







ಪುತ್ತೂರು: ಸಹಕಾರ ರತ್ನ ರೊಟೇರಿಯನ್ ಕೆ. ಸೀತಾರಾಮ ರೈ ಸವಣೂರು ಅವರ ಪುತ್ರ, ಇಂಗ್ಲೆಂಡ್ನ ನಾಟಿಂಗ್ಹ್ಯಾಮ್ಶೈರ್ನ ಕಿಂಗ್ಸ್ ಮಿಲ್ ಆಸ್ಪತ್ರೆಯಲ್ಲಿ ಕನ್ಸಲ್ಟಾಂಟ್ ಫಿಶಿಷಿಯನ್ ಆಗಿ ಸೇವೆ ಸಲ್ಲಿಸುತ್ತಿರುವ ಡಾ. ರಾಜೇಶ್ ರೈ ಸವಣೂರು ಅವರು ಪ್ರತಿಷ್ಠಿತ ಲಂಡನ್ನ ರಾಯಲ್ ಕಾಲೇಜ್ ಆಫ್ ಫಿಶಿಷಿಯನ್ಸ್ನ ಫೆಲೋ ( FRCP London) ಗೌರವಕ್ಕೆ ಪಾತ್ರರಾಗಿದ್ದಾರೆ.


ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ, ವೃತ್ತಿಪರ ಸಾಧನೆ, ದೀರ್ಘಕಾಲದ ಅನುಭವ ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳನ್ನು ಪರಿಗಣಿಸಿ ನೀಡಲಾಗುವ ಈ ಪ್ರತಿಷ್ಠಿತ ಫೆಲೋ ಗೌರವವು ಡಾ. ರಾಜೇಶ್ ರೈ ಅವರ ವೃತ್ತಿಜೀವನದ ಮಹತ್ವದ ಮೈಲಿಗಲ್ಲಾಗಿದೆ.



