ತುಳುನಾಡಿನ ಸಾಂಸ್ಕೃತಿಕ ವೈಭವ : ಮಾರ್ನೆಮಿಯ ರೋಮಾಂಚಕ ’ಪಿಲಿ ನಲಿಕೆ’

0

@ ಸಿಶೇ ಕಜೆಮಾರ್


ತುಳುನಾಡು ಎಂದೊಡನೆ ನಮ್ಮ ಕಣ್ಣಮುಂದೆ ಬರುವುದು ಇಲ್ಲಿನ ದೈವಾರಾಧನೆ, ಕಂಬಳ, ಯಕ್ಷಗಾನ ಮತ್ತು ಅತ್ಯಂತ ಸಂಭ್ರಮದ ಜನಪದ ಕಲೆಯಾದ ’ಪಿಲಿ ನಲಿಕೆ’ (ಹುಲಿ ವೇಷ).ರಾವಳಿಯ ವಿಶಿಷ್ಟ ಸಂಸ್ಕೃತಿಯ ಪ್ರತೀಕವಾಗಿರುವ ಈ ಕಲೆಯು, ಅದರಲ್ಲೂ ವಿಶೇಷವಾಗಿ ಶರನ್ನವರಾತ್ರಿ (ಮಾರ್ನೆಮಿ) ಸಂದರ್ಭದಲ್ಲಿ ಕರಾವಳಿಯ ಮೂಲೆಮೂಲೆಗಳಲ್ಲಿ ಕಳೆಗಟ್ಟುತ್ತದೆ ಈ ಪಿಲಿ ನಲಿಕೆ. ಪಿಲಿ ನಲಿಕೆಯ ಹಿನ್ನೆಲೆ ಮತ್ತು ಮಹತ್ವ ತುಳು ಭಾಷೆಯಲ್ಲಿ ’ಪಿಲಿ’ ಎಂದರೆ ಹುಲಿ ಮತ್ತು ’ನಲಿಕೆ’ ಎಂದರೆ ನೃತ್ಯ ಎಂದರ್ಥ. ದುರ್ಗಾ ಮಾತೆಯ ವಾಹನವಾದ ಹುಲಿಯ ಸ್ವರೂಪವನ್ನು ಮೈತುಂಬಾ ಬಣ್ಣ ಬಳಿದುಕೊಂಡು, ಹುಲಿಯಂತೆ ಹೆಜ್ಜೆ ಹಾಕುವುದು ಈ ಕಲೆಯ ಮುಖ್ಯ ಉದ್ದೇಶ. ಭಕ್ತಿ, ಹರಕೆ ಮತ್ತು ಮನರಂಜನೆಯ ಅಪರೂಪದ ಸಂಗಮವಾಗಿರುವ ಪಿಲಿ ನಲಿಕೆ, ಕರಾವಳಿಯ ಯುವಕರನ್ನು ಒಗ್ಗೂಡಿಸುವ ಶಕ್ತಿಯಾಗಿದೆ. ಹಿಂದೆ ಹರಕೆ ತೀರಿಸಲು ಮಾತ್ರ ಮಾಡುತ್ತಿದ್ದ ಈ ವೇಷವು ಇಂದು ಆಧುನಿಕ ಸ್ಪರ್ಶದೊಂದಿಗೆ ಬೃಹತ್ ಸಾಂಸ್ಕೃತಿಕ ಉತ್ಸವವಾಗಿ ರೂಪುಗೊಂಡಿದೆ.


