







ಹಿಂದೂ ಧರ್ಮದಲ್ಲಿ ಅತಿಯಾದ ಜಾತಿ ವ್ಯವಸ್ಥೆ, ಸಮಾಜದ ಐಕ್ಯತೆಗೆ ಅಡ್ಡಿ- ಶ್ರೀ ಮುಕ್ತಾನಂದ ಸ್ವಾಮೀಜಿ


ಕಡಬ: ಹಿಂದೂ ಧರ್ಮದಲ್ಲಿ ಜಾತಿ ವ್ಯವಸ್ಥೆಯ ಕಾರಣದಿಂದಾಗಿ ಸಮಾಜದಲ್ಲಿ ಒಗ್ಗಟ್ಟು ಹಾಗೂ ಐಕ್ಯತೆಯನ್ನು ಸಾಧಿಸಲು ಹಲವು ಸಂದರ್ಭಗಳಲ್ಲಿ ಅಡ್ಡಿಯಾಗುತ್ತಿದೆ. ಜಾತಿ, ಪಂಗಡಗಳ ಭೇದಭಾವವನ್ನು ಮೀರಿ ನಾವೆಲ್ಲರೂ ಹಿಂದೂ ಸಮಾಜದ ಒಗ್ಗಟ್ಟಿಗಾಗಿ ಶ್ರಮಿಸಬೇಕಾಗಿದೆ ಎಂದು ಕರಿಂಜೆ ಮಠದ ಶ್ರೀ ಮುಕ್ತಾನಂದ ಸ್ವಾಮೀಜಿ ಹೇಳಿದರು.



ವಿಶ್ವ ಹಿಂದೂ ಪರಿಷತ್ ಕಡಬ ಪ್ರಖಂಡದ ಧರ್ಮಪ್ರಸಾರ ವಿಭಾಗದ ವತಿಯಿಂದ ನಡೆದ ಸಂತರ ಪಾದಯಾತ್ರೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.

ಹಿಂದೂ ಸಮಾಜದಲ್ಲಿ ವಿವಿಧ ಜಾತಿ, ಪಂಗಡ ಹಾಗೂ ಸಮುದಾಯಗಳಿದ್ದರೂ ಎಲ್ಲರೂ ಒಂದೇ ಧರ್ಮದವರು ಎಂಬ ಭಾವನೆಯೊಂದಿಗೆ ಪರಸ್ಪರ ಸಹಕಾರ ಮತ್ತು ಸಹಬಾಳ್ವೆಯಿಂದ ಮುನ್ನಡೆಯಬೇಕಾಗಿದೆ. ಇತರ ಧರ್ಮಗಳಲ್ಲಿ ವಿವಿಧ ಪಂಗಡಗಳು ಹಾಗೂ ಭಿನ್ನಾಭಿಪ್ರಾಯಗಳಿದ್ದರೂ, ಅಗತ್ಯ ಸಂದರ್ಭಗಳಲ್ಲಿ ಅವರು ತಮ್ಮ ಧಾರ್ಮಿಕ ಒಗ್ಗಟ್ಟನ್ನು ಪ್ರದರ್ಶಿಸುತ್ತಾರೆ. ಆದರೆ ಹಿಂದೂ ಸಮಾಜದಲ್ಲಿ ಜಾತಿ ವ್ಯವಸ್ಥೆ ಮತ್ತು ಪರಸ್ಪರ ಭೇದಭಾವಗಳು ಒಗ್ಗಟ್ಟಿಗೆ ಧಕ್ಕೆ ತರುತ್ತಿವೆ. ಜಾತಿ-ಮತದ ಸಣ್ಣಪುಟ್ಟ ಭೇದಗಳನ್ನು ಬದಿಗೊತ್ತಿ ಸಮಾಜದ ಹಿತದೃಷ್ಟಿಯಿಂದ ಒಂದಾಗುವ ಅಗತ್ಯವಿದೆ ಎಂದು ಅವರು ಹೇಳಿದರು.

