







ನಮ್ಮ ಜಬಾಬ್ದಾರಿ ಅರಿಯೋಣ, ಪೌರ ಕಾರ್ಮಿಕರು ಕೂಡ ಮನುಷ್ಯರೇ-ವಿದ್ಯಾ ಕಾಳೆ


ಸ್ವಚ್ಛತೆ ಸ್ವಚ್ಛತಾ ಸಿಬ್ಬಂದಿಗಳ ಜವಾಬ್ದಾರಿಯಲ್ಲ, ಅದು ನಮ್ಮೆಲ್ಲರ ಜವಾಬ್ದಾರಿ-ಉಮೇಶ್ ನಾಯಕ್
ಪೌರ ಕಾರ್ಮಿಕರ ಸೇವೆಯನ್ನು ನಾವು ಗೌರವಿಸಲೇಬೇಕು-ಪ್ರೊ|ಇಬ್ರಾಹಿಂ ಎಂ
ಸ್ವಚ್ಛತಾ ಸೇನಾನಿಗಳ ಶ್ರದ್ಧೆಯ ಕಾರ್ಯ ಮಾದರಿಯಾಗಿದೆ-ಪ್ರೊ|ದತ್ತಾತ್ರೇಯ ರಾವ್
ಪೌರ ಕಾರ್ಮಿಕರಿಗೆ ಸನ್ಮಾನವಲ್ಲ, ಕೃತಜ್ಞತೆ-ಎಂ.ಜಿ ರಫೀಕ್




ಪುತ್ತೂರು:ಪೌರ ಕಾರ್ಮಿಕರ ಹಾಗೂ ಚಾಲಕರ ಮೇಲೆ ಜನರು ತಮ್ಮ ಕೆಲಸ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ. 700 ಜನರಿಗೆ ಒಬ್ಬ ಪೌರ ಕಾರ್ಮಿಕ ಇರಬೇಕು ಎಂದು ಅಂಕಿಅಂಶ ಹೇಳುತ್ತದೆ. ನಗರಸಭೆ ಇರುವುದೇ ಕಂಪ್ಲೇಟ್ ಮಾಡುವುದಕ್ಕೆ ಎಂಬ ಭಾವನೆ ಸರಿಯಲ್ಲ. ಜನರೂ ಕೂಡ ಜವಾಬ್ದಾರಿಗಳು, ಕರ್ತವ್ಯಗಳನ್ನು ಪಾಲಿಸಬೇಕಾಗುತ್ತದೆ. ನಮ್ಮ ನಮ್ಮ ಜಬಾಬ್ದಾರಿಯನ್ನು ಅರಿಯೋಣ, ನಮ್ಮ ಹಾಗೆಯೇ ಪೌರ ಕಾರ್ಮಿಕರು ಕೂಡ ಮನುಷ್ಯರು. ಅವರನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಳ್ಳೋಣ ಎಂದು ಪುತ್ತೂರು ನಗರಸಭೆಯ ಪೌರಾಯುಕ್ತೆ ಶ್ರೀಮತಿ ವಿದ್ಯಾ ಎಂ.ಕಾಳೆರವರು ಹೇಳಿದರು.

