







ಪುತ್ತೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಪುತ್ತೂರು ತಾಲೂಕು ಹಾಗೂ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ, ಸೃಜನಶೀಲ ಚಟುವಟಿಕೆಯ ಭಾಗವಾಗಿ ಮಹಿಳೆಯರಿಗಾಗಿ ಹಮ್ಮಿಕೊಳ್ಳಲಾದ 15 ದಿನಗಳ ಉಚಿತ ಮದುಮಗಳ ಶೃಂಗಾರ ತರಬೇತಿ ಕಾರ್ಯಕ್ರಮದ ಉದ್ಘಾಟನೆಯು ಇತ್ತೀಚೆಗೆ ಕುಂಬ್ರದ ರೈತ ಸಭಾಭವನದಲ್ಲಿ ಜರುಗಿತು.


ಕುಂಬ್ರ ಕಾರ್ಯಕ್ಷೇತ್ರದ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಬದ್ರುನ್ನೀಸಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಪತ್ತಿನ ಸೇವಾ ಸಹಕಾರಿ ಸಂಘ ಕುಂಬ್ರ ಇಲ್ಲಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, “ಪ್ರಸ್ತುತ ವರ್ತಮಾನದಲ್ಲಿ ಮಹಿಳೆಯರಿಗೆ ಪೂರಕವಾದ ಇಂತಹ ಉತ್ತಮ ಕಾರ್ಯಕ್ರಮವನ್ನು ಗ್ರಾಮಾಭಿವೃದ್ಧಿ ಯೋಜನೆ ಆರಂಭಿಸಿರುವುದು ಬಹಳ ಸಂತಸದ ವಿಷಯ. ಮಹಿಳೆಯರೆಲ್ಲರೂ ಇದರ ಸದುಪಯೋಗ ಪಡೆದುಕೊಂಡು ಸ್ವಾವಲಂಬಿಗಳಾಗಿ ಜೀವನ ಮುಂದುವರಿಸಬೇಕು” ಎಂದು ಶುಭ ಹಾರೈಸಿದರು.



ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಪ್ರಕಾಶ್ಚಂದ್ರ ರೈ ಮಾತನಾಡಿ, ಮಹಿಳೆಯರು ಸ್ವಾವಲಂಬಿಗಳಾಗಿ ಬಾಳಲು ಉದ್ಯೋಗ ಅತ್ಯಂತ ಮುಖ್ಯ. ಗ್ರಾಮೀಣ ಮಟ್ಟದಲ್ಲಿ ಇಂತಹ ಮದುಮಗಳ ಶೃಂಗಾರದಂತಹ ವಿಶೇಷ ತರಬೇತಿಗಳು ಮಹಿಳೆಯರಿಗೆ ಹೆಚ್ಚು ಸಹಕಾರಿಯಾಗಲಿದೆ. ಮಹಿಳೆಯರು ಸ್ವಉದ್ಯೋಗದ ಕಡೆಗೆ ಆಸಕ್ತಿ ಹಾಗೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಒಕ್ಕೂಟದ ವಲಯ ಮೇಲ್ವಿಚಾರಕ ಹರೀಶ್ ಅವರು ಜ್ಞಾನವಿಕಾಸ ಕಾರ್ಯಕ್ರಮದ ಮೂಲ ಉದ್ದೇಶ ಹಾಗೂ ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಯೋಜನೆ ನೀಡುತ್ತಿರುವ ಸ್ವಉದ್ಯೋಗ ಪ್ರೇರಣೆ ಮತ್ತು ತರಬೇತಿಗಳ ಕುರಿತು ಮಾಹಿತಿ ನೀಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಕುಂಬ್ರ ವಲಯದ ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷ ರಾಜೇಶ್ ರೈ ಪರ್ಪುಂಜ, ವಲಯ ಮೇಲ್ವಿಚಾರಕ ಶಿವರಾಜ್, ಮದುಮಗಳ ಶೃಂಗಾರ ತರಬೇತಿ ಶಿಕ್ಷಕಿ ಭವ್ಯ ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸೇವಾಪ್ರತಿನಿಧಿ ಶಶಿಕಲಾ ಸ್ವಾಗತಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು ಮತ್ತು ಕೇಂದ್ರದ ಸಂಯೋಜಕಿ ರಾಜೀವಿ ವಂದಿಸಿದರು. ತರಬೇತಿಯಲ್ಲಿ ಆಸಕ್ತ ಮಹಿಳಾ ಸದಸ್ಯೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.










