ಉಪ್ಪಿನಂಗಡಿ ಸಂಗಮ ಕ್ಷೇತ್ರದಲ್ಲಿ ಪಿಂಡ ಪ್ರದಾನಕ್ಕೆ ಹರಿದು ಬಂದ ಭಕ್ತ ಸಾಗರ

0

ಉಪ್ಪಿನಂಗಡಿ: ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ನೇತ್ರಾವತಿ- ಕುಮಾರಧಾರ ನದಿಗಳ ಸಂಗಮ ತಾಣವಾದ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ಸನ್ನಿಧಿಯಲ್ಲಿ ಮಹಾಲಯ ಅಮಾವಾಸ್ಯೆಯ ದಿನವಾದ ಅ.10ರಂದು ಅಸಂಖ್ಯಾತ ಭಕ್ತರು ಗತಿಸಿದ ತಮ್ಮ ಬಂಧುಗಳಿಗೆ ತಿಲಹೋಮಾದಿ ಕಾರ್ಯಗಳನ್ನು ನೆರವೇರಿಸಿ ಪಿಂಡ ಪ್ರದಾನ ಮಾಡಿದರು.


ಬೆಳಗ್ಗಿನಿಂದಲೇ ಭಾರೀ ಸಂಖ್ಯೆಯಲ್ಲಿ ರಾಜ್ಯದ ಎಲ್ಲೆಡೆಯಿಂದ ಮಾತ್ರವಲ್ಲದೆ ದೂರದ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಒರಿಸ್ಸಾ, ಮಹಾರಾಷ್ಟ್ರ ಪ್ರದೇಶಗಳಿಂದ ಭಕ್ತರು ಆಗಮಿಸಿ ನೇತ್ರಾವತಿ ಕುಮಾರಧಾರಾ ನದಿ ಸಂಗಮ ಸ್ಥಳದಲ್ಲಿ ತೀರ್ಥ ಸ್ನಾನವನ್ನು ಮಾಡಿ ತಮ್ಮ ಗತಿಸಿದ ಬಂಧುಗಳಿಗೆ ತಿಲ ಹೋಮ, ತರ್ಪಣ, ತ್ರಿಪಾದ ಶಾಂತಿ, ಧನಿಷ್ಠಾ ಪಂಚಮ ಶಾಂತಿ, ನಾರಾಯಣ ಬಲಿ ಹೋಮಗಳನ್ನು ನೆರವೇರಿಸಿ ನದಿಗಳ ಸಂಗಮ ಸ್ಥಳದಲ್ಲಿ ಪಿಂಡ ಪ್ರದಾನ ಮಾಡಿದರು.


ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಭಕ್ತರ ಅನುಕೂಲತೆಗಾಗಿ 3 ಕಡೆಗಳಲ್ಲಿ ಹೆಚ್ಚುವರಿ ವಿಭಾಗಗಳನ್ನು ತೆರೆದು ಅಗತ್ಯಕ್ಕೆ ತಕ್ಕುದಾದ ಪುರೋಹಿತರನ್ನು ನಿಯುಕ್ತಿಗೊಳಿಸಿ ಭಕ್ತರಿಗೆ ಸುಲಲಿತವಾಗಿ ವಿಧಿವಿಧಾನಗಳನ್ನು ನಡೆಸುವಂತಾಗಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಸುಮಾರು 1500ಕ್ಕೂ ಅಧಿಕ ಮಂದಿ ತಿಲ ಹೋಮ, ಪಿಂಡ ಪ್ರಧಾನ ಸೇವೆಯನ್ನು ನೆರವೇರಿಸಿದರು. ಇದರ ಹೊರತಾಗಿ ಅನೇಕ ಭಕ್ತರು ಸ್ವಯಂಪ್ರೇರಿತ ತರ್ಪಣಾದಿ ಕಾರ್ಯಗಳನ್ನು ಸಂಗಮ ಸ್ಥಳದಲ್ಲಿ ನಡೆಸಿ ದೇವರ ದರ್ಶನ ಮಾಡಿದರು.


ಈ ಸಂದರ್ಭ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ರಾಧಾಕೃಷ್ಣ ನಾೖಕ್‌, ಸದಸ್ಯರಾದ ಜಿ. ಕೃಷ್ಣ ರಾವ್ ಅರ್ತಿಲ, ಗೋಪಾಲಕೃಷ್ಣ ರೈ, ವ್ಯವಸ್ಥಾಪಕ ವೆಂಕಟೇಶ್ ರಾವ್, ಸಿಬ್ಬಂದಿಗಳಾದ ಕೃಷ್ಣಪ್ರಸಾದ್ ಬಡಿಲ, ದಿವಾಕರ, ಪದ್ಮನಾಭ, ಸುಧಾಕರ ಕೋಟೆ, ಕೃಷ್ಣಪ್ರಸಾದ್ ದೇವಾಡಿಗ, ಗಂಗಾಧರ ಟೈಲರ್ ಮುಂಚೂಣಿಯಲ್ಲಿ ನಿಂತು ಭಕ್ತಾದಿಗಳಿಗೆ ಅನುಕೂಲತೆಗಳನ್ನು ಕಲ್ಪಿಸುವಲ್ಲಿ ನೆರವಾದರು. ಮಧ್ಯಾಹ್ನ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದ್ದು, ಸುಮಾರು ೩ ಸಾವಿರ ಮಂದಿ ಅನ್ನಪ್ರಸಾದ ಸ್ವೀಕರಿಸಿದರು.

LEAVE A REPLY

Please enter your comment!
Please enter your name here