







ಬೆಂಗಳೂರು: ಬಂಟರ ಸಂಘ ಬೆಂಗಳೂರು ಮಹಿಳಾ ವಿಭಾಗ ಆಯೋಜಿಸಿದ್ದ ಶಾರದೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.ಈ ಬಾರಿ ವಿಭಿನ್ನವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 7 ಮಂದಿ ಪುಟಾಣಿ ಮಕ್ಕಳು ಶಾರದೆ ವೇಷದಲ್ಲಿ ಅಲಂಕಾರಗೊಂಡು ಗಮನ ಸೆಳೆದರು. ಶಾರದೆಯಂತೆ ಶೃಂಗರಿಸಿ, ಮಂಗಳೂರು ಮಲ್ಲಿಗೆ ತೊಟ್ಟು, ವೀಣೆ ಹಿಡಿದು ಪ್ರದರ್ಶನ ನೀಡಿ ನೆರೆದವರ ಮನಸೂರೆಗೊಂಡರು.



ಕಾರ್ಯಕ್ರಮದಲ್ಲಿ ಮಾತನಾಡಿದ ಸಂಘದ ಕಾರ್ಯದರ್ಶಿ ಅಮರನಾಥ ಶೆಟ್ಟಿ, ಮುದ್ದು ಶಾರದೆ ಸ್ಪರ್ಧೆ ನಡೆದಿದ್ದು, ತೇಜಸ್ವಿನಿ ಅನಂತ್ ಕುಮಾರ್ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದಾರೆ. ಸಂಘದ ಚುನಾವಣೆ ಬಳಿಕ ನಡೆದ ಮೊದಲ ಕಾರ್ಯಕ್ರಮ ಇದಾಗಿದ್ದು, ಬಂಟರ ಸಮಾಜದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನವಿದೆ. ಮಹಿಳಾ ಸದಸ್ಯರಿಂದ ಲಲಿತಾ ಸಹಸ್ರನಾಮ ಮತ್ತು ಸಂಜೆ ಐದಾರು ತಂಡಗಳಿಂದ ದಾಂಡಿಯಾ ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದರು. ನವರಾತ್ರಿ ಉತ್ಸವದ ಭಾಗವಾಗಿ ದಿನವಿಡೀ ವಿಜೃಂಭಣೆಯ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.



ಮಹಿಳಾ ಉಪಾಧ್ಯಕ್ಷೆ ಸೌಮ್ಯಪ್ರಿಯಾ ಹೆಗಡೆ ಮಾತನಾಡಿ, ಪ್ರತಿ ವರ್ಷ ದುರ್ಗಾದೇವಿ ಆರಾಧನೆ ಮಾಡುತ್ತಿದ್ದೆವು. ಈ ವರ್ಷ ಹೊಸ ಕಲ್ಪನೆಯಡಿ ಶಾರದೋತ್ಸವ ಆಚರಿಸಿದ್ದೇವೆ. ಶಾರದಾ ದೇವಿಯನ್ನು ಮೆರವಣಿಗೆಯಲ್ಲಿ ಕರೆತಂದು ಹಬ್ಬಕ್ಕೆ ಚಾಲನೆ ನೀಡಿದ್ದೇವೆ. ಮಕ್ಕಳು ಸೇರಿದಂತೆ ಎಲ್ಲರೂ ಭಾಗವಹಿಸಿದ್ದಾರೆ ಎಂದರು.










