ಪಾಪೆಮಜಲು ಪ್ರೌಢಶಾಲೆಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮುಂಬೈ ಕೇಂದ್ರ ಕಚೇರಿಯ ಡಿಜಿಎಂ ಸತೀಶ್ ರೈ ಕುತ್ಯಾಡಿ ಭೇಟಿ

0

ಶಾಲಾ ರಂಗಮಂದಿರ ನಿರ್ಮಾಣಕ್ಕೆ 7 ಲಕ್ಷ ರೂ ಸಿಎಸ್‌ಆರ್ ನಿಧಿ ಬಿಡುಗಡೆ-ವರ್ಕ್ ಆರ್ಡರ್ ಪತ್ರ ಹಸ್ತಾಂತರ

ಪುತ್ತೂರು: ಕ್ರೀಡೆಯ ಮೂಲಕವೂ ಬದುಕು ಕಟ್ಟಿಕೊಳ್ಳಬಹುದು ಎಂಬುವುದಕ್ಕೆ ನಾನು ಮತ್ತು ನನ್ನ ಜೊತೆಗಿರುವ ಇವರಿಬ್ಬರು ಉದಾಹರಣೆ, ನಾವು ಸ್ಪೋರ್ಟ್ಸ್ ಕೋಟಾದಡಿಯಲ್ಲಿ ಉದ್ಯೋಗ ಪಡೆದುಕೊಂಡಿದ್ದೇವೆ, ಹಾಗಾಗಿ ವಿದ್ಯಾರ್ಥಿಗಳು ಪಾಠದ ಜೊತೆಗೆ ಕ್ರೀಡೆಗೂ ಒತ್ತು ಕೊಡಬೇಕು, ಕ್ರೀಡೆಯಲ್ಲಿ ಸಾಧನೆ ಮಾಡಿದಾಗಲೂ ನಮ್ಮ ಭವಿಷ್ಯ ಉಜ್ವಲವಾಗುವುದರಲ್ಲಿ ಸಂಶಯವಿಲ್ಲ ಎಂದು ಅರ್ಜುನ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮುಂಬೈ ಕೇಂದ್ರ ಕಚೇರಿಯ ಡೆಪ್ಯುಟಿ ಜನರಲ್ ಮ್ಯಾನೇಜರ್ ಸತೀಶ್ ರೈ ಕುತ್ಯಾಡಿ ಹೇಳಿದರು.


ಅ.೩ರಂದು ಪಾಪೆಮಜಲು ಸರಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಅವರು ಶಾಲಾ ರಂಗ ಮಂದಿರ ನಿರ್ಮಾಣಕ್ಕೆ ತಮ್ಮ ಬ್ಯಾಂಕ್ ಮೂಲಕ ಸಿಎಸ್‌ಆರ್ ಫಂಡ್‌ನಿಂದ ಘೋಷಿಸಿದ್ದ ರೂ.೭ ಲಕ್ಷ ಮೊತ್ತದ ವರ್ಕ್ ಆರ್ಡರ್ ಪತ್ರವನ್ನು ಹಸ್ತಾಂತರಿಸಿ ಮಾತನಾಡಿದರು.


ವಿದ್ಯಾರ್ಥಿಗಳು ಪಾಠದ ಜೊತೆಗೆ ಆಟಕ್ಕೂ ಪ್ರಾಶಸ್ತ್ಯ ಕೊಡಬೇಕು, ನಮ್ಮ ಸತತ ಪ್ರಯತ್ನ, ಕಠಿಣ ಪರಿಶ್ರಮ ನಮಗೆ ಯಶಸ್ಸನ್ನು ತಂದು ಕೊಡುತ್ತದೆ, ನಾನು ಚಿಕ್ಕವನಿದ್ದಾಗ ಬಶೀರ್ ಕೌಡಿಚ್ಚಾರ್ ಜೊತೆಗೂಡಿ ಬೆಳಿಗ್ಗೆ ಪಾಪೆಮಜಲಿನಿಂದ ಕುಂಬ್ರದ ವರೆಗೆ ಓಡುತ್ತಿದ್ದೆ, ನೀವೂ ಸಾಧನೆ ಮಾಡಬೇಕಾದರೆ ನಿರಂತರ ಪರಿಶ್ರಮಪಡಬೇಕು, ಪೇಟೆಯಿಂದ ಹಳ್ಳಿಯಲ್ಲಿ ನಮಗೆ ಬೇಕಾದ ಪೂರಕ ವಾತಾವರಣವಿದ್ದು ಅದನ್ನು ನಾವು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.


ಇಲ್ಲಿನ ಶಾಲೆಯಲ್ಲಿ ರಂಗ ಮಂದಿರ ನಿರ್ಮಾಣ ವಿಚಾರವಾಗಿ ಇಕ್ಬಾಲ್ ಹುಸೇನ್ ಅವರು ನನ್ನನ್ನು ಸಂಪರ್ಕಿಸಿದಾಗ ಅದಕ್ಕೆ ಬೇಕಾದ ಮೊತ್ತವನ್ನು ಒದಗಿಸಿಕೊಡುವ ಬಗ್ಗೆ ಭರವಸೆ ನೀಡಿದ್ದೆ, ಅದರಂತೆ ಸಿಎಸ್‌ಆರ್ ಫಂಡ್‌ನಿಂದ 7 ಲಕ್ಷ ರೂ ಮೊತ್ತ ಬಿಡುಗಡೆಗೊಂಡಿದೆ, ನನ್ನೂರಿನ ಶಾಲೆಗೆ ಸಹಕಾರ ಕೊಡುವುದು ನನ್ನ ಜವಾಬ್ದಾರಿ ಎಂದು ತಿಳಿದುಕೊಂಡಿದ್ದೇನೆ ಎಂದ ಅವರು ಈ ಶಾಲೆಗೆ ಮುಂದಕ್ಕೆ ಬೇರೆ ಏನಾದರೂ ಕೊಡುಗೆ ನೀಡಲು ನಾನು ಸಿದ್ದನಿದ್ದೇನೆ, ಮಾತ್ರವಲ್ಲದೇ ಕ್ರೀಡೆಗೆ ಸಂಬಂಧಿಸಿ ಇಲ್ಲಿನ ಮಕ್ಕಳಿಗೆ ತರಬೇತಿಯ ಅವಶ್ಯಕತೆ ಇದ್ದರೆ ಅದಕ್ಕೂ ವ್ಯವಸ್ಥೆ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.


ಇದೇ ಸಂದರ್ಭದಲ್ಲಿ ಸತೀಶ್ ರೈ ಕುತ್ಯಾಡಿಯವರನ್ನು ಹಾಗೂ ಎಜಿಎಂ ಶಶಿಕುಮಾರ್ ಅವರನ್ನು ಶಾಲಾ ಕಾರ್ಯಾಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ಅವರು ಶಾಲು ಹೊದಿಸಿ, ಹೂಗುಚ್ಚ ನೀಡಿ ಗೌರವಿಸಿರು.

ಈ ಶಾಲೆಯ ಸಾಧನೆ ಉತ್ತಮವಾಗಿದೆ-ಶಶಿಕುಮಾರ್
ಯೂನಿಯನ್ ಬ್ಯಾಂಕ್‌ನ ಎಜಿಎಂ ಶಶಿಕುಮಾರ್ ಮಾತನಾಡಿ ಪಾಪೆಮಜಲು ಪ್ರೌಢ ಶಾಲೆ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು ಎಸ್ಸೆಸ್ಸೆಲ್ಸಿಯಲ್ಲಿ ಸತತವಾಗಿ 100% ಫಲಿತಾಂಶ ಪಡೆದುಕೊಳ್ಳುತ್ತಿರುವ ವಿಚಾರ ತಿಳಿದು ಸಂತೋಷವಾಯಿತು. ಮುಂಬೈ ಕೇಂದ್ರ ಕಚೇರಿಯ ಡೆಪ್ಯುಟಿ ಜನರಲ್ ಮ್ಯಾನೇಜರ್ ಸತೀಶ್ ರೈ ಕುತ್ಯಾಡಿ ಅವರ ಮುಂದಾಳತ್ವದಲ್ಲಿ ಈ ಶಾಲೆಗೆ ರಂಗ ಮಂದಿರಕ್ಕೆ 7 ಲಕ್ಷ ರೂ ಸಿಎಸ್‌ಆರ್ ನಿಧಿ ಬಿಡುಗಡೆಗೊಂಡಿದ್ದು ಇದು ಆದಷ್ಟು ಬೇಗ ನಿರ್ಮಾಣಗೊಂಡು ಉದ್ಘಾಟನೆಯಾಗಲಿ ಎಂದು ಹಾರೈಸಿದರು.

