ʼಬೆಳೆ ವಿಮೆ ವಿವಾದಕ್ಕೆ ಬಿಜೆಪಿ ಸರಕಾರವೇ ಹೊಣೆʼ: ಅಮಳ ರಾಮಚಂದ್ರ

0

ಟರ್ಮ್‌ಶೀಟ್ ಬದಲಾವಣೆ ಕಾಂಗ್ರೆಸ್ ಅಧಿಕಾರ ಸ್ವೀಕರಿಸುವ ಮುನ್ನವೇ ನಡೆದಿದೆ ಎಂದು ದಾಖಲೆ ಬಿಡುಗಡೆ

ಪುತ್ತೂರು: ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಲ್ಲಿ ಪಾರದರ್ಶಕತೆಯ ಕೊರತೆಯಿದ್ದು, ರೈತರ ಹಿತಕ್ಕಿಂತ ವಿಮಾ ಕಂಪೆನಿಗಳ ಲಾಭಕ್ಕೆ ಆದ್ಯತೆ ನೀಡಲಾಗಿದೆ. 2023ರಲ್ಲಿ ಬೆಳೆ ವಿಮಾ ಯೋಜನೆಯ ಟರ್ಮ್‌ಶೀಟ್ ಬದಲಾವಣೆಯಾಗಿದೆ ಎಂಬುದು ಸತ್ಯ. ಆದರೆ ಈ ಬದಲಾವಣೆ ಕಾಂಗ್ರೆಸ್ ಸರಕಾರ ಅಧಿಕಾರ ಸ್ವೀಕರಿಸುವ ಮೊದಲೇ ನಡೆದಿದ್ದು, ಇದಕ್ಕೆ ಅಂದಿನ ಬಿಜೆಪಿ ಸರಕಾರವೇ ಹೊಣೆಯಾಗಿದೆ ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಆರೋಪಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಬೆಳೆ ವಿಮಾ ಯೋಜನೆಗೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಿ, ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ವಿಮಾ ಪರಿಹಾರ ಕಡಿಮೆಯಾಗಿರುವ ವಿಚಾರದಲ್ಲಿ ಕಾಂಗ್ರೆಸ್ ಸರಕಾರವನ್ನು ಗುರಿಯಾಗಿಸುವ ಬಿಜೆಪಿಯ ಪ್ರಯತ್ನವನ್ನು ತೀವ್ರವಾಗಿ ಖಂಡಿಸಿದರು.


ವಿಮಾ ಯೋಜನೆಯಲ್ಲಿ ಪಾರದರ್ಶಕತೆ ಇಲ್ಲ
ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯು ರೈತರನ್ನು ಕತ್ತಲಲ್ಲಿಟ್ಟು ವಿಮಾ ಕಂಪೆನಿಗಳಿಗೆ ಲಾಭ ಮಾಡಿಕೊಡುವ ವ್ಯವಸ್ಥೆಯಾಗಿದೆ ಎಂದು ಆರೋಪಿಸಿದ ಅಮಳರಾಮಚಂದ್ರ ಅವರು ರೈತರು ಪ್ರೀಮಿಯಂ ಪಾವತಿಸಿದ ಬಳಿಕ ವಿಮಾ ಮೊತ್ತ ಪಾವತಿಯಾಗಲು ದೀರ್ಘಕಾಲ ಕಾಯಬೇಕಾದ ಪರಿಸ್ಥಿತಿ ಇದೆ. ವಿಮಾ ಯೋಜನೆಯಲ್ಲಿ ಯಾವ ಸಂಸ್ಥೆ ಹೊಣೆಗಾರಿಕೆ ಹೊಂದಿದೆ, ಪರಿಹಾರ ಸರಿಯಾಗಿ ಪಾವತಿಯಾಗದಿದ್ದರೆ ಯಾರಿಗೆ ದೂರು ಸಲ್ಲಿಸಬೇಕು, ಮಳೆ ಮತ್ತು ಉಷ್ಣಾಂಶದ ಆಧಾರದಲ್ಲಿ ಎಷ್ಟು ಪರಿಹಾರ ಸಿಗಬೇಕು ಎಂಬ ವಿವರಗಳು ರೈತರಿಗೆ ಸ್ಪಷ್ಟವಾಗಿ ಲಭ್ಯವಾಗುತ್ತಿಲ್ಲ. ಇದರಿಂದ ಯೋಜನೆಯಲ್ಲಿ ಪಾರದರ್ಶಕತೆಯ ಕೊರತೆ ಎದ್ದು ಕಾಣುತ್ತಿದೆ ಎಂದರು.