ಅ.2ರಂದು ಗಾಂಧಿ ಜಯಂತಿ ಕಾರ್ಯಕ್ರಮದ ಅಂಗವಾಗಿ ರೋಟರಿ ಕ್ಲಬ್ ಪುತ್ತೂರು, ದರ್ಬೆ ಗಣೇಶ್ ಟ್ರೇಡರ್ಸ್, ದರ್ಬೆ ಶ್ರೀಲಕ್ಷ್ಮೀ ಏಜೆನ್ಸಿಸ್(ಎಕ್ಸೈಡ್ ಬ್ಯಾಟರಿ ಡೀಲರ್), ದರ್ಬೆ ಏಷ್ಯನ್ ವುಡ್ ಆಂಡ್ ಮಂಗಳೂರು ಫರ್ನಿಚರ್ಸ್ ಮತ್ತು ಎಲೆಕ್ಟ್ರಾನಿಕ್ಸ್, ದರ್ಬೆ ನಯಾ ಚಪ್ಪಲ್ ಬಜಾರ್ರವರ ಜಂಟಿ ಪ್ರಾಯೋಜಕತ್ವದಲ್ಲಿ ಪುತ್ತೂರಿನ 8 ರೋಟರಿ ಕ್ಲಬ್ಗಳಾದ ರೋಟರಿ ಕ್ಲಬ್ ಪುತ್ತೂರು ಈಸ್ಟ್, ರೋಟರಿ ಕ್ಲಬ್ ಪುತ್ತೂರು ಯುವ, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ರೋಟರಿ ಕ್ಲಬ್ ಪುತ್ತೂರು ಸ್ವರ್ಣ, ರೋಟರಿ ಕ್ಲಬ್ ಪುತ್ತೂರು ಬಿರುಮಲೆ ಈಲ್ಸ್, ರೋಟರಿ ಕ್ಲಬ್ ಪುತ್ತೂರು ಸಿಟಿ, ರೋಟರಿ ಕ್ಲಬ್ ಪುತ್ತರೂ ಎಲೈಟ್ ಇವುಗಳ ಸಹಯೋಗದೊಂದಿಗೆ ಸ್ವಚ್ಚತಾ ಜಾಗೃತಿ ಜಾಥಾ ಮತ್ತು ನಗರಸಭೆ ಸಭಾಂಗಣದಲ್ಲಿ ನಡೆದ ನಗರಸಭೆ ಪೌರ ಕಾರ್ಮಿಕರಾದ ಸ್ವಚ್ಛತಾ ಸೇನಾನಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ದೇಶ ಕಂಡ ಅಪರೂಪದ ಪ್ರಧಾನಿ ಲಾಲ್ ಬಹದ್ದೂರು ಶಾಸ್ತ್ರಿರವರ ಜನ್ಮದಿನವನ್ನು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ನಗರಸಭೆಯ ಪೌರಕಾರ್ಮಿಕರ ಸೇವೆಯನ್ನು ಗುರುತಿಸಿ ಕೃತಜ್ಞತೆ ಸಮರ್ಪಿಸಿರುವುದು ಶ್ಲಾಘನೀಯ. ಪೌರ ಕಾರ್ಮಿಕರಿಂದ ನಗರ ಸ್ವಚ್ಛವಾಗಿದೆ, ದೇಶದ, ರಾಷ್ಟ್ರಮಟ್ಟದಲ್ಲಿ, ರಾಜ್ಯಮಟ್ಟದಲ್ಲಿ ಹೆಸರು ಬರಲು ಕಾರಣವೇ ಪೌರ ಕಾರ್ಮಿಕರು. ಪೌರ ಕಾರ್ಮಿಕರ ಕೆಲಸದ ಜೊತೆಗೆ ಅವರ ಆರೋಗ್ಯದ ಬಗ್ಗೆಯೂ ನಾವು ಅರಿಯಬೇಕಾಗಿದೆ. ಸ್ವಚ್ಛತೆ ದೈವತ್ವಕ್ಕೆ ಸಮಾನ ಎಂದು ಹೇಳಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಸ್ವಚ್ಛತೆಯ ಅರಿವನ್ನು ನಿತ್ಯವೂ ನಾವು ಪಾಲಿಸಿಕೊಂಡು ಹೋಗೋಣ ಎಂದರು.


