







ಕೃಷಿಕರಿಗೆ ತೀವ್ರ ನಿರಾಸೆ…ಈ ವರ್ಷವೂ ಕೈ ಕೊಟ್ಟ ಪರಿಹಾರ ಮೊತ್ತ..!


ಪುತ್ತೂರು: ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ತಾಲೂಕಿನಾದ್ಯಂತ ಸಂಕಷ್ಟದಲ್ಲಿರುವ ಕೃಷಿಕರ ಬ್ಯಾಂಕ್ ಖಾತೆಗಳಿಗೆ ವಿಮಾ ನಷ್ಟ ಪರಿಹಾರ ಮೊತ್ತ ಜಮೆಯಾಗಲು ಪ್ರಾರಂಭವಾಗಿದೆಯಾದರೂ, ಜಮೆಯಾಗಿರುವ ಹಣವನ್ನು ಕಂಡು ರೈತ ಸಮುದಾಯ ತೀವ್ರ ಆಕ್ರೋಶ ಮತ್ತು ನಿರಾಸೆ ವ್ಯಕ್ತಪಡಿಸುತ್ತಿದೆ. ಸಾಲ ಸೂಲ ಮಾಡಿ ಬೆಳೆ ಬೆಳೆದು ಹವಾಮಾನ ವೈಪರೀತ್ಯದಿಂದ ನಷ್ಟ ಅನುಭವಿಸಿದ್ದ ರೈತರಿಗೆ, ಈ ಬಾರಿಯ ಪರಿಹಾರ ಮೊತ್ತವು ‘ಗಾಯದ ಮೇಲೆ ಬಿಸಿ ನೀರು ಚೆಲ್ಲಿದಂತೆ’ ಭಾಸವಾಗುತ್ತಿದೆ.
ಅಲ್ಪ ಪ್ರಮಾಣದ ಜಮೆ, ನಿರೀಕ್ಷೆ ಸುಳ್ಳು
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷವೂ ಕೂಡ ಜಮೆಯಾಗಿರುವ ಬೆಳೆ ವಿಮೆ ಪರಿಹಾರ ಮೊತ್ತ ಬಹಳಷ್ಟು ಕಡಿಮೆಯಾಗಿದೆ. ಪ್ರಕೃತಿ ವಿಕೋಪ, ಅಕಾಲಿಕ ಮಳೆ, ವಿಪರೀತ ತಾಪಮಾನ ಹಾಗೂ ಹವಾಮಾನದ ಏರುಪೇರಿನಿಂದಾಗಿ ಬೆಳೆ ಸಂಪೂರ್ಣ ನಾಶವಾಗಿ ಕೃಷಿಕರು ಕೈಸುಟ್ಟುಕೊಂಡಿದ್ದರು. ವಿಮಾ ಕಂಪನಿಗಳಿಗೆ ಸಾವಿರಾರು ರೂಪಾಯಿ ಕಂತು (ಪ್ರೀಮಿಯಂ) ಪಾವತಿಸಿದ್ದ ರೈತರು, ಕಷ್ಟಕಾಲದಲ್ಲಿ ಈ ವಿಮೆ ಆಸರೆಯಾಗಲಿದೆ ಎಂದು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಪ್ರಸ್ತುತ ಖಾತೆಗೆ ಜಮೆಯಾಗಿರುವ ತೀರಾ ಅಲ್ಪ ಮೊತ್ತವನ್ನು ನೋಡಿ ರೈತರು ದಿಕ್ಕು ತೋಚದಂತಾಗಿದ್ದಾರೆ.




ಕಳೆದ ವರ್ಷ ಬಂದಿದ್ದ ಪರಿಹಾರವೇ ತೀರಾ ಕಡಿಮೆಯಿತ್ತು ಎಂಬ ದೂರುಗಳಿದ್ದವು. ಆದರೆ ಈ ವರ್ಷ ಪರಿಸ್ಥಿತಿ ಅದಕ್ಕಿಂತಲೂ ಶೋಚನೀಯವಾಗಿದೆ. ಕೃಷಿಗಾಗಿ ಮಾಡಿದ ಸಾಲ, ಗೊಬ್ಬರ, ಕಾರ್ಮಿಕರ ವೆಚ್ಚ ಹಾಗೂ ಔಷಧ ಸಿಂಪರಣೆಯ ವೆಚ್ಚವನ್ನೂ ಭರಿಸಲಾಗದ ಸ್ಥಿತಿಯಲ್ಲಿ ರೈತರಿದ್ದಾರೆ. ಪ್ರಸ್ತುತ ಬಂದಿರುವ ಪರಿಹಾರ ಮೊತ್ತವು ‘ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ಯಂತಿದ್ದು, ವಿಮಾ ಕಂಪನಿಗಳು ರೈತರ ಹಿತ ಕಾಯುವಲ್ಲಿ ಸಂಪೂರ್ಣ ವಿಫಲವಾಗಿವೆ ಎಂಬ ಆರೋಪ ಕೇಳಿಬಂದಿದೆ.ಹವಾಮಾನ ವರದಿ ಮತ್ತು ಮಳೆ ಮಾಪನ ಕೇಂದ್ರಗಳ ಅಂಕಿಅಂಶಗಳನ್ನು ನೆಪವಾಗಿಟ್ಟುಕೊಂಡು ವಿಮಾ ಕಂಪನಿಗಳು ವೈಜ್ಞಾನಿಕವಾಗಿ ನಷ್ಟ ಪರಿಹಾರ ಲೆಕ್ಕ ಹಾಕುತ್ತಿಲ್ಲ. ನೈಜವಾಗಿ ತೋಟ- ಗದ್ದೆಗಳಲ್ಲಿ ಆಗಿರುವ ಹಾನಿಯನ್ನು ಪರಿಗಣಿಸದೆ, ಕೇವಲ ತಾಂತ್ರಿಕ ನೆಪಗಳನ್ನು ಒಡ್ಡಿ ರೈತರಿಗೆ ಸಿಗಬೇಕಾದ ನ್ಯಾಯಯುತ ಮೊತ್ತವನ್ನು ಕಡಿತಗೊಳಿಸಲಾಗುತ್ತಿದೆ ಎಂದು ಕೃಷಿಕರು ನೇರವಾಗಿ ಆರೋಪಿಸುತ್ತಿದ್ದಾರೆ.
