







ಪುತ್ತೂರು: ಸುವರ್ಣ ಸಂಭ್ರಮವನ್ನು ಕಾಣುತ್ತಿರುವ ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘ, ಮರಾಟಿ ಯುವ/ಮಹಿಳಾ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ ಮತ್ತು 2026-27ನೇ ಸಾಲಿನ ಸಮುದಾಯ ಬಾಂಧವರ ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಅ.11 ರಂದು ಕೊಂಬೆಟ್ಟು ಮರಾಟಿ ಸಮಾಜ ಮಂದಿರದ ಸಭಾಂಗಣದಲ್ಲಿ ಜರಗಿತು.
ಶಿಕ್ಷಣದಿಂದ ಸಮಾಜವನ್ನು ಬದಲಿಸುವ ಸಾಮರ್ಥ್ಯವಿದೆ:ಪ್ರೊ|ಡಾ.ಪುಟ್ಟಣ್ಣ ಕೆ
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಪ್ರೊ|ಡಾ.ಪುಟ್ಟಣ್ಣ ಕೆ, ಮಾತನಾಡಿ, ಸರಕಾರದಿಂದ ಶಿಕ್ಷಣಕ್ಕೆ ಪ್ರೋತ್ಸಾಹವಾಗಿ ವಿವಿಧ ಸ್ಕಾಲರ್‌ಶಿಪ್ ಅನ್ನು ನೀಡುತ್ತಿದೆ. ಹಲವಾರು ವಿದ್ಯಾರ್ಥಿಗಳು ಸರಕಾರದ ಸ್ಕಾಲರ್‌ಶಿಪ್ ಪಡೆದು ಇಂದು ಸಮಾಜದಲ್ಲಿ ಉನ್ನತ ಹಂತವನ್ನು ತಲುಪಿದ್ದಾರೆ. ನಮ್ಮ ಸಮಾಜ ಬಾಂಧವರು ಕೂಡ ಇದರ ಪ್ರಯೋಜನ ಪಡೆದುಕೊಂಡು ಆಡಳಿತಾತ್ಮಕ ಉನ್ನತ ಹುದ್ದೆಗಳನ್ನು, ರಾಜಕೀಯ ಕ್ಷೇತ್ರದಲ್ಲಿ, ದೇಶ ಕಟ್ಟುವ ಸೈನಿಕರಾಗಿ ಮುಂತಾದ ಅನೇಕ ಹುದ್ದೆಗಳನ್ನು ಅಲಂಕರಿಸುವ ಅರಿವು ಬರಬೇಕು ಎಂದ ಅವರು, ಶಿಕ್ಷಣದಿಂದ ಸಮಾಜವನ್ನು ಬದಲಿಸುವ ಸಾಮರ್ಥ್ಯವಿದೆ. ಶಿಕ್ಷಣ ಇಲ್ಲದಿದ್ದರೆ ನಾವು ನಮ್ಮ ಆಸ್ತಿತ್ವವನ್ನು ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಸಮಾಜದ ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆದು ಸ್ವಾಭಿಮಾನದಿಂದ ಜೀವನ ಕಟ್ಟುವವರಾಗಬೇಕು ಎಂದು ಅವರು ಹೇಳಿದರು.
ಆಸ್ತಿತ್ವ ಕಾಪಾಡಿಕೊಳ್ಳಲು ಬೆಂಗಳೂರಿನಲ್ಲಿ ಸಮಾವೇಶ:ಪ್ರವೀಣ್ ಕುಮಾರ್ ಮುಗುಳಿ
ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯವಾದಿ ಪ್ರವೀಣ್ ಕುಮಾರ್ ಮುಗುಳಿರವರು ಮಾತನಾಡಿ, ಉಳುವವನೇ ಒಡೆಯ ಎಂಬ ಕಾನೂನು ಹಾಗೂ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಾನೂನಿನಂದ ನಮ್ಮ ಸಮಾಜವು ಇಂದು ಈ ಮಟ್ಟಕ್ಕೆ ನಿಲ್ಲಲು ಸಾಧ್ಯವಾಗಿದೆ. ನಮ್ಮ ಸಮಾಜದ ಶೇ.30-40 ಜನರು ಶಿಕ್ಷಣದಿಂದ ದೂರವಾಗಿ ಇತರ ಸಮಾಜದೊಂದಿಗೆ ಸ್ಪರ್ಧೆಯನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ ಎಂದ ಅವರು, ಸುವರ್ಣ ಸಂಭ್ರಮದತ್ತ ಮುನ್ನುಗ್ಗುತ್ತಿರುವ ಈ ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘವು ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಪ್ರಶಂಸನೀಯ. ಕರ್ನಾಟಕ ಮರಾಟಿ ಸಂಘವು ದ.ಕ, ಉಡುಪಿ, ಕಾಸರಗೋಡು, ದ.ಕ ಜಿಲ್ಲೆಗಳಲ್ಲಿ ನಮ್ಮ ಆಸ್ತಿತ್ವ ಹೊಂದಿದ್ದು, ನಮ್ಮ ಆಸ್ತಿತ್ವವನ್ನು ಬೆಂಗಳೂರಿನಲ್ಲೂ ಪ್ರಸ್ತುತಪಡಿಸುವುದಕ್ಕೆ ಬೆಂಗಳೂರಿನಲ್ಲಿ ಸಮಾವೇಶ ಮಾಡಲಿದ್ದೇವೆ ಎಂದು ಅವರು ಹೇಳಿದರು.
ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ನಾಯ್ಕ ಕೇಪುಳು, ಕೋಶಾಧಿಕಾರಿ ಶಿವಪ್ಪ ನಾಯ್ಕ ಎಸ್, ಪೂಜಾ ಸಮಿತಿ ಸಂಚಾಲಕ ಪೂವಪ್ಪ ನಾಯ್ಕ ಕುಂಞಕುಮೇರು, ಯುವ ವೇದಿಕೆ ಅಧ್ಯಕ್ಷ ಸಂದೀಪ್ ಆರ್ಯಾಪುರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು.ವೈಷ್ಣವಿ ಪರ್ಲಡ್ಕ ಪ್ರಾರ್ಥಿಸಿದರು. ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಅಶೋಕ್ ಬಲ್ನಾಡು ಸ್ವಾಗತಿಸಿ, ಕೊಂಬೆಟ್ಟು ಮರಾಟಿ ಯುವ ವೇದಿಕೆಯ ಉಪಾಧ್ಯಕ್ಷ ಶ್ರೀನಿವಾಸ ಮಠಂತಬೆಟ್ಟು ವಂದಿಸಿದರು. ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘದ ಪೂರ್ವಾಧ್ಯಕ್ಷ ಹಾಗೂ ವಿಶ್ರಾಂತ ಪ್ರಾಂಶುಪಾಲ ದುಗ್ಗಪ್ಪ ನಾಯ್ಕ ಬಡಾವು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಭಾ ಪುರಸ್ಕೃತರ ಪಟ್ಟಿ ವಾಚಿಸಿದರು. ಸನ್ಮಾನಿತರ ಅಭಿನಂದನಾ ಪತ್ರವನ್ನು ಮಹಿಳಾ ವೇದಿಕೆ ಅಧ್ಯಕ್ಷೆ ಕಿಶೋರಿ ದುಗ್ಗಪ್ಪ ನಾಯ್ಕ ಬಡಾವು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರ ಪಟ್ಟಿಯನ್ನು ಕಾರ್ಯಕಾರಿ ಸಮಿತಿ ಸದಸ್ಯ ಮೋಹನ ನಾಯ್ಕ ಎಂ.ರವರು ವಾಚಿಸಿದರು. ಅಪರಾಹ್ನ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
ಸುವರ್ಣ ಸಂಭ್ರಮ: ರ‍್ಯಾಂಕ್ ಪಡೆಯುವ ಸಮುದಾಯದ ವಿದ್ಯಾರ್ಥಿಗಳಿಗೆ ವಿಶೇಷ ಪುರಸ್ಕಾರ
ಸಂಘವು ವರ್ಷಂಪ್ರತಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಮಾತ್ರವಲ್ಲ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸುತ್ತಾ ಬಂದಿದೆ. ಸಮುದಾಯದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಸಮಾಜದಲ್ಲಿ ಗೌರವಾನ್ವಿತ ಹುದ್ದೆಗಳನ್ನು ಅಲಂಕರಿಸುವಂತಾಗಬೇಕು. ಸಮುದಾಯದ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣಕ್ಕಾಗಿ ಆರ್ಥಿಕವಾಗಿ ಸಮಸ್ಯೆಯಾದರೆ ಸಂಘವನ್ನು ಸಂಪರ್ಕಿಸಿ, ಆರ್ಥಿಕ ಸಹಕಾರ ನೀಡಲು ಶ್ರಮಿಸುತ್ತೇವೆ. ಸುವರ್ಣ ಸಂಭ್ರಮದಲ್ಲಿರುವ ನಮ್ಮ ಸಂಘದ ವತಿಯಿಂದ ನಮ್ಮ ಸಮುದಾಯದ ವಿದ್ಯಾರ್ಥಿಗಳು ರ‍್ಯಾಂಕ್ ಪಡೆದಲ್ಲಿ ಅವರನ್ನು ವಿಶೇಷ ಪುರಸ್ಕಾರ ಮಾಡಲಾಗುವುದು. ಈಗಾಗಲೇ ಸಮುದಾಯದ ದಾನಿಗಳು ಸಂಘದ ಸಮಾಜಮುಖಿ ಕಾರ್ಯಕ್ರಮಗಳಿಗೆ ಸಹಕರಿಸಿದ್ದಾರೆ, ಮುಂದಿನ ದಿನಗಳಲ್ಲೂ ಇದೇ ಸಹಕಾರ ಮುಂದುವರೆಯಲಿ.