ವೇಷಭೂಷಣ ಮತ್ತು ಬಣ್ಣಗಾರಿಕೆಯ ವಿಶೇಷತೆ
ಪಿಲಿ ನಲಿಕೆಯ ಸಿದ್ಧತೆ ಸಾಮಾನ್ಯವಾದದ್ದಲ್ಲ ಇದೊಂದು ಕಲಾತ್ಮಕ ಹಾಗೂ ತಾಳ್ಮೆಯ ಕೆಲಸವಾಗಿದೆ. ವೇಷಧಾರಿಗಳ ಮೈಮೇಲೆ ಹುಲಿಯ ಮೈಮೇಲಿರುವಂತೆ ಹಳದಿ ಮತ್ತು ಕಪ್ಪು ಬಣ್ಣದ ಪಟ್ಟೆಗಳನ್ನು (ಕೆಲವೊಮ್ಮೆ ಬಿಳಿ ಬಣ್ಣವನ್ನೂ) ಅತ್ಯಂತ ನಿಖರವಾಗಿ ಬಿಡಿಸಲಾಗುತ್ತದೆ. ಹುಲಿಯ ಮುಖದ ಕಳೆ ಬರುವಂತೆ ಮೀಸೆ, ಹುಬ್ಬು ಮತ್ತು ಕಣ್ಣುಗಳನ್ನು ಆಕರ್ಷಕವಾಗಿ ಚಿತ್ರಿಸುತ್ತಾರೆ. ಮೈಗೆ ಹುಲಿಯ ಚರ್ಮದಂತಹ ಬಟ್ಟೆಯನ್ನು ಸುತ್ತಿಕೊಳ್ಳಲಾಗುತ್ತದೆ. ಸೊಂಟಕ್ಕೆ ಬಾಲವನ್ನು ಕಟ್ಟಿ, ಕೊರಳಿಗೆ ಮಣಿಯ ಸರಗಳನ್ನು ಹಾಕಲಾಗುತ್ತದೆ. ಕೆಲವರು ಹುಲಿಯ ಮುಖವಾಡವನ್ನೂ ಧರಿಸುತ್ತಾರೆ.


ಚೆಂಡೆ ವಾದನ ಮತ್ತು ಹುಲಿಯ ಹೆಜ್ಜೆಗಳು
ಪಿಲಿ ನಲಿಕೆಗೆ ಜೀವ ತುಂಬುವುದೇ ‘ತಾಸೆ’ (ಒಂದು ರೀತಿಯ ಚರ್ಮವಾದ್ಯ) ಸದ್ದು. ತಾಸೆಯ ಗರ್ಜನೆಗೆ ತಕ್ಕಂತೆ ಹುಲಿಗಳು ಹೆಜ್ಜೆಹಾಕುವ ಶೈಲಿ ನೋಡುಗರನ್ನು ಮೈಮರೆಯುವಂತೆ ಮಾಡುತ್ತದೆ. ತಾಸೆಯ ಪೆಟ್ಟಿನ ಆ ಶಬ್ದ ನೋಡುಗರನ್ನು ಕೂಡ ನಿಂತಲ್ಲೇ ಕುಣಿಯುವಂತೆ ಮಾಡುತ್ತದೆ. ಇನ್ನು ಪಿಲಿ ನಲಿಕೆಯ ವಿವಿಧ ಭಂಗಿಗಳಲ್ಲಿ ಬಗ್ಗಿ ನಡೆಯುವುದು, ನೆಲದ ಮೇಲೆ ಉರುಳುವುದು, ನೆಗೆಯುವುದು, ಬೆನ್ನುಮೂಳೆ ಬಳಸಿ ಮಾಡುವ ಕಸರತ್ತುಗಳು (ಜಿಮ್ನಾಸ್ಟಿಕ್ಸ್) ಮತ್ತು ಬೆಂಕಿಯ ಉಗುಳುವಿಕೆ ಈ ನೃತ್ಯದ ಪ್ರಮುಖ ಆಕರ್ಷಣೆಗಳಾಗಿವೆ. ಹುಲಿ ಕುಣಿತದಲ್ಲೂ ವಿವಿಧ ಶೈಲಿಗಳಿದ್ದು ಬಣ್ಣದ ಹುಲಿ, ಕಪ್ಪು ಹುಲಿ, ಮತ್ತು ಕರಿ ಹುಲಿ ಎಂದೆಲ್ಲಾ ವಿವಿಧ ಶೈಲಿಗಳಿರುತ್ತವೆ.


