







ಉಪ್ಪಿನಂಗಡಿ: ಬೈಕ್ ತಡೆದು ನಿಲ್ಲಿಸಿ ಚೂರಿ ತೋರಿಸಿ ಬೆದರಿಸಿ ನಗದು ಮತ್ತು ಮೊಬೈಲ್ ದೋಚಿದ ಆರೋಪದ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಡಬ ತಾಲೂಕು ಕೋನಾಜೆ ಗ್ರಾಮದ ಸಿ.ಆರ್.ಸಿ. ಕಾಲೋನಿ ನಿವಾಸಿ ಮಿಥಿಲೇಶ್ (18) ಅವರು ನೀಡಿದ ದೂರಿನಂತೆ, ಅ.16 ರಂದು ಬೆಳಿಗ್ಗೆ 11.45ಕ್ಕೆ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ.



ಮಿಥಿಲೇಶ್ ಅವರು ತನ್ನ ಅತ್ತೆ ಮಗಾಧೇವಿ ಅವರೊಂದಿಗೆ ರೇಷನ್ ಕಾರ್ಡ್ ಕೆ.ವೈ.ಸಿ.ಗೆ ಹೆಬ್ಬೆಟ್ಟು ನೀಡಲು ಬೈಕ್ ನಲ್ಲಿ ಬಳಂಜದಿಂದ ಕೋನಾಜೆಗೆ ತೆರಳುತ್ತಿದ್ದರು. ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಹಲೇಜಿ ಎಂಬಲ್ಲಿ ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆಯಲ್ಲಿ ಬರುತ್ತಿದ್ದಾಗ ಕಾರಿನಲ್ಲಿ ಬಂದ ಆರೋಪಿಗಳು ಬೈಕ್ ಅಡ್ಡಗಟ್ಟಿ ನಿಲ್ಲಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ತನ್ವೀಶ್ ಮತ್ತು ಇತರ ಇಬ್ಬರು ಕಾರಿನಿಂದ ಇಳಿದು “ನನ್ನ ಹಣ ಎಲ್ಲಿ, ಯಾಕೆ ಹಣ ಕೊಟ್ಟಿಲ್ಲ” ಎಂದು ಜೋರು ಮಾಡಿ ಬೆದರಿಸಿದ್ದಾರೆ. ಜೊತೆಗಿದ್ದ ಇನ್ನೊಬ್ಬ ವ್ಯಕ್ತಿ ಚೂರಿ ತೋರಿಸಿ ಕೊಲೆ ಬೆದರಿಕೆ ಹಾಕಿ, ಮಿಥಿಲೇಶ್ ಅವರ ಪ್ಯಾಂಟ್ ಕಿಸೆಯಲ್ಲಿದ್ದ ಜಿಯೋ ಸಿಮ್ ಇರುವ 3,000 ರೂ. ಮೌಲ್ಯದ ಮೊಬೈಲ್ ಮತ್ತು ಅಂಗಿ ಕಿಸೆಯಲ್ಲಿದ್ದ 5,200 ರೂ. ನಗದನ್ನು ಬಲವಂತವಾಗಿ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನು ಪ್ರಶ್ನಿಸಿದ ಮಿಥಿಲೇಶ್ ಅವರ ಅತ್ತೆಯ ಕೈಯಲ್ಲಿದ್ದ ಜಿಯೋ ಸಿಮ್ ಇರುವ 2,000 ರೂ. ಮೌಲ್ಯದ ಮೊಬೈಲ್ ಅನ್ನು ಕೂಡ ಬಲವಂತವಾಗಿ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಕುರಿತು ಉಪ್ಪಿನಂಗಡಿ ಠಾಣೆಯಲ್ಲಿ ಅ.ಕ್ರ: 134/2026, ಕಲಂ 126(2), 308(5) ಜೊತೆಗೆ 3(5) BNS-2023 ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.










