







ಪುತ್ತೂರು: ದ.ಕ. ಜಿಲ್ಲೆಗೆ ಬೆಳೆ ವಿಮೆ ಕಡಿಮೆ ಬಂದಿದೆ, ಟರ್ಮ್ಶೀಟ್ನ್ನು ಕಾಂಗ್ರೆಸ್ ಸರ್ಕಾರ ಬದಲಾಯಿಸಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮಾಡಿದ್ದ ಆರೋಪಕ್ಕೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಪ್ರತಿಕ್ರಿಯೆ ನೀಡಿದ್ದಾರೆ.


ಪುತ್ತೂರಿನಲ್ಲಿ ಮಾತನಾಡಿದ ಅವರು,”ಸರ್ಕಾರದಲ್ಲಿ ಈ ಹಿಂದೆ 2023ರವರೆಗೆ ಒಂದು ಟರ್ಮ್ಶೀಟ್ ಇತ್ತು. 2023ರವರೆಗೆ ಬೆಳೆ ವಿಮೆ ತೆಗೆದುಕೊಳ್ಳೋದಕ್ಕೆ ಯಾವ ಇನ್ಶೂರೆನ್ಸ್ ಕಂಪೆನಿಯವರು ಮುಂದೆ ಬಂದಿಲ್ಲ. ಹಿಂದಿನ ಸರ್ಕಾರ ಮಾಡಿದ ಟರ್ಮ್ಶೀಟ್ನ್ನು ನಮ್ಮ ಸರ್ಕಾರ ಇಂಪ್ಲಿಮೆಂಟ್ ಮಾಡಿದೆ. ಹೌದು, ಟರ್ಮ್ಶೀಟ್ನಲ್ಲಿ ಬದಲಾವಣೆ ಮಾಡಲಾಗಿದೆ. ಕಳೆದ ವರ್ಷ ಮಳೆ ಕಡಿಮೆ ಬಂದಿದೆ, ಹೀಗಾಗಿ ಈ ವರ್ಷ ಕಡಿಮೆ ಬೆಳೆ ವಿಮೆ ಬಂದಿದೆ. ಬರುವ ವರ್ಷ ಇನ್ನೂ ಕಡಿಮೆ ಬೆಳೆ ವಿಮೆ ಬರಬಹುದು, ಯಾಕಂದ್ರೆ ಈ ವರ್ಷ ಮಳೆ ಕಡಿಮೆ ಬಂದಿದೆ. ಬೆಳೆ ವಿಮೆಯಲ್ಲಿ 20% ರಾಜ್ಯ ಸರ್ಕಾರ, 10% ಕೇಂದ್ರ, 5% ವಿಮೆಯನ್ನು ರೈತರು ಕಟ್ಟುತ್ತಾರೆ. ದೇಶದ ಪ್ರಧಾನ ಮಂತ್ರಿಗಳು ಬೆಳೆ ವಿಮೆ ಕೊಡೋದು ಅಂತ ಇವರೇ ಅಲ್ಲಲ್ಲಿ ಬ್ಯಾನರ್ ಹಾಕುತ್ತಿದ್ದರು. ಪ್ರಧಾನ ಮಂತ್ರಿಗಳಲ್ಲಿಯೇ ಹೇಳಿ ಹೊಸ ಟರ್ಮ್ಶೀಟ್ ಇವರಿಗೆ ಮಾಡಬಹುದಿತ್ತಲ್ಲಾ?” “ನಾನು ಹುಟ್ಟಿಸಿದ್ದು, ನಾನು ಅಪ್ಪ ಎಂದು ಹೇಳುವ ಪುತ್ತೂರಿನವರು ಎಲ್ಲಿದ್ದಾರೆ” ಎಂಬ ಹರೀಶ್ ಪೂಂಜಾ ಹೇಳಿಕೆಗೆ ತಿರುಗೇಟು ನೀಡಿದ ಅಶೋಕ್ ರೈ, “ನಾನು ಹುಟ್ಟಿಸಿದ್ದು, ನಾನು ಅಪ್ಪ ಎಂದೆಲ್ಲ ಯಾರೋ ಬಬ್ಬರು ಬೆಳ್ತಂಗಡಿಯವರು ಹೇಳಿದ್ದಾರೆ ನನಗೆ ಗೊತ್ತಿಲ್ಲ. ನಾನು ಹುಟ್ಟಿಸಿದ್ದನ್ನ ನಾನು ಅಪ್ಪ ಎಂದು ಹೇಳುವುದೇ ಸರಿ, ಇದೇ ನಮ್ಮ ಸಂಸ್ಕೃತಿಯಲ್ಲಿ ಇರೋದು. ಯಾರ್ಯಾರೋ ಹುಟ್ಟಿಸಿದ್ದನ್ನ ನಾನು ಅಪ್ಪ ಎಂದು ಹೇಳುವುದು ಇವರಲ್ವಾ? ಅವ ಹುಟ್ಟಿಸಿದ ಮಗನಿಗೆ ಅವನೇ ಅಪ್ಪ, ಅವನೇ ಅಪ್ಪ, ಬೇರೆ ಯಾರು ಇನ್ನೊಬ್ಬ ಅಪ್ಪ ಆಗ್ತಾನಾ?” ಎಂದು ಪ್ರಶ್ನಿಸಿದರು.”ಬೆಳ್ತಂಗಡಿಯವರು ನೋಡಿಕೊಳ್ಳಲಿ, ನಾಲಗೆಯನ್ನು ಬಿಗಿ ಹಿಡಿಯಲಿ. ಉಪ್ಪಿನಂಗಡಿಯಿಂದ ಆ ಕಡೆ ರಸ್ತೆಯನ್ನು ಒಮ್ಮೆ ನೋಡಿ. ಹೇಳಿದರೆ ಅನುದಾನ ಇಲ್ಲ ಎನ್ನುತ್ತಾರೆ. ಬೇರೆ ಎಲ್ಲಾ ಕಡೆ ಅನುದಾನ ಇದೆ, ಅಲ್ಲಿ ಯಾಕೆ ಅನುದಾನ ಇಲ್ಲ? ನಾನು ಯಾರ ತಂಟೆಗೂ ಹೋಗೋದಿಲ್ಲ, ಅಭಿವೃದ್ಧಿಯನ್ನು ಮಾತ್ರ ಮಾತನಾಡೋದು” ಎಂದರು.



ಬೆಳೆ ವಿಮೆ ವಿಚಾರದಲ್ಲಿ ಸವಾಲು:
ಇದಕ್ಕೂ ಮೊದಲು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಅಡಕೆ ಹಾಗೂ ಇತರ ಬೆಳೆಗಾರರಿಗೆ ಬೆಳೆ ವಿಮೆ ಪರಿಹಾರದಲ್ಲಿ ಅನ್ಯಾಯ ಖಂಡಿಸಿ ಮಂಗಳೂರಿನ ಪುರಭವನದ ಮಿನಿ ಸಭಾಂಗಣದಲ್ಲಿ ಅ.9ರಂದು ಬೃಹತ್ ಹಕ್ಕೊತ್ತಾಯ ಸಭೆಯಲ್ಲಿ ಆರೋಪಿಸಿ, “ಇವತ್ತಿನವರೆಗೆ ಕಾಂಗ್ರೆಸ್ನ ಒಬ್ಬೇ ಒಬ್ಬ ಲೀಡರ್ ಈ ಕುರಿತು ಚಕಾರ ಎತ್ತಿಲ್ಲ. ಪ್ರತಿಯೊಂದಕ್ಕೂ ಇಲ್ಲಿಂದ ಇಲ್ಲಿಯವರೆಗೆ ಮೈಕ್ ಇಟ್ಟುಕೊಂಡು ಯಾನೇ ಮಲ್ತೆ, ಯಾನ್ ಪುಟ್ಟಯೆನೆಕ್ ಯಾನೇ ಅಮ್ಮೆ ಎಂದು ಹೇಳುವ ಪುತ್ತೂರಿನವರು ಇದ್ದಾರಲ್ಲ, ಅವರು ಮಾತನಾಡಲಿಲ್ಲ. ನಾನು ಕೇಳುತ್ತಿದ್ದೇನೆ – ಯು.ಟಿ. ಖಾದರ್, ಅಶೋಕ್ ಕುಮಾರ್ ರೈ, ರಮಾನಾಥ ರೈ, ರಕ್ಷಿತ್ ಶಿವರಾಂ, ಮಿಥುನ್ ರೈ ಹಾಗೂ ಪದ್ಮರಾಜ್ ಅವರಿಗೆ ತಾಕತ್ತಿದ್ದರೆ ಬೆಳೆ ವಿಮೆಯ ಟರ್ಮ್ ಶೀಟ್ ಬದಲಾಯಿಸಿದ್ದೇಕೆ ಮತ್ತು ಯಾರ ಜೇಬಿಗೆ ಎಷ್ಟು ಹಣ ಹೋಗಿದೆ ಎಂಬುದನ್ನು ಬಹಿರಂಗಪಡಿಸಲಿ” ಎಂದು ಸವಾಲು ಹಾಕಿದ್ದರು.
“ಶಾಲಾ ಮಕ್ಕಳ ಶೂ-ಚಪ್ಪಲಿಯಿಂದ ಹಿಡಿದು ವೃದ್ಧಾಪ್ಯ ವೇತನದವರೆಗೆ ಭ್ರಷ್ಟಾಚಾರ ಎಸಗಿರುವ ರಾಜ್ಯ ಸರ್ಕಾರ ಕರಾವಳಿ ರೈತರ ಪಾಲಿಗೆ ಭಸ್ಮಾಸುರನಾಗಿದೆ. 2023ರಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಬೆಳೆ ವಿಮೆ ಪರಿಹಾರ ಕಡಿತಗೊಂಡಾಗ ಪಂಚಾಯ್ತಿಗಳ ದೋಷಪೂರಿತ ಮಳೆ ಮಾಪನಗಳ ನೆಪ ಹೇಳಿ ರೈತರ ಕಿವಿಗೆ ಹೂ ಇಡುವ ಕೆಲಸ ಮಾಡಿದ್ದರು. ಆದರೆ ಈಗ ಸರ್ಕಾರವೇ ಶಾಮೀಲಾಗಿ ನಿಯಮಗಳನ್ನು ಬದಲಿಸಿ ರೈತರಿಗೆ ಮೋಸ ಮಾಡಿದೆ. ಮುಂಬರುವ ಚುನಾವಣೆಗಳಲ್ಲಿ ಈ ಸರ್ಕಾರವನ್ನು ಕಿತ್ತೆಸೆದು ಅರಬ್ಬಿ ಸಮುದ್ರಕ್ಕೆ ಎಸೆಯುವ ಕೆಲಸವನ್ನು ಜನರು ಮಾಡಲಿದ್ದಾರೆ” ಎಂದು ಅವರು ಹೇಳಿದ್ದರು.