ಸ್ವಚ್ಛತೆ ಸ್ವಚ್ಛತಾ ಸಿಬ್ಬಂದಿಗಳ ಜವಾಬ್ದಾರಿಯಲ್ಲ, ಅದು ನಮ್ಮೆಲ್ಲರ ಜವಾಬ್ದಾರಿ-ಉಮೇಶ್ ನಾಯಕ್:
ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮಾತನಾಡಿ, ರೋಟರಿ ಸೇವಾ ಸಂಸ್ಥೆಗಳೊಂದಿಗೆ ಐದು ಉದ್ಯಮ ಸಂಸ್ಥೆಗಳು ಕೂಡ ಪುತ್ತೂರಿನ ಅಭಿವೃದ್ಧಿಗೆ ಸೇವೆಯ ಮೂಲಕ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಸ್ವಚ್ಛತೆ ಎಂಬುದು ಸ್ವಚ್ಛತಾ ಸಿಬ್ಬಂದಿಗಳ ಜವಾಬ್ದಾರಿಯಲ್ಲ, ಅದು ನಮ್ಮೆಲ್ಲರ ಜವಾಬ್ದಾರಿ. ಪುತ್ತೂರು ನಗರದ ಸೌಂದರ್ಯೀಕರಣದಲ್ಲಿ ಪೌರ ಕಾರ್ಮಿಕರ ಸೇವೆ ಬಹಳ ಅನನ್ಯವಾಗಿದೆ. ಪೌರ ಕಾರ್ಮಿಕರು ಅನಾರೋಗ್ಯಕ್ಕೀಡಾದ ಸಂದರ್ಭದಲ್ಲಾಗಲಿ ಅಥವಾ ಅವರಿಗೆ ಸಿಗುವ ಸವಲತ್ತುಗಳ ನ್ಯೂನತೆ ಸಂದರ್ಭದಲ್ಲಾಗಲಿ ಅವರು ರಜೆಯನ್ನು ಮಾಡಿದಾಗ ಗೊತ್ತಾಗುತ್ತದೆ ಪೌರ ಕಾರ್ಮಿಕರ ಬೆಲೆ ಏನೆಂಬುದು.
ಪೌರ ಕಾರ್ಮಿಕರ ಸೇವೆಯನ್ನು ನಾವು ಗೌರವಿಸಲೇಬೇಕು-ಇಬ್ರಾಹಿಂ ಎಂ:
ಉಪ್ಪಿನಂಗಡಿ ಸ.ಪ.ಪೂ ಕಾಲೇಜಿನ ಪ್ರಾಂಶುಪಾಲ ಪ್ರೊ|ಇಬ್ರಾಹಿಂ ಎಂ. ಮಾತನಾಡಿ, ಸತ್ಯ, ಅಹಿಂಸೆಯನ್ನು ಬೋಧಿಸಿದ ಮಾನವತಾವಾದಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿರವರ ಹುಟ್ಟುಹಬ್ಬದಂದು ರೋಟರಿ ಸಂಸ್ಥೆ ಹಾಗೂ ಉದ್ಯಮಗಳು ಜೊತೆಗೂಡಿ ಪೌರ ಕಾರ್ಮಿಕರನ್ನು ಸನ್ಮಾನಿಸಿರುವುದು ಅವಿಷ್ಮರಣೀಯ ಎನಿಸಿದೆ. ರೋಟರಿ ಸಂಸ್ಥೆ ಶಿಕ್ಷಣ, ಸೇವೆ, ಸಾಮಾಜಿಕ ಸಾಮರಸ್ಯ, ಆರೋಗ್ಯ ಇವೆಲ್ಲವುಗಳಲ್ಲಿ ಸೇವೆ ನೀಡುತ್ತಿರುವ ಸಂಸ್ಥೆಯಾಗಿದೆ. ಇಂದು ನಗರವನ್ನು ಸ್ವಚ್ಛವಾಗಿಸಿಡುವ ಕೈಂಕರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಪೌರ ಕಾರ್ಮಿಕರ ಸೇವೆಯನ್ನು ನಾವು ಗೌರವಿಸಲೇಬೇಕು ಎಂದರು.
