ್ಯಗಳು ಇಂದು ಎಲ್ಲಾ ಸಹಕಾರಿ ಸಂಘಗಳು ಉನ್ನತ ಮಟ್ಟಕ್ಕೆ ತಲುಪಲು ಕಾರಣವಾಗಿದೆ ಎಂದ ಶಶಿಕುಮಾರ್ ರೈಯವರು 8 ವರ್ಷಗಳ ಕಾಲ ಜನಜಾಗೃತಿ ವೇದಿಕೆಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ ರೀತಿ, ಖಾವಂದರ ಆತ್ಮೀಯತೆ ಪಡೆದಿರುವ ಬಗ್ಗೆ ತಮ್ಮ ವಿಶೇಷ ಅನುಭವ ಸಭೆಯ ಮುಂದಿಟ್ಟರು.
ಅಶೋಕ್ ರೈಯವರ ಸಹಕಾರ ಮರೆಯುವಂತಿಲ್ಲ:
ಸಹಕಾರಿ ಕ್ಷೇತ್ರದಲ್ಲಿ ಎತ್ತರಕ್ಕೆ ಏರಲು ಶಾಸಕರಾದ ಅಶೋಕ್ ಕುಮಾರ್ ರೈಯವರೂ ಕಾರಣೀಭೂತರು ಎಂದು ಹೇಳಿದ ರೈಯವರು ಸಹಕಾರ ಮಹಾಮಂಡಳದ ನಿರ್ದೇಶಕನಾಗುವಲ್ಲಿಯೂ ಅಶೋಕ್ ರೈಯವರ ಸಹಕಾರವನ್ನು ಎಂದಿಗೂ ಮರೆಯುವಂತಿಲ್ಲ ಶಶಿಕುಮಾರ್ ರೈ ಬಾಲ್ಯೊಟ್ಟು ಹೇಳಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಇರ್ದೆ ಬೆಟ್ಟಂಪಾಡಿ ಪ್ರಾ.ಕೃ.ಪ.ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಮಯ್ಯ ರೈರವರು ಶಶಿಕುಮಾರ್ ರೈಯವರು ನಮ್ಮ ಸಂಘದ ಸರ್ವತೋಮುಖ ಬೆಳವಣಿಗೆಯಲ್ಲಿ ನಿರಂತರವಾಗಿ ಶ್ರಮಿಸಿದವರು. ಅವರು ಕೈಯಾಡಿಸಿದ ಪ್ರತೀ ಸಹಕಾರಿ ಸಂಸ್ಥೆಗಳನ್ನೂ ಆರ್ಥಿಕವಾಗಿ ಲಾಭದಾಯಕವಾಗಿ ಮೇಲ್ಮಟ್ಟಕ್ಕೆ ಕೊಂಡೊಯ್ದ ಹೆಗ್ಗಳಿಕೆ ಅವರಿಗಿದೆ. ಸಹಕಾರಿ ರಂಗ ಮಾತ್ರವಲ್ಲದೇ ಈ ಭಾಗದ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ರಂಗದಲ್ಲಿ ಶಶಿಕುಮಾರ್ ರೈಯವರ ಕೊಡುಗೆ ಮಹತ್ತರವಾದುದು ಎಂಬುದನ್ನು ಮನಗಂಡು ನಮ್ಮ ಸದಸ್ಯರಾದ ಪ್ರಕಾಶ್ ರೈ ಬೈಲಾಡಿ, ಪ್ರವೀಣ್ ರೈ ಪಂಜೊಟ್ಟುರವರು ಪ್ರಸ್ತಾಪಿಸಿದಾಗ ಎಲ್ಲಾ ಹಿರಿಯ ಸಹಕಾರಿಗಳು ಈ ಕಾರ್ಯಕ್ರಮ ನಡೆಯಲೇಬೇಕು ಎಂದು ಪಟ್ಟು ಹಿಡಿದರು. ಇದನ್ನು ಶಶಿಕುಮಾರ್ ರೈಯವರಿಗೆ ಹೇಳಿದಾಗ ಅವರು ಒಪ್ಪದಿದ್ದರೂ ಆದರೆ ಅವರ ಮನವೊಲಿಸುವಲ್ಲಿ ನಾವು ಯಶಸ್ವಿಯಾದೆವು ಎಂದು ಹೇಳಿದ ಅವರು ಸಹಕಾರಿ ಕ್ಷೇತ್ರದಲ್ಲಿ ಶಶಿಕುಮಾರ್ ರೈಯವರು ಹಂತ ಹಂತವಾಗಿ ಮೇಲಕ್ಕೇರಿದ ಮತ್ತು ಸಾಧನೆಯ ಯಶೋಗಾಥೆಯನ್ನು ಸಭೆಯ ಮುಂದಿಟ್ಟರು. ಇರ್ದೆ ಬೆಟ್ಟಂಪಾಡಿ ಸಹಕಾರಿ ಸಂಘಕ್ಕೆ ಅವರ ಕೊಡುಗೆಯಿಂದಾಗಿ ಇಂದು ಸುಸಜ್ಜಿತ ವ್ಯವಸ್ಥೆಗಳೊಂದಿಗೆ ಸಂಘವು ಅಭಿವೃದ್ಧಿಯಲ್ಲಿ ಮುನ್ನಡೆಯುತ್ತಿದೆ ಎಂದರು.
