ಬೆಳ್ಳಂಬೆಳಗ್ಗೆ ಪೊಲೀಸರ ಕಾರ್ಯಾಚರಣೆ – ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ 10ಕ್ಕೂ ಅಧಿಕ ಗೋವುಗಳ ರಕ್ಷಣೆ

0

ಪರವಾನಿಗೆ ರಹಿತ ಮಾರಾಟ-ಆರೋಪಿಯ ಬಂಧನ- ಪಿಕಪ್ ಚಾಲಕ,ಇನ್ನೋರ್ವ ಪರಾರಿ


ಪುತ್ತೂರು:ಕೇರಳದತ್ತ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಹಾಗೂ ಹಿಂಸಾತ್ಮಕ ರೀತಿಯಲ್ಲಿ ಸಾಗಿಸಲಾಗುತ್ತಿದ್ದ 11 ಜಾನುವಾರುಗಳನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಅ.5ರಂದು ಬೆಳಗಿನ ಜಾವ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.ಜಾನುವಾರುಗಳನ್ನು ಪರವಾನಿಗೆ ಇಲ್ಲದೆ ಮಾರಾಟ ಮಾಡಿದ್ದ ಆರೋಪದ ಮೇರೆಗೆ ಆರ್ಯಾಪು ನಿವಾಸಿ ಶಿವಪ್ರಸಾದ್ (52ವ)ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.


ಕೇರಳದ ಕಡೆಗೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸಲಾಗುತ್ತಿದ್ದ ಮಾಹಿತಿಯ ಮೇರೆಗೆ ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸ್ ಉಪನಿರೀಕ್ಷಕಿ ಸುಷ್ಮಾ ಜಿ.ಭಂಡಾರಿ ಅವರು ಸಿಬ್ಬಂದಿಯೊಂದಿಗೆ ಬಲ್ನಾಡು ಗ್ರಾಮದ ಬೆಳಿಯೂರುಕಟ್ಟೆ ಬಳಿ ಕಾರ್ಯಾಚರಣೆ ನಡೆಸಿದರು.ಈ ವೇಳೆ ಪಿಕಪ್ ವಾಹನ(ಕೆಎ-19-ಎಫ್ -8558)ವನ್ನು ತಡೆದು ಪರಿಶೀಲಿಸಿದಾಗ, ವಾಹನದೊಳಗೆ 11 ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿರುವುದು ಪತ್ತೆಯಾಗಿದೆ.ಪೊಲೀಸರು ವಾಹನವನ್ನು ತಡೆದ ಸಂದರ್ಭದಲ್ಲಿ ಅದರ ಚಾಲಕ ಹಾಗೂ ಮತ್ತೋರ್ವ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾರೆ.ಜಾನುವಾರುಗಳಿಗೆ ಯಾವುದೇ ಅಗತ್ಯ ಪರವಾನಿಗೆ ಹೊಂದಿರದೆ, ಅವುಗಳನ್ನು ಮಾಂಸಕ್ಕಾಗಿ ಮಾರಾಟ ಮಾಡುವ ಉದ್ದೇಶದಿಂದ ಕೇರಳದತ್ತ ಸಾಗಿಸಲಾಗುತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.ಈ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020ರ 4, 6, 7, 12 ಹಾಗೂ prevention of cruelty to animals act ಕಲಂ 11 (ಡಿ) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

ತನಿಖೆ ನಡೆಸಿದ ಪೊಲೀಸರು, ಅಗತ್ಯ ಪರವಾನಿಗೆ ಇಲ್ಲದೆ ಜಾನುವಾರುಗಳನ್ನು ಮಾರಾಟ ಮಾಡಿದ ಆರೋಪದ ಮೇರೆಗೆ ಆರ್ಯಾಪು ನಿವಾಸಿ ಶಿವಪ್ರಸಾದ್ (52ವ)ಎಂಬಾತನನ್ನು ಬಂಧಿಸಿದ್ದಾರೆ.ಪ್ರಕರಣದಲ್ಲಿ ಪರಾರಿಯಾಗಿರುವ ಪಿಕಪ್ ಚಾಲಕ ಹಾಗೂ ಮತ್ತೋರ್ವ ವ್ಯಕ್ತಿಯ ಪತ್ತೆಗಾಗಿ ತನಿಖೆ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬೇರು ಸಮೇತ ಪತ್ತೆಗೆ ಆಗ್ರಹ
ಬುಳೇರಿಕಟ್ಟೆಯಲ್ಲಿ ಪಿಕಪ್ ವಾಹನದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಪತ್ತೆ ಹಚ್ಚಿ ಗೋವುಗಳನ್ನು ರಕ್ಷಣೆ ಮಾಡಿರುವುದು ಶ್ಲಾಘನೀಯ.ಇದರ ಹಿಂದಿರುವ ಜಾಲವನ್ನು ಬೇರು ಸಮೇತ ಪತ್ತೆ ಮಾಡುವಂತೆ ಪುತ್ತೂರು ಬಿಜೆಪಿ ಮತ್ತು ವಿಶ್ವಹಿಂದು ಪರಿಷತ್, ಬಜರಂಗದಳ ಆಗ್ರಹಿಸಿದೆ.

LEAVE A REPLY

Please enter your comment!
Please enter your name here