ಸತೀಶ್ ರೈಯವರ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ-ಇಕ್ಬಾಲ್ ಹುಸೇನ್
ಪಾಪೆಮಜಲು ಪ್ರೌಢಶಾಲಾ ಕಾರ್ಯಾಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ಮಾತನಾಡಿ ನಮ್ಮೂರಿನ ಚಿನ್ನದ ಹುಡುಗ ಸತೀಶ್ ರೈ ಕುತ್ಯಾಡಿಯವರು ಇಂದು ಉನ್ನತ ಹುದ್ದೆಯಲ್ಲಿದ್ದು ಅದು ನಮಗೆಲ್ಲರಿಗೂ ಹೆಮ್ಮೆ ಮತ್ತು ಅಭಿಮಾನವಾಗಿದೆ. ನಮ್ಮ ಶಾಲೆಗೆ ರಂಗಮಂದಿರದ ಅವಶ್ಯಕತೆ ಇರುವ ವಿಚಾರದಲ್ಲಿ ಸತೀಶ್ ರೈ ಅವರನ್ನು ನಾನು ಸಂಪರ್ಕಿಸಿದಾಗ ಕೂಡಲೇ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಲ್ಲದೇ ಬಹಳ ವೇಗವಾಗಿ ರೂ.7 ಲಕ್ಷ ರೂ ಸಿಎಸ್‌ಆರ್ ನಿಧಿಯನ್ನು ಒದಗಿಸಿಕೊಟ್ಟಿದ್ದಾರೆ, ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿರುವ ಸತೀಶ್ ರೈಯವರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿದರು. ಕ್ರೀಡಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿರುವ ಸತೀಶ್ ರೈ ಅವರು ಒಲಿಂಪಿಕ್ಸ್‌ನಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸಿದ್ದಾರೆ, ಉನ್ನತ ಹುದ್ದೆಯಲ್ಲಿದ್ದರೂ ಸರಳ ವ್ಯಕ್ತಿತ್ವವನ್ನು ಹೊಂದಿರುವ ಇವರ ಸಾಧನೆ ನಮ್ಮ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿದೆ ಎಂದು ಅವರು ಹೇಳಿದರು. ಬಿಡುವು ಇಲ್ಲದಿದ್ದರೂ ನಮ್ಮ ಮೇಲೆ ಪ್ರೀತಿಯಿಟ್ಟು ಶಾಲೆಗೆ ಆಗಮಿಸಿರುವ ಸತೀಶ್ ರೈಯವರು ನಮ್ಮ ಶಾಲೆಗೆ ನೀಡಿರುವ ಕೊಡುಗೆಯನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ, ನಮ್ಮ ಬೇಡಿಕೆ ಈಡೇರಿಸಿದ ಸತೀಶ್ ರೈಯವರಿಗೆ ನಾವು ಆಭಾರಿಯಾಗಿದ್ದೇವೆ, ಸತೀಶ್ ರೈಯವರ ಸಹೋದರ ವಸಂತ ರೈ ಅವರೂ ಈ ವಿಚಾರದಲ್ಲಿ ನಮಗೆ ಸಹಕಾರ ನೀಡಿದ್ದು ಅವರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಇಕ್ಬಾಲ್ ಹುಸೇನ್ ಹೇಳಿದರು.