ಕಾಲ ಬದಲಾದಂತೆ ಪಿಲಿ ನಲಿಕೆ
ಹಿಂದೆ ನವರಾತ್ರಿ ಸಂದರ್ಭಗಳಲ್ಲಿ ಕೇವಲ ದೇವಸ್ಥಾನಗಳ ಹಬ್ಬಗಳಲ್ಲಿ ಅಥವಾ ಮನೆಗಳ ಮುಂದೆ ಕಾಣಿಸಿಕೊಳ್ಳುತ್ತಿದ್ದ ಪಿಲಿ ನಲಿಕೆ, ಇಂದು ಹಳ್ಳಿಹಳ್ಳಿಯಲ್ಲೂ ಹುಲಿ ನಲಿಕೆಯ ಘರ್ಜನೆ ಕೇಳಿ ಬರುತ್ತಿದೆ. ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿದೆ. ಅಲ್ಲಲ್ಲಿ ’ಹುಲಿ ಕುಣಿತ ಸ್ಪರ್ಧೆಗಳು’ (ಪಿಲಿ ಸ್ಪರ್ಧೆ) ಏರ್ಪಡುವ ಮೂಲಕ ಈ ಜಾನಪದಲೆಗೆ ಸ್ಪರ್ಧಾತ್ಮಕ ಸ್ಪರ್ಶ ಸಿಕ್ಕಿದೆ. ಲಕ್ಷಾಂತರ ರೂಪಾಯಿ ಬಹುಮಾನಗಳುಳ್ಳ ಈ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಕರಾವಳಿಯ ವಿವಿಧ ತಂಡಗಳು ತಿಂಗಳುಗಟ್ಟಲೆ ಅಭ್ಯಾಸ ಮಾಡುತ್ತವೆ. ಪಿಲಿ ನಲಿಕೆ ಕೇವಲ ಒಂದು ನೃತ್ಯವಲ್ಲ; ಅದೊಂದು ಭಾವನೆ. ಜಾತಿ, ಮತ, ಭೇದವಿಲ್ಲದೆ ಎಲ್ಲಾ ಯುವಕರು ಒಂದೆಡೆ ಸೇರಿ, ಒಗ್ಗಟ್ಟಿನಿಂದ ಆಚರಿಸುವ ಹಬ್ಬವಿದು. ತುಳುನಾಡಿನ ಮಣ್ಣಿನ ಸೊಗಡನ್ನು, ಸಾಂಸ್ಕೃತಿಕ ಹೆಮ್ಮೆಯನ್ನು ಜಗತ್ತಿಗೆ ಸಾರುವ ಪಿಲಿ ನಲಿಕೆ, ಕರಾವಳಿಯ ಜೀವನಾಡಿಯಾಗಿದೆ.


ಕಿನ್ನಿ ಪಿಲಿ ನಲಿಕೆ
ಕಳೆದೆರಡು ವರ್ಷಗಳಿಂದ ‘ಕಿನ್ನಿ ಪಿಲಿ’(ಚಿಕ್ಕ ಮಕ್ಕಳು ಹಾಕುವ ಹುಲಿವೇಷ) ನಲಿಕೆ ಕೂಡ ಕರಾವಳಿಯಲ್ಲಿ ಸದ್ದು ಮಾಡುತ್ತಿದೆ. ಒಂದು ಕಾಲದಲ್ಲಿ ಚಿಕ್ಕ ಮಕ್ಕಳಿಗೆ ಏನಾದರೂ ಅರೋಗ್ಯದ ತೊಂದರೆ ಬಂದರೆ ತಂದೆ ತಾಯಿ ತಮ್ಮ ಮಕ್ಕಳಿಗೆ ಪಿಲಿ ವೇಷ ಹಾಕಿಸುತ್ತೇವೆ ಎಂದು ಹರಕೆ ಹೇಳುತ್ತಿದ್ದರು ಅದರಂತೆ ನವರಾತ್ರಿ ಸಂದರ್ಭಗಳಲ್ಲಿ ಮಕ್ಕಳಿಗೆ ದೇವಸ್ಥಾನಗಳಲ್ಲಿ ಪಿಲಿ ಬಣ್ಣ ಬಳಿದು ಹರಕೆ ತೀರಿಸುತ್ತಿದ್ದರು. ಇದೇ ಮುಂದುವರಿದು ಇಂದು ಮಕ್ಕಳೂ ಕೂಡ ಹುಲಿ ವೇಷ ಹಾಕಿ ಕುಣಿಯುವ ಸ್ಪರ್ಧೆಗಳು ‘ಕಿನ್ನಿ ಪಿಲಿ ನಲಿಕೆ’ ಕರಾವಳಿಯಲ್ಲಿ ಕಾಣಬರುತ್ತಿದೆ. ಇದರಲ್ಲೂ ಕೂಡ ಸಾವಿರಾರು ರೂಪಾಯಿಗಳ ಬಹುಮಾನಗಳನ್ನಿಟ್ಟು ಮಕ್ಕಳಿಗೂ ಹುಲಿ ವೇಷದ ಸಂಸ್ಕೃತಿಯನ್ನು ಹಂಚುವ ಕೆಲಸ ಆಗುತ್ತಿದೆ.

LEAVE A REPLY

Please enter your comment!
Please enter your name here