ಸಮಾಜದ ದುರ್ಬಲ ಹಾಗೂ ಶೋಷಿತ ವರ್ಗದವರನ್ನು ಯಾವುದೇ ರೀತಿಯ ಭೇದಭಾವವಿಲ್ಲದೆ ಮುಖ್ಯವಾಹಿನಿಗೆ ತರುವ ಕಾರ್ಯ ನಡೆಯಬೇಕು. ಪ್ರತಿಯೊಬ್ಬ ಹಿಂದೂವನ್ನೂ ಸಮಾನ ಗೌರವದಿಂದ ಕಾಣುವ ಮೂಲಕ ಸಾಮಾಜಿಕ ಸಾಮರಸ್ಯವನ್ನು ಬೆಳೆಸಬೇಕು. ಸಮಾಜದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ, ಸಹಕಾರ ಮತ್ತು ಸಹೋದರತ್ವದ ಮನೋಭಾವವನ್ನು ಬೆಳೆಸಿದಾಗ ಮಾತ್ರ ಬಲಿಷ್ಠ ಹಾಗೂ ಸಂಘಟಿತ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದರು.
ಗೋಹತ್ಯೆ, ಲವ್ ಜಿಹಾದ್, ಮತಾಂತರ ಸೇರಿದಂತೆ ಸಮಾಜದ ಮೇಲೆ ಪರಿಣಾಮ ಬೀರುವ ವಿವಿಧ ವಿಚಾರಗಳ ಕುರಿತು ಹಿಂದೂ ಸಮಾಜದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಧರ್ಮ, ಸಂಸ್ಕೃತಿ, ಪರಂಪರೆ ಹಾಗೂ ಭಾರತೀಯ ಜೀವನ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವೂ ನಿರಂತರವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ವಿಶ್ವ ಹಿಂದೂ ಪರಿಷತ್ ಸೇರಿದಂತೆ ವಿವಿಧ ಸಂಘಟನೆಗಳು ಸಮಾಜದಲ್ಲಿ ಜಾಗೃತಿ ಮೂಡಿಸುವ ಹಾಗೂ ಜನರನ್ನು ಸಂಘಟಿಸುವ ಕಾರ್ಯವನ್ನು ನಡೆಸುತ್ತಿವೆ ಎಂದು ಶ್ರೀ ಮುಕ್ತಾನಂದ ಸ್ವಾಮೀಜಿ ಹೇಳಿದರು.
ಸಂತರ ಪಾದಯಾತ್ರೆಯಂತಹ ಕಾರ್ಯಕ್ರಮಗಳು ಕೇವಲ ಧಾರ್ಮಿಕ ಕಾರ್ಯಕ್ರಮಗಳಾಗಿ ಸೀಮಿತವಾಗದೆ, ಸಮಾಜದ ವಿವಿಧ ವರ್ಗಗಳ ನಡುವೆ ಆತ್ಮೀಯತೆ, ಸಾಮರಸ್ಯ ಮತ್ತು ಪರಸ್ಪರ ಸಂಪರ್ಕವನ್ನು ವೃದ್ಧಿಸುವ ವೇದಿಕೆಗಳಾಗಬೇಕು. ಸಂತರ ಮನೆ-ಮನೆ ಭೇಟಿ ಮೂಲಕ ಜನರಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವುದರ ಜೊತೆಗೆ ಕುಟುಂಬಗಳಲ್ಲಿ ಶಾಂತಿ, ನೆಮ್ಮದಿ ಹಾಗೂ ನೆಲೆಸಲಿ ಎಂದು ಹಾರೈಸಿದರು.
ಪ್ರಾಂತ ಧರ್ಮಪ್ರಸಾರ ಸಂತ ಸಂಪರ್ಕ ಪ್ರಮುಖರಾದ ಜಯರಾಮ ನೆಲ್ಲಿತ್ತಾಯರು ಮಾತನಾಡಿದರು. ವೇದಿಕೆಯಲ್ಲಿ ಕಡಬ ಪ್ರಖಂಡದ ಅಧ್ಯಕ್ಷರಾದ ಶಿವರಾಮ ಶೆಟ್ಟಿ ಕೇಪು, ಗೌರವಾಧ್ಯಕ್ಷರಾದ ಕಡ್ಯ ವಾಸುದೇವ ಭಟ್, ಮನೆಯವರಾದ ಕಿಟ್ಟು ಅವರುಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಹ ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ, ಧರ್ಮಪ್ರಸಾರ ಜಿಲ್ಲಾಟೋಲಿ ಸದಸ್ಯ ರಾಧಾಕೃಷ್ಣ ಕೋಲ್ಪೆ, ಧರ್ಮಪ್ರಸಾರ ಕಡಬ ಪ್ರಮುಖ್ ಸತ್ಯನಾರಾಯಣ ಹೆಗ್ಡೆ ನಡುಮಜಲುಗುತ್ತು, ಸತ್ಸಂಗ ಪ್ರಮುಖ್ ಕೃಷ್ಣ ರೈ ನೆಕ್ಕಿತ್ತಡ್ಕ, ಮಾತೃಶಕ್ತಿ ಪ್ರಮುಖ್ ವೀಣಾ ಕೊಲ್ಲೆಸಾಗು, ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ವೆಂಕಟ್ರಮಣ ರಾವ್ ಮಂಕುಡೆ, ಪ್ರಮುಖರಾದ ಮನೋಜ್ ಮರ್ದಾಳ, ದೇವಿಪ್ರಸಾದ್ ರೈ ಮರ್ದಾಳ, ಚೇತನ್ ಕೋಡಿಂಬಾಳ, ಉಮೇಶ್ ಕೊಣಾಜೆ, ವಿಠಲ ಭಟ್ ಕಡ್ಯ,ಹರೀಶ್ ಕೊಡಂದೂರು, ಅಜಿತ್ ರೈ ಆರ್ತಿಲ, ಸ್ಥಳೀಯರಾದ ವಸಂತ ಗೇರ್ತಿಲ,ಚೆನ್ನಯ್ಯ ಮೊದಲಾದವರು ಉಪಸ್ಥಿತರಿದ್ದರು. ಸ್ವಾಮಿಜಿಯವರು ಎಡಿಂಜೆಯ ಹಲವಾರು ಮನೆಗಳಿಗೆ ಭೇಟಿ ನೀಡಿ, ಮನೆಯಲ್ಲಿ ದೀಪ ಬೆಳಗಿಸಿ ಶುಭ ಹಾರೈಸಿದರು. ಕಡಬ ಪ್ರಖಂಡ ಸಹ ಕಾರ್ಯದರ್ಶಿ ಸುಖೇಶ್ ರೈ ಸ್ವಾಗತಿಸಿ, ರೋಹಿತ್ ಏಡೆಂಜೆ ವಂದಿಸಿದರು










