







ಪುತ್ತೂರು: ಅರಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾವು ಮಾಡನ್ನೂರು ತಿರುವಿನಲ್ಲಿ ಬಸ್ ತಂಗುದಾಣ ನಿರ್ಮಿಸಿಕೊಡುವಂತೆ ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.



ಈ ತಿರುವು ಗ್ರಾಮದ ಪ್ರಮುಖ ಬಸ್ ನಿಲ್ದಾಣವಾಗಿದ್ದು, ಪ್ರತಿದಿನ ಶಾಲಾ ಮಕ್ಕಳು, ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ಸೇರಿದಂತೆ ನೂರಾರು ಪ್ರಯಾಣಿಕರು ಇಲ್ಲಿ ಬಸ್‌ಗಾಗಿ ಕಾಯುತ್ತಾರೆ. ಆದರೆ ತಂಗುದಾಣದ ವ್ಯವಸ್ಥೆ ಇಲ್ಲದ ಕಾರಣ ಮಳೆಗಾಲದಲ್ಲಿ ಮಳೆಯಲ್ಲಿ ನೆನೆಯುತ್ತಾ, ಬೇಸಿಗೆಕಾಲದಲ್ಲಿ ಬಿಸಿಲಿನಲ್ಲಿ ನಿಲ್ಲುವ ದುಸ್ಥಿತಿ ಎದುರಾಗಿದೆ. ಅನಿವಾರ್ಯವಾಗಿ ಸಮೀಪದ ಅಂಗಡಿಗಳ ಬಾಗಿಲ ಬಳಿ ಹಾಗೂ ರಿಕ್ಷಾ ನಿಲ್ದಾಣದಲ್ಲಿ ಆಶ್ರಯ ಪಡೆಯುವ ಪರಿಸ್ಥಿತಿ ಇದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.




ವಯೋವೃದ್ಧರು ಮತ್ತು ಶಾಲಾ ಮಕ್ಕಳಿಗೆ ಈ ಸಮಸ್ಯೆ ಮತ್ತಷ್ಟು ತೊಂದರೆಯಾಗುತ್ತಿದೆ. ಮಳೆಯ ಸಂದರ್ಭದಲ್ಲಿ ಬಸ್ ತಡವಾದರೆ ಗಂಟೆಗಟ್ಟಲೆ ನಿಲ್ಲಬೇಕಾಗುತ್ತದೆ.ಈ ಹಿನ್ನೆಲೆಯಲ್ಲಿ ಕಾವು ಮಾಡನ್ನೂರು ತಿರುವಿನಲ್ಲಿ ಶೀಘ್ರವಾಗಿ ಸುಸಜ್ಜಿತ ಬಸ್ ತಂಗುದಾಣ ನಿರ್ಮಿಸಿಕೊಡಬೇಕು ಎಂದು ಗ್ರಾಮಸ್ಥರು ಪುತ್ತೂರು ಶಾಸಕರು, ಗ್ರಾಮ ಪಂಚಾಯತ್ ಹಾಗೂ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿದ್ದಾರೆ.