ಸ್ವಚ್ಛತಾ ಸೇನಾನಿಗಳ ಶ್ರದ್ಧೆಯ ಕಾರ್ಯ ಮಾದರಿಯಾಗಿದೆ-ಪ್ರೊ|ದತ್ತಾತ್ರೇಯ ರಾವ್:
ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಪ್ರೊ|ದತ್ತಾತ್ರೇಯ ರಾವ್ ಸ್ವಾಗತಿಸಿ ಮಾತನಾಡಿ, ರೋಟರಿ ಕ್ಲಬ್ನ ಸದಸ್ಯರು ರೋಟರಿ ಸಂಸ್ಥೆಯ ಆಧಾರಸ್ತಂಭಗಳು. ಪುತ್ತೂರು ನಗರ ಬಹಳ ಸ್ವಚ್ಚವಾಗಿಡಬೇಕಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಸ್ವಚ್ಛತಾ ಸೇನಾನಿಗಳು. ಇವರು ಪ್ರತಿನಿತ್ಯ ಏನು ಕೆಲಸ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಇವರು ಮಾಡುವ ಶ್ರದ್ಧೆಯ ಕಾರ್ಯ ಸಮಾಜದ ಅಭಿವೃದ್ಧಿಗೆ ಮಾದರಿಯಾಗಿದೆ. ರೋಟರಿ ಸಂಸ್ಥೆಯ ಮುಖ್ಯ ಉದ್ಧೇಶ ಸಮಾಜ ಕಾರ್ಯವೇ ಆಗಿದೆ. ಸ್ವಚ್ಛತೆಯ ಅರಿವು ಮೂಡಿಸಿದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರು ಶಾಸ್ತ್ರಿಗಳ ಜನ್ಮದಿನವಾಗಿದ್ದು ಇವರೀರ್ವರು ದೇಶಕ್ಕೆ ಅಪೂರ್ವ ಕೊಡುಗೆ ನೀಡಿದ ಮಹನೀಯರಾಗಿದ್ದಾರೆ ಎಂದರು.
ಪೌರ ಕಾರ್ಮಿಕರಿಗೆ ಸನ್ಮಾನವಲ್ಲ, ಕೃತಜ್ಞತೆ-ಎಂ.ಜಿ ರಫೀಕ್:
sಕಾರ್ಯಕ್ರಮದ ಪ್ರಾಯೋಕರಲ್ಲಿ ಓರ್ವರಾದ ದರ್ಬೆ ಬುಶ್ರಾ ಕಾಂಪ್ಲೆಕ್ಸ್ನ ನಯಾ ಚಪ್ಪಲ್ ಬಜಾರ್ ಮಾಲಕ ರಫೀಕ್ ಎಂ.ಜಿರವರು ಪ್ರಾಸ್ತಾವಿಕವಾಗಿ ಮಾತನಾಡಿ, ಈ ಸುಂದರ ವೇದಿಕೆಯಲ್ಲಿ ಯಾವುದೇ ರಾಜಕೀಯ ಪ್ರತಿನಿಧಿಗಳಿಲ್ಲ, ಯಾವುದೇ ಧರ್ಮವನ್ನು ಪ್ರತಿನಿಧಿಸುವವರಿಲ್ಲ. ಈ ವೇದಿಕೆಯಲ್ಲಿ ಎಲ್ಲಾ ಸಮಾಜದ ಒಗ್ಗೂಡುವಿಕೆ ಇದೆ. ಇದರ ಜೊತೆಗೆ ನಮ್ಮ ಪುತ್ತೂರನ್ನು ಸ್ವಚ್ಛವಾಗಿಸಿಡುವ ಪೌರ ಸೇನಾನಿಗಳೂ ಸೇರಿಕೊಂಡಿದ್ದಾರೆ. ಇದು ಪೌರ ಸೇನಾನಿಗಳಿಗೆ ಸನ್ಮಾನ ಕಾರ್ಯಕ್ರಮವಲ್ಲ, ಬದಲಿಗೆ ಪುತ್ತೂರನ್ನು ಸ್ವಚ್ಛತಾವಾಗಿಸಿಡುವ ಪೌರ ಸೇನಾನಿಗಳು ಮಾಡುವ ಕೆಲಸಕ್ಕೆ ಕೊಡುವ ಗೌರವದ ಕೃತಜ್ಞತೆಯಾಗಿದೆ.
