ಶ್ರೀಕೃಷ್ಣ ಭಟ್ ಅರ್ತಿಕಜೆ, ಸರಾಫ ಮುಳಿಯ ಶ್ಯಾಮ್ ಭಟ್‌ರವರಿಗೆ ಕ.ಸಾ.ಪ. ಪುತ್ತೂರು ತಾ| ಘಟಕದಿಂದ ನುಡಿನಮನ

0

ಮುಳಿಯ ಶ್ಯಾಮ್ ಭಟ್ ನೂರಾರು ಮನೆ ಬೆಳಗಿದ ಧೀಮಂತ ವ್ಯಕ್ತಿ- ಐತಪ್ಪ ನಾಯ್ಕ್
ಶ್ರೀಕೃಷ್ಣ ಭಟ್ ಅರ್ತಿಕಜೆ ಪಾಠ ನಿಲ್ಲಿಸಿದ ಮಾನವೀಯ ಗುರು- ಡಾ| ಮನಮೋಹನ್

ಪುತ್ತೂರು : ಚೆನ್ನೈನಲ್ಲಿ ಕನ್ನಡದ ಕಂಪು ಪಸರಿಸಿದ, ಹಿರಿಯ ಸಾಹಿತಿ, ಪ್ರಾಧ್ಯಾಪಕ, ಶ್ರೀಕೃಷ್ಣ ಭಟ್ ಅರ್ತಿಕಜೆ ಹಾಗೂ ಪ್ರಸಿದ್ಧ ಚಿನ್ನಾಭರಣ ಉದ್ಯಮಿ, ಸಾಹಿತ್ಯ, ಸಾಂಸ್ಕೃತಿಕ ಪೋಷಕ ಸರಾಫ ಮುಳಿಯ ಶ್ಯಾಮ್ ಭಟ್ ರವರಿಗೆ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ವತಿಯಿಂದ ನುಡಿ ನಮನ ಕಾರ್ಯಕ್ರಮ ನಡೆಯಿತು.

ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ಕೋಶಧಿಕಾರಿ ಐತಪ್ಪ ನಾಯ್ಕ್ ಮಾತನಾಡಿ ಸರಾಫ ಮುಳಿಯ ಶ್ಯಾಮ್ ಭಟ್ ಅವರು ಕೊಡುಗೈದಾನಿ. ಸಮಾಜದ ನೂರಾರು ಮನೆಗಳನ್ನು ಬೆಳಗಿದ ಧೀಮಂತ ವ್ಯಕ್ತಿ. ನನ್ನಲ್ಲಿ ಶಿಕ್ಷಣದ ಬಗ್ಗೆ ಮಾತನಾಡುತ್ತಿದ್ದರು. ಸುಮಾರು ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಸಹಕಾರ ನೀಡಿದ್ದಾರೆ. ಚಿನ್ನದ ಉದ್ಯಮಿಯಾಗಿ ಬಡವರಿಗೆ ಕರಿಮಣಿ ಖರೀದಿಗೂ ಸಾಲ ನೀಡಿದ್ದಾರೆ. ಸಾಹಿತ್ಯ ಲೋಕಕ್ಕೆ ದುಡಿದಿದ್ದಾರೆ. ರೋಟರಿ, ಲಯನ್ಸ್, ವರ್ತಕ ಸಂಘ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ದುಡಿದು ಸಹಕಾರ ನೀಡಿದ್ದಾರೆ ಎಂದ ಅವರು ಅವರ ಚಿರಶಾಂತಿ ಕರುಣಿಸಲೆಂದು ಹೇಳಿದರು.

ವಿವೇಕಾನಂದ ಮಹಾವಿದ್ಯಾಲಯದ ಕನ್ನಡ ವಿಭಾಗ ಮುಖ್ಯಸ್ಥ ಡಾ| ಮನಮೋಹನ್‌ರವರು ಮಾತನಾಡಿ ಶ್ರೀಕೃಷ್ಣ ಭಟ್‌ರವರು ನನಗೆ ಗುರುಗಳಾಗಿದ್ದರು. ಅವರ ಪಾಠದ ಚಿತ್ರಣ ಈಗಲೂ ಕಣ್ಣ ಮುಂದಿದೆ. ಅವರಲ್ಲಿದ್ದ ವಿದ್ಯಾರ್ಥಿ ಪ್ರೀತಿಯನ್ನು ಎಲ್ಲರಿಗೂ ಹಂಚುತ್ತಿದ್ದರು. ಮನುಷ್ಯತ್ವಕ್ಕೆ ಇನ್ನೊಂದು ಹೆಸರಾಗಿದ್ದ ಅವರು ಕೋಪಿಷ್ಟನಾಗಿದ್ದರೂ ಮನಸ್ಸಿನ ಒಳಗಡೆ ತುಂಬಾ ಮೃದು ಸ್ವಭಾವ ಇತ್ತು. ಯಕ್ಷಗಾನ ವೇಷ ಧಾರಿಯೂ ಆಗಿದ್ದ ಅವರು ಅದ್ಭುತ ವ್ಯಕ್ತಿತ್ವದವರಾಗಿದ್ದರು. ಮಾನವೀಯ ಗುರುಗಳಾಗಿದ್ದ ಅವರು ಇಂದಿಗೆ ಪಾಠ ನಿಲ್ಲಿಸಿದ್ದಾರೆ ಎಂದರು.

