







ರಾಷ್ಟ್ರೀಯ ಸೇವಾ ಮನೋಭಾವ ಬೆಳೆಸಲು ಎನ್ಎಸ್ಎಸ್ ಸಹಕಾರಿ – ಭಾಗೀರಥಿ ಮುರುಳ್ಯ


ರಾಮಕುಂಜ; ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ 2026-27ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ ಅ.11ರಂದು ಆಲಂತಾಯ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.



ಶಿಬಿರ ಉದ್ಘಾಟಿಸಿದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ಅಜಿತ್ ಕುಮಾರ್ ಪಾಲೇರಿಯವರು ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರವು ವಿದ್ಯಾರ್ಥಿಗಳಿಗೆ ಅನೇಕ ಅವಕಾಶಗಳನ್ನು ತೆರೆದಿಡುತ್ತದೆ. ಅನೇಕ ಮೌಲ್ಯ ಶಿಕ್ಷಣಗಳ ವೇದಿಕೆ ಇದಾಗಿದೆ. ಇಂತಹ ಕಲಿಕೆ ಕೇವಲ ಪಾಠವಾಗದೆ ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು. ಅಷ್ಟು ಮಾತ್ರವಲ್ಲದೆ ಶ್ರಮದಾನದ ಮೂಲಕ ಕೆಲಸವನ್ನು ಕಲಿಯುವ ಮತ್ತು ಶಾರೀರಿಕವಾಗಿ ಸದೃಢರಾಗುವತ್ತ ಸ್ವಯಂಸೇವಕರು ಪಣತೊಡಬೇಕು. ಆ ಮೂಲಕ ಉತ್ತಮ ವ್ಯಕ್ತಿಗಳಾಗಿ ಮೂಡಿಬರುವಂತಾಗಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಸೇವಾ ಮನೋಭಾವವನ್ನು ಬೆಳೆಸುವಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಶಿಬಿರಗಳು ಸಹಕಾರಿಯಾಗಿವೆ. ಇತ್ತೀಚಿಗೆ ಯುವ ಜನರು ಆಧುನಿಕತೆಯತ್ತ ಆಸಕ್ತಿಯನ್ನು ಹೊಂದಿದ್ದಾರೆ. ಅದು ತಪ್ಪಲ್ಲ. ಆದರೆ ಹಳ್ಳಿಯ ಜನರ, ಹಿರಿಯರ ಒಡನಾಟದಿಂದ ಯುವ ಜನರು ಜ್ಞಾನವನ್ನು, ಅನುಭವವನ್ನು ಸಂಪಾದಿಸಬಹುದು. ಇದರಿಂದ ಯುವಕರ ಅಭಿವೃದ್ಧಿ ಖಂಡಿತವಾಗಿಯೂ ಆಗುತ್ತದೆ. ಯುವಕರಲ್ಲಿ ಶಿಸ್ತು, ಸಂಯಮ, ಕ್ರಿಯಾಶೀಲತೆಯಂತಹ ಗುಣಗಳನ್ನು ಇಂತಹ ಶಿಬಿರಗಳು ಬೆಳೆಸುತ್ತದೆ. ಈ ನಿಟ್ಟಿನಲ್ಲಿ ಹಮ್ಮಿಕೊಂಡಂತಹ ಈ ಶಿಬಿರವು ಯಶಸ್ವಿಯಾಗಿ ನೆರವೇರಲಿ ಎಂದು ಶುಭ ಹಾರೈಸಿದರು.
ಶ್ರೀ ರಾಮಕುಂಜೆಶ್ವರ ವಿದ್ಯಾವರ್ಧಕ ಸಭಾದ ಸದಸ್ಯ ಲಕ್ಷ್ಮೀನಾರಾಯಣ ರಾವ್ ಆತೂರು, ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ, ಧವಳಗಿರಿ ಕನ್ಸ್ಟ್ರಕ್ಷನ್ ಇದರ ಸಿವಿಲ್ ಇಂಜಿನಿಯರ್ ಮನೋಹರ, ನಿವೃತ್ತ ಶಿಕ್ಷಕಿ ರಾಜೇಶ್ವರಿ ಶುಭಹಾರೈಸಿದರು. ಶ್ರೀ ಕ್ಷೇತ್ರ ಸೌತಡ್ಕ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರಶಾಂತ್ ರೈ ಅರಂತಬೈಲು, ಆಲಂತಾಯ ಸರಕಾರಿ ಹಿ.ಪ್ರಾ.ಶಾಲೆಯ ಮುಖ್ಯಗುರು ಲವ್ಲಿ ಜೋಸ್, ಶಿಬಿರ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಶೋಕ್ ಸಿ.ಬಿ., ರಾಷ್ಟ್ರೀಯ ಸೇವಾ ಯೋಜನಾ ಘಟಕದ ನಾಯಕ ಪ್ರೀತಮ್, ನಾಯಕಿ ಪ್ರೈಷಿಕಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯ, ಶಿಬಿರದ ಮಾರ್ಗದರ್ಶಕರೂ ಆದ ಚಂದ್ರಶೇಖರ ಕೆ. ಪ್ರಸ್ತಾವಿಕವಾಗಿ ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಂಯೋಜನಾಧಿಕಾರಿ ಕೀರ್ತನ್ ಬಿ.ಜಿ. ಸ್ವಾಗತಿಸಿದರು. ಸಹ ಶಿಬಿರಾಧಿಕಾರಿ ಲೋಹಿತ್ ಕುಮಾರ್ ವಂದಿಸಿದರು. ಜನನಿ ಮತ್ತು ಬಳಗದವರು ಪ್ರಾರ್ಥನೆ ನೆರವೇರಿಸಿದರು. ಸಹ ಶಿಬಿರಾಧಿಕಾರಿ ಪ್ರಮೀಳಾ, ಉಪನ್ಯಾಸಕ ತಿಲಕಾಕ್ಷ ಕಾರ್ಯಕ್ರಮ ನಿರೂಪಿಸಿದರು.