ಅಡಿಕೆಗೆ ಪ್ರತಿ ಹೆಕ್ಟೇರ್‌ಗೆ ರೂ.1,28,೦೦೦ ಹಾಗೂ ಕಾಳುಮೆಣಸಿಗೆ ರೂ.47,೦೦೦ ವಿಮಾ ಮೊತ್ತ ನಿಗದಿಯಾಗಿರುವ ಹಿನ್ನೆಲೆಯಲ್ಲಿ, ವಿಮಾ ಕಂಪೆನಿಗಳಿಗೆ ಸರಕಾರಗಳು ನೀಡುವ ಪ್ರೀಮಿಯಂ ಸಹಾಯಧನದ ಪ್ರಮಾಣವನ್ನು ಪ್ರಶ್ನಿಸಿದ ಅವರು, ಸರಕಾರದ ತೆರಿಗೆ ಹಣದಿಂದ ವಿಮಾ ಕಂಪೆನಿಗಳಿಗೆ ಲಾಭವಾಗುವುದಾದರೆ, ರೈತರಿಗೆ ನೇರವಾಗಿ ಪರಿಹಾರ ನೀಡುವ ವ್ಯವಸ್ಥೆ ರೂಪಿಸಬಾರದೇ ಎಂದು ಪ್ರಶ್ನಿಸಿದರು.


ಕಾಂಗ್ರೆಸ್ ಅಧಿಕಾರಕ್ಕೆ ಮುನ್ನವೇ ಟೆಂಡರ್ ಪ್ರಕ್ರಿಯೆ
2023ರಲ್ಲಿ ಟರ್ಮ್‌ಶೀಟ್ ಬದಲಾವಣೆಯಾಗಿದೆ ಎಂಬ ಬಿಜೆಪಿ ಆರೋಪದ ಕುರಿತು ಪ್ರತಿಕ್ರಿಯಿಸಿದ ಅಮಳ ರಾಮಚಂದ್ರ, ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಮೇ.10ರಂದು ನಡೆದಿದ್ದು, ಫಲಿತಾಂಶ ಮೇ 13ರಂದು ಪ್ರಕಟವಾಗಿತ್ತು. ಕಾಂಗ್ರೆಸ್ ಬಹುಮತ ಪಡೆದ ಬಳಿಕ ಸಿದ್ದರಾಮಯ್ಯ ಅವರು ಮೇ.20ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಆದರೆ ಬೆಳೆ ವಿಮಾ ಯೋಜನೆಗೆ ಸಂಬಂಧಿಸಿದ ಟರ್ಮ್‌ಶೀಟ್ ಬದಲಾವಣೆ ಮತ್ತು ಟೆಂಡರ್ ಪ್ರಕ್ರಿಯೆ ಮೇ 19ರಂದೇ ನಡೆದಿತ್ತು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ಅವರು ಉಸ್ತುವಾರಿ ಮುಖ್ಯಮಂತ್ರಿಯಾಗಿದ್ದರು ಹಾಗೂ ರಾಜ್ಯಪಾಲರಾಗಿದ್ದವರು ಥಾವರ್ ಚಂದ್ ಗೆಹ್ಲೋಟ್. ಹೀಗಿರುವಾಗ ಟರ್ಮ್‌ಶೀಟ್ ಬದಲಾವಣೆಯಿಂದ ರೈತರಿಗೆ ತೊಂದರೆಯಾಗಿದ್ದರೆ, ಅದರ ಹೊಣೆಗಾರಿಕೆಯನ್ನು ಅಂದಿನ ಬಿಜೆಪಿ ಸರಕಾರದ ಮೇಲೆ ಹೊರಿಸಬೇಕು. ಕಾಂಗ್ರೆಸ್ ಸರಕಾರದ ಮೇಲೆ ಆರೋಪ ಹೊರಿಸುವುದು ಸತ್ಯವನ್ನು ಮರೆಮಾಚುವ ಪ್ರಯತ್ನವಾಗಿದೆ ಎಂದು ದೂರಿದರು. ಈ ಕುರಿತು ತಮ್ಮ ಬಳಿ ಸ್ಪಷ್ಟ ದಾಖಲೆಗಳಿದ್ದು, ಪತ್ರಿಕಾಗೋಷ್ಠಿಯಲ್ಲಿ ಅವುಗಳನ್ನು ಬಿಡುಗಡೆ ಮಾಡುತ್ತಿದ್ದೇನೆ ಎಂದು ತಿಳಿಸಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರು ವಾಸ್ತವಾಂಶಗಳನ್ನು ಅರಿತುಕೊಳ್ಳಬೇಕು ಎಂದು ಮನವಿ ಮಾಡಿದರು.