ಜನಪ್ರತಿನಿಧಿಗಳು, ಅಧಿಕಾರಿಗಳ ಮಧ್ಯಪ್ರವೇಶಕ್ಕೆ ಆಗ್ರಹ
“ಸಾಲ ಸೋಲ ಮಾಡಿ ಕೃಷಿ ನಡೆಸುತ್ತಿದ್ದೇವೆ. ವಿಮೆ ಕಟ್ಟಿದರೆ ನಷ್ಟವಾದಾಗ ನೆರವಾಗುತ್ತದೆ ಅಂದುಕೊಂಡರೆ, ಬಂದಿರುವ ಮೊತ್ತ ಖಾತೆಯ ಮಿನಿಮಮ್ ಬ್ಯಾಲೆನ್ಸ್ ಕಾಯ್ದುಕೊಳ್ಳಲೂ ಸಾಲದಾಗಿದೆ” ಎಂದು ಸ್ಥಳೀಯ ರೈತರು ಅಳಲು ತೋಡಿಕೊಂಡಿದ್ದಾರೆ. ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಕೃಷಿ ಇಲಾಖೆಯ ಉನ್ನತ ಅಧಿಕಾರಿಗಳು ತಕ್ಷಣವೇ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು. ಹವಾಮಾನ ವೈಪರೀತ್ಯ ಹಾಗೂ ನಷ್ಟದ ಪ್ರಮಾಣವನ್ನು ಮರುಪರಿಶೀಲಿಸಿ, ಸಂಕಷ್ಟದಲ್ಲಿರುವ ಕೃಷಿಕರಿಗೆ ತಕ್ಷಣವೇ ಹೆಚ್ಚುವರಿ ಹಾಗೂ ಸೂಕ್ತ ಪರಿಹಾರ ಮೊತ್ತ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘಟನೆಗಳು ಹಾಗೂ ಕೃಷಿಕರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
ಗ್ರಾಮದಿಂದ ಗ್ರಾಮಕ್ಕೆ ವ್ಯತ್ಯಾಸ
ವಿಶೇಷವಾಗಿ ಬೆಳೆ ಮಿಮೆ ಪರಿಹಾರ ಮೊತ್ತದಲ್ಲಿ ಗ್ರಾಮದಿಂದ ಗ್ರಾಮಕ್ಕೆ ವ್ಯತ್ಯಾಸ ಕಂಡು ಬಂದಿದೆ. 1 ಕಿ.ಮೀ ಅಂತರದಲ್ಲೇ ಹೆಕ್ಟೆರ್ಗೆ ಸಾವಿರಾರು ರೂಪಾಯಿಗಳ ವ್ಯತ್ಯಾಸವನ್ನು ಕಾಣಬಹುದಾಗಿದೆ. ಉದಾಹರಣಗೆ ಕೆದಂಬಾಡಿಗೆ ಅಡಿಕೆಗೆ ಹೆಕ್ಟೆರ್ಗೆ ರೂ.ರೂ.27,990 ಬಿಡುಗಡೆಯಾಗಿದ್ದು ಕಾಳು ಮೆಣಸಿಗೆ ರೂ.7560ಬಿಡುಗಡೆಗೊಂಡಿದೆ. ಹತ್ತಿರದ ಅರಿಯಡ್ಕ ಗ್ರಾಮಕ್ಕೆ ಅಡಿಕೆಗೆ ಹೆಕ್ಟೆರ್ಗೆ ರೂ.60282 ಬಿಡುಗಡೆಗೊಂಡಿದ್ದು ಕಾಳು ಮೆಣಸಿಗೆ ರೂ.21288 ಬಿಡುಗಡೆಗೊಂಡಿದೆ.