ಶಶಿಕುಮಾರ್ ರೈ ದಂಪತಿಗೆ ದೀಪಿಕಾ, ಅನನ್ಯ, ರೂಪಾ, ಸ್ವಾತಿ, ಪೂರ್ಣಿಮಾ ಆರತಿ ಬೆಳಗಿದರು. ಅದಿತಿ ರವಿ ಬೊಳಿಕಲ ಪ್ರಾರ್ಥಿಸಿದರು. ಹುಟ್ಟೂರ ಅಭಿನಂದನಾ ಸಮಿತಿ ಅಧ್ಯಕ್ಷ ಮನಮೋಹನ ರೈ ಚೆಲ್ಯಡ್ಕ ಸ್ವಾಗತಿಸಿ, ಶಶಿಕುಮಾರ್ ರೈಯವರ ಹುಟ್ಟೂರ ಅಭಿನಂದನಾ ಸಮಾರಂಭಕ್ಕಾಗಿ ಪೂರ್ವಭಾವಿ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯ, ಅಲ್ಲಿಂದ ಕಾರ್ಯಚಟುವಟಿಕೆ ನಡೆದು ಬಂದ ಹಾದಿಯನ್ನು ಸಭೆಯ ಮುಂದಿಟ್ಟರು. ಹುಟ್ಟೂರ ಅಭಿನಂದನಾ ಸಮಿತಿಯ ಗೌರವಾಧ್ಯಕ್ಷ ಚಿದಾನಂದ ಬೈಲಾಡಿ ವಂದಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.
ಹುಟ್ಟೂರ ಅಭಿನಂದನಾ ಸಮಿತಿಯ ಆರ್ಥಿಕ ಸಮಿತಿ ಅಧ್ಯಕ್ಷ ಪ್ರವೀಣ್ ರೈ ಪಂಜೊಟ್ಟು, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ರೈ ಬೈಲಾಡಿ, ಪದಾಽಕಾರಿಗಳಾದ ರಂಗನಾಥ ರೈ ಗುತ್ತು, ಅರುಣ್ ಕುಮಾರ್ ರೈ ಆನಾಜೆ, ಯತೀಶ್ ರೈ ಚೆಲ್ಯಡ್ಕ, ಚಿದಾನಂದ ಬೈಲಾಡಿ, ಕೋಶಾಧಿಕಾರಿ ಜಗನ್ನಾಥ ರೈ, ಶ್ರೀಕೃಷ್ಣ ಬೋಳಿಲ್ಲಾಯ, ವಿನೋದ್ ಕುಮಾರ್ ಬಲ್ಲಾಳ್, ವಿಠಲ ರೈ ಬಾಲ್ಯೊಟ್ಟುಗುತ್ತು, ಮಹಮ್ಮದ್ ಕುಂಞಿ ಕೊರಿಂಗಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವೇ.ಮೂ. ದಿನೇಶ್ ಮರಡಿತ್ತಾಯ ಗುಮ್ಮಟೆಗದ್ದೆ, ಆರ್.ಸಿ. ನಾರಾಯಣ ರೆಂಜ, ಪ್ರಕಾಶ್ ರೈ ಬೈಲಾಡಿ, ರಂಗನಾಥ ರೈ ಗುತ್ತು, ರಾಮಯ್ಯ ರೈ, ಜಗನ್ನಾಥ ರೈ ಕೊಮ್ಮಂಡ, ಪ್ರವೀಣ್ ರೈ ಪಂಜೊಟ್ಟು, ಅರುಣ್ ಕುಮಾರ್ ರೈ, ಚಿದಾನಂದ ಬೈಲಾಡಿ ಅತಿಥಿ ಅಭ್ಯಾಗತರನ್ನು ಸಹಕಾರಿ ಶಾಲು, ಹೂ ನೀಡಿ ಸ್ವಾಗತಿಸಿದರು. ಹಿರಿಯ ಸಹಕಾರಿ ಧುರೀಣ ಸವಣೂರು ಸೀತರಾಮ ರೈ, ಸಾಜ ರಾಧಾಕೃಷ್ಣ ಆಳ್ವ, ಪಾಣಾಜೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಬೋರ್ಕರ್, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್ ಸೇರಿದಂತೆ ಹಲವು ಕ್ಷೇತ್ರಗಳ ಗಣ್ಯರು, ಸಹಕಾರಿ ಸಂಘಗಳ ಪ್ರಮುಖರು, ಎಸ್ಸಿಡಿಸಿಸಿ ಬ್ಯಾಂಕ್ ಅಽಕಾರಿಗಳು, ಸಹಕಾರಿ ಸದಸ್ಯರು, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸದಸ್ಯರು, ನವೋದಯ ಸ್ವ-ಸಹಾಯ ಸಂಘಗಳ ಸದಸ್ಯರು, ಇರ್ದೆ, ಬೆಟ್ಟಂಪಾಡಿ, ನಿಡ್ಪಳ್ಳಿ, ಪಾಣಾಜೆ ಗ್ರಾಮಗಳ ಜನತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಸಭಾ ಕಾರ್ಯಕ್ರಮದ ಬಳಿಕ ವಿವಿಧ ಸಂಘ ಸಂಸ್ಥೆಯವರು, ಶಶಿಕುಮಾರ್ ರೈ ಅಭಿಮಾನಿಗಳು, ಸಹಕಾರಿಗಳು ವಿಶೇಷವಾಗಿ ರೈಯವರನ್ನು ಅಭಿನಂದಿಸಿದರು. ಸನ್ಮಾನ ಮತ್ತು ಅಭಿನಂದನೆ ವೇಳೆ ಶಶಿಕುಮಾರ್ ರೈಯವರ ಪತ್ನಿ ಹರಿಣಾಕ್ಷಿ ಎಸ್. ರೈ, ಪುತ್ರ ಶಿರಾಲ್ ಎಸ್. ರೈ ಉಪಸ್ಥಿತರಿದ್ದರು. ಇರ್ದೆ ಬೆಟ್ಟಂಪಾಡಿ ಸಹಕಾರಿ ಸಂಘದ ನಿರ್ದೇಶಕರು, ಸಿಬಂದಿಗಳು ವಿವಿಧ ರೀತಿಯಲ್ಲಿ ಸಹಕರಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಉಪಾಹಾರ ಹಾಗೂ ಕೊನೆಯಲ್ಲಿ ಸಹಭೋಜನ ಏರ್ಪಡಿಸಲಾಗಿತ್ತು.
ಸುದ್ದಿ ಲೈವ್ನಲ್ಲಿ ನೇರ ಪ್ರಸಾರ :
ಅಭಿನಂದನಾ ಸಮಾರಂಭವನ್ನು ಸುದ್ದಿ ಲೈವ್ ಚಾನೆಲ್ನಲ್ಲಿ ನೇರ ಪ್ರಸಾರ ಮಾಡಲಾಯಿತು. ವೇದಿಕೆಯಲ್ಲಿ ಬೃಹತ್ ಎಲ್ಇಡಿ ಪರದೆ ಅಳವಡಿಸಿ ಶಶಿಕುಮಾರ್ ರೈಯವರ ವಿಡಿಯೋ ಚಿತ್ರವನ್ನು ಪ್ರದರ್ಶಿಸಲಾಯಿತು.