ಹಿಂದಿನ ವರ್ಷಗಳಲ್ಲಿ ಉತ್ತಮ ಪರಿಹಾರ ಸಿಕ್ಕಿತ್ತು
2016ರಲ್ಲಿ ಮರುವಿನ್ಯಾಸಗೊಳಿಸಿದ ಬೆಳೆ ವಿಮಾ ಯೋಜನೆ ಆರಂಭವಾದ ನಂತರದ ಕೆಲವು ವರ್ಷಗಳಲ್ಲಿ ರೈತರು ಪಾವತಿಸಿದ ಪ್ರೀಮಿಯಂಗಿಂತ ಹೆಚ್ಚಿನ ಮೊತ್ತದ ಪರಿಹಾರ ಪಡೆದಿದ್ದರು. ಆಗ ರೈತರಿಗೆ ಪರಿಹಾರ ದೊರೆತಾಗ ಕೇಂದ್ರ ಸರಕಾರದ ಸಾಧನೆ ಎಂದು ಬಿಂಬಿಸಿದ್ದ ಬಿಜೆಪಿಯವರು, ಈಗ ಸಮಸ್ಯೆಗೆ ರಾಜ್ಯ ಕಾಂಗ್ರೆಸ್ ಸರಕಾರವನ್ನು ಹೊಣೆ ಮಾಡುತ್ತಿರುವುದು ವಿರೋಧಾಭಾಸದ ಸಂಗತಿ ಎಂದು ಅಮಳ ರಾಮಚಂದ್ರ ಅವರು ಟೀಕಿಸಿದರು. ಯೋಜನೆಯ ಅನುಷ್ಠಾನದಲ್ಲಿ ಆಗಿರುವ ಬದಲಾವಣೆಗಳು, ಟೆಂಡರ್ ಪ್ರಕ್ರಿಯೆ ಹಾಗೂ ಸರಕಾರಗಳ ಪಾತ್ರದ ಬಗ್ಗೆ ಸಮಗ್ರ ಚರ್ಚೆಯಾಗಬೇಕು. ಅರ್ಧಸತ್ಯಗಳನ್ನು ಮುಂದಿಟ್ಟು ರೈತರಲ್ಲಿ ಗೊಂದಲ ಸೃಷ್ಟಿಸುವ ಬದಲು ದಾಖಲೆಗಳ ಆಧಾರದಲ್ಲಿ ಚರ್ಚೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.


ನಿಗೂಢ ಯೋಜನೆ:
ಹವಾಮಾನ ಆಧರಿತ ಬೆಳೆ ವಿಮೆ ಎಂಬುದು ಒಂದು ನಿಗೂಢ ಯೋಜನೆ. ಇದು ಯಾರಿಗೂ ಪೂರ್ತಿ ಅರ್ಥವಾಗಿಲ್ಲ. ರೈತರು, ಕೇಂದ್ರ, ರಾಜ್ಯ ಸರಕಾರ ಸೇರಿ ಶೇ.೩೫ ಹಣವನ್ನು ಪಾವತಿ ಮಾಡಿದ ಮೇಲೆ ಅಷ್ಟೇ ಮೊತ್ತದ ಹಣ ವಿಮಾ ಪರಿಹಾರ ರೂಪದಲ್ಲಿ ಸಿಗುತ್ತದೆ ಎಂದಾರೆ ಈ ವಿಮಾ ಯೋಜನೆಯ ಅಗತ್ಯವೇನು? ಸರಕಾರಗಳೇ ಪಾಲು ಸೇರಿಸಿ ರೈತರಿಗೆ ನೇರವಾಗಿ ಕೊಡಬಹುದಲ್ಲವೇ? ವಿಮಾ ಕಂಪನಿಗಳೆಂಬ ಮಧ್ಯಸ್ಥಿಕೆದಾರರ ಅಗತ್ಯವೇನು? ಹಾಗಾದರೆ ಖಾಸಗಿ ವಿಮಾ ಕಂಪನಿಗಳನ್ನು ಸಾಕಲು ಮೋದಿ ಸರಕಾರ ಜಾರಿಗೆ ತಂದ ಯೋಜನೆಯೇ ಇದು ಎಂದವರು ಪ್ರಶ್ನಿಸಿದರು.