ಹಿರಿಯ ಸಾಹಿತಿ ಹಾಗೂ ನಿವೃತ್ತ ಪ್ರಾಧ್ಯಾಪಕ ವಿ.ಬಿ. ಅತಿಕಜೆ ಮಾತನಾಡಿ ನಾವು 4 ಮಂದಿ ಸಹೋದರರು. ನಾನು ಮತ್ತು ಶ್ರೀಕೃಷ್ಣ ರಾಮ ಮತ್ತು ಭರತನ ಹಾಗೆ ಇದ್ದವರು. ಅವನು ಮದ್ರಾಸ್‌ನಲ್ಲಿ ಕನ್ನಡದ ಕಂಪು ಪಸರಿಸಿದ್ದಾನೆ. ಅವನು ಹಾಕಿಕೊಂಡ ಮಾರ್ಗ, ಆದರ್ಶ, ಅನುಸರಿಸಿಕೊಂಡು ಹೋಗಬೇಕಾಗಿದೆ ಎಂದರು. ಮುಳಿಯ ಶ್ಯಾಮ್ ಭಟ್‌ರವರಿಗೆ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಇತ್ತು. ಅಲ್ಲದೆ ಶಕ್ತಿಯೂ ಇತ್ತು ಅವರ ಆದರ್ಶವನ್ನು ಕೂಡ ಅನುಸರಿಸಬೇಕು ಎಂದರು.

ನಿವೃತ್ತ ಪ್ರಾಧ್ಯಾಪಕರು ಹಾಗೂ ಸಾಹಿತಿ ತಾಲ್ತಾಜೆ ವಸಂತ ಕುಮಾರ್ ಮಾತನಾಡಿ ಶ್ರೀಕೃಷ್ಣ ಭಟ್‌ರವರಲ್ಲಿ ಗಾಡವಾದ ಮನುಷ್ಯತ್ವ ಇತ್ತು. ಅವರು ಮದ್ರಾಸ್ ವಿವಿಯಲ್ಲಿರುವಾಗ ನಮ್ಮನ್ನು ಅವರ ಮನೆಗೆ ಕರೆಸಿಕೊಳ್ಳುತ್ತಿದ್ದರು. ಸ್ನೇಹ, ಬಾಂಧವ್ಯತೆ ಇತ್ತು ಎಂದರು. ಮುಳಿಯ ಗೋಲ್ಡ್ ಡೈಮಂಡ್ಸ್‌ನ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ಮಾತನಾಡಿ ಒಂದು ಸಮಯದಲ್ಲಿ ಬಹಳಷ್ಟು ಪುಸ್ತಕ ಓದುತ್ತಿದ್ದೆ. ನನಗೆ ಸಾಹಿತ್ಯದ ಬಗ್ಗೆ ಆಸಕ್ತಿ ಇದೆ. ಅಪ್ಪ ಹಾಕಿಕೊಟ್ಟ ಮೇಲ್ಪಕ್ತಿಯಂತೆ ನಡೆದುಕೊಂಡು ಬಂದಿದ್ದೇವೆ. ಅವರು ಹಲವಾರು ಆದರ್ಶ ಹಾಕಿ ಕೊಟ್ಟಿದ್ದಾರೆ ಎಂದರು.


ಹಿರಿಯ ವೈದ್ಯ ಎಪಿ ಭಟ್ ನುಡಿನಮನ ಸಲ್ಲಿಸಿದರು. ಕೇಶವ ಪ್ರಸಾದ್ ಮುಳಿಯರವರ ಪುತ್ರಿ ಆಧ್ಯಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಹಿತಿ ಪುರಂದರ ಭಟ್, ಸಂತ ಫಿಲೋಮಿನಾ ಕಾಲೇಜಿನ ಉಪಪ್ರಾಂಶುಪಾಲ ವಿಜಯ ಕುಮಾರ್ ಮೊಳೆಯಾರ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕ ಅಧ್ಯಕ್ಷ ಉಮೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here