-ಮಂಜುನಾಥ ಎನ್.ಎಸ್, ಅಧ್ಯಕ್ಷರು, ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘ, ಪುತ್ತೂರು


ಪ್ರತಿಭಾ ಪುರಸ್ಕಾರ
100ಕ್ಕೂ ಮಿಕ್ಕಿ ಪ್ರತಿಭಾ ಪುರಸ್ಕಾರ.
ಈ ಸಂದರ್ಭದಲ್ಲಿ 2025-26ನೇ ಸಾಲಿನ ಎಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಶೇ.75, ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಶೇ.80ಕ್ಕಿಂತ ಮೇಲ್ಪಟ್ಟ ಮತ್ತು ರಾಜ್ಯ, ರಾಷ್ಟ್ರಮಟ್ಟದಲ್ಲಿ ವಿಶೇಷ ಪ್ರತಿಭಾ ಪುರಸ್ಕೃತರಾಗಿರುವ ಸುಮಾರು ನೂರಕ್ಕೂ ಮಿಕ್ಕಿ ಸಮಾಜ ಬಾಂಧವರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಅಭಿನಂದಿಲಾಯಿತು. ವಿವಿಧ ಕ್ಷೇತ್ರದಲ್ಲಿ ಪ್ರಜ್ವಲಿಸಿದ ಸಮುದಾಯದ ಕೊರಗಪ್ಪ ನಾಯ್ಕ ಆರ್ಯಾಪು(ಕೃಷಿ), ಕು|ಹರ್ಷಿತ ಬಿ.ಟಿ ಶೇವಿರೆ(ರಂಗಭೂಮಿ ಕಲಾವಿದೆ), ಗಂಗಾಧರ್ ಕೌಡಿಚ್ಚಾರ್(ರಂಗಭೂಮಿ ಕಲಾವಿದ), ದುರ್ಗಾಪ್ರಸಾದ್(ಚಲನಚಿತ್ರ ಬಾಲನಟ), ಕು|ಪೂರ್ವಿಕ ಎಸ್.ಎಚ್(ರಾಷ್ಟ್ರೀಯ ಈಜುಗಾರ್ತಿ)ರವರುಗಳಿಗೆ ವಿಶೇಷ ಪುರಸ್ಕಾರ ಮಾಡಲಾಯಿತು.




ಸನ್ಮಾನ
ಪೊಲೀಸ್ ಇಲಾಖೆಯಲ್ಲಿ ನಿರ್ವಹಿಸಿದ ಕರ್ತವ್ಯ ನಿಷ್ಠೆಗಾಗಿ ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕೃತರಾಗಿರುವ ಮಂಗಳೂರು ಕಂಕನಾಡಿ ನಗರ ಪೊಲೀಸ್ ಠಾಣೆಯ ಮುಖ್ಯ ಆರಕ್ಷಕ ಜಯಾನಂದ ಎನ್.ನೂಜಿಬೈಲು ಹಾಗೂ ಅವರ ಪತ್ನಿಯನ್ನು ಈ ಸಂದರ್ಭದಲ್ಲಿ ಸಂಘದ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.