ಕಳೆದ ವರ್ಷ ಕೆಲ ಪೌರ ಕಾರ್ಮಿಕರಿಗೆ ಸನ್ಮಾನ ಮಾಡಿದ್ದೇವೆ. ಈ ಬಾರಿ ನಗರಸಭೆಯ ಎಲ್ಲಾ ಪೌರ ಕಾರ್ಮಿಕರಿಗೆ ಸನ್ಮಾನ ಮಾಡುವ ಅಂತ ವಾಮನ್ ಪೈ, ಮನೋಜ್ ಟಿ.ವಿ, ವಿಶ್ವನಾಥ್ ಗೌಡ, ಇಸ್ಮಾಯಿಲ್ರವರು ಹೇಳಿದಾಗ ಬಹಳ ಖುಶಿಯಾಗಿ ಈ ಕಾರ್ಯಕ್ರಮವನ್ನು ನಗರಸಭೆಯ ಮುಖ್ಯಸ್ಥರೊಂದಿಗೆ ಮಾತನಾಡಿ ಕಾರ್ಯಕ್ರಮ ಯಶಸ್ವಿಯಾಗಿ ಹಮ್ಮಿಕೊಂಡಿದ್ದೇವೆ. ಈ ಕಾರ್ಯಕ್ರಮ ಇಲ್ಲಿಗೆ ಮುಗಿಯಬಾರದು, ಇದು ಮುಂದುವರೆಯಬೇಕು. ಬಿಸಿಲು, ಗಾಳಿ, ಮಳೆ ಎನ್ನದೆ ಕಾರ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗಳು, ಮೆಸ್ಕಾಂ ಸಿಬ್ಬಂದಿಗಳನ್ನು ಗುರುತಿಸುವ ಕಾರ್ಯ ಆಗಬೇಕಿದೆ ಎಂದರು.
ಶ್ರೀಲಕ್ಷ್ಮೀ ಏಜೆನ್ಸಿಸ್ನ ವಿಶ್ವನಾಥ ಗೌಡ, ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಮನೋಜ್ ಟಿ.ವಿ, ಏಷ್ಯನ್ ವುಡ್ ಆಂಡ್ ಮಂಗಳೂರು ಫರ್ನಿಚರ್ಸ್ ಮತ್ತು ಇಲೆಕ್ಟ್ರಾನಿಕ್ಸ್ನ ಇಸ್ಮಾಯಿಲ್, ಗಣೇಶ್ ಟ್ರೇಡರ್ಸ್ನ ವಾಮನ ಪೈ, ಜಾಗೃತಿ ಜಾಥಾ ಉಸ್ತುವಾರಿ ಜಗಜೀವನ್ ದಾಸ್ ರೈ, ಪುತ್ತೂರು ನಗರಸಭೆಯ ಆರೋಗ್ಯ ನಿರೀಕ್ಷಕಿ ಶ್ವೇತಾಕಿರಣ್ ಹಾಗೂ ಸಿಬ್ಬಂದಿ, ಸಂತ ಫಿಲೋಮಿನಾ ಕಾಲೇಜಿನ ಉಪ ಪ್ರಾಂಶುಪಾಲ ಡಾ|ವಿಜಯಕುಮಾರ್ ಮೊಳೆಯಾರ್, ಪುತ್ತೂರು ಎಂಟು ರೋಟರಿ ಕ್ಲಬ್ಗಳ ಅಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿದ್ದರು. ಶ್ರೀಮತಿ ವಾಣಿ ಪ್ರಾರ್ಥಿಸಿದರು. ರೋಟರಿ ಪುತ್ತೂರು ಪೂರ್ವಾಧ್ಯಕ್ಷ ಹಾಗೂ ದರ್ಬೆ ಗಣೇಶ್ ಟ್ರೇಡರ್ಸ್ ಮಾಲಕ ವಾಮನ ಪೈ ವಂದಿಸಿದರು. ಸುದ್ದಿ ಮೀಡಿಯಾದ ನಿರೂಪಕಿ ಹೇಮಾ ಜಯರಾಂ ಕಾರ್ಯಕ್ರಮ ನಿರೂಪಿಸಿದರು.
ಸ್ವಚ್ಛತಾ ಜಾಗೃತಿ ಜಾಥಾ..