ಹರೀಶ್ ಪೂಂಜಾ ಹೇಳಿಕೆಗೆ ತಿರುಗೇಟು
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ವಿರುದ್ಧ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವೈಯಕ್ತಿಕ ಟೀಕೆ ನಡೆಸಿರುವುದಕ್ಕೂ ಅಮಳ ರಾಮಚಂದ್ರ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡುವ ಬದಲು ವೈಯಕ್ತಿಕ ಟೀಕೆಗಳಿಗೆ ಇಳಿಯುವುದು ಸರಿಯಲ್ಲ ಎಂದು ಹೇಳಿದರು. ಪುತ್ತೂರಿನಲ್ಲಿ ಅಶೋಕ್ ಕುಮಾರ್ ರೈ ಅವರು ಸರಕಾರಿ ವೈದ್ಯಕೀಯ ಕಾಲೇಜು, ಮುಂಡೂರು ಗ್ರಾಮದಲ್ಲಿ ಕ್ರೀಡಾಂಗಣ ಮತ್ತು ಆರ್‌ಟಿಒ ಟ್ರ್ಯಾಕ್, ಬಜತ್ತೂರಿನಲ್ಲಿ ಅಂಬೇಡ್ಕರ್ ವಸತಿ ಶಾಲೆ, ಕುರಿಯದಲ್ಲಿ ಶ್ರಮಿಕ ವಸತಿ ಶಾಲೆ, ಬನ್ನೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಹಾಗೂ ತಾಲೂಕು ಪಂಚಾಯತ್‌ನ ನೂತನ ಕಟ್ಟಡ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಕಾರಣರಾಗಿದ್ದಾರೆ, ತುಳುವಿಗೆ ವಿಶೇಷ ಸ್ಥಾನ ಮಾನವನ್ನೂ ನೀಡಿದ್ದಾರೆ ಎಂದು ಅವರು ಪಟ್ಟಿ ಮಾಡಿದರು. ಇದಲ್ಲದೆ, ಬಿರುಮಲೆ ಬೆಟ್ಟದ ಅಭಿವೃದ್ಧಿ, ನಗರದಲ್ಲಿ ನೂತನ ಪ್ರವಾಸಿ ಮಂದಿರ, ಕಬಕದಿಂದ ವಿಟ್ಲದವರೆಗೆ ಚತುಷ್ಪಥ ರಸ್ತೆ, ನಿವೇಶನ ರಹಿತ ಬಡವರಿಗೆ ಮನೆ ನಿವೇಶನಗಳ ವ್ಯವಸ್ಥೆ ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಭೂಮಿಯನ್ನು ಮರುಸ್ವಾಧೀನಪಡಿಸಿ ದೇವಾಲಯದ ವಶಕ್ಕೆ ಒಪ್ಪಿಸುವ ಕಾರ್ಯಗಳನ್ನೂ ಉಲ್ಲೇಖಿಸಿದರು. ಕಳೆದ ಎಂಟು ವರ್ಷಗಳಿಂದ ಶಾಸಕರಾಗಿರುವ ಹರೀಶ್ ಪೂಂಜಾ ಅವರು ತಮ್ಮ ಕ್ಷೇತ್ರದಲ್ಲಿ ಮಾಡಿರುವ ಪ್ರಮುಖ ಅಭಿವೃದ್ಧಿ ಕಾರ್ಯಗಳೇನು ಎಂಬುದನ್ನು ಜನರ ಮುಂದಿಡಲಿ ಎಂದು ಸವಾಲು ಹಾಕಿದ ಅಮಳ ರಾಮಚಂದ್ರ, ಪುತ್ತೂರು ಮತ್ತು ಬೆಳ್ತಂಗಡಿಯ ಅಭಿವೃದ್ಧಿ ಕಾರ್ಯಗಳನ್ನು ಹೋಲಿಸಿ ಚರ್ಚಿಸಲು ಸಿದ್ಧರಿದ್ದೇವೆ ಎಂದರು. ಬಿಜೆಪಿಯ ರಾಜಕೀಯವು ಕೋಮು ದ್ವೇಷ ಮತ್ತು ಸುಳ್ಳು ಆರೋಪಗಳ ಮೇಲೆ ನಿಂತಿದೆ ಎಂದು ಟೀಕಿಸಿದ ಅವರು, ರೈತರ ಬೆಳೆ ವಿಮೆ ವಿಚಾರದಲ್ಲಿ ವಾಸ್ತವಾಂಶಗಳನ್ನು ಮರೆಮಾಚಿ ಜನರ ದಾರಿ ತಪ್ಪಿಸುವ ಪ್ರಯತ್ನವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಅಬ್ದುಲ್ ರಹಿಮಾನ್ ಆಜಾದ್, ಕಮಲೇಶ್ ಸರ್ವೆ ದೋಳ, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ರಾಮ ಮೇನಾಲ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here