







ಉಪ್ಪಿನಂಗಡಿ: ಲೋಕಾಯುಕ್ತ ಅಧಿಕಾರಿಗಳು ಉಪ್ಪಿನಂಗಡಿ ಗ್ರಾ.ಪಂ.ಗೆ ಕಡತ ಪರಿಶೀಲನೆಗೆಂದು ಆಗಮಿಸಿದ ಸಂದರ್ಭ ಇಲ್ಲಿನ ಪಿಡಿಒ ಆಗಿದ್ದ ವಿಲ್ಫ್ರೇಡ್ ಲಾರೆನ್ಸ್ ರೊಡ್ರಿಗಸ್ ವಿರುದ್ಧ ಹಲವು ಮಂದಿ ಲೋಕಾಯುಕ್ತಕ್ಕೆ ದೂರು ನೀಡಿದ್ದು, ಅದರ ವಿಚಾರಣೆ ಜಿಲ್ಲಾ ಪಂಚಾಯತ್ ಅಧಿಕಾರಿಗಳಿಂದ ಅ.12ರಂದು ನಡೆಯಿತು.


ನಾಗರಿಕರು ನೀಡಿದ ದೂರಿನ ತನಿಖಾ ಪ್ರಕ್ರಿಯೆ ನಡೆಸಿದ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯವರು , ಈ ಬಗೆ ತನಿಖಾ ತಂಡವನ್ನು ರಚಿಸಿ ದೂರುದಾರರಿಗೆ ನೋಟೀಸ್ ಜಾರಿ ಮಾಡಿ ದಾಖಲೆಗಳ ಪರಿಶೀಲನೆಯೊಂದಿಗೆ ವಿಚಾರಣಾ ಪ್ರಕ್ರಿಯೆ ನಡೆಸಿದರು. ಜಿಲ್ಲಾ ಪಂಚಾಯತ್ ಅಧಿಕಾರಿ ಜಯರಾಮ್ , ಉಳ್ಳಾಲ ತಾಲೂಕು ಪಂಚಾಯತ್ ಅಧಿಕಾರಿ ಗುರುದತ್ತ್ ನೇತೃತ್ವದ 5 ಮಂದಿ ಅಧಿಕಾರಿಗಳ ತಂಡ , ಪ್ರಾರಂಭದಲ್ಲಿ ದೂರದಾರರನ್ನು ತೃತೀಯ ದರ್ಜೆ ನಾಗರಿಕರೆಂಬಂತೆ ಪರಿಗಣಿಸಿದರೆಂದೂ , ನಾವು ಕೇಳಿದಕಷ್ಠೇ ಉತ್ತರಿಸಬೇಕು , ಹೆಚ್ಚಿನದನ್ನು ಏನನ್ನೂ ಹೇಳಬಾರದೆಂದು ತಾಕೀತು ಮಾಡಿದರು ಎಂದು ದೂರು ವ್ಯಕ್ತವಾಗಿದೆ. ಅರ್ಜಿ ಯಾವಾಗ ನೀಡಿದ್ದೀರಿ ? ಪರವಾನಿಗೆ ಯಾವಾಗ ಸಿಕ್ಕಿದೆ ? ಈ ಎರಡು ಪ್ರಶ್ನೆಗೆ ಮಾತ್ರ ಉತ್ತರಿಸಬೇಕೆಂದ ಅಧಿಕಾರಿಗಳ ಮಾತಿಗೆ ಕೆರಳಿದ ಉದ್ಯಮಿಯೋರ್ವರು, ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿದಾಗ ನಮ್ಮ ಅರ್ಜಿಯನ್ನೇ ಸ್ವೀಕರಿಸುತ್ತಿಲ್ಲ ಎಂದು ದೂರಿದ್ದೇವೆ. ಲೋಕಾಯುಕ್ತ ಅಧಿಕಾರಿಗಳ ಸೂಚನೆ ಬಳಿಕ ನಮ್ಮ ಅರ್ಜಿ ಸ್ವೀಕಾರವಾಯಿತು. ಕೆಲ ದಿನಗಳಲ್ಲಿಯೇ ಪರವಾನಿಗೆಯೂ ಸಿಕ್ಕಿತ್ತು. ಅಂದಿನ ನಮ್ಮ ದೂರು ಪಂಚಾಯತ್ ಕಚೇರಿಯಲ್ಲಿ ನಮ್ಮ ಅರ್ಜಿಯನ್ನೇ ಸ್ವೀಕರಿಸುತ್ತಿರಲಿಲ್ಲ ಎಂದಾಗಿರುವಾಗ ಇವತ್ತಿನ ನಿಮ್ಮ ಪ್ರಶ್ನೆ ಅರ್ಜಿಯನ್ನು ಯಾವಾಗ ಕೊಟ್ಟಿದ್ದಿರಿ ? ಪರವಾನಿಗೆ ಯಾವಾಗ ಸಿಕ್ಕಿತ್ತು ? ಎಂಬುದರ ಮೇಲೆಯೇ ಕೇಂದ್ರೀಕೃತವಾದರೆ ನೀವು ಯಾರನ್ನು ರಕ್ಷಿಸುವ ಸಲುವಾಗಿ ಬಂದಿದ್ದೀರಿ? ಮತ್ತು ಪ್ರಶ್ನೆ ಕೇಳುತ್ತಿದ್ದೀರಿ ? ಎಂದು ಆಕ್ರೋಶ ವ್ಯಕ್ತಪಡಿಸಿ ದೂರುದಾರ ಉದ್ಯಮಿಯೋರ್ವರು ಸ್ಥಳದಿಂದ ನಿರ್ಗಮಿಸಿದ ಘಟನೆ ನಡೆಯಿತು.
ಬಳಿಕ ಮೆತ್ತಗಾದ ಅಧಿಕಾರಿ ಬಳಗ ದೂರುದಾರರ ಅನಿಸಿಕೆಗಳನ್ನು ದಾಖಲಿಸಲು ಮುಂದಾದರು ಎಂದು ತಿಳಿದು ಬಂದಿದೆ.













