







ಪುತ್ತೂರು: ಮೈಸೂರು, ಮಡಿಕೇರಿ, ಕುದ್ರೋಳಿಯಂತೆ ಪುತ್ತೂರಿನಲ್ಲೂ ಗತಕಾಲದಲ್ಲಿ ವೈಭವದಿಂದ ದಸರಾ ಉತ್ಸವಗಳು ನಡೆಯುತ್ತಿದ್ದವು. ಕಾಲಕ್ರಮೇಣ ಆ ವೈಭವ ಕಳೆದುಕೊಂಡಿದ್ದರೂ, ಕಳೆದ ಮೂರು ವರ್ಷಗಳಿಂದ ಶ್ರೀ ಶಾರದೋತ್ಸವದ ಮೂಲಕ ಪುತ್ತೂರಿನ ದಸರಾ ಪರಂಪರೆಯ ಗತವೈಭವವನ್ನು ಮರುಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ. ಇದೀಗ ಈ ಉತ್ಸವಕ್ಕೆ ಮತ್ತಷ್ಟು ವಿಶಾಲ ರೂಪ ನೀಡುವ ಉದ್ದೇಶದಿಂದ ಈ ವರ್ಷದಿಂದ ಪುತ್ತೂರು ಶಾರದೋತ್ಸವವನ್ನು ‘ಪುತ್ತೂರು ದಸರಾ’ ಎಂಬ ನಾಮಾಂಕಿತದಲ್ಲಿ ಆಚರಿಸಲು ನಿರ್ಧರಿಸಲಾಗಿದೆ.


ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಅ.11ರಿಂದ 21ರವರೆಗೆ 92ನೇ ವರ್ಷದ ನವರಾತ್ರಿ ಪೂಜೆ ಹಾಗೂ ಶ್ರೀ ಶಾರದೋತ್ಸವ ವೈಭವದಿಂದ ನಡೆಯಲಿದೆ. ಹತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅ.21ರಂದು ಕಲಾತಂಡಗಳು, ಸಾವಿರಾರು ಕುಣಿತ ಭಜನಾ ತಂಡಗಳು ಹಾಗೂ ವಾದ್ಯಘೋಷಗಳೊಂದಿಗೆ ಶ್ರೀ ಶಾರದಾ ಮಾತೆಯ ಭವ್ಯ ಶೋಭಾಯಾತ್ರೆ ನಡೆಯಲಿದ್ದು, ಉತ್ಸವಕ್ಕೆ ವೈಭವದ ತೆರೆ ಬೀಳಲಿದೆ.



ಪುತ್ತೂರಿನ ದಸರಾ ಪರಂಪರೆಗೆ ಹೊಸ ರೂಪ
ಶ್ರೀ ಶಾರದಾ ಭಜನಾ ಮಂದಿರದ ಅಧ್ಯಕ್ಷ ಕೆದಂಬಾಡಿಗುತ್ತು ಸೀತಾರಾಮ ರೈ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಲವು ಪವಾಡಗಳಿಗೆ ಸಾಕ್ಷಿಯಾಗಿರುವ ಪುತ್ತೂರು ಶಾರದಾ ಭಜನಾ ಮಂದಿರದಲ್ಲಿ ಕಳೆದ ಮೂರು ವರ್ಷಗಳಿಂದ ಶಾರದೋತ್ಸವವನ್ನು ಗತಕಾಲದ ವೈಭವವನ್ನು ಮರುಕಳಿಸುವ ರೀತಿಯಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ಹೇಳಿದರು. “ಈ ಬಾರಿ ಶಾರದೋತ್ಸವವನ್ನು ‘ಪುತ್ತೂರು ದಸರಾ’ ಎಂದು ನಾಮಾಂಕಿತಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಇದು ಪುತ್ತೂರು ತಾಲೂಕಿನ ದಸರಾ ಮಹೋತ್ಸವವಾಗಿ ರೂಪುಗೊಳ್ಳುವ ಉದ್ದೇಶ ಹೊಂದಿದೆ. ಈ ಕುರಿತು ಮೂರು ವರ್ಷಗಳ ಹಿಂದೆಯೇ ಸಮಿತಿಯಲ್ಲಿ ಚಿಂತನೆ ನಡೆದಿತ್ತು” ಎಂದರು.
ಮಂಗಳೂರು, ಮಡಿಕೇರಿಗೆ ಹೋಗುತ್ತಿದ್ದ ಪುತ್ತೂರಿಗರು…
ಹಿಂದೆ ಪುತ್ತೂರಿನ ಜನರು ದಸರಾ ಮೆರವಣಿಗೆಯ ವೈಭವವನ್ನು ಕಣ್ತುಂಬಿಕೊಳ್ಳಲು ಮಂಗಳೂರು ಹಾಗೂ ಮಡಿಕೇರಿಯತ್ತ ತೆರಳುತ್ತಿದ್ದರು. ಆದರೆ ಕಳೆದ ಮೂರು ವರ್ಷಗಳಿಂದ ಪುತ್ತೂರು ಶಾರದೆಯ ವೈಭವದ ಶೋಭಾಯಾತ್ರೆ ಜನರ ಗಮನ ಸೆಳೆದಿದೆ. ವರ್ಷದಿಂದ ವರ್ಷಕ್ಕೆ ಶೋಭಾಯಾತ್ರೆಯಲ್ಲಿ ಹೊಸತನವನ್ನು ಅಳವಡಿಸಿಕೊಳ್ಳಲಾಗುತ್ತಿದ್ದು, ಜನರಿಂದಲೂ ಉತ್ತಮ ಸ್ಪಂದನೆ ದೊರೆಯುತ್ತಿದೆ. “ಪುತ್ತೂರಿನಲ್ಲೇ ದಸರಾ ವೈಭವವನ್ನು ಜನರು ಕಣ್ತುಂಬಿಕೊಳ್ಳುವಂತಾಗಬೇಕು ಎಂಬ ಉದ್ದೇಶದಿಂದ ಶಾರದೋತ್ಸವಕ್ಕೆ ಪುತ್ತೂರು ದಸರಾ ಎಂಬ ವಿಶಾಲ ರೂಪ ನೀಡಲಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಪುತ್ತೂರು ತಾಲೂಕಿನ ಜನತೆಯ ದಸರಾ ಮಹೋತ್ಸವವಾಗಿ ಬೆಳೆಯಲಿದೆ” ಎಂದು ಸೀತಾರಾಮ ರೈ ಹೇಳಿದರು.
ಹತ್ತು ದಿನ ಧಾರ್ಮಿಕ-ಸಾಂಸ್ಕೃತಿಕ ಸಂಭ್ರಮ
ಅ.11ರಿಂದ ಆರಂಭಗೊಳ್ಳುವ ಉತ್ಸವದಲ್ಲಿ ನವರಾತ್ರಿ ಪೂಜೆ, ಶ್ರೀ ಶಾರದಾ ಆರಾಧನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಚಂಡಿಕಾ ಹೋಮ ಸೇರಿದಂತೆ ವಿಶೇಷ ಧಾರ್ಮಿಕ ಆಚರಣೆಗಳೂ ನಡೆಯಲಿದ್ದು, ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರು ಹಾಗೂ ಸಾರ್ವಜನಿಕರನ್ನು ರಂಜಿಸಲಿವೆ. ಅ.21ರಂದು ನಡೆಯುವ ಸಮಾರೋಪದಂದು ಪ್ರಸಿದ್ಧ 20ಕ್ಕೂ ಅಧಿಕ ಕಲಾತಂಡಗಳು, ಸಾವಿರಾರು ಕುಣಿತ ಭಜನಾ ತಂಡಗಳು ಹಾಗೂ ವಿವಿಧ ವಾದ್ಯಘೋಷಗಳು ಶೋಭಾಯಾತ್ರೆಗೆ ಮೆರುಗು ನೀಡಲಿವೆ. ಶ್ರೀ ಶಾರದಾ ಮಾತೆಯ ಭವ್ಯ ಶೋಭಾಯಾತ್ರೆಯೊಂದಿಗೆ ಈ ಬಾರಿಯ ‘ಪುತ್ತೂರು ದಸರಾ’ ಸಂಪನ್ನಗೊಳ್ಳಲಿದೆ ಎಂದು ಸೀತಾರಾಮ ರೈ ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ದಸರಾ ಸಮಿತಿಯ ಗೌರವ ಮಾರ್ಗದರ್ಶಕ ಡಾ. ಸುರೇಶ್ ಪುತ್ತೂರಾಯ, ಉಪಾಧ್ಯಕ್ಷ ದಯಾನಂದ ಪಿ., ಶಾರದಾ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿ ಜಯಂತ್ ಉರ್ಲಾಂಡಿ, ಕೋಶಾಧಿಕಾರಿ ವಸಂತ್ ಕುಮಾರ್, ಶೋಭಾಯಾತ್ರೆಯ ಸಂಚಾಲಕರಾದ ಕೃಷ್ಣ ಎಂ. ಅಳಿಕೆ ಹಾಗೂ ನವೀನ್ ಕುಲಾಲ್ ಪುತ್ತೂರು ಉಪಸ್ಥಿತರಿದ್ದರು.