ಬೆಳಿಗ್ಗೆ ದರ್ಬೆ ಮತ್ತು ಬೊಳುವಾರಿನಿಂದ ಏಕಕಾಲಕ್ಕೆ ನಮ್ಮ ಕಸ ನಮ್ಮ ಜವಾಬ್ದಾರಿ, ಸ್ವಚ್ಛ ಪರಿಸರ ಸುಂದರ ಪರಿಸರ, ಅಲ್ಲಲ್ಲಿ ಉಗುಳಬೇಡಿ, ಸ್ವಚ್ಛ ಪುತ್ತೂರು ಸುಂದರ ಪುತ್ತೂರು, ಅಲ್ಲಲ್ಲಿ ಪ್ಲಾಸ್ಟಿಕ್, ಕಸ ಎಸೆಯಬೇಡಿ, ಮನೆ ಮನೆಗೆ ಬಂದು ಕಸ ಸಂಗ್ರಹಿಸುವ ಸ್ವಚ್ಛತಾ ಸೇನಾನಿಗಳನ್ನು ಗೌರವಿಸಿ, ಹಸಿ ಕಸ, ಒಣ ಕಸ ವಿಂಗಡಿಸಿ ಕೊಡೋಣ ಎಂಬ ಘೋಷ ವಾಕ್ಯದೊಂದಿಗೆ ಸ್ವಚ್ಛತಾ ಜಾಗೃತಿ ಜಾಥಾ ಪುತ್ತೂರು ಬಸ್ ನಿಲ್ದಾಣದ ತನಕ ನಡೆಯಿತು. ಈ ಜಾಥಾದಲ್ಲಿ ಪುತ್ತೂರಿನ 8 ರೋಟರಿ ಕ್ಲಬ್ ಸದಸ್ಯರು, ಸಂತ ಫಿಲೋಮಿನಾ ಕಾಲೇಜು, ಸುದಾನ ವಸತಿಯುತ ಶಾಲೆಯ ವಿದ್ಯಾರ್ಥಿಗಳು, ನಗರಸಭೆ ಅಧಿಕಾರಿಗಳು ಭಾಗವಹಿಸಿದರು. ದರ್ಬೆ ಜಾಥಾವನ್ನು ರೋಟರಿ ಅಸಿಸ್ಟೆಂಟ್ ಗವರ್ನರ್ ಪ್ರೊ.ಝೇವಿಯರ್ ಡಿ’ಸೋಜ, ಬೊಳುವಾರು ಜಾಥಾವನ್ನು ರೋಟರಿ ಅಸಿಸ್ಟೆಂಟ್ ಗವರ್ನರ್ ಅಬ್ದುಲ್ ರಝಾಕ್ ಕಬಕಕಾರ್ಸ್ರವರು ಉದ್ಘಾಟಿಸಿ ಶುಭ ಹಾರೈಸಿದರು.
ಸನ್ಮಾನ/ರೂ.1.50 ಲಕ್ಷ ವೆಚ್ಚ..
ಸಂಜೆ ಪುತ್ತೂರು ನಗರಸಭೆ ಸಭಾಂಗಣದಲ್ಲಿನ ಸಭಾ ಕಾರ್ಯಕ್ರಮದಲ್ಲಿ ನಗರಸಭಾ ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್ರವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸುಮಾರು ರೂ.1.50 ಲಕ್ಷ ವೆಚ್ಚದಲ್ಲಿ ಪುತ್ತೂರನ್ನು ನಿರಂತರವಾಗಿ ಸ್ವಚ್ಛವಾಗಿಡಲು ಶ್ರಮಿಸುತ್ತಿರುವ ಹೀರೋಗಳಾದ ನಗರಸಭೆ ಸ್ವಚ್ಛತಾ ಸೇನಾನಿಗಳಿಗೆ, ಚಾಲಕರಿಗೆ, ಸೂಪರ್ವೈಸರ್ಗಳಿಗೆ, ಸಮುದಾಯ ಪ್ರೇರಕರಿಗೆ ಸುಮಾರು 65 ಮಂದಿಗೆ ತಲಾ ರೂ.2 ಸಾವಿರ ಮೌಲ್ಯದ ಸೊತ್ತುಗಳನ್ನು ಗೌರವ ಸಮರ್ಪಣೆ ಮಾಡುವ ಮೂಲಕ ಗೌರವಿಸಲಾಯಿತು.