ತೆರೆದ ಜೀಪಿನಲ್ಲಿ ಮೆರವಣಿಗೆ:
ಸಭಾ ಕಾರ್ಯಕ್ರಮಕ್ಕೆ ಮುಂಚಿತವಾಗಿ ರೆಂಜ ಶ್ರೀರಾಮನಗರ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ನಂತರ ಕೊಂಬು ವಾದ್ಯ, ಚೆಂಡೆ ಮೇಳದೊಂದಿಗೆ, ಆಕರ್ಷಕ ಗೊಂಬೆ ಕುಣಿತ, ಕಲಶ ಹಿಡಿದ ಮಹಿಳೆಯರ ಸಾಲಿನೊಂದಿಗೆ ತೆರೆದ ಜೀಪಿನಲ್ಲಿ ಶಶಿಕುಮಾರ್ ರೈಯವರನ್ನು ಮೆರವಣಿಗೆ ಮೂಲಕ ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣಕ್ಕೆ ಕರೆತರಲಾಯಿತು.
ಇಷ್ಟು ಎತ್ತರಕ್ಕೆ ಏರಲು ನನ್ನ ಮಾತೃ ಸಂಘವೇ ಕಾರಣ – ಶಶಿಕುಮಾರ್ ರೈ
ಸಹಕಾರಿ ರಂಗದಲ್ಲಿ ಉನ್ನತ ಸ್ಥಾನಮಾನಗಳು ಮತ್ತು ಜವಾಬ್ದಾರಿಯ ಕೆಲಸ ನಿರ್ವಹಿಸಲು ಅವಕಾಶ ದೊರೆತಿರುವುದಕ್ಕೆ ಮೂಲ ಕಾರಣ ನನ್ನ ಮಾತೃ ಸಂಘವಾಗಿರುವ ಇರ್ದೆ ಬೆಟ್ಟಂಪಾಡಿ ಪತ್ತಿನ ಸಹಕಾರಿ ಸಂಘ. ಇಲ್ಲಿನ 7೦೦೦ ಸದಸ್ಯರ ಆಶೀರ್ವಾದ ಹಾರೈಕೆಯಿಂದ ರಾಜ್ಯದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಧ್ವನಿಯಾಗುವ ಅವಕಾಶ ಲಭಿಸಿದೆ ಎಂದು ಶಶಿಕುಮಾರ್ ರೈ ತಮ್ಮ ಭಾಷಣದಲ್ಲಿ ಒತ್ತಿ ಹೇಳಿದರು.
ರಾಜಕೀಯವಾಗಿಯೂ ಶಶಿಯಣ್ಣನಿಗೆ ಅವಕಾಶ ಸಿಗಲಿ
ಅಭಿನಂದನಾ ಸಮಾರಂಭದಲ್ಲಿದ್ದ ಎಲ್ಲಾ ಗಣ್ಯರು ತಮ್ಮ ಭಾಷಣಗಳಲ್ಲಿ ಸಹಕಾರಿ ರಂಗದಲ್ಲಿ ಉನ್ನತ ಸ್ಥಾನಮಾನಕ್ಕೆ ಏರಿರುವ ಶಶಿಕುಮಾರ್ ರೈಯವರು ರಾಜಕೀಯವಾಗಿಯೂ ಉತ್ತಮ ಹುದ್ದೆಗಳನ್ನು ಪಡೆಯುವಂತಾಗಲಿ. ಸಹಕಾರಿ ನಾಯಕನಾದವನು ರಾಜಕೀಯವಾಗಿಯೂ ಅಭಿವೃದ್ಧಿ ಮತ್ತು ಜನಸೇವೆಯ ಚಿಂತನೆಯಲ್ಲಿ ಕೆಲಸ ಮಾಡುವ ಹಿನ್ನೆಲೆಯಲ್ಲಿ ಅವರಿಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ ಎಂಬ ಅಭಿಪ್ರಾಯ, ಆಶಯಗಳನ್ನು ವ್ಯಕ್ತಪಡಿಸಿದರು.










