







ಪುತ್ತೂರು: ವೈದ್ಯರು ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಡಾ. ಪ್ರದೀಪ್ ಎ. ನಾವೂರು ಅವರ ಆರೋಗ್ಯ ಕ್ಲಿನಿಕ್ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆಗೆ ಆಯುಷ್ ಫೆಡರೇಷನ್ ಆಫ್ ಇಂಡಿಯಾ, ಪುತ್ತೂರು ಶಾಖೆ ತೀವ್ರ ಖಂಡನೆ ವ್ಯಕ್ತಪಡಿಸಿದೆ.


ಡಾ. ಪ್ರದೀಪ್ ನಾವೂರು ಅವರು ವೈದ್ಯಕೀಯ ಸೇವೆಯ ಜೊತೆಗೆ ಸಮಾಜದ ಆರೋಗ್ಯ ಮತ್ತು ಜಾಗೃತಿಯ ದೃಷ್ಟಿಯಿಂದ ಹಲವಾರು ಉಪನ್ಯಾಸ ಹಾಗೂ ಆರೋಗ್ಯ ಸಂಬಂಧಿತ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದಾರೆ. ದೇವಸ್ಥಾನ, ದೈವಸ್ಥಾನ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಮುಂಚೂಣಿ ವ್ಯಕ್ತಿಯಾಗಿದ್ದಾರೆ.



ಇಂತಹ ಸಮಾಜಮುಖಿ ಹಾಗೂ ಸೇವಾಮನೋಭಾವದ ವ್ಯಕ್ತಿಯ ಕ್ಲಿನಿಕ್ಗೆ ದುರುದ್ದೇಶದಿಂದ ಬೆಂಕಿ ಹಚ್ಚಿರುವುದು ಅತ್ಯಂತ ಕಳವಳಕಾರಿ ಹಾಗೂ ಖಂಡನೀಯ. ವೈದ್ಯರು ಸಮಾಜದ ಆರೋಗ್ಯ ಕಾಪಾಡುವ ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿದ್ದು, ಅವರ ಸೇವಾಕೇಂದ್ರದ ಮೇಲೆಯೇ ಇಂತಹ ಕೃತ್ಯ ಎಸಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಡಾ. ಪ್ರದೀಪ್ ನಾವೂರು ಅವರು ಕೇವಲ ವೈದ್ಯರಲ್ಲ, ಸಮಾಜದ ಪ್ರತಿಯೊಬ್ಬರಿಗೂ ಅಗತ್ಯವಿರುವ ಉತ್ತಮ ವ್ಯಕ್ತಿತ್ವದ ಸಮಾಜಮುಖಿ ವ್ಯಕ್ತಿ. ಅವರ ಆರೋಗ್ಯ ಸೇವೆ ಹಾಗೂ ಸಾಮಾಜಿಕ ಕಾಳಜಿ ಶ್ಲಾಘನೀಯ. ಇಂತಹ ವ್ಯಕ್ತಿಯ ಕ್ಲಿನಿಕ್ಗೆ ಬೆಂಕಿ ಹಚ್ಚಿರುವುದು ಸಮಾಜಘಾತುಕ ಕೆಲಸವಾಗಿದೆ. ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ, ಕೃತ್ಯದ ಹಿಂದಿರುವ ಆರೋಪಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಯುಷ್ ಫೆಡರೇಷನ್ ಆಫ್ ಇಂಡಿಯಾ, ಪುತ್ತೂರು ಶಾಖೆಯ ಅಧ್ಯಕ್ಷ ಡಾ. ಹರಿಕೃಷ್ಣ ಪಾಣಾಜೆ ಒತ್ತಾಯಿಸಿದ್ದಾರೆ.