ಈ ಬಾರಿ ದೊರೆತಿರುವ ಬೆಳೆ ವಿಮೆ ಪರಿಹಾರದ ಮೊತ್ತ ಸಮಾಧಾನ ತಂದಿಲ್ಲ ಎನ್ನಲಾಗಿದ್ದು ಕೆಲವೊಂದು ಗ್ರಾಮಗಳಲ್ಲಿ ಪರಿಹಾರದ ಮೊತ್ತ ತೀರಾ ಕಡಿಮೆಯಾಗಿದೆ. ಪ್ರೀಮಿಯಂ ಮೊತ್ತಕ್ಕೆ ಅಲ್ಪ ಮೊತ್ತ ಸೇರಿಸಿ ಕೆಲವರಿಗೆ ಪರಿಹಾರ ಮೊತ್ತ ದೊರಕಿದ್ದರೆ ಕೆಲವರಿಗೆ ಪ್ರೀಮಿಯಂ ಮೊತ್ತದಷ್ಟು ಪರಿಹಾರ ದೊರೆತಿಲ್ಲ ಎನ್ನುವ ದೂರುಗಳಿವೆ.ವಿಮಾ ಪ್ರೀಮಿಯಂ ಮೊತ್ತವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ರೈತರು ಸೇರಿ ಪಾವತಿಸುತ್ತಾರೆ ಬಳಿಕ ನಷ್ಟದ ಅಂದಾಜಿನ ಮೇಲೆ ವಿಮಾ ಕಂಪೆನಿಯು ರೈತರ ಖಾತೆಗಳಿಗೆ ಹವಾಮಾನ ಆಧಾರಿತ ಬೆಳೆ ವಿಮಾ ಮೊತ್ತವನ್ನು ಜಮೆ ಮಾಡುವುದು ನಿಯಮ. ಅಡಿಕೆ ಬೆಳೆಗೆ ಪ್ರತಿ ಹೆಕ್ಟೆರ್ಗೆ ಪ್ರೀಮಿಯಂ ಮೊತ್ತ ರೂ.6400 ಹಾಗೂ ಕಾಳು ಮೆಣಸು ಬೆಳೆಗೆ ಪ್ರತೀ ಹೆಕ್ಟೆರ್ಗೆ ರೂ.2350 ಪ್ರೀಮಿಯಂ ಮೊತ್ತವನ್ನು ಈಗಾಗಲೇ ರೈತರು ಪಾವತಿ ಮಾಡಿದ್ದರು. ಅಡಿಕೆಗೆ ಒಂದು ಹೆಕ್ಟೆರ್ಗೆ ರೂ.1.28 ಲಕ್ಷ ಹಾಗೂ ಕಾಳುಮೆಣಸಿಗೆ ಗರಿಷ್ಠ ರೂ.46 ಸಾವಿರ ವಿಮಾ ಪರಿಹಾರವಾಗಿ ಪಡೆಯಲು ಅವಕಾಶವಿದೆ.
ಕೆದಂಬಾಡಿ ಗ್ರಾಮಕ್ಕೆ ಈ ವರ್ಷ ಅಡಿಕೆಗೆ ಹೆಕ್ಟರ್ಗೆ ರೂ.27,990 ಬಿಡುಗಡೆಯಾಗಿದ್ದು ಕಾಳು ಮೆಣಸಿಗೆ ರೂ.7560ಬಿಡುಗಡೆಗೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮತ್ತಷ್ಟು ಕಡಿಮೆ ಮೊತ್ತ ಬಿಡುಗಡೆಗೊಂಡಿದೆ. ಕಳೆದ ವರ್ಷ ಅಡಿಕೆಗೆ ಪ್ರೀಮಿಯಂ ಮೊತ್ತದ ಶೇ.4.72 ಬಿಡುಗಡೆಗೊಂಡಿದ್ದರೆ ಈ ವರ್ಷ ಶೇ. 4.37 ಮಾತ್ರ ಬಿಡುಗಡೆಗೊಂಡಿದೆ ಅದೇ ರೀತಿ ಕಾಳು ಮೆಣಸು ಶೇ.3.22 ಬಿಡುಗಡೆಗೊಂಡಿದ್ದರೆ ಕಳೆದ ವರ್ಷ ಶೇ. 3.71 ಬಿಡುಗಡೆಗೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಡಿಮೆ ಬೆಳೆ ವಿಮೆ ಮೊತ್ತ ಪಾವತಿಯಾಗಿದೆ. ಮುಖ್ಯವಾಗಿ ಮಳೆ ಮಾಪನ ಸರಿಯಾಗಿಲ್ಲ ಎಂದು ಕಳೆದ ವರ್ಷವೇ ಸರಕಾರಕ್ಕೆ ವರದಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಇದಲ್ಲದೆ ಗ್ರಾಮದಿಂದ ಗ್ರಾಮಕ್ಕೆ ಬೆಳೆ ವಿಮೆ ಪರಿಹಾರ ಮೊತ್ತದಲ್ಲಿ ವ್ಯತ್ಯಾಸ ಕಂಡು ಬಂದಿದೆ.
ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು, ಅಧ್ಯಕ್ಷರು ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ











