ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ IEEE ಅಂತಾರಾಷ್ಟ್ರೀಯ ಸಮ್ಮೇಳನದ ಸಮಾರೋಪ

0


ಪುತ್ತೂರು: ನೀವು ವಿದ್ಯಾರ್ಥಿಯಾಗಿರಲಿ ಅಥವಾ ವೃತ್ತಿಪರರಾಗಿರಲಿ IEEE ಸದಸ್ಯತ್ವವು ನಿಮ್ಮನ್ನು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಜಾಗತಿಕ ಸಮುದಾಯಗಳೊಂದಿಗೆ ನೇರವಾಗಿ ಜೋಡಿಸುತ್ತದೆ ಎಂದು ಬೆಂಗಳೂರಿನ ಬ್ಲೂಟ್ ಟೆಕ್ನಾಲಜೀಸ್ ಪ್ರೈವೆಟ್ ಲಿಮಿಟೆಡ್ ಇದರ ಸ್ಥಾಪಕ ಹಾಗೂ ಮುಖ್ಯ ತಂತ್ರಜ್ಞಾನ ಅಧಿಕಾರಿ ಸುದರ್ಶನ್ ಶೆನ್ವಿ ಹೇಳಿದರು.‌


ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿ, IEEE ಬೆಂಗಳೂರು ವಿಭಾಗ ಮತ್ತು IEEE ಮಂಗಳೂರು ಉಪವಿಭಾಗ ಇದರ ಸಂಯುಕ್ತ ಆಶ್ರಯದಲ್ಲಿ ಡಿಸ್ಟ್ರಿಬ್ಯೂಟೆಡ್ ಕಂಪ್ಯೂಟಿರಿಂಗ್, VLSI ಇಲೆಕ್ಟ್ರಿಕಲ್ ಸರ್ಕ್ಯೂಟ್ಸ್ ಮತ್ತು ರೊಬೋಟಿಕ್ಸ್ ವಿಷಯಗಳನ್ನೊಳಗೊಂಡ ಐಇಇಇ ಅಂತಾರಾಷ್ಟ್ರೀಯ ಸಮ್ಮೇಳನ ಡಿಸ್ಕವರ್ 2026ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತಾಡಿದರು. ಎಲ್ಲರೂ ಒಗ್ಗೂಡಿ ಕೆಲಸ ಮಾಡಿದರೆ ಯಾವುದನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಈ ಸಮ್ಮೇಳನವೇ ಸಾಕ್ಷಿ, ನಿಗದಿತ ಸಮಯದಲ್ಲಿ ಪ್ರತಿಯೊಂದು ಕೆಲಸಗಳು ಸಂಪನ್ನಗೊಂಡವು ಇದರ ಹಿಂದೆ ಸಹಕರಿಸಿದ ಎಲ್ಲರೂ ಅಭಿನಂದನಾರ್ಹರು ಎಂದು ನುಡಿದರು.


ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದ IEEE ಬೆಂಗಳೂರು ವಿಭಾಗದ ತಾಂತ್ರಿಕ ಮತ್ತು ಸಮ್ಮೇಳನ ಪ್ರಾಯೋಜಕತ್ವ ಸಮಿತಿಯ ಸಹ ಅಧ್ಯಕ್ಷ ಡಾ.ವಾಸುದೇವ ಆಚಾರ್ಯ ಮಾತನಾಡಿ ಈ ಅಂತಾರಾಷ್ಟ್ರೀಯ ಸಮ್ಮೇಳನವು ಅತ್ಯಂತ ಉತ್ತಮ ರೀತಿಯಲ್ಲಿ ನಡೆಯಿತು. ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿದ್ದತೆಗಳು ಯಾವರೀತಿಯಲ್ಲಿ ನಡೆಯುತ್ತಿತ್ತು ಎನ್ನುವುದಕ್ಕೆ ಇದರ ಯಶಸ್ಸೇ ಸಾಕ್ಷಿ ಎಂದರು. ಕರ್ನಾಟಕದ ಎಲ್ಲಾ ಜಿಲ್ಲೆಗಳನ್ನು ಐಇಇಇಯ ವ್ಯಾಪ್ತಿಗೆ ತರುವ ಮಿಷನ್-31ಎನ್ನುವ ಪರಿಕಲ್ಪನೆಗೆ ಎಲ್ಲರೂ ಕೈಜೋಡಿಸಿ ಇದರ ಯಶಸ್ಸಿನಲ್ಲಿ ಪಾಲುದಾರರಾಗಬೇಕು ಎಂದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಪ್ರಸನ್ನ ದರ್ಬೆ ಮಾತನಾಡಿ ಇಂಜಿನಿಯರಿಂಗ್ ಕಾಲೇಜಿನ ಇತಿಹಾಸದಲ್ಲಿ ಇದೊಂದು ಮುಖ್ಯ ಕಾರ್ಯಕ್ರಮವಾಗಿ ಗುರುತಿಸಲ್ಪಡುವಂತಾಯ್ತು ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು. ನಮ್ಮ ಸಂಸ್ಥೆಯು ವಿದ್ಯಾರ್ಥಿಗಳ ಔನ್ನತ್ಯಕ್ಕಾಗಿ ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸುವುದಕ್ಕೆ ಉತ್ಸುಕವಾಗಿದೆ ಎಂದರು.


ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.IEEE ಮಂಗಳೂರು ಉಪವಿಭಾಗದ ಮುಖ್ಯಸ್ಥ ಡಾ.ವೇಣುಗೋಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮ ಸಂಯೋಜಕಿಯರಲ್ಲೊಬ್ಬರಾದ ಡಾ.ರಜನಿ ರೈ.ಬಿ ಎರಡು ದಿನಗಳ ಕಾಲ ನಡೆದ ಈ ಸಮ್ಮೇಳನದ ವರದಿಯನ್ನು ವಾಚಿಸಿದರು. ಎಂಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ.ರೇಶ್ಮಾ ಪೈ ಅತಿಥಿಗಳನ್ನು ಪರಿಚಯಿಸಿದರು.


ಒಟ್ಟು ಆರು ವಿಭಾಗಗಳಲ್ಲಿ ನಡೆದ ಪ್ರಬಂಧ ಮಂಡನೆಯಲ್ಲಿ ಪ್ರತಿ ವಿಭಾಗದಲ್ಲಿಯೂ ಉತ್ತಮವಾದ ಪ್ರಬಂಧಗಳಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಎಂಸಿಎ ವಿಭಾಗದ ನಿರ್ದೇಶಕಿ ಡಾ.ಜೋತಿಮಣಿ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಕಿ ಡಾ.ಜೀವಿತಾ.ಬಿ.ಕೆ ವಂದಿಸಿದರು. ಮೂಲ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ.ಶ್ರೀಶರಣ್ಯ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here