







ಉಪ್ಪಿನಂಗಡಿ: ಎರಡು ತಂಡಗಳು ತಲವಾರು ಮತ್ತು ಬಿಯರ್ ಬಾಟಲಿ ಹಿಡಿದು ಗಲಾಟೆ ನಡೆಸಿದ ಘಟನೆ ಅ.18ರ ರಾತ್ರಿ ಉಪ್ಪಿನಂಗಡಿಯ ಬಾರೊಂದರ ಬಳಿ ನಡೆದಿದೆ.



ಮದ್ಯ ಸೇವಿಸಿದ್ದ ತಂಡ ಬಾರ್ ಹೊರಗಡೆ ಸಾರ್ವಜನಿಕ ಸ್ಥಳದಲ್ಲಿ ಪರಸ್ಪರ ಗಲಾಟೆ ನಡೆಸಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ ಎಂದು ಆರೋಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇಳಂತಿಲದ ಮಂಜುನಾಥ್ ಮತ್ತು ಕರ್ವೇಲಿನ ವಿಶ್ವನಾಥ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕರ್ವೇಲಿನ ಮುನ್ನ ಎಂಬಾತ ಪರಾರಿಯಾಗಿದ್ದಾನೆ. ಮಂಜುನಾಥ್ ತಲವಾರು ಝಳಪಿಸಿದ್ದು, ಮುನ್ನ ಕೈಯಲ್ಲಿ ಬಿಯರ್ ಬಾಟಲಿ ಹಿಡಿದಿದ್ದ ಎಂದು ತಿಳಿದುಬಂದಿದೆ.




ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಉಪ್ಪಿನಂಗಡಿ ಪೊಲೀಸರು ಹಿಂದಿನಿಂದ ಬಂದು ಮಂಜುನಾಥ್ನನ್ನು ಹಿಡಿದು ಆತನ ಕೈಯಲ್ಲಿದ್ದ ತಲವಾರು ವಶಪಡಿಸಿಕೊಂಡಿದ್ದಾರೆ. ಆದರೆ ಪೊಲೀಸರನ್ನು ಕಂಡು ಮುನ್ನ ಪರಾರಿಯಾಗಿದ್ದಾನೆ.
ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಅ.ಕ್ರ: 135/2026, ಕಲಂ: 194, 296, 351(3) BNS 2023 ಮತ್ತು ಕಲಂ: 25(1B)(b) Arms Act 1959 ರಂತೆ ಪ್ರಕರಣ ದಾಖಲಾಗಿದೆ.ಆರೋಪಿಗಳ ವಿಚಾರಣೆ ವೇಳೆ ಕುಡಿದ ಮತ್ತಿನಲ್ಲಿ ಮುನ್ನ ಎಂಬಾತ ಮಂಜುನಾಥ್ ಮನೆಯವರಿಗೆ ಅವಾಚ್ಯವಾಗಿ ಬೈದ ಹಿನ್ನೆಲೆಯಲ್ಲಿ ಮಾತಿನ ಚಕಮಕಿ ನಡೆದು ಗಲಾಟೆಯಾಗಿದೆ ಎಂದು ತಿಳಿದುಬಂದಿದ್ದು, ವಿಚಾರಣೆ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.ಪರಾರಿಯಾದ ಆರೋಪಿಗಾಗಿ ಶೋಧ ನಡೆಯುತ್ತಿದೆ.