ಶಿಕ್ಷಣದಿಂದ ಇಂಗ್ಲೆಂಡ್ವರೆಗೆ
ಡಾ. ರಾಜೇಶ್ ರೈ ಅವರು ಪ್ರಾಥಮಿಕ ಶಿಕ್ಷಣವನ್ನು ಸುಳ್ಯದ ರೋಟರಿ ಆಂಗ್ಲಮಾಧ್ಯಮ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಉಡುಪಿ-ಮಣಿಪಾಲದ ಶಾರದಾ ರೆಸಿಡೆನ್ಶಿಯಲ್ ಸ್ಕೂಲ್ನಲ್ಲಿ ಹಾಗೂ ಪಿಯುಸಿ ಶಿಕ್ಷಣವನ್ನು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ಬಳಿಕ ತುಮಕೂರಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆದ ಅವರು, ಮೈಸೂರಿನ ಜಿ.ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಇಂಟರ್ನಲ್ ಮೆಡಿಸಿನ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿ (MD) ಪಡೆದರು. ನಂತರ ನವದೆಹಲಿಯಲ್ಲಿ DNB ಪದವಿಯನ್ನೂ ಪೂರ್ಣಗೊಳಿಸಿದರು. ಇಂಗ್ಲೆಂಡ್ನ ರಾಯಲ್ ಕಾಲೇಜ್ ಆಫ್ ಫಿಶಿಷಿಯನ್ಸ್ನ MRCP ಪದವಿಯನ್ನೂ ಪಡೆದಿರುವ ಅವರು, ಇದೀಗ ಅದೇ ಪ್ರತಿಷ್ಠಿತ ಸಂಸ್ಥೆಯ FRCP ಗೌರವಕ್ಕೆ ಆಯ್ಕೆಯಾಗಿದ್ದಾರೆ.
ತಾಯ್ನಾಡಿನಲ್ಲಿ 16 ವರ್ಷಗಳ ವೈದ್ಯಕೀಯ ಸೇವೆ
ಮಂಗಳೂರಿನಲ್ಲಿ ವೈದ್ಯಕೀಯ ವೃತ್ತಿಜೀವನ ಆರಂಭಿಸಿದ ಡಾ. ರಾಜೇಶ್ ರೈ ಅವರು ಸುಮಾರು 16 ವರ್ಷಗಳ ಕಾಲ ಎ.ಜೆ. ಆಸ್ಪತ್ರೆಯಲ್ಲಿ ಕನ್ಸಲ್ಟಾಂಟ್ ಫಿಶಿಷಿಯನ್ ಆಗಿ ಸೇವೆ ಸಲ್ಲಿಸಿದರು. ಇದೇ ಅವಧಿಯಲ್ಲಿ ಎ.ಜೆ. ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿಯೂ ಕಾರ್ಯನಿರ್ವಹಿಸಿದರು. ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವೈದ್ಯರಿಗೆ ಬೋಧನೆ ಮತ್ತು ತರಬೇತಿ ನೀಡುವ ಮೂಲಕ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿಯೂ ಗಮನಾರ್ಹ ಕೊಡುಗೆ ನೀಡಿದರು.
NHSನಲ್ಲಿ ಕನ್ಸಲ್ಟಾಂಟ್ ವೈದ್ಯ
ಬಳಿಕ ಇಂಗ್ಲೆಂಡ್ಗೆ ತೆರಳಿದ ಅವರು ಅಲ್ಲಿನ National Health Service (NHS) ನಲ್ಲಿ ತಮ್ಮ ವೈದ್ಯಕೀಯ ವೃತ್ತಿಜೀವನವನ್ನು ಮುಂದುವರಿಸಿದರು. ಪ್ರಸ್ತುತ ನಾಟಿಂಗ್ಹ್ಯಾಮ್ಶೈರ್ನ ಕಿಂಗ್ಸ್ ಮಿಲ್ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ವಿಭಾಗದಲ್ಲಿ ಕನ್ಸಲ್ಟಾಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ರೋಗಿಗಳ ಚಿಕಿತ್ಸೆಯ ಜತೆಗೆ ವೈದ್ಯಕೀಯ ಶಿಕ್ಷಣ, ವೈದ್ಯರ ತರಬೇತಿ ಹಾಗೂ ಆರೋಗ್ಯ ಸೇವೆಯ ವಿವಿಧ ಜವಾಬ್ದಾರಿಗಳಲ್ಲಿಯೂ ಅವರು ತೊಡಗಿಸಿಕೊಂಡಿದ್ದಾರೆ. ಡಾ. ರಾಜೇಶ್ ರೈ ಅವರು ‘ಸಹಕಾರ ರತ್ನ’ ರೊಟೇರಿಯನ್ ಕೆ. ಸೀತಾರಾಮ ರೈ ಸವಣೂರು ಮತ್ತು ಶ್ರೀಮತಿ ಕಸ್ತೂರಿ ಕಲಾ ಎಸ್. ರೈ ಸವಣೂರು ಅವರ ಪುತ್ರ. ಅವರ ಪತ್ನಿ ಶ್ರೀಮತಿ ಅಶ್ವಿತ ರಾಜೇಶ್ ರೈ ಅವರು Human Nutrition and Dieteticsನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಲಂಡನ್ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ವೃತ್ತಿಜೀವನ ನಡೆಸಿದ್ದಾರೆ.
ಕರ್ನಾಟಕದಲ್ಲಿ ವೈದ್ಯಕೀಯ ಶಿಕ್ಷಣ ಪಡೆದು, ಮಂಗಳೂರಿನಲ್ಲಿ ಸುದೀರ್ಘ ಕಾಲ ವೈದ್ಯಕೀಯ ಸೇವೆ ಮತ್ತು ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿ, ಬಳಿಕ ಇಂಗ್ಲೆಂಡ್ನ NHSನಲ್ಲಿ ಕನ್ಸಲ್ಟಾಂಟ್ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ. ರಾಜೇಶ್ ರೈ ಅವರ ವೃತ್ತಿಪರ ಪಯಣ ಗಮನಾರ್ಹವಾಗಿದೆ.