ನಮ್ಮ ಶಾಲೆ ಅಭಿವೃದ್ಧಿ ಹೊಂದುತ್ತಿದೆ-ಮೋನಪ್ಪ ಪೂಜಾರಿ
ಸ್ವಾಗತಿಸಿ ಪ್ರಸ್ತಾವನೆಗೈದ ಪಾಪೆಮಜಲು ಪ್ರೌಢಶಾಲಾ ಮುಖ್ಯ ಶಿಕ್ಷಕ ಮೋನಪ್ಪ ಪೂಜಾರಿ ಮಾತನಾಡಿ ನಮ್ಮ ಶಾಲೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದು ಸತತವಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುತ್ತಿದೆ, ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲೂ ಸತತವಾಗಿ 100% ಫಲಿತಾಂಶ ದಾಖಲಿಸುತ್ತಿದೆ, ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಮಿಂಚುತ್ತಿದೆ, ಇತ್ತಿಚಿನ ವರ್ಷಗಳಲ್ಲಿ ಕಾರ್ಯಾಧ್ಯಕ್ಷರಾದ ಇಕ್ಬಾಲ್ ಹುಸೇನ್ ಅವರ ನೇತೃತ್ವ ಮತ್ತು ಪರಿಶ್ರಮದ ಫಲವಾಗಿ ಶಾಲೆಯ ಅಭಿವೃದ್ಧಿಯೂ ಆಗುತ್ತಿದೆ, ಇದೀಗ 7 ಲಕ್ಷ ರೂ ಮೊತ್ತ ಸತೀಶ್ ರೈ ಕುತ್ಯಾಡಿಯವರ ಮೂಲಕ ಶಾಲಾ ರಂಗಮಂದಿರ ನಿರ್ಮಾಣಕ್ಕೆ ದೊರಕಿದ್ದು ಅನುದಾನ ಒದಗಿಸಲು ಕಾರಣಕರ್ತರಾದ ಸತೀಶ್ ರೈ ಹಾಗೂ ಇದಕ್ಕಾಗಿ ಸತತವಾಗಿ ಶ್ರಮಿಸಿದ ಕಾರ್ಯಾಧ್ಯಕ್ಷರಾದ ಇಕ್ಬಾಲ್ ಹುಸೇನ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಮೆಚ್ಚುಗೆ ವ್ಯಕ್ತಪಡಿಸಿದ ಸತೀಶ್ ರೈ:
ಸತೀಶ್ ರೈ ಕುತ್ಯಾಡಿ ಮತ್ತು ತಂಡ ರಂಗ ಮಂದಿರ ನಿರ್ಮಾಣವಾಗುವ ಸ್ಥಳ ವೀಕ್ಷಣೆ ಮಾಡಿದರು. ಬಳಿಕ ಶಾಲೆಯ ಹವಾನಿಯಂತ್ರಿತ ಕಂಪ್ಯೂಟರ್ ಕೊಠಡಿಯನ್ನು ವೀಕ್ಷಿಸಿದ ಅವರು ಶಾಲಾ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಸತೀಶ್ ರೈ ಅವರ ಸಹೋದರ ವಸಂತ ರೈ ಹಾಗೂ ಯೂನಿಯನ್ ಬ್ಯಾಂಕ್‌ನ ಸಿಬ್ಬಂದಿಗಳು ಹಾಗೂ ಎಸ್.ಡಿ.ಎಂ.ಸಿ ಸದಸ್ಯರಾದ ಚಂದ್ರ ಗುಂಡ್ಯಡ್ಕ, ಹೊನ್ನಪ್ಪ ನಾಯ್ಕ ಬಪ್ಪುಪುಂಡೇಲು, ದೇವಪ್ಪ ನಾಯ್ಕ ಪೆರ್ನೂಕು, ತಿಮ್ಮಪ್ಪ ನಾಯ್ಕ ಪೈಲಿಕಲ್ಲು, ಪದ್ಮನಾಭ, ಲಲಿತಾ ಪೆರಿಗೇರಿ, ಗೀತಾ ಪಾಪೆಮಜಲು ಉಪಸ್ಥಿತರಿದ್ದರು. ದೈ.ಶಿ.ಶಿಕ್ಷಕಿ ಪ್ರವೀಣಾ ರೈ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ವೃಂದದವರು ಸಹಕರಿಸಿದರು.

LEAVE A REPLY

Please enter your comment!
Please enter